ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್ | ತಾಯಿಯ ಬಂಧನದಿಂದ ಆಘಾತಕ್ಕೊಳಗಾದ ಮಗಳಿಗೆ ಹಾಸ್ಟೆಲ್‌ನಲ್ಲಿ ಆಶ್ರಯ

ಶಾಹಿನ್‌ ಶಾಲೆಯಲ್ಲಿ ವಿವಾದಾತ್ಮಕ ನಾಟಕ ಪ್ರಕರಣ
Last Updated 12 ಫೆಬ್ರುವರಿ 2020, 4:11 IST
ಅಕ್ಷರ ಗಾತ್ರ

ಬೀದರ್: ಇಲ್ಲಿಯ ಶಾಹೀನ್‌ ಶಾಲೆಯಲ್ಲಿ ಮಾಡಿದ ಒಂದು ಸಣ್ಣ ನಾಟಕ ‘ದೇಶದ್ರೋಹ’ಕ್ಕೆ ಸಿಲುಕಿಸುವಷ್ಟು ಗಂಭೀರ ಸ್ವರೂಪ ಪಡೆದುಕೊಳ್ಳುತ್ತದೆ ಎಂದು ಶಾಲೆಯ ಯಾರೊಬ್ಬರೂ ಭಾವಿಸಿರಲಿಲ್ಲ. ಮನೆಗೆಲಸ ಮಾಡುತ್ತಿದ್ದ ನಜಮುನ್ನೀಸಾ ಜೈಲು ಸೇರಿದ ನಂತರ ಆಕೆಯ 11 ವರ್ಷದ ಮಗಳು ಅಕ್ಷರಶಃ ಅತಂತ್ರಳಾಗಿದ್ದಾಳೆ. ಖಾಸಗಿ ಹಾಸ್ಟೆಲ್‌ನಲ್ಲಿ ಆಸರೆ ಒದಗಿಸಿದ ಬಳಿಕ ತೀವ್ರ ಆಘಾತಕ್ಕೆ ಒಳಗಾಗಿದ್ದು, ಪರೀಕ್ಷೆ ಬರೆಯಲು ಸಹ ಶಾಲೆಗೆ ಹೋಗುತ್ತಿಲ್ಲ.

ಶಾಹೀನ್‌ ಶಾಲೆಯಲ್ಲಿ ಫೆ. 10ರಿಂದ ಪೂರ್ವಸಿದ್ಧತಾ ಪರೀಕ್ಷೆ ಆರಂಭವಾಗಿದೆ. ಬಾಲಕಿ ಮೊದಲ ದಿನದ ಗಣಿತ ಪರೀಕ್ಷೆಗೆ ಹಾಜರಾಗಿರಲಿಲ್ಲ. ಎರಡನೇ ದಿನವಾದ ಮಂಗಳವಾರವೂ ಪರೀಕ್ಷೆಗೆ ಗೈರಾಗಿದ್ದಳು.ಜನವರಿ 26 ರಂದು ನ್ಯೂಟೌನ್‌ ಪೊಲೀಸ್‌ ಠಾಣೆಯಲ್ಲಿ ದೇಶದ್ರೋಹದ ಪ್ರಕರಣ ದಾಖಲಾದ ನಂತರ ಪೊಲೀಸರು ಏಳು ದಿನ ನಿರಂತರವಾಗಿ ಶಾಲೆಗೆ ಬಂದು ಮಕ್ಕಳನ್ನು ಪ್ರಶ್ನಿಸಿದ್ದರು.

ಮಕ್ಕಳ ಹಕ್ಕುಗಳ ಆಯೋಗ ಆಕ್ಷೇಪ ವ್ಯಕ್ತಪಡಿಸಿದ ನಂತರ ಶಾಲಾ ಆವರಣದೊಳಗೆ ಪೊಲೀಸರು ಬರುವುದು ಕಡಿಮೆ ಆಗಿದೆ. ಆದರೆ, ಶಾಲೆಯ ಆವರಣದಲ್ಲಿ ಯಾವುದೇ ವಾಹನ ಬಂದರೂ ಅದು ಪೊಲೀಸ್‌ ವಾಹನವೇ ಇರಬಹುದು ಎಂದು ಮಕ್ಕಳು ಗಾಬರಿಯಿಂದ ಕಿಟಕಿಯಿಂದ ಹೊರಗೆ ನೋಡುತ್ತಿದ್ದಾರೆ. ಪೊಲೀಸರು ಬಂಧನಕ್ಕೊಳಗಾದ ಮಹಿಳೆಯ ಮಗಳನ್ನೇ ಪ್ರಶ್ನಿಸಲು ಬರುತ್ತಿದ್ದಾರೆ ಎನ್ನುವುದು ತರಗತಿಯ ಮಕ್ಕಳಲ್ಲಿ ಬಲವಾಗಿ ಬೇರೂರಿದೆ.

ಫೆಬ್ರುವರಿ 7 ರಿಂದ ಬಾಲಕಿ ಶಾಲೆಗೆ ಬಂದಿಲ್ಲ. ನಜಮುನ್ನೀಸಾ ಬಂಧನದ ನಂತರ ಆಕೆಯ ಮಗಳು ಪಕ್ಕದ ಬಟ್ಟೆ ವ್ಯಾಪಾರಿಯ ಮನೆಯಲ್ಲಿ ಉಳಿದುಕೊಂಡಿದ್ದಳು. ಪೊಲೀಸರು ಹಾಗೂ ಮಾಧ್ಯಮದವರು ಘಟನೆಯ ಸಂಬಂಧ ವಿಚಾರಿಸಲು ಬರುತ್ತಿರುವ ಕಾರಣ ಮಕ್ಕಳ ಕಲ್ಯಾಣ ಸಮಿತಿ ನಿರ್ದೇಶನದ ಮೇರೆಗೆ ಬಾಲಕಿಯನ್ನು ಖಾಸಗಿ ಹಾಸ್ಟೆಲ್‌ನಲ್ಲಿ ಇಡಲಾಗಿದೆ.

ಮಕ್ಕಳ ಕಲ್ಯಾಣ ಸಮಿತಿಯ ಮೇಲುಸ್ತುವಾರಿಯಲ್ಲಿ ಶಾಹೀನ್‌ ಶಾಲೆಯ ಶಿಕ್ಷಕಿಯೊಬ್ಬರು ಬಾಲಕಿಯನ್ನು ನೋಡಿಕೊಳ್ಳುತ್ತಿದ್ದಾರೆ.

‘ತಾಯಿಯ ಬಂಧನದ ನಂತರ ಬಾಲಕಿಯ ಆರೋಗ್ಯದಲ್ಲಿ ಏರುಪೇರಾಗಿದೆ. ಅವಳು ಯಾರೊಂದಿಗೂ ಹೆಚ್ಚು ಮಾತನಾಡಲು ಇಷ್ಟ ಪಡುತ್ತಿಲ್ಲ. ದಯವಿಟ್ಟು ಯಾರೂ ಅವಳಿಗೆ ತೊಂದರೆ ಕೊಡಬೇಡಿ’ ಎಂದು ಬಾಲಕಿಯನ್ನು ನೋಡಿಕೊಳ್ಳುತ್ತಿರುವ ಶಿಕ್ಷಕಿ ಮನವಿ ಮಾಡಿಕೊಳ್ಳುತ್ತಿದ್ದಾರೆ.

‘ಬಾಲಕಿ ಓದಿನಲ್ಲಿ ಮುಂದಿದ್ದಾಳೆ. ಪ್ರತಿ ವಿಷಯದಲ್ಲಿ ಶೇ 85ರಿಂದ 90ರಷ್ಟು ಅಂಕ ಪಡೆಯುತ್ತಾಳೆ. ತಾಯಿ ಬಂಧನದ ನಂತರ ಅವಳಿಗೆ ಒಂಟಿತನ ಕಾಡುತ್ತಿದೆ’ ಎಂದು ಅವರು ಹೇಳಿದರು.

ಗೆಳತಿಯ ಚಪ್ಪಲಿ ಒಯ್ದ ಪೊಲೀಸರು

ವಿವಾದಾತ್ಮಕ ನಾಟಕ ಪ್ರದರ್ಶಿಸಿದ ಬಾಲಕಿಯು ತನ್ನ ಚಪ್ಪಲಿ ಹರಿದಿದ್ದರಿಂದ ಗೆಳತಿಯ ಚಪ್ಪಲಿ ಹಾಕಿಕೊಂಡಿದ್ದಳು. ದೇಶದ್ರೋಹದ ಪ್ರಕರಣ ದಾಖಲಾದ ನಂತರ ಪೊಲೀಸರು ಬಾಲಕಿಯ ಗೆಳತಿಯ ಮನೆಗೆ ಬಂದು ಸಾಕ್ಷ್ಯಾಧಾರವಾಗಿ ಚಪ್ಪಲಿ ತೆಗೆದುಕೊಂಡು ಹೋಗಿದ್ದಾರೆ.

‘ನಾಟಕದ ಸಂದರ್ಭದಲ್ಲಿ ಗೆಳತಿ ನನ್ನ ಚಪ್ಪಲಿ ಧರಿಸಿದ್ದಕ್ಕೆ ಪೊಲೀಸರು ನಮ್ಮ ಮನೆಗೆ ಬಂದು ಚಪ್ಪಲಿ ಒಯ್ದಿದ್ದಾರೆ. ಆದರೆ ಅವಳು ನಾಲ್ಕು ದಿನಗಳಿಂದ ಶಾಲೆಗೆ ಬಂದಿಲ್ಲ’ ಎಂದು ಬಾಲಕಿಯ ಗೆಳತಿ ಕಣ್ಣೀರು ಹಾಕಿದಳು.

ಮಕ್ಕಳ ಹಕ್ಕುಗಳ ಆಯೋಗಕ್ಕೆ ವರದಿ

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಿಂದ ಲಿಖಿತ ಮಾಹಿತಿ ಪಡೆದಿರುವ ರಾಜ್ಯ ಮಕ್ಕಳ ಹಕ್ಕುಗಳ ಆಯೋಗವು ಶಾಲಾ ಮಕ್ಕಳೊಂದಿಗೂ ಸಮಾಲೋಚನೆ ನಡೆಸಿ ವರದಿಯನ್ನು ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗಕ್ಕೆ ಕಳಿಸಿದೆ.

‘ಸಿಸಿ ಟಿವಿಯಲ್ಲಿನ ನಾಟಕದ ವಿವಾದಾತ್ಮಕ ದೃಶ್ಯಾವಳಿಯನ್ನು ಅಳಿಸಿರುವ ಸಾಧ್ಯತೆ ಇದೆ. ಡಿಜಿಟಲ್‌ ವಿಡಿಯೊ ರೆಕಾರ್ಡರ್ (ಡಿವಿಆರ್) ವಶಪಡಿಸಿಕೊಂಡು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಿ ಅಳಿಸಿದ ಭಾಗವನ್ನು ಹಿಂಪಡೆಯಲು ಪ್ರಯತ್ನಿಸಲಾಗುತ್ತಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್‌. ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT