ಶುಕ್ರವಾರ, ಸೆಪ್ಟೆಂಬರ್ 24, 2021
27 °C
ಅಲೆಗಳೊಂದಿಗೆ ತೇಲಿ ಬರುತ್ತಿದೆ ಡಾಂಬರಿನಂತಹ ವಸ್ತು

ಅಂಕೋಲಾ: ಕಡಲ ತೀರಕ್ಕೆ ಬಂದ ಕಪ್ಪು ರಾಸಾಯನಿಕ

ಮಂಜುನಾಥ ಇಟಗಿ Updated:

ಅಕ್ಷರ ಗಾತ್ರ : | |

Prajavani

ಅಂಕೋಲಾ: ಅಲೆಗಳೊಂದಿಗೆ ಬಂದ ತೈಲ ಮಿಶ್ರಿತ ಡಾಂಬರಿನ ಮಾದರಿಯ ಜಿಡ್ಡು, ತಾಲ್ಲೂಕಿನ ಸಮುದ್ರ ತೀರದ ಉದ್ದಕ್ಕೂ ಅಂಟಿಕೊಂಡಿದೆ. ಇದು ಕಡಲ ದಂಡೆಯುದ್ದಕ್ಕೂ ಶೇಖರಣೆಯಾಗುತ್ತಿರುವುದು ಮೀನುಗಾರರ ಆತಂಕಕ್ಕೆ ಕಾರಣವಾಗಿದೆ.

ಬೆಳಂಬಾರ, ನದಿಬಾಗ, ಹೊನ್ನೆಗುಡಿ, ಶೇಡಿಕುಳಿ, ಕೇಣಿ, ಹನಿಬೀಚ್, ಬೇಲೆಕೇರಿ, ಹಾರವಾಡಾ ಭಾಗದಲ್ಲಿ ನಾಲ್ಕೈದು ದಿನಗಳಿಂದ ಸಮುದ್ರದ ಅಲೆಯೊಂದಿಗೆ ಬಂದು ದಡದಲ್ಲಿ ಶೇಖರಣೆಯಾಗುತ್ತಿದೆ. ಎರಡು ದಿನಗಳಿಂದ ಈ ಪ್ರಮಾಣ ಹೆಚ್ಚಿದೆ. 

ಹಡಗುಗಳಿಂದ ವಿಸರ್ಜಿಸಿದ ಎಂಜಿನ್ ಆಯಿಲ್ ಇದಾಗಿರಬಹುದು ಎಂದು ಸ್ಥಳೀಯರು ಊಹಿಸಿದ್ದಾರೆ. ಸಮುದ್ರದಲ್ಲಿ ನಿತ್ಯವೂ ನೂರಾರು ದೊಡ್ಡ ಹಡಗುಗಳು ಸಂಚರಿಸುತ್ತವೆ. ವಾಹನಗಳ ಮಾದರಿಯಲ್ಲೇ ಇಂತಿಷ್ಟು ದೂರ ಸಂಚರಿಸಿದ ಮೇಲೆ ಹಡಗುಗಳ ಎಂಜಿನ್ ಆಯಿಲ್ ಬದಲಾಯಿಸಬೇಕಾಗುತ್ತದೆ.  ಆ ಕಾರ್ಯಕ್ಕೆ ಹಡಗನ್ನು ಬಂದರಿನಲ್ಲಿ ನಿಲ್ಲಿಸಿದರೆ ಶುಲ್ಕ ಕಟ್ಟಬೇಕು. ಅದರಿಂದ ತಪ್ಪಿಸಿಕೊಳ್ಳಲು ಸಮುದ್ರದಲ್ಲೇ ಆಯಿಲ್ ಬದಲಿಸಿ ತ್ಯಾಜ್ಯವನ್ನು ಸಮುದ್ರಕ್ಕೆ ಚೆಲ್ಲುತ್ತಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಇವು ಜಲಚರಗಳಿಗೆ ಮಾರಕವಾಗಿದೆ. ಪ್ರವಾಸೋದ್ಯಮಕ್ಕೂ ಧಕ್ಕೆಯಾಗುತ್ತದೆ. ಈ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಮೀನುಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಮೀನಿಗೆ ಬರ: ನಾಡದೋಣಿ, ಪರ್ಸೀನ್ ಬೋಟುಗಳಿಗೆ 2– 3 ತಿಂಗಳುಗಳಿಂದ ಮೀನು ಸಿಗುತ್ತಿಲ್ಲ. ಪ್ರತಿ ವರ್ಷ ಏಪ್ರಿಲ್– ಮೇ ತಿಂಗಳಲ್ಲಿ ಸಾಕಷ್ಟು ಮೀನು ಸಿಗುತ್ತಿತ್ತು. ಬಂಗುಡೆ, ತಾರ್ಲಿ ಜಾತಿಯ ಮೀನುಗಳು ಬಲೆಗೆ ಬೀಳುತ್ತಿದ್ದವು. ಗುಂಪಾಗಿ ಬರುವ ಮೀನುಗಳು ಸಿಗುವುದರಿಂದ ಪರ್ಸೀನ್ ಬೋಟುಗಳ ಮಾಲೀಕರಿಗೆ ಸಾಕಷ್ಟು ಆದಾಯ ಸಿಗುತ್ತಿತ್ತು. ಆದರೆ, ಈ ಬಾರಿ ಮೀನು ಸಿಗದೆ ತೀವ್ರ ಸಂಕಷ್ಟ ಅನುಭವಿಸಬೇಕಾಗಿದೆ ಎನ್ನುತ್ತಾರೆ ಬೇಲೆಕೇರಿಯ ಮೀನುಗಾರ ಮುಖಂಡ ಸುಧಾಕರ ಜಾಂಬಾವಾಳಿಕರ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು