ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ಆರ್ಥಿಕತೆ ಹಾಳುಗೆಡವಿದ ಬಿಜೆಪಿ ಸರ್ಕಾರ: ಮಲ್ಲಿಕಾರ್ಜುನ ಖರ್ಗೆ

Last Updated 1 ಸೆಪ್ಟೆಂಬರ್ 2018, 18:09 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕೇಂದ್ರದ ಬಿಜೆಪಿ ಸರ್ಕಾರ ದೇಶದ ಆರ್ಥಿಕತೆಯನ್ನು ಸಂಪೂರ್ಣ ಹಾಳುಗೆಡವಿದೆ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು

ಮಾಧ್ಯಮ ಪ್ರತಿನಿಧಿಗಳೊಂದಿಗೆ ಶನಿವಾರ ಮಾತನಾಡಿದ ಅವರು, ತಪ್ಪು ಆರ್ಥಿಕ ನೀತಿಯ ಪರಿಣಾಮ ಡಾಲರ್ ಎದುರು ರೂಪಾಯಿ ಮೌಲ್ಯ ದಾಖಲೆಯ ಕುಸಿತ ಕಂಡಿದೆ. ಪೆಟ್ರೋಲ್– ಡೀಸೆಲ್ ಬೆಲೆ ಏರಿಕೆಯಾಗಿದ್ದು, ಜನ ಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದಾರೆ. ಡೀಸೆಲ್ ಬೆಲೆ ₹75 ದಾಟಿದ್ದು, ಕೃಷಿ ಚಟುವಟಿಕೆಗೆ ಟ್ರಾಕ್ಟರ್, ಜೀಪ್ ಬಳಸುವ ರೈತರು ಹೈರಾಣಾಗಿದ್ದಾರೆ. ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾದರೂ, ಜನರ ಹಿತದೃಷ್ಟಿಯಿಂದ ಬೆಲೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳಲಾಗಿತ್ತು ಎಂದರು.

ಪೆಟ್ರೋಲ್ ಡೀಸೆಲ್ ಬೆಲೆ ಹೆಚ್ಚಾಗಿರುವುದರಿಂದ ಎಕ್ಸೈಸ್ ಡ್ಯೂಟಿಯಿಂದಲೇ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ಪ್ರತಿ ವರ್ಷ ₹1.67 ಲಕ್ಷ ಕೋಟಿ ಆದಾಯ ಸಂದಾಯವಾಗುತ್ತಿದೆ. ಅದನ್ನು ಸಹ ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳುತ್ತಿಲ್ಲ. ವಾರ್ಷಿಕ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಭರವಸೆ ನೀಡಿದ್ದರು. ಆದರೆ ನಾಲ್ಕೂವರೆ ವರ್ಷ ಕಳೆದರೂ ಕೇವಲ 75 ಲಕ್ಷ ಉದ್ಯೋಗವನ್ನು ಮಾತ್ರ ಸೃಷ್ಟಿಸಲಾಗಿದೆ. ಉದ್ಯೋಗ ಸೃಷ್ಟಿಗೆ ಕ್ರಮವನ್ನೇ ಕೈಗೊಂಡಿಲ್ಲ. ಉದ್ಯೋಗ ಇಲ್ಲದಿದ್ದರೆ ಕೊಳ್ಳುವ ಶಕ್ತಿ ಇರುವುದಿಲ್ಲ, ಅದು ಮತ್ತೆ ಆರ್ಥಿಕತೆಯನ್ನು ಹಾಳು ಮಾಡುತ್ತದೆ. ಕೃಷಿ ಬೆಳವಣಿಗೆ ದರ ಕೇವಲ ಶೇ2ರಷ್ಟಿದೆ ಎಂದು ವಿಶ್ಲೇಷಿಸಿದರು.

ಕೇಂದ್ರ ಸರ್ಕಾರವೇ ಬಿಡುಗಡೆ ಮಾಡಿರುವ ಅಂಕಿ– ಅಂಶದ ಪ್ರಕಾರ ಯುಪಿಎ ಸರ್ಕಾರದ ಅವಧಿಯ ಒಟ್ಟು ರಾಷ್ಟ್ರಿಯ ಉತ್ಪನ್ನದ ಬೆಳವಣಿಗೆ ದರ (ಜಿಡಿಪಿ)ಶೇ 8.2ರಷ್ಟಿತ್ತು. ಆದರೆ ಕಳೆದ ನಾಲ್ಕುವ ವರ್ಷಗಳಿಂದ ಅದು ಶೇ7.3ರಷ್ಟಿದೆ. ಆರ್ಥಿಕತೆಯನ್ನು ಮಾತ್ರವಲ್ಲದೆ, ಸಾಮಾಜಿಕ ಸಾಮರಸ್ಯವನ್ನು ಕೆಡಿಸಲಾಗಿದೆ. ಸಂವಿಧಾನ ಹಾಗೂ ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಲಗೊಳಿಸಲಾಗುತ್ತಿದೆ. ಪ್ರಜಾಪ್ರಭುತ್ವಕ್ಕೆ ಬೆಲೆ ಇಲ್ಲದಂತಾಗಿದೆ ಎಂದು ದೂರಿದರು.

ಕೇಂದ್ರ ಸರ್ಕಾರದ ವೈಫಲ್ಯದ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಲು ಜನಸಂಘರ್ಷ ಯಾತ್ರೆಯನ್ನು ದೇಶದ ಆರು ಕಡೆ ಹಮ್ಮಿಕೊಳ್ಳಲಾಗುವುದು ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT