ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕಷ್ಟದಲ್ಲಿ ಸಿಲುಕಿದವರಿಗೆ ಬಿಜೆಪಿಯಿಂದ ನೆರವು‌‌: ನಳೀನ್ ಕುಮಾರ್ ಕಟೀಲ್

ಲಾಕ್‌ಡೌನ್‌: ಕೇಂದ್ರದ ನಿಲುವಿಗೆ ಕಟೀಲ್ ಸಮರ್ಥನೆ
Last Updated 10 ಜೂನ್ 2020, 16:43 IST
ಅಕ್ಷರ ಗಾತ್ರ

ಕಲಬುರ್ಗಿ: ದೇಶದಲ್ಲಿ ಕೊರೊನಾ ಸೋಂಕು ತೀವ್ರವಾಗಿ ವ್ಯಾಪಿಸುತ್ತಿರುವುದನ್ನು ತಡೆಯಲು ಕೇಂದ್ರ ಸರ್ಕಾರವು ಲಾಕ್‌ಡೌನ್‌ ಘೋಷಿಸಿದ್ದು ಸರಿಯಾದ ಕ್ರಮ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದರು.

ಸೇಡಂನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸೋಂಕಿನ ತೀವ್ರತೆಯನ್ನು ಗಂಭೀರವಾಗಿ ಪರಿಗಣಿಸಿದ ನರೇಂದ್ರಿ ಮೋದಿಯವರು ಲಾಕ್‌ಡೌನ್‌ ಘೋಷಿಸಿ, ಹೆಚ್ಚಿನ ಅನಾಹುತ ತಪ್ಪಿಸಿದರು. ಈ ಕ್ರಮವನ್ನು ವಿಶ್ವದ ನಾಯಕರೇ ಶ್ಲಾಘಿಸಿದ್ದಾರೆ’ ಎಂದರು.

‘ಲಾಕ್‌ಡೌನ್‌ ಬಗ್ಗೆ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ರಾಜಕಾರಣಕ್ಕಾಗಿ ಟೀಕಿಸುತ್ತಿದ್ದಾರೆ ಹೊರತು ಮತ್ತೇನೂ ಇಲ್ಲ. ಸಂಕಷ್ಟದಲ್ಲಿ ಸಿಲುಕಿದವರಿಗೆ ಬಿಜೆಪಿ ವತಿಯಿಂದ ಸಾಕಷ್ಟು ಸಹಾಯ ಮಾಡಲಾಗಿದೆ’ ಎಂದು ಅವರು ವಿವರಿಸಿದರು.

‘ಅತಂತ್ರ ಸ್ಥಿತಿ ಎದುರಿಸಿದ 3 ಕೋಟಿ ಹೆಚ್ಚು ಜನರು, ವಲಸೆ ಕಾರ್ಮಿಕರಿಗೆ ಆಹಾರ ಕಿಟ್ ಒದಗಿಸುವಲ್ಲಿ, ತಮ್ಮೂರಿಗೆ ತಲುಪಿಸುವಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಶ್ರಮಿಸಿದ್ದಾರೆ. ಸಮಸ್ಯೆ ನಿವಾರಿಸಲು ಆದ್ಯತೆ ನೀಡಲಾಗಿದೆ’ ಎಂದು ತಿಳಿಸಿದರು.

ತಮಿಳುನಾಡಿನ ಡಿಎಂಕೆ ಶಾಸಕರೊಬ್ಬರು ಕೋವಿಡ್‌ಗೆ ಸಾವನ್ನಪ್ಪಿದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಕೊರೊನಾಗೆ ಜಾತಿ, ಮತ, ಧರ್ಮದ ತಾರತಮ್ಯವಿಲ್ಲ. ಯಾರಿಗಾದೂ ಬರಬಹುದು. ಜನರೊಂದಿಗೆ ಬೆರೆಯುವಾಗ, ಸುತ್ತಾಡುವಾಗ ಜನಪ್ರತಿನಿಧಿಯೂ ಎಚ್ಚರ ವಹಿಸಬೇಕಾದದ್ದು ಮುಖ್ಯ’ ಎಂದರು.

‘ಕೊರೊನಾ ಸೋಂಕು ಆವರಿಸಿಕೊಂಡಿರುವ ಈ ದಿನಗಳಲ್ಲಿ ಆರೋಗ್ಯಕ್ಕೆ ಸಂಬಂಧಿಸಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಮುನ್ನೆಚ್ಚರಿಕೆ ವಹಿಸಬೇಕು. ಇದರ ಬಗ್ಗೆ ಅರಿವು ಮೂಡಿಸಲು ಮತ್ತು ಕೊರೊನಾ ನಿಯಂತ್ರಣಕ್ಕೆ ಪಕ್ಷದಿಂದ ಯಾವುದೆಲ್ಲ ಕ್ರಮ ಕೈಗೊಳ್ಳಲಾಗಿದೆ ಎಂಬುದನ್ನು ತಿಳಿಯಲು ಇಲ್ಲಿ ಸಭೆ ಆಯೋಜಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT