ಭಾನುವಾರ, ಏಪ್ರಿಲ್ 18, 2021
31 °C

ಅರ್ಥವಾಗದ ಪಾಠ ವಿಷಪ್ರಾಶನ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಹಿಂದೆ ಬ್ರಹ್ಮದತ್ತ ವಾರಣಾಸಿಯನ್ನು ಆಳುತ್ತಿದ್ದಾಗ ಬೋಧಿಸತ್ವ ಒಂದು ಪ್ರಧಾನ ಬ್ರಾಹ್ಮಣ ಮನೆತನದಲ್ಲಿ ಹುಟ್ಟಿದ. ಅವನು ದೊಡ್ಡವನಾದ ಮೇಲೆ ತಕ್ಕಶಿಲೆಗೆ ಹೋಗಿ ಗುರುಗಳಿಂದ ಸಕಲ ವೇದಗಳನ್ನು ಕಲಿತು ಬಂದ. ಮುಂದೆ ಅವನೇ ಪ್ರಧಾನ ಆಚಾರ್ಯನಾಗಿ ವಾರಣಾಸಿಯಲ್ಲಿ ನೆಲೆಸಿ ಅನೇಕ ಕ್ಷತ್ರಿಯ ಹಾಗೂ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ವೇದ ಮಂತ್ರಗಳನ್ನು ಕಲಿಸತೊಡಗಿದ.

ಒಬ್ಬ ಬ್ರಾಹ್ಮಣ ಮಾಣವಕ ಬೋಧಿಸತ್ವನ ಬಳಿಗೆ ಮಂತ್ರಗಳನ್ನು ಕಲಿಯಲು ಬರುತ್ತಿದ್ದ. ನಾಲ್ಕಾರು ವರ್ಷಗಳಲ್ಲಿ ಮೂರು ವೇದಗಳನ್ನು ಕಲಿತ. ಹೀಗೆ ಕಲಿಯುತ್ತಿರುವಾಗಲೇ ಅವನ ಮದುವೆಯಾಯಿತು. ಅವನಿಗೆ ಹೊಸ ಹೆಂಡತಿ, ಬಟ್ಟೆ-ಬರೆ, ಅಲಂಕಾರ, ಮನೆಯಲ್ಲಿ ದಾಸ-ದಾಸಿಯರು, ಹೊಲ-ಸಾಮಗ್ರಿಗಳು, ಹಸು, ಎತ್ತು, ಎಮ್ಮೆ, ಹೊಸಮನೆ ಇವುಗಳ ಸೆಳೆತ ನಿಧಾನವಾಗಿ ಹೆಚ್ಚಾಗತೊಡಗಿತು. ಅವನು ಮೂರು ವೇದಗಳನ್ನು ಕಲಿತಿದ್ದನಷ್ಟೆ? ಆದರೆ ಸಂಸಾರದ ಸೆಳವಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ಅವನಿಗೆ ಈ ವೇದಮಂತ್ರಗಳು ಸರಿಯಾಗಿ ಮನನವಾಗಿರಲಿಲ್ಲ. ಅವನು ಪಡೆದದ್ದು ನಿಕೃಷ್ಠವಾದ ಜ್ಞಾನ. ಆತ ಉಪ ಆಚಾರ್ಯನಾಗಿ ಬೇರೆಯವರಿಗೆ ಪಾಠಮಾಡತೊಡಗಿದ. ಅವನ ಮನಸ್ಸೇ ರಾಗ, ದ್ವೇಷ, ಮೋಹಗಳಿಗೆ ವಶವಾದ್ದರಿಂದ ಅವನು ಚಂಚಲಚಿತ್ತನಾದ. ಮಂತ್ರಗಳನ್ನು ಸರಿಯಾಗಿ ಓದಿಸುತ್ತಿರಲಿಲ್ಲ. ಅಲ್ಲಲ್ಲಿ ಮಂತ್ರಗಳ ಅರ್ಥವೇ ಹೊಳೆಯುತ್ತಿರಲಿಲ್ಲ.

ಅವನಿಂದ ಮಂತ್ರಗಳನ್ನು ಕಲಿತ ಕುಮಾರರ ಪರಿಸ್ಥಿತಿ ಇನ್ನೂ ಕಷ್ಟವಾಯಿತು. ಅವರು ಪಡೆದದ್ದೇ ಅಪೂರ್ಣ ಜ್ಞಾನ. ಅದನ್ನು ಮತ್ತೊಬ್ಬರಿಗೆ ಕಲಿಸುವಾಗ ಮತ್ತಷ್ಟು ತಪ್ಪುಗಳು, ಅನರ್ಥಗಳು ಸೇರಿಕೊಂಡವು. ಹೀಗಾಗಿ ಅನರ್ಥ ಪರಂಪರೆಯೇ ನೆಲೆಯಾಗತೊಡಗಿತು. ಒಂದು ಬಾರಿ ಬೋಧಿಸತ್ವ ಮಂತ್ರವಿದರ ಸಭೆಯಲ್ಲಿ ಮಾತನಾಡುವಾಗ ಉಳಿದ ತರುಣರ ವಿಚಾರಗಳನ್ನು ಕೇಳಿದ. ಅವರು ಹೇಳಿದ್ದು ಮೂಲಕ್ಕಿಂತ ತುಂಬ ಭಿನ್ನವಾಗಿತ್ತು, ಮೂಲಮಂತ್ರಕ್ಕೆ ಅಪಚಾರವಾಗುತ್ತಿತ್ತು. ಆತ ಆ ತರುಣರನ್ನೆಲ್ಲ ಒಂದೆಡೆಗೆ ಕರೆಸಿ ಮಂತ್ರಗಳನ್ನು ಮತ್ತೊಮ್ಮೆ ಹೇಳಿ ಅವುಗಳ ಅರ್ಥವನ್ನು ವಿವರಿಸುವಂತೆ ಕೇಳಿದ. ಅವರಿಗಾರಿಗೂ ಮಂತ್ರಗಳ ಅರ್ಥವೇ ತಿಳಿದಿಲ್ಲ! ಅವರು ಕೇವಲ ಮಂತ್ರಗಳನ್ನು ಗಿಳಿಗಳಂತೆ ಪಾಠಮಾಡಿದ್ದಾರೆ. ಅಷ್ಟೇ ಅಲ್ಲ ಪಾಠದಲ್ಲೂ ಅಪಸ್ವರ, ಉಚ್ಛಾರಸ್ಪಷ್ಟನೆ ಇಲ್ಲ. ಅವನಿಗೆ ಗಾಬರಿಯಾಯಿತು. ಯಾರು ನಿಮಗೆ ಈ ಮಂತ್ರಗಳನ್ನು ಕಲಿಸಿದ್ದು ಎಂದು ಕೇಳಿದ. ಅವರೆಲ್ಲರೂ ಬೋಧಿಸತ್ವನ ಶಿಷ್ಯನಾದ ಮಾಣವಕನ ಶಿಷ್ಯರೇ. ಹಾಗಾದರೆ ತನ್ನ ಕಲಿಸುವಿಕೆಯಲ್ಲಿಯೇ ದೋಷವಿದೆಯೇ ಎಂದು ಪರೀಕ್ಷಿಸಿಕೊಳ್ಳಲು ಮಾಣವಕನನ್ನು ತನ್ನ ಮನೆಗೆ ಕರೆಸಿಕೊಂಡು ಈ ವಿಷಯವಾಗಿ ಕೇಳಿದ. ಆಗ ಆತ ಪ್ರಾಮಾಣಿಕವಾಗಿ ಹೇಳಿದ, “ಗುರುಗಳೇ ನಾನು ಗೃಹಸ್ಥನಾದಾಗಿನಿಂದ ಮನಸ್ಸು ಚಂಚಲವಾಗಿಬಿಟ್ಟಿದೆ. ಹೀಗಾಗಿ ಮಂತ್ರಗಳ ಅಭ್ಯಾಸ ಸರಿಯಾಗಿ ನಡೆಯುತ್ತಿಲ್ಲ. ಸಂಸಾರದ ಸೆಳೆತ ಹೆಚ್ಚಾಗಿದೆ. ಬದುಕು ನಡೆಸಲು ಮಂತ್ರಗಳನ್ನು ಕಲಿಸುತ್ತಿದ್ದೇನೆ. ಏನು ಮಾಡಲಿ?”

ಬೋಧಿಸತ್ವ ಹೇಳಿದ, “ಮಗೂ ವೇದ ಪಾಠ ಅಥವಾ ಶಿಕ್ಷಣ ಎನ್ನುವುದು ಹೊಟ್ಟೆಹೊರೆಯಲು ಮಾಡುವ ಉದ್ಯೋಗವಲ್ಲ. ಅದು ಪರಂಪರೆಯನ್ನು ಸರಿಯಾಗಿ ಮುಂದುವರೆಸುವ ಅನನ್ಯವಾದ ತಪಸ್ಸು. ಅದನ್ನು ಶ್ರದ್ಧೆಯಿಂದ, ಏಕಾಗ್ರತೆಯಿಂದ ಮಾಡದೆ ಹೋದರೆ ವೃತ್ತಿಗೆ ಅಪಮಾನ ಮಾಡುವುದರೊಂದಿಗೆ, ಪರಂಪರೆಗೆ ಅಪಚಾರವಾಗುತ್ತ್ತಿದೆ. ಅದು ದೊಡ್ಡ ಪಾಪ. ಅದು ನಿನ್ನನ್ನು ಮುಂದೆ ಶಿಕ್ಷಿಸದೆ ಬಿಡುವುದಿಲ್ಲ. ಅರ್ಥವಾಗದ ಪಾಠವೆಂದರೆ ವಿಷಪ್ರಾಶನ ಮಾಡಿದ ಹಾಗೆ. ಇನ್ನು ಮುಂದೆ ಚೆನ್ನಾಗಿ ಅರಿತು ಪಾಠಮಾಡು, ಇಲ್ಲವೆ ಪಾಠ ಮಾಡುವುದನ್ನು ಬಿಟ್ಟುಬಿಡು”. ಮಾಣವಕ ತನ್ನ ತಪ್ಪನ್ನು ಅರಿತುಕೊಂಡು ಸಂಸಾರದ ಸೆಳೆತದಿಂದ ಬಿಡುಗಡೆಮಾಡಿಕೊಂಡು ಶ್ರದ್ಧೆಯಿಂದ ಪಾಠ ಮಾಡತೊಡಗಿದ. ಇಂದಿಗೂ ಈ ಮಾತು ಪಾಠಮಾಡುವ ಎಲ್ಲರಿಗೂ ಅನ್ವಯಿಸೀತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.