ಸೋಮವಾರ, ಮಾರ್ಚ್ 30, 2020
19 °C
ಕಮಲ ಪಾಳಯದಲ್ಲಿ ಮುನಿಸು: ರಾಜಕೀಯ ಚಟುವಟಿಕೆ ಬಿರುಸು

ಮೇಯರ್‌ ಚುನಾವಣೆ: ಭಿನ್ನಮತಕ್ಕೆ ಬೆಲೆ ತೆರಲಿದೆಯೇ ಬಿಜೆಪಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮೇಯರ್‌ ಚುನಾವಣೆಗೆ ಇನ್ನು ಒಂದೇ ದಿನ ಬಾಕಿ ಉಳಿದಿದ್ದು, ರಾಜಕೀಯ ಚಟುವಟಿಕೆ ಬಿರುಸು ಪಡೆದಿದೆ. ಒಂದೆಡೆ, ಈ ಬಾರಿ ಹೇಗಾದರೂ ಮಾಡಿ ಆಡಳಿತವನ್ನು ತೆಕ್ಕೆಗೆ ತೆಗೆದುಕೊಳ್ಳಲು ಬಿಜೆಪಿ ಶತಾಯಗತಾಯ ಪ್ರಯತ್ನ ನಡೆಸಿದೆ. ಇನ್ನೊಂದೆಡೆ, ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿಕೂಟ ಸತತ ಐದನೇ ಬಾರಿ ಗದ್ದುಗೆ ಒಲಿಸಿಕೊಳ್ಳಲು ಕಸರತ್ತು ನಡೆಸಿದೆ. 

ಮೇಯರ್‌ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್‌ ಕಟೀಲ್‌ ಹಾಗೂ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನಡುವಿನ ವೈಮನಸ್ಸು ನಗರದ ಬಿಜೆಪಿ ಶಾಸಕರು ಹಾಗೂ ಕಾರ್ಪೊರೇಟರ್‌ಗಳಲ್ಲಿ ಕಳವಳ ಸೃಷ್ಟಿಸಿದೆ.

‘ನಾಲ್ಕು ಅವಧಿಯಲ್ಲೂ ಸ್ವಯಂಕೃತ ತಪ್ಪಿನಿಂದಾಗಿ ಬಿಬಿಎಂಪಿಯಲ್ಲಿ ಚುಕ್ಕಾಣಿ ಕಳೆದುಕೊಳ್ಳಬೇಕಾಯಿತು. ಈ ಬಾರಿ, ರಾಜ್ಯದಲ್ಲಿ ನಮ್ಮದೇ ಸರ್ಕಾರವಿದ್ದು, ನಮ್ಮ ಪಕ್ಷದವರೇ ಮೇಯರ್‌ ಆಗಲು ಉತ್ತಮ ಅವಕಾಶವಿದೆ. ಪಕ್ಷದ ನಾಯಕರು ಪ್ರತಿಷ್ಠೆ ಬದಿಗಿಡದಿದ್ದರೆ ಕಾಂಗ್ರೆಸ್‌ನವರು ಪರಿಸ್ಥಿತಿಯ ಲಾಭ ಪಡೆಯಲಿದ್ದಾರೆ. ‘ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ’ ಎಂದು ನಾವು ಪರಿತಪಿಸಬೇಕಾಗಬಹುದು’ ಎಂದು ಬಿಜೆಪಿಯ ಸ್ಥಳೀಯ ಮುಖಂಡರೊಬ್ಬರು ಆತಂಕ ತೋಡಿಕೊಂಡರು.

ಬಿಬಿಎಂಪಿಯಲ್ಲಿನ ಬಲಾಬಲವನ್ನು ಪರಿಗಣಿಸಿದರೆ ಬಿಜೆಪಿ ಸ್ಪಷ್ಟ ಬಹುಮತ ಹೊಂದಿಲ್ಲದಿರುವುದು ಸ್ಪಷ್ಟವಾಗಿದೆ.

ಬಿಜೆಪಿ ಅಭ್ಯರ್ಥಿಯ ಗೆಲುವಿಗೆ ಐದು ಮತಗಳ ಕೊರತೆ ಇದೆ. ಮತದಾನದ ಹಕ್ಕು ಹೊಂದಿರುವ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್‌ ಹಾಗೂ ಡಿ.ವಿ.ಸದಾನಂದ ಗೌಡ ಅವರು ಮೇಯರ್‌ ಚುನಾವಣೆಯ ವೇಳೆ ಭಾಗವಹಿಸುವುದು ಅನುಮಾನ.

ಅಧ್ಯಕ್ಷರ ನಡೆಗೆ ಅಸಮಾಧಾನ:

ನಗರದ ಶಾಸಕರೆಲ್ಲ ಸೇರಿ ಒಮ್ಮತದಿಂದ ಅಭ್ಯರ್ಥಿ ಆಯ್ಕೆಗೆ ಪ್ರಯತ್ನಿಸುತ್ತಿರುವುದರ ನಡುವೆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರು ವ್ಯತಿರಿಕ್ತ ಹೇಳಿಕೆ ನೀಡಿರುವುದು ಬಿಜೆಪಿ ಶಾಸಕರ ಅಸಮಾಧಾನಕ್ಕೆ ಕಾರಣವಾಗಿದೆ.

‘ಪ್ರತಿವರ್ಷವೂ ಮೇಯರ್‌ ಅಭ್ಯರ್ಥಿ ಆಯ್ಕೆಗೆ ಮುನ್ನ ಸ್ಥಳೀಯ ಶಾಸಕರು ಹಾಗೂ ಪಕ್ಷದ ಕಾರ್ಪೊರೇಟರ್‌ಗಳ ಅಭಿಪ್ರಾಯ ಸಂಗ್ರಹಿಸಿ ಒಮ್ಮತದ ತೀರ್ಮಾನಕ್ಕೆ ಬರಲಾಗುತ್ತಿತ್ತು. ಈ ಬಾರಿಯೂ ಮುಖ್ಯಮಂತ್ರಿ ಸೂಚನೆ ಮೇರೆಗೆ ಶಾಸಕರು ಹಾಗೂ ಕಾರ್ಪೊರೇಟರ್‌ಗಳು, ಮೇಯರ್‌ ಸ್ಥಾನದ ಆಕಾಂಕ್ಷಿಗಳ ಜೊತೆ ಸಭೆ ನಡೆಸಿದ್ದೆವು. ಎಲ್ಲರ ಅಭಿಪ್ರಾಯಗಳನ್ನು ಕ್ರೋಡೀಕರಿಸಿ ಯಾರನ್ನು ಅಭ್ಯರ್ಥಿಯನ್ನಾಗಿ ಮಾಡಿದರೆ ಸೂಕ್ತ ಎಂಬ ಬಗ್ಗೆ ಮುಖ್ಯಮಂತ್ರಿಗೆ ವರದಿ ನೀಡಿದ್ದೇವೆ. ಇನ್ನು ತೀರ್ಮಾನ ಕೈಗೊಳ್ಳುವುದು ಅವರಿಗೆ ಬಿಟ್ಟ ವಿಚಾರ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಪಕ್ಷದ ಮುಖಂಡರೊಬ್ಬರು ‘ಪ್ರಜಾವಾಣಿ‘ಗೆ ತಿಳಿಸಿದರು.

ರಾಜ್ಯ ಘಟಕದ ಅಧ್ಯಕ್ಷರು ಮೇಯರ್‌ ಆಯ್ಕೆ ಬಗ್ಗೆ ಚರ್ಚಿಸಲು ಸೋಮವಾರ ಕಾರ್ಪೊರೇಟರ್‌ಗಳ ಹಾಗೂ ಶಾಸಕರ ಸಭೆ ಕರೆದಿದ್ದಾರೆ. ಈ ಬಗ್ಗೆಯೂ ಕೆಲ ಶಾಸಕರು ಬೇಸರ ತೋಡಿಕೊಂಡಿದ್ದಾರೆ.

‘ಮೇಯರ್‌ ಚುನಾವಣೆ ಗೆಲ್ಲುವಷ್ಟು ಬಹುಮತ ನಮಗಿಲ್ಲ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಕಸರತ್ತು ನಡೆಸಿದ್ದೆವು. ಪಕ್ಷದ ವರಿಷ್ಠರು ಏನು ತೀರ್ಮಾನ ಮಾಡಿದ್ದಾರೋ ನಮಗೇನು ಗೊತ್ತು. ಯಾರನ್ನು ಬೇಕಾದರೂ ಮೇಯರ್‌ ಮಾಡಲಿ. ಸೋಮವಾರ ನಿಗದಿಯಾದ ಸಭೆ ಬಗ್ಗೆ ನಮಗೆ ಮಾಹಿತಿ ಇಲ್ಲ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಶಾಸಕರೊಬ್ಬರು ತಿಳಿಸಿದರು.

ಬಿಜೆಪಿಯಲ್ಲಿ ಪದ್ಮನಾಭ ರೆಡ್ಡಿ, ಎಲ್‌.ಶ್ರೀನಿವಾಸ್‌, ಕೆ.ಎ.ಮುನೀಂದ್ರ ಕುಮಾರ್‌, ಜಿ.ಮಂಜುನಾಥ ರಾಜು, ಎಂ.ವೆಂಕಟೇಶ್‌, ಎಂ.ಗೌತಮ್ ಕುಮಾರ್‌, ಕೆ.ಉಮೇಶ ಶೆಟ್ಟಿ ಅವರು ಮೇಯರ್‌ ಸ್ಥಾನದ ಆಕಾಂಕ್ಷಿಗಳು. 

ಚುನಾವಣೆ ಮುಂದೂಡುವಂತೆ ಒತ್ತಡ

ಅಭ್ಯರ್ಥಿ ಆಯ್ಕೆಯ ಗೊಂದಲ ಬಗೆಹರಿಸಲು ಸಾಧ್ಯವಾಗದ ಕಾರಣ ಮೇಯರ್‌ ಚುನಾವಣೆಯನ್ನೇ ಮುಂದೂಡುವಂತೆ ಬಿಜೆಪಿ ಒತ್ತಡ ಹೇರುತ್ತಿದೆ.

‘ಸ್ಥಾಯಿ ಸಮಿತಿ ಚುನಾವಣೆ ಹಾಗೂ ಮೇಯರ್‌ ಚುನಾವಣೆಯನ್ನು ಒಟ್ಟೊಟ್ಟಿಗೆ ನಡೆಸಬೇಕು. ಸ್ಥಾಯಿಸಮಿತಿ ಚುನಾವಣೆಯನ್ನು ನಿಗದಿತ ಅವಧಿಗೆ ಮುನ್ನ ನಡೆಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್‌ ಇತ್ತೀಚಿಗೆ ಆದೇಶ ಮಾಡಿದೆ. ಹಾಗಾಗಿ, ಮೇಯರ್‌ ಚುನಾವಣೆಯನ್ನು ಮುಂದೂಡುವಂತೆ ಪ್ರಾದೇಶಿಕ ಆಯುಕ್ತರಿಗೆ ಮನವಿ ಸಲ್ಲಿಸಿದ್ದೇವೆ’ ಎಂದು ಶಾಸಕರೊಬ್ಬರು ತಿಳಿಸಿದರು.

‘ಮೇಯರ್‌ ಚುನಾವಣೆಯನ್ನು ಮುಂದೂಡುವಂತೆ ಬಿಜೆಪಿಯವರು ಮನವಿ ಸಲ್ಲಿಸಿದ್ದು ನಿಜ. ಹಾಗೆ ಮಾಡಲು ಸಾಧ್ಯವಿಲ್ಲ. ನಿಗದಿಯಂತೆ ಅ.1ರಂದೇ ಚುನಾವಣೆ ನಡೆಯಲಿದೆ’ ಎಂದು ಪ್ರಾದೇಶಿಕ ಆಯುಕ್ತ ಹರ್ಷ ಗುಪ್ತ ‘ಪ್ರಜಾವಾಣಿ’ಗೆ ತಿಳಿಸಿದರು.

ಕಾಂಗ್ರೆಸ್‌ ಕೊನೆ ಕ್ಷಣದ ಕಸರತ್ತು

ನಾಲ್ಕು ಅವಧಿಯಲ್ಲೂ ಪಾಲಿಕೆಯಲ್ಲಿ ಚುಕ್ಕಾಣಿ ಹಿಡಿದಿದ್ದ ಕಾಂಗ್ರೆಸ್‌ ಈ ಬಾರಿಯೂ ರೊಟ್ಟಿ ಜಾರಿ ತುಪ್ಪಕ್ಕೆ ಬೀಳುವುದನ್ನು ಕಾಯುತ್ತಿದೆ.

‘ಜೆಡಿಎಸ್‌ ಜೊತೆ ಸೇರಿ ಪಾಲಿಕೆಯಲ್ಲಿ ಮತ್ತೆ ಅಧಿಕಾರ ಹಿಡಿಯಲು ನಮ್ಮಿಂದಾದ ಪ್ರಯತ್ನ ಮಾಡುತ್ತೇವೆ. ಪಕ್ಷೇತರ ಸದಸ್ಯರ ಪೈಕಿ ಮೂವರಂತೂ ನಮ್ಮ ಜೊತೆ ಇದ್ದಾರೆ. ಇನ್ನಿಬ್ಬರು ಕೊನೆ ಕ್ಷಣದಲ್ಲಿ ನಮ್ಮನ್ನು ಬೆಂಬಲಿಸುವ ವಿಶ್ವಾಸವಿದೆ. ಅನರ್ಹಗೊಂಡ ಶಾಸಕರ ಜೊತೆ ಗುರುತಿಸಿಕೊಂಡಿದ್ದ ಪಾಲಿಕೆ ಸದಸ್ಯರೂ ಪಕ್ಷವನ್ನು ಬೆಂಬಲಿಸಲಿದ್ದಾರೆ’ ಎಂದು ಪಾಲಿಕೆಯ ಆಡಳಿತ ಪಕ್ಷದ ನಾಯಕ ಅಬ್ದುಲ್‌ ವಾಜಿದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಆರ್‌.ಎಸ್‌.ಸತ್ಯನಾರಾಯಣ ಅಥವಾ ಮಹಮ್ಮದ್‌ ರಿಜ್ವಾನ್‌ ನವಾಬ್ ಪೈಕಿ ಒಬ್ಬರು ಕಾಂಗ್ರೆಸ್‌ ಅಭ್ಯರ್ಥಿಯಾಗುವುದು ಬಹುತೇಕ ಖಚಿತ. ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವ ಕುರಿತು ಚರ್ಚಿಸಲು ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಪಕ್ಷದ ಕಾರ್ಪೊರೇಟರ್‌ಗಳ ಸಭೆ ಕರೆಯಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು