ಸೋಮವಾರ, ಮೇ 23, 2022
30 °C

ಬೇಗೂರುಕೊಲ್ಲಿಯಲ್ಲಿ ಬೈಕ್‌ ರ‍್ಯಾಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪೊನ್ನಂಪೇಟೆ : ಬೇಗೂರು ಕೊಲ್ಲಿಯಲ್ಲಿ ಜೆಸಿಐ ಪೊನ್ನಂಪೇಟೆ ಗೋಲ್ಡನ್ ವತಿಯಿಂದ ಆಯೋಜಿಸಿದ್ದ ರಾಷ್ಟ್ರಮಟ್ಟದ ನಾಲ್ಕುಚಕ್ರ ಹಾಗೂ ದ್ವಿಚಕ್ರ ಆಟೋಕ್ರಾಸ್‍ನಲ್ಲಿ ರ‍್ಯಾಲಿಪಟುಗಳು ದೂಳೆಬ್ಬಿಸುವ ಮೂಲಕ ಅಭಿಮಾನಿಗಳಿಗೆ ಮನರಂಜನೆ ನೀಡಿದರು. ಕಿವಿಗಪ್ಪಳಿಸುವ ಶಬ್ದಗಳ ನಡುವೆ ದೂಳಿನೋಕುಳಿ ಆಕಾಶಕ್ಕೂ ಮುತ್ತಿಕ್ಕುವಷ್ಟು ಕಂಡು ಬಂತು.

ಹಸಿರಿನಿಂದ ಕೂಡಿದ್ದ ಗಿಡಗಳು ದೂಳಿನಿಂದ ಕೆಂಪಾಗುವಷ್ಟು ದೂಳು ಕಂಡು ಬಂತು. ಬಿಸಿಲಿನ ತಾಪ.. ಕಣ್ಣುತುಂಬುವಷ್ಟು ದೂಳು.. ಶಬ್ದಗಳ ನಿನಾದ ಎಲ್ಲೆಲ್ಲೂ ಕೇಳಿ ಬಂತು. ಉರಿಬಿಸಲಿಗೂ ಬಗ್ಗದ ಅಭಿಮಾನಿಗಳು ಟ್ರ್ಯಾಕ್ ಉದ್ದಕ್ಕೂ ನಿಂತು ಕುತೂಹಲದಿಂದ ವೀಕ್ಷಿಸಿದರು.

ಪೊನ್ನಂಪೇಟೆ-ಹುದಿಕೇರಿ ಮುಖ್ಯರಸ್ತೆ ಬದಿಯಲ್ಲಿನ ಬೇಗೂರುಕೊಲ್ಲಿಯ ಚೇಂದೀರ, ಐಪುಮಾಡ, ಚೆಕ್ಕೇರ ಹಾಗೂ ತೀತೀರ ಕುಟುಂಬಗಳಿಗೆ ಸೇರಿರುವ ಗದ್ದೆಯಲ್ಲಿ ಈ ರ‍್ಯಾಲಿ ನಡೆಯಿತು.

ಅಂತಾರಾಷ್ಟ್ರೀಯ ರ‍್ಯಾಲಿಪಟು ಲೋಹಿತ್ ಅರಸ್ ಟ್ರ್ಯಾಕ್ ಚಿಂತನೆಯಂತೆ ನಿರ್ಮಿಸಿದ್ದ ಟ್ರ್ಯಾಕ್ ಸುಮಾರು 850 ಮೀಟರ್ ಉದ್ದವಿತ್ತು. 3 ತಿರುವುಗಳು ಮಾತ್ರ ನಿರ್ಮಿಸಿದ್ದ ಕಾರಣ ಬೈಕ್ ಸವಾರರಿಗೆ ಹೆಚ್ಚು ಅನುಕೂಲವಾಯಿತು.

ಇದೇ ಮೊದಲ ಬಾರಿಗೆ ನಾಲ್ಕುಚಕ್ರ ವಾಹನ ರ‍್ಯಾಲಿಯಲ್ಲಿ ಡಿಜಿಟಲ್ ಟೈಮಿಂಗ್ಸ್ ತಂತ್ರಜ್ಞಾನ ಅಳವಡಿಸಲಾಗಿತ್ತು.

ಉದ್ಘಾಟನೆ

ನಾಲ್ಕು ಚಕ್ರ ಹಾಗೂ ದ್ವಿಚಕ್ರ ರ‍್ಯಾಲಿಯನ್ನು ಪೊನ್ನಂಪೇಟೆ ಪೊಲೀಸ್ ಉಪ ನಿರೀಕ್ಷಕ ಮಹೇಶ್ ಹಸಿರು ನಿಶಾನೆ ತೋರಿಸುವ ಮೂಲಕ ಉದ್ಘಾಟಿಸಿದರು.

ಈ ಸಂದರ್ಭ ಜೆಸಿಐ ಪೊನ್ನಂಪೇಟೆ ಗೋಲ್ಡನ್ ಅಧ್ಯಕ್ಷೆ ಕೊಣಿಯಂಡ ಕಾವ್ಯ ಸಂಜು, ವಲಯ ಅಧ್ಯಕ್ಷ ಜಫಿನ್, ಮಾಂಡವಿ ಮೋಟರ್ಸ್ ಗೋಣಿಕೊಪ್ಪ ಶೋರೂಮ್ ವ್ಯವಸ್ಥಾಪಕ ಮನೋಜ್, ಜೆಸಿಐ ಕಾರ್ಯದರ್ಶಿ ಕೊಟ್ಟಂಗಡ ನಾಣಯ್ಯ, ಜೆಸಿಐ ಪ್ರಮುಖರುಗಳಾದ ಕೊಟ್ಟಂಗಡ ಸುಬ್ಬಯ್ಯ, ಅರಸು ನಂಜಪ್ಪ, ಕಾಟಿಮಾಡ ಗಿರಿ, ನಿರನ್ ಮೊಣ್ಣಪ್ಪ, ರಾಬಿನ್ ಸುಬ್ಬಯ್ಯ, ದಿಲನ್ ಚೆಂಗಪ್ಪ, ಪುಳ್ಳಂಗಡ ನಟೇಶ್ ಪಾಲ್ಗೊಂಡಿದ್ದರು.

ಫಲಿತಾಂಶ

ದ್ವಿಚಕ್ರ ವಿಭಾಗದ 3 ಕ್ಲಾಸ್‍ನಲ್ಲಿ ಪ್ರಥಮ ಸ್ಥಾನ ಪಡೆದುಕೊಂಡ ಸುಂಟಿಕೊಪ್ಪದ ಎಂ. ಬಿ. ಶಿಯಾಬ್ ಚಾಂಪಿಯನ್ ಬಹುಮಾನ ಗಿಟ್ಟಿಸಿಕೊಂಡರು. ಕೂರ್ಗ್ ಲೋಕಲ್, ನಾವಿಸ್ ಹಾಗೂ ಇಂಡಿಯನ್ ಓಪನ್ ಕ್ಲಾಸ್ ವಿಭಾಗದಲ್ಲಿ ಪ್ರಥಮ ಸ್ಥಾನದ ಸಾಧನೆ ಮಾಡಿದರು. ಉಳಿದಂತೆ ಮುಸೈನ್‍ಶೇಕ್ 4 ವಿಭಾಗದಲ್ಲಿ ಬಹುಮಾನ ಗಿಟ್ಟಿಕೊಂಡು ಗಮನ ಸೆಳೆದರು.

ದ್ವಿಚಕ್ರ ಫಲಿತಾಂಶ:

ಕೂರ್ಗ್ ಲೋಕಲ್ ವಿಭಾಗದಲ್ಲಿ ಎಂ. ಬಿ. ಶಿಯಾಬ್ ಪ್ರಥಮ, ನಿಹಾಲ್‍ಖಾನ್ ದ್ವಿತೀಯ, ಅಜರುದ್ದೀನ್ ತೃತೀಯ ಸ್ಥಾನ ಪಡೆದುಕೊಂಡರು. 2 ಸ್ಟ್ರೋಕ್ ವಿಭಾಗದಲ್ಲಿ ಟಿ. ಟಿ. ಅರುಣ್ (ಪ್ರ), ಮುಸೈನ್ ಶೇಕ್ (ದ್ವಿ), ಎಂ. ಡಿ. ಅರಿಫ್ (ತೃ). ನಾವೀಸ್ ಕ್ಲಾಸ್‍ನಲ್ಲಿ ಎಂ. ಬಿ. ಶಿಯಾಬ್ (ಪ್ರ), ಫಿಯಾಜ್ (ದ್ವಿ), ಶಯಿಸ್‍ಅಮಿನ್‍ಶಾನ್ (ತೃ). ಫೋರ್ ಸ್ಟ್ರೋಕ್ ವಿಭಾಗದಲ್ಲಿ ಶೇಕ್ ಮುಸೈನ್ (ಪ್ರ), ಫಿರೋಜ್ (ದ್ವಿ), ಸಲ್ಮಾನ್ (ತೃ).ಇಂಡಿಯನ್ ಓಪನ್ ವಿಭಾಗದಲ್ಲಿ ಎಂ. ಬಿ. ಶಿಯಾಬ್ (ಪ್ರ), ಶೇಕ್‍ಮುಸೈನ್ (ದ್ವಿ), ಟಿ. ಅರುಣ್ (ತೃ). ಎಕ್ಸ್‍ಪರ್ಟ್ ಕ್ಲಾಸ್‍ನಲ್ಲಿ ಪಿ. ಅರುಣ್ (ಪ್ರ), ಶೇಕ್‍ಮುಸೈನ್ (ದ್ವಿ), ಚಂದುಖಾನ್ (ತೃ) ಸ್ಥಾನ ಪಡೆದುಕೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು