ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಾಯಕಾರಿ ಅವೈಜ್ಞಾನಿಕ ವಿಲೇವಾರಿ

ಮೂಲದಲ್ಲಿ ವಿಂಗಡಣೆ ಆಗದ ವೈದ್ಯಕೀಯ ತ್ಯಾಜ್ಯ * ಬಹುತೇಕ ಕ್ಲಿನಿಕ್‌ಗಳಿಂದ ಕಾನೂನು ಉಲ್ಲಂಘನೆ
Last Updated 25 ಮೇ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳ ಹೆಚ್ಚಿನ ಮನೆಗಳಲ್ಲಿ ಮುಚ್ಚದೆ ಇರುವ ಸ್ಯಾನಿಟರಿ ನ್ಯಾಪ್‌ಕಿನ್‌, ಡೈಪರ್‌, ಸಿರಿಂಜ್‌ಗಳು, ರಕ್ತ ಅಂಟಿಕೊಂಡಿರುವ ಹತ್ತಿ, ಇತರ ವೈದ್ಯಕೀಯ ತ್ಯಾಜ್ಯಗಳನ್ನು ಪ್ರತಿ ದಿನ ಕಸದ ಬುಟ್ಟಿಗಳಿಗೆ ಹಾಕಲಾಗುತ್ತಿದೆ.

ಇದು ಸಣ್ಣ ವಿಚಾರ ಎಂದು ನಿಲರ್ಕ್ಷಿಸುವಂತಿಲ್ಲ. ಏಕೆಂದರೆ, ಇದು ದೊಡ್ಡ ಪರಿಸರ ಸಮಸ್ಯೆಯಾಗಿ ಬದಲಾಗಿದೆ. ಮನೆಗಳಲ್ಲಿ ಉತ್ಪತ್ತಿಯಾಗುತ್ತಿರುವ ಇಂತಹ ತ್ಯಾಜ್ಯದ ಪ್ರಮಾಣ ಆಸ್ಪತ್ರೆ, ಕ್ಲಿನಿಕ್‌ಗಳ ತ್ಯಾಜ್ಯಕ್ಕಿಂತ ಅಧಿಕ ಎಂಬುದು ತಜ್ಞರ ಅಂದಾಜು. ಮನೆಗಳಲ್ಲಿ ಉತ್ಪತ್ತಿಯಾಗುತ್ತಿರುವ ತ್ಯಾಜ್ಯದ ನಿಖರ ಲೆಕ್ಕಾಚಾರ ಇಲ್ಲ. ಸ್ಥಳೀಯ ಆಡಳಿತ ಅಥವಾ ಸ್ವಯಂಸೇವಾ ಸಂಸ್ಥೆಗಳು ಈ ಕುರಿತು ಅಧ್ಯಯನ ನಡೆಸಿಲ್ಲ.

ಬೆಂಗಳೂರು ಸಹಿತ ದೇಶದ ಹಲವು ನಗರಗಳಲ್ಲಿ ಕುಟುಂಬ ಸದಸ್ಯರ ಆರೋಗ್ಯದ ಬಗ್ಗೆ ಮನೆಗಳಲ್ಲೇ ನಿಗಾವಹಿಸುವ ಪರಿಪಾಟ ಹೆಚ್ಚಿದೆ. ಹೀಗಾಗಿ ದಿನಕಳೆದಂತೆ ವೈದ್ಯಕೀಯ ವಸ್ತುಗಳ ಪ್ರಮಾಣ ಮನೆಗಳಲ್ಲಿ ಹೆಚ್ಚುತ್ತಿದೆ. ಮನೆಯಲ್ಲಿ ಉತ್ಪಾದನೆ ಆಗುತ್ತಿರುವ ಆಸ್ಪತ್ರೆ ತ್ಯಾಜ್ಯವನ್ನು ಇತರೆ ತ್ಯಾಜ್ಯಗಳಿಂದ ವಿಭಜಿಸಿ ವಿಲೇವಾರಿ ಮಾಡುವ ಕೆಲಸ ಸಮರ್ಪಕವಾಗಿ ನಡಯುತ್ತಿಲ್ಲ ಎಂದು ತಜ್ಞರು ಹೇಳುತ್ತಿದ್ದಾರೆ.

ವೈದ್ಯಕೀಯ ತ್ಯಾಜ್ಯವನ್ನು ನಿಭಾಯಿಸುವ ‘ಮೆಡಿಕೇರ್‌ ಎನ್ವಿರಾನ್‌ಮೆಂಟಲ್‌ ಮ್ಯಾನೇಜ್‌ಮೆಂಟ್‌ ಪ್ರೈವೇಟ್ ಲಿಮಿಟೆಡ್‌’ನ ಸಹಾಯಕ ಮಹಾಪ್ರಬಂಧಕ (ಕಾರ್ಯಾಚರಣೆ) ಶಶಿ ರೆಡ್ಡಿ ಅವರ ಪ್ರಕಾರ, ಮನೆಗಳಲ್ಲಿ ಸಂಗ್ರಹವಾಗುವ ವೈದ್ಯತ್ಯಾಜ್ಯದ ಪ್ರಮಾಣ ಆಸ್ಪತ್ರೆಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯಗಳಿಗಿಂತ ನಾಲ್ಕು ಪಟ್ಟು ಅಧಿಕ.

‘ಮನೆಗಳಲ್ಲಿ ಉತ್ಪತ್ತಿಯಾಗುವ ವೈದ್ಯಕೀಯ ತ್ಯಾಜ್ಯಗಳ ಪೈಕಿ ಶೇಕಡಾ 98ರಷ್ಟನ್ನು ಸುಟ್ಟು ಹಾಕಬೇಕಿದೆ. ಆದರೆ, ಅವುಗಳನ್ನು ಪಾಲಿಕೆಯ ತ್ಯಾಜ್ಯದ ಜತೆ ಸೇರಿಸಲಾಗುತ್ತಿದೆ. ಉಳಿದ ಶೇಕಡಾ 2ರಷ್ಟು ವೈದ್ಯ ತ್ಯಾಜ್ಯವನ್ನು ಮಾಲಿನ್ಯ ನಿಯಂತ್ರಣ ಮಂಡಳಿ ಸೂಚಿಸಿದ ಮಾದರಿಯಲ್ಲಿ ವಿಂಗಡಿಸಬೇಕು. ಆದರೆ ಅವೆಲ್ಲವೂ ಪಾಲಿಕೆ ಕಸದ ಜತೆ ಸೇರುತ್ತಿವೆ’ ಎಂದು ಹೇಳುತ್ತಾರೆ ರೆಡ್ಡಿ.

2014ರಲ್ಲಿ ಬಿಬಿಎಂಪಿ ವೈದ್ಯಕೀಯ ತ್ಯಾಜ್ಯವನ್ನು ಪ್ರತ್ಯೇಕ ಕಸದ ಬುಟ್ಟಿಯಲ್ಲಿ ಸಂಗ್ರಹಿಸುವ ವಿನೂತನ ಯೋಜನೆ ಆರಂಭಿಸಿತ್ತು. ಯಲಹಂಕ ಮತ್ತು ಪಶ್ಚಿಮ ವಲಯದಲ್ಲಿ 12 ಲಕ್ಷ ಕುಟುಂಬಗಳನ್ನು ಗುರಿಯಾಗಿಟ್ಟುಕೊಂಡು ಈ ಯೋಜನೆ ರೂಪಿಸಲಾಗಿತ್ತು. ಆದರೆ ಅದು ಸಫಲವಾಗಲಿಲ್ಲ.

ಮನೆಗಳಲ್ಲಿ ಸಂಗ್ರಹವಾಗುವ ವೈದ್ಯಕೀಯ ತ್ಯಾಜ್ಯದ ಪ್ರಮಾಣ ಕಡಿಮೆ ಇರುವುದಿಂದ ಅವುಗಳನ್ನು ಪ್ರತಿ ದಿನ ಎಂಬಂತೆ ಸಂಗ್ರಹಿಸುವುದು ಕಷ್ಟ. ಹಾಗಂತ ಮನೆಗಳಲ್ಲಿ ಅವುಗಳು ದುರ್ವಾಸನೆ ಉಂಟುಮಾಡುವುದರಿಂದ ಹೆಚ್ಚು ದಿನ ಸಂಗ್ರಹಿಸಿ ಇಡುವುದೂ ಸಾಧ್ಯವಿಲ್ಲ ಎಂದು ವಿವರಿಸುತ್ತಾರೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು.

ಸ್ಯಾನಿಟರಿ ಪ್ಯಾಡ್‌ ಮತ್ತು ಡೈಪರ್‌ಗಳಲ್ಲಿ ರಕ್ತದ ಕಲೆಗಳು ಇದ್ದರೂ ಅವುಗಳನ್ನು ಆಸ್ಪತ್ರೆ ತ್ಯಾಜ್ಯ ಎಂದು ಜೈವಿಕ ವೈದ್ಯಕೀಯ ತ್ಯಾಜ್ಯ ನಿರ್ವಹಣಾ ನಿಯಮಗಳು ಪರಿಗಣಿಸುವುದಿಲ್ಲ ಎಂಬುದನ್ನೂ ಅವರು ಬೊಟ್ಟು ಮಾಡಿ ತೋರಿಸುತ್ತಾರೆ. ನ್ಯಾ‍‍‍ಪ್‌ಕಿನ್‌ಗಳನ್ನು ಸುಡುವ ವಿಧಾನದ ಬಗ್ಗೆ ಸೂಕ್ತ ಮಾರ್ಗದರ್ಶನ ಇಲ್ಲ. ‘ನ್ಯಾಪ್‌ಕಿನ್‌ಗಳು 400–500 ಡಿಗ್ರಿ ಶಾಖದಲ್ಲಿ ಉರಿಯಬೇಕು. ಅದರಂತೆ ಕಾರ್ಯ ನಿರ್ವಹಿಸದೆ ಇದ್ದರೆ ಡಯಾಕ್ಸಿನ್‌ನಂತಹ ಅಪಾಯಕಾರಿ ರಾಸಾಯನಿಕಗಳು ವಾತಾವರಣಕ್ಕೆ ಬಿಡುಗಡೆಯಾಗುತ್ತವೆ’ ಎಂದು ಹೇಳುತ್ತಾರೆ ಮಾಲಿನ್ಯ ನಿಯಂತ್ರಣ ಮಂಡಳಿಯ ಹಿರಿಯ ಅಧಿಕಾರಿ ಎ.ರಮೇಶ್‌.

‘ರಕ್ತದ ಕಲೆಯನ್ನು ಹೊಂದಿರುವ ಯಾವುದೇ ಉತ್ಪನ್ನವನ್ನು ಜೈವಿಕ ವೈದ್ಯಕೀಯ ತ್ಯಾಜ್ಯ ಎಂದೇ ಪರಿಗಣಿಸಬೇಕಾಗುತ್ತದೆ. ಆದರೆ ದೇಶದೆಲ್ಲೆಡೆ ಇದನ್ನು ಬಳಕೆ ಮಾಡುವುದರಿಂದ ವೈದ್ಯಕೀಯ ತ್ಯಾಜ್ಯ ಎಂಬುದಾಗಿ ವಿಂಗಡಿಸುವುದು ಬಹಳ ಕಷ್ಟ. ಹೆಚ್ಚಿನ ದೇಶಗಳಲ್ಲಿ ಇದನ್ನು ಘನ ತ್ಯಾಜ್ಯ ಎಂದೇ ಪರಿಗಣಿಸಲಾಗಿದೆ’ ಎಂದು ಮಣಿಪಾಲ ಆಸ್ಪತ್ರೆಯ ನಿರ್ದೇಶಕ ಡಾ. ಎಚ್‌. ಸುದರ್ಶನ ಬಲ್ಲಾಳ್‌ ಹೇಳಿದರು.

‘ವೈದ್ಯಕೀಯ ತ್ಯಾಜ್ಯ ನಿರ್ವಹಣೆಯ ಮೊದಲ ಹಂತವೇ ವಿಂಗಡಣೆ. ಮೂಲದಲ್ಲೇ ನಾಲ್ಕು ವಿವಿಧ ವಿಭಾಗಗಳ ಅಡಿಯಲ್ಲಿ ತ್ಯಾಜ್ಯ ಸಂಗ್ರಹಿಸಬೇಕು. ಇದನ್ನು ಸರ್ಕಾರ ಅನುಮೋದಿಸಿದ ಏಜೆನ್ಸಿಗಳ ಮೂಲಕ ಪ್ರತಿ ದಿನ ಸಂಗ್ರಹಿಸಬೇಕು ಅಥವಾ ಸಾಮಾನ್ಯ ವೈದ್ಯಕೀಯ ತ್ಯಾಜ್ಯ ವಿಲೇವಾರಿ ಘಟಕಕ್ಕೆ ರವಾನಿಸಬೇಕು. ದ್ರವ ತ್ಯಾಜ್ಯವನ್ನು ಶುದ್ಧೀಕರಣ ಘಟಕಗಳಲ್ಲಿ ವಿಲೇವಾರಿ ಮಾಡಬೇಕು’ ಎಂದು ವಿವರಿಸುತ್ತಾರೆ ಮಣಿಪಾಲ ಆಸ್ಪತ್ರೆಯ ವೈದ್ಯಕೀಯ ಸೇವೆಗಳ ಮುಖ್ಯಸ್ಥ ಡಾ.ಎಸ್‌.ಮುರಳಿ.

‘ಸ್ವಚ್ಛ ಭಾರತ್ ಮಿಷನ್‌ ಅಡಿಯಲ್ಲಿ‍‍ಪ್ರತಿಯೊಂದು ಆಸ್ಪತ್ರೆಯಲ್ಲೂ ಕಾಯಕಲ್ಪ ಕಾರ್ಯಕ್ರಮ ಇದೆ. ಸ್ವಚ್ಛತೆ ಕಾಪಾಡುವುದೇ ಇದರ ಉದ್ದೇಶ. ವೈದ್ಯಕೀಯ ತ್ಯಾಜ್ಯಕ್ಕೆ ಸಹ ಗಮನ ಕೊಡಲಾಗುತ್ತದೆ. ಪ್ರತಿ ಜಿಲ್ಲೆಯಲ್ಲಿ ಗುಣಮಟ್ಟ ಖಾತರಿಪಡಿಸುವ ಅಧಿಕಾರಿಗಳು ಇರುತ್ತಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಬ್ಬಂದಿಯ ಜತೆಗೆ ದಾದಿಯರು ಮತ್ತು ಡಿ ಗುಂಪಿನ ಸಿಬ್ಭಂದಿಗೆ ತರಬೇತಿ ನೀಡುವುದು ಇವರ ಕೆಲಸ. ಸಿಬ್ಬಂದಿ ಮೂಲದಲ್ಲೇ ತ್ಯಾಜ್ಯವನ್ನು ವಿಂಗಡಿಸಿ ವಿಲೇವಾರಿಗೆ ಕಳುಹಿಸುತ್ತಾರೆ’ ಎಂದು ಹೇಳುತ್ತಾರೆ ಕರ್ನಾಟಕ ಸಮುದಾಯ ಆರೋಗ್ಯ ಸಂಘದ ಕಾರ್ಯದರ್ಶಿ ಡಾ. ಟಿ.ಎಸ್. ರಂಗನಾಥ.

ರಾಜ್ಯದಲ್ಲಿರುವ ಅನೇಕ ಆಯುರ್ವೇದ, ಯುನಾನಿ ಮತ್ತು ಹೋಮಿಯೋಪಥಿ ಕೇಂದ್ರಗಳಲ್ಲೂ ಹಲವು ಬಗೆಯ ವೈದ್ಯಕೀಯ ತ್ಯಾಜ್ಯಗಳು ಉತ್ಪಾದನೆಯಾಗುತ್ತವೆ.ಆದರೆ ಅವುಗಳನ್ನು ವೈದ್ಯಕೀಯ ತ್ಯಾಜ್ಯಗಳು ಎಂಬುದಾಗಿ ಈ ಕೇಂದ್ರಗಳು ಒಪ್ಪುತ್ತಿಲ್ಲ. ಮಸಾಜ್‌ ಕೇಂದ್ರಗಳಲ್ಲಿ ಉತ್ಪಾದನೆಯಾಗುವ ಹತ್ತಿ ಮತ್ತಿತರ ತ್ಯಾಜ್ಯಗಳನ್ನೂ ಘನ ತ್ಯಾಜ್ಯ ಎಂದೇ ಪರಿಗಣಿಸಲಾಗುತ್ತಿದೆ.

‘ಆಯುಷ್‌ ವೈದ್ಯಕೀಯ ಕೇಂದ್ರಗಳ ಮೇಲೆ ಮಾಲಿನ್ಯ ನಿಯಂತ್ರಣ ಮಂಡಳಿಗೆ ಯಾವ ನಿಯಂತ್ರಣವೂ ಇಲ್ಲ. ಅವರು ನಮ್ಮ ಕಚೇರಿಗೆ ಬಂದು ಪ್ರಮಾಣಪತ್ರ ಕೇಳುತ್ತಾರೆ. ಇಂಜೆಕ್ಷನ್‌ ಮತ್ತು ಇತರ ಯಾವುದೇ ವೈದ್ಯಕೀಯ ಸಾಧನ ಬಳಸುವುದಿಲ್ಲ ಎಂದು ಮುಚ್ಚಳಿಕೆಯನ್ನೂ ಬರೆದು ಕೊಡುತ್ತಾರೆ. ಹೀಗಿದ್ದರೂ ಕೆಲವೊಮ್ಮೆ ಆಯುಷ್‌ ವೈದ್ಯರು ಇಂಜೆಕ್ಷನ್‌ ಕೊಡುತ್ತಾರೆ ಮತ್ತು ಕೆಲವು ಸಣ್ಣಪುಟ್ಟ ಶಸ್ತ್ರಚಿಕಿತ್ಸೆ ಪ್ರಕ್ರಿಯೆಗಳನ್ನು ನಡೆಸುತ್ತಾರೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ಭಾರತೀಯ ವೈದ್ಯಕೀಯ ಮಂಡಳಿಯ ಜತೆಗೆ ಈ ನಿಟ್ಟಿನಲ್ಲಿ ಸಭೆ ನಡೆಸುವ ಬಗ್ಗೆಯೂ ಅವರು ಮಾಹಿತಿ ನೀಡಿದರು.

‘ವೈದ್ಯಕೀಯ ತ್ಯಾಜ್ಯ ವಿಲೇವಾರಿ ವಿಚಾರದಲ್ಲಿ ದೊಡ್ಡ ಆಸ್ಪತ್ರೆಗಳು ನಿಯಮ ಪಾಲಿಸುತ್ತವೆ. ಆದರೆ ಸವಾಲು ಇರುವುದೇ ಸಣ್ಣ ಆಸ್ಪತ್ರೆಗಳಿಗೆ. ಸ್ಥಳದ ಅಭಾವದಿಂದ ಅವರಿಗೆ ಸೂಕ್ತ ರೀತಿಯಿಂದ ಘನ, ದ್ರವ ವೈದ್ಯಕೀಯ ತ್ಯಾಜ್ಯವನ್ನು ವಿಲೇವಾರಿ ಮಾಡುವುದು ಸಾಧ್ಯವಾಗುತ್ತಿಲ್ಲ ಎಂದು ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್‌ ಹೋಂಗಳ ಸಂಘದ ಮಾಜಿ ಅಧ್ಯಕ್ಷ ಡಾ.ಮದನ್‌ ಗಾಯಕವಾಡ್ ಹೇಳಿದರು.

‘ತ್ಯಾಜ್ಯ ನಿರ್ವಹಣಾ ಸಂಸ್ಥೆಗಳು ವಿಧಿಸುವ ಶುಲ್ಕ ದುಬಾರಿ. ಇದನ್ನು ಭರಿಸಲು 30 ಹಾಸಿಗೆಗಳಿಗಿಂತ ಸಣ್ಣ ಆಸ್ಪತ್ರೆಗಳಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಅವುಗಳು ಯಾವುದೇ ರೀತಿಯಲ್ಲಿ ವಿಲೇವಾರಿ ಮಾಡದೆ ತ್ಯಾಜ್ಯವನ್ನು ಚರಂಡಿಗೆ ಹರಿಸುತ್ತಿವೆ’ ಎಂದು ಹೆಸರು ಹೇಳಲು ಬಯಸದ ವೈದ್ಯರೊಬ್ಬರು ತಿಳಿಸಿದರು.

ಕಾನೂನು ಜಾರಿಗೆ ಹತ್ತಾರು ಅಡಚಣೆ....?

ಆಸ್ಪತ್ರೆ ತ್ಯಾಜ್ಯ ವಿಲೇವಾರಿಯನ್ನು ಸರಿದಾರಿಗೆ ತರುವ ಪ್ರಯತ್ನ ಕಳೆದ ಎರಡು ದಶಕಗಳಿಂದ ನಡೆದಿದ್ದರೂ ಇನ್ನೂ ತೆವಳುತ್ತಲೇ ಸಾಗಿದೆ. ನಿಯಂತ್ರಣದ ಸಲುವಾಗಿ 1998ರಲ್ಲಿ ಮೊದಲ ಬಾರಿಗೆ ನಿಯಮ ಜಾರಿಗೆ ತರಲಾಯಿತು. ನಂತರ ಸಾಕಷ್ಟು ಬದಲಾವಣೆಗಳನ್ನೂ ಮಾಡಲಾಗಿದೆ. ಪ್ರಸ್ತುತ ಜೈವಿಕ ವೈದ್ಯಕೀಯ ತ್ಯಾಜ್ಯ (ಆಡಳಿತ ಹಾಗೂ ನಿರ್ವಹಣೆ) ನಿಯಮ– 2016 ಜಾರಿಯಲ್ಲಿದ್ದು, 2018ರಲ್ಲಿ ಮತ್ತೊಮ್ಮೆ ತಿದ್ದುಪಡಿ ತರಲಾಗಿದೆ. ಆದರೆ ಜಾರಿಗೆ ಹಲವು ಅಡ್ಡಿಗಳು ಎದುರಾಗಿವೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಆಸ್ಪತ್ರೆ ತ್ಯಾಜ್ಯ ನಿರ್ವಹಣೆ ನಿಯಮಗಳನ್ನು ಜಾರಿಮಾಡುವ ಹೊಣೆ ಹೊತ್ತಿದೆ. ತ್ಯಾಜ್ಯ ಉತ್ಪಾದಕರು, ಸಂಗ್ರಹಿಸುವವರು, ದಾಸ್ತಾನು ಮಾಡುವವರು, ಸಾಗಣೆದಾರರು, ಸಂಸ್ಕರಿಸುವವರು, ವಿಲೇವಾರಿ ಮಾಡುವವರು ಅಥವಾ ಈ ಕೆಲಸದಲ್ಲಿ ತೊಡಗಿಸಿಕೊಂಡವರು ನಿಯಮದ ವ್ಯಾಪ್ತಿಗೆ ಬರುತ್ತಾರೆ.

ಹಗ್ಗಜಗ್ಗಾಟ: ತ್ಯಾಜ್ಯ ನಿರ್ವಹಣೆಯ ಹೊಣೆಗಾರಿಕೆ ಹಾಗೂ ಸೇವಾ ವ್ಯಾಪ್ತಿಯನ್ನು ಒಂದು ಚೌಕಟ್ಟಿನಲ್ಲಿ ತರುವ ಪ್ರಯತ್ನವನ್ನು ಮಾಲಿನ್ಯ ನಿಯಂತ್ರಣ ಮಂಡಳಿ ಆರಂಭಿಸಿದ್ದರೂ ಫಲಸಿಕ್ಕಿಲ್ಲ. ಸಿಬಿಎಂಡಬ್ಲ್ಯೂಟಿಎಫ್ ವ್ಯಾಪ್ತಿಗೆ ತರುವ ಸಲುವಾಗಿ 2017 ಫೆಬ್ರುವರಿಯಲ್ಲಿ ಮಂಡಳಿ ಆದೇಶ ಹೊರಡಿಸಿತ್ತು. ತ್ಯಾಜ್ಯ ಉತ್ಪಾದಿಸುವವರನ್ನು ಗುರುತಿಸುವುದು, ತ್ಯಾಜ್ಯ ಸಂಗ್ರಹಕ್ಕೆ ಶುಲ್ಕ ನಿಗದಿಪಡಿಸುವುದು, ಆರೋಗ್ಯ ಸಂರಕ್ಷಣಾ ಕೇಂದ್ರಗಳನ್ನು ನಿಯಂತ್ರಣಕ್ಕೆ ಒಳಪಡಿಸಲು ಉದ್ದೇಶಿಸಲಾಗಿತ್ತು. ಈ ಆದೇಶವನ್ನು ಪ್ರಶ್ನಿಸಿ ಕೆಲವರು ಹೈಕೋರ್ಟ್ ಮೆಟ್ಟಿಲೇರಿದ್ದು, ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಹಾಗಾಗಿ ತ್ಯಾಜ್ಯ ನಿರ್ವಹಣೆ ಹಾಗೂ ನಿಯಂತ್ರಣ ಸಾಧ್ಯವಾಗಿಲ್ಲ ಎಂದು ಮಂಡಳಿ ಅಧಿಕಾರಿಗಳು ಹೇಳುತ್ತಾರೆ.

ಹೆಚ್ಚಿನ ವ್ಯತ್ಯಾಸವಿಲ್ಲ

ಕರ್ನಾಟಕವಷ್ಟೇ ಅಲ್ಲ ಇತರ ರಾಜ್ಯಗಳಲ್ಲೂ ಆಸ್ಪತ್ರೆ ತ್ಯಾಜ್ಯ ನಿರ್ವಹಣೆಯಲ್ಲಿ ಹೆಚ್ಚಿನ ವ್ಯತ್ಯಾಸ ಕಾಣುತ್ತಿಲ್ಲ. ವರ್ಷದಿಂದ ವರ್ಷಕ್ಕೆ ನಿಯಮ ಉಲ್ಲಂಘನೆ ಪ್ರಕರಣಗಳು ದೇಶಾದ್ಯಂತ ಹೆಚ್ಚುತ್ತಿರುವುದು ಕಂಡುಬಂದಿದೆ. 2015ರಲ್ಲಿ 6074 ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿದ್ದರೆ, 2016ರಲ್ಲಿ ಈ ಸಂಖ್ಯೆ 12034ಕ್ಕೆ ಏರಿಕೆಯಾಗಿದೆ. ಒಂದೇ ವರ್ಷದಲ್ಲಿ ಇದು ದ್ವಿಗುಣಗೊಂಡಿದೆ. ಬಹುತೇಕ ರಾಜ್ಯಗಳ ಮಾಲಿನ್ಯ ನಿಯಂತ್ರಣ ಮಂಡಳಿಗಳು ತಮ್ಮ ವಾರ್ಷಿಕ ವರದಿಯನ್ನೇ ಸಕಾಲಕ್ಕೆ ಸಲ್ಲಿಸಿಲ್ಲ. ಹಾಗಾಗಿ ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ರಾಷ್ಟ್ರಮಟ್ಟದಲ್ಲೂ ನಿಖರ ಮಾಹಿತಿ ಲಭ್ಯವಿಲ್ಲ.

ತ್ಯಾಜ್ಯ ನಿರ್ವಹಣೆಯಲ್ಲಿ ಹೊಣೆಗಾರಿಕೆ ಬೇಕು: ಸಿಎಜಿ

ರಾಜ್ಯದ ನಗರ, ಪಟ್ಟಣ ಪ್ರದೇಶಗಳಲ್ಲಿ ಸಂಗ್ರಹಿಸುವ ಘನ ತ್ಯಾಜ್ಯದಲ್ಲಿ ಸರ್ಕಾರಿ ಆಸ್ಪತ್ರೆಗಳು ಹಾಗೂ ಪಶುವೈದ್ಯಕೀಯ ಆಸ್ಪತ್ರೆಗಳ ತ್ಯಾಜ್ಯ ಮಿಶ್ರಣವಾಗಿರುವುದು ಪತ್ತೆಯಾಗಿದೆ. ನಗರ ಸ್ಥಳೀಯ ಸಂಸ್ಥೆಗಳ ಘನ ತ್ಯಾಜ್ಯ ನಿರ್ವಹಣೆ ಬಗ್ಗೆ ಮಹಾ ಲೇಖಪಾಲಕರು (ಸಿಎಜಿ) ನೀಡಿರುವ ವರದಿಯಲ್ಲಿ ಈ ವಿಷಯ ಪ್ರಸ್ತಾಪಿಸಲಾಗಿದೆ. ಕಸ ಸಂಗ್ರಹಿಸಿದ ಬಹುತೇಕ ಕಡೆಗಳಲ್ಲಿ ಆಸ್ಪತ್ರೆ ತ್ಯಾಜ್ಯ ಕಂಡುಬಂದಿದ್ದು, ಆತಂಕಕಾರಿ ಬೆಳವಣಿಗೆ ಎಂದು ವರದಿ ಎಚ್ಚರಿಸಿದೆ. ಸರ್ಕಾರದ 36 ಆಸ್ಪತ್ರೆ ಹಾಗೂ 34 ಪಶುವೈದ್ಯ ಆಸ್ಪತ್ರೆಗಳಿಗೆ ಮಹಾ ಲೇಖಪಾಲರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅದರಲ್ಲಿ 21 ಆಸ್ಪತ್ರೆಗಳು ಹಾಗೂ 19 ಪಶುವೈದ್ಯ ಆಸ್ಪತ್ರೆಗಳು ಪ್ರಾಥಮಿಕವಾಗಿ ನಿರ್ವಹಣೆಗೆ ಬೇಕಾದ ಅನುಮತಿಯನ್ನೇ ಪಡೆದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಆಸ್ಪತ್ರೆ ತ್ಯಾಜ್ಯ ನಿರ್ವಹಣೆ ಹೇಗೆ ಸಾಧ್ಯವಾಗಲಿದೆ ಎಂದು ಚಾಟಿ ಬೀಸಿದೆ. ದ್ರವ ತ್ಯಾಜ್ಯವನ್ನು ಚರಂಡಿಗಳಿಗೆ ಹರಿಸುವ ಮುನ್ನ ಸಂಸ್ಕರಿಸುವ ಕೆಲಸ ಆಗುತ್ತಿಲ್ಲ. ಮಂಗಳೂರಿನ ಆಸ್ಪತ್ರೆಯೊಂದನ್ನು ಹೊರತುಪಡಿಸಿದರೆ ರಾಜ್ಯದ ಬೇರೆಲ್ಲೂ ಈ ಸೌಕರ್ಯ ಇಲ್ಲ. ಸಿಎಜಿ ಪರಿಶೀಲಿಸಿದ ಯಾವ ಆಸ್ಪತ್ರೆಗಳಲ್ಲೂ ಸಂಸ್ಕರಣಾ ಘಟಕ ಇಲ್ಲವಾಗಿದ್ದು, ರಸಾಯನಿಕ ಸಹಿತದ ದ್ರವ ತ್ಯಾಜ್ಯವನ್ನು ನೇರವಾಗಿ ಚರಂಡಿಗೆ ಹರಿಸಲಾಗುತ್ತಿದೆ. ಇದು ಸಾರ್ವಜನಿಕರ ಆರೋಗ್ಯ ಹಾಗೂ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಜಲಮೂಲಗಳು ಕಲುಷಿತಗೊಳ್ಳುತ್ತಿದ್ದು, ಮುಂದಿನ ದಿನಗಳಲ್ಲಿ ತೀವ್ರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಇದೆಲ್ಲವನ್ನೂ ಗಮನಿಸಿದರೆ ಕಾನೂನುಗಳು ದುರ್ಬಲವಾಗಿರುವುದನ್ನು ತೋರಿಸುತ್ತದೆ. ಯಾರೂ ಜವಾಬ್ದಾರಿ ಹೊರುತ್ತಿಲ್ಲ. ಹೊಣೆಗಾರಿಕೆ ಇಲ್ಲವಾಗಿದೆ ಎಂದು ಸಿಎಜಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಸೊಂಕು ಸಾಧ್ಯತೆ

ಆಸ್ಪತ್ರೆ ತ್ಯಾಜ್ಯದ ಮರು ಬಳಕೆ ಹಾಗೂ ಅವೈಜ್ಞಾನಿಕ ನಿರ್ವಹಣೆಯಿಂದ ಆರೋಗ್ಯ ಮತ್ತು ಪರಿಸರದ ಮೇಲೂ ಪರಿಣಾಮ ಬೀರುತ್ತಿದೆ. ಎಲ್ಲೆಂದರಲ್ಲಿ ತ್ಯಾಜ್ಯವನ್ನು ಎಸೆಯುವುದರಿಂದ ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಸೂಕ್ಷ್ಮ, ಚೂಪಾದ, ಸೋಂಕು ಇರುವ ತ್ಯಾಜ್ಯವನ್ನು ಬಿಸಾಡಿದರೆ ಅಪಾಯವನ್ನು ಆಹ್ವಾನಿಸಿದಂತೆ. ಇಂತಹ ಪ್ರವೃತ್ತಿಯಿಂದಾಗಿ ಆರೋಗ್ಯ ರಕ್ಷಕರು ಹಾಗೂ ಪೌರಕಾರ್ಮಿಕರು ಅಪಾಯಕ್ಕೆ ಸಿಲುಕುತ್ತಿದ್ದಾರೆ. ಹಾಗೆಯೇ ಸಾರ್ವಜನಿಕರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ. ಬಿಸಾಡಿದ ಸೂಜಿ ಸಂಗ್ರಹಿಸುವಾಗ ಚುಚ್ಚಿಕೊಳ್ಳುವುದು, ಸೋಂಕು ಇದ್ದ ತ್ಯಾಜ್ಯದಿಂದ ಎಚ್ಐವಿ, ಹೆಪಾಟಿಟೀಸ್ ‘ಬಿ’ ಹಾಗೂ ‘ಸಿ’ ಗೆ ತುತ್ತಾಗುವ ಸಾಧ್ಯತೆಗಳಿವೆ.

ಪ್ರಯತ್ನ ಮುಂದುವರಿದಿದೆ

ಆಸ್ಪತ್ರೆ ತ್ಯಾಜ್ಯ ಉತ್ಪಾದಕರು ಸರಿಯಾಗಿ ವಿಲೇವಾರಿ ಮಾಡದಿರುವುದು ಹಾಗೂ ನಿಯಮ ಉಲ್ಲಂಘಿಸಿದಾಗ ದಂಡಿಸುವ ಅವಕಾಶ ಇಲ್ಲವಾಗಿದೆ. ದೂರು ಬಂದ ಸಮಯದಲ್ಲಿ ನೋಟಿಸ್ ನೀಡಬಹುದಾಗಿದೆ. ನೋಟಿಸ್‌ಗೆ ಉತ್ತರ ಪಡೆದುಕೊಂಡು ಎಚ್ಚರಿಕೆ ನೀಡಿ, ಪ್ರಕರಣವನ್ನು ಮುಕ್ತಾಯಗೊಳಿಸಬೇಕಿದೆ. ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದ ಎಲ್ಲಾ ಆಯಾಮಗಳನ್ನೂ ಒಳಗೊಳ್ಳುವಂತೆ ಮಾಡಲು ಆರೋಗ್ಯ ಇಲಾಖೆ ಜತೆ ಸೇರಿ ಕೆಲಸ ಮಾಡಲಾಗುತ್ತಿದೆ’ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಕಾರ್ಯದರ್ಶಿ ಮನೋಜ್ ಕುಮಾರ್ ತಿಳಿಸಿದರು.

ರಾಜ್ಯಕ್ಕೆ 2ನೇ ಸ್ಥಾನ....

ವೈದ್ಯಕೀಯ ತ್ಯಾಜ್ಯ ಉತ್ಪಾದನೆಯಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಆಸ್ಪತ್ರೆ ತ್ಯಾಜ್ಯ ನಿರ್ವಹಣೆಗೆ ವೈಜ್ಞಾನಿಕ ವಿಧಾನ ಅಳವಡಿಸಿಕೊಂಡ ದೇಶದ ಮೊದಲ ರಾಜ್ಯ ನಮ್ಮದು. ಆದರೆ ಸಮರ್ಪಕ ಜಾರಿ ಇನ್ನೂ ಸಾಧ್ಯವಾಗಿಲ್ಲ. ಎಷ್ಟು ಪ್ರಮಾಣದ ತ್ಯಾಜ್ಯ ಉತ್ಪಾದನೆ ಆಗುತ್ತದೆ ಎಂಬುದಕ್ಕೆ ಅಧಿಕೃತ ಅಂಕಿ ಅಂಶ, ಇತರ ವಿವರಗಳು ಲಭ್ಯವಿಲ್ಲ. ಇದರಿಂದ ನಿಯಮಗಳ ಜಾರಿಗೆ ತೊಡಕಾಗಿದೆ. ಸದ್ಯದ ಮಟ್ಟಿಗೆ ವೈದ್ಯಕೀಯ ತ್ಯಾಜ್ಯ ಸಂಸ್ಕರಣಾ ಸೌಲಭ್ಯ (ಸಿಬಿಎಂಡಬ್ಲ್ಯೂಟಿಎಫ್) ಹೊಂದಿದವರಿಂದ ಅಲ್ಪಸ್ವಲ್ಪ ಮಾಹಿತಿ ಲಭ್ಯವಾಗುತ್ತಿದೆ. ತ್ಯಾಜ್ಯ ನಿಯಂತ್ರಣ ಹಾಗೂ ನಿರ್ವಹಣೆ ಹೊಣೆ ಹೊತ್ತಿರುವ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಇತ್ತೀಚೆಗೆ ಕೊಂಚ ಮಟ್ಟಿನ ವಿವರಗಳು ಸಿಗುತ್ತಿವೆ.

ನಿಯಮ ಉಲ್ಲಂಘನೆ...

ಆರೋಗ್ಯ ಸೇವಾ ಕ್ಷೇತ್ರದಲ್ಲಿ ತೊಡಗಿರುವ 4066 ಸಂಸ್ಥೆಗಳು ಸಮರ್ಪಕವಾಗಿ ತ್ಯಾಜ್ಯ ನಿರ್ವಹಣೆ ಮಾಡದೆ ನಿಯಮ ಉಲ್ಲಂಘಿಸಿರುವುದನ್ನು ಮಾಲಿನ್ಯ ನಿಯಂತ್ರಣ ಮಂಡಳಿ ಪತ್ತೆಮಾಡಿದೆ. 2018ರಲ್ಲಿ ಅಂದರೆ ಒಂದೇ ವರ್ಷದಲ್ಲಿ ಇಷ್ಟೊಂದು ದೊಡ್ಡಪ್ರಮಾಣದ ನಿಯಮ ಉಲ್ಲಂಘನೆ ಪ್ರಕರಣಗಳು ಬೆಳಕಿಗೆ ಬಂದಿರುವುದು ಆತಂಕವನ್ನು ತಂದೊಡ್ಡಿವೆ. ತ್ಯಾಜ್ಯ ಸಂಸ್ಕರಣಾ ಘಟಕ ತಲುಪುವ ಮುನ್ನವೇ ತ್ಯಾಜ್ಯ ನಾಪತ್ತೆಯಾಗುವ ಪ್ರಕರಣಗಳೂ ಬೆಳಕಿಗೆ ಬಂದಿದೆ. ಸಾಕಷ್ಟು ಸಂದರ್ಭಗಳಲ್ಲಿ ಸಿರಿಂಜ್, ಗ್ಲಾಸ್‌ಗಳು ಸಂಸ್ಕರಣ ಘಟಕ ತಲುಪುವುದೇ ಇಲ್ಲ. ಮರು ಬಳಕೆಗಾಗಿ ಕಳವು ಮಾಡಲಾಗುತ್ತದೆ. ಸಮರ್ಪಕವಾಗಿ ನಿರ್ವಹಣೆ ಮಾಡದ ಹಾಗೂ ನಿಯಮ ಉಲ್ಲಂಘಿಸಿರುವ ತ್ಯಾಜ್ಯ ಸಂಸ್ಕರಣಾ ಘಟಕಗಳಿಗೆ ಮಾಲಿನ್ಯ ನಿಯಂತ್ರಣ ಮಂಡಳಿಯು 20 ಶೋಕಾಸ್ ನೋಟಿಸ್ ನೀಡಿದೆ. ಈ ಬಗ್ಗೆ ದೂರು ದಾಖಲಿಸುವಂತೆ ಸಂಬಂಧಿಸಿದವರಿಗೆ ನಿರ್ದೇಶನ ನೀಡುತ್ತಲೇ ಇದೆ.

ಅನುವಾದ: ಎಂ.ಜಿ. ಬಾಲಕೃಷ್ಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT