ಕಸಬ್‌, ಗೋಡ್ಸೆಗೆ ರಾಜೀವ್‌ ಗಾಂಧಿ ಹೋಲಿಸಿದ ಸಂಸದ ನಳಿನ್‌ ಕುಮಾರ್‌ ಕಟೀಲ್‌

ಸೋಮವಾರ, ಮೇ 20, 2019
30 °C

ಕಸಬ್‌, ಗೋಡ್ಸೆಗೆ ರಾಜೀವ್‌ ಗಾಂಧಿ ಹೋಲಿಸಿದ ಸಂಸದ ನಳಿನ್‌ ಕುಮಾರ್‌ ಕಟೀಲ್‌

Published:
Updated:

ಬೆಂಗಳೂರು: ಮಹಾತ್ಮಾ ಗಾಂಧೀಜಿ ಅವರನ್ನು ಗುಂಡಿಟ್ಟು ಹತ್ಯೆಗೈದ ನಾಥುರಾಂ ಗೋಡ್ಸೆ ಒಬ್ಬ ದೇಶಭಕ್ತ ಎಂದು ಸಾಧ್ವಿ ಪ್ರಜ್ಞಾ ಸಿಂಗ್‌ ನೀಡಿದ್ದ ಹೇಳಿಕೆ ಚರ್ಚೆಯಲ್ಲಿರುವಾಗಲೇ ಕರ್ನಾಟಕದ ಬಿಜೆಪಿ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಪ್ರಕಟಿಸಿಕೊಂಡಿದ್ದ ಸಾಲುಗಳು ವಿವಾದದ ರೂಪ ಪಡೆದುಕೊಂಡಿದೆ.

ಸಂಸದ ನಳಿನ್‌ ಕುಮಾರ್‌ ಕಟೀಲ್‌ ಅವರು ನಾಥುರಾಂ ಗೋಡ್ಸೆ ಜತೆಗೆ ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರನ್ನು ಹೋಲಿಕೆ ಮಾಡಿದ್ದಾರೆ. ಹತ್ಯೆಗೀಡಾಗಿ ಸುಮಾರು 30 ವರ್ಷಗಳ ನಂತರ ರಾಜೀವ್‌ ಗಾಂಧಿ ವಿಷಯ ಕೇಂದ್ರದ ಆಡಳಿತಾರೂಢ ಪಕ್ಷದ ಚುನಾವಣಾ ಪ್ರಚಾರದ ಸರಕಾಗಿ ಬಳಕೆಯಾಗುತ್ತಿದೆ.

 

’ಗೋಡ್ಸೆ ಒಬ್ಬರನ್ನು ಕೊಂದರು, ಕಸಬ್‌ ಕೊಂದಿದ್ದು 72 ಜನರನ್ನು, ರಾಜೀವ್‌ ಗಾಂಧಿ 17,000 ಜನರ ಸಾವಿಗೆ ಕಾರಣರಾದರು. ಇವರಲ್ಲಿ ಯಾರು ಹೆಚ್ಚು ಕ್ರೂರರೆಂದು ನೀವೇ ನಿರ್ಣಯಿಸಿ’ ಎಂದು ನಳಿನ್‌ ಕುಮಾರ್ ಕಟೀಲ್‌ ಗುರುವಾರ ಟ್ವೀಟ್‌ ಮಾಡಿದ್ದರು. 

ಭೋಪಾಲ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಸಿಂಗ್‌ ಹಾಗೂ ನಟ–ರಾಜಕಾರಣಿ ಕಮಲ್‌ ಹಾಸನ್‌ ಗೋಡ್ಸೆ ಕುರಿತಾಗಿ ನೀಡಿರುವ ಹೇಳಿಕೆಗಳು ತೀವ್ರ ಚರ್ಚೆಯಲ್ಲಿದ್ದು, ಹಲವರು ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಿಜೆಪಿಯ ವಕ್ತಾರ ಜಿ.ವಿ.ಎಲ್‌.ನರಸಿಂಹರಾವ್‌ ಪ್ರತಿಕ್ರಿಯಿಸಿ, ‘ಸಾಧ್ವಿ ಅವರ ಹೇಳಿಕೆಯನ್ನು ಬಿಜೆಪಿ ಒಪ್ಪುವುದಿಲ್ಲ. ಪಕ್ಷ ಈ ಹೇಳಿಕೆಯನ್ನು ಖಂಡಿಸುತ್ತದೆ’ ಎಂದಿದ್ದರು.

ಇದನ್ನೂ ಓದಿ: ಗಾಂಧಿಯನ್ನು ಕೊಂದ ನಾಥುರಾಮ್‌ ಗೋಡ್ಸೆ ದೇಶಭಕ್ತ ಎಂದ ಬಿಜೆಪಿ ಅಭ್ಯರ್ಥಿ ಸಾಧ್ವಿ

26/11ರ ಭಯೋತ್ಪಾದಕರ ದಾಳಿಯಲ್ಲಿ ಹಲವು ಜನರ ಹತ್ಯೆ ಮಾಡಿದ್ದ ಅಜ್ಮಲ್‌ ಕಸಬ್‌ನ ಸಾಲಿನಲ್ಲಿಯೇ ರಾಜೀವ್‌ ಹೆಸರು ಪ್ರಸ್ತಾಪಿಸಿದ್ದಾರೆ. ದಕ್ಷಿಣ ಕನ್ನಡ ಕ್ಷೇತ್ರವನ್ನು ಎರಡು ಬಾರಿ ಸಂಸದರಾಗಿ ಕಟೀಲ್‌ ಪ್ರತಿನಿಧಿಸಿದ್ದಾರೆ. ಈ ಬಾರಿಯೂ ಕ್ಷೇತ್ರದ ಪ್ರಮುಖ ಅಭ್ಯರ್ಥಿಯಾಗಿದ್ದಾರೆ. 

ಟ್ವೀಟ್‌ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದ್ದಂತೆ ಕಟೀಲ್‌ ತಾವು ಮಾಡಿದ್ದ ಟ್ವೀಟ್‌ ತೆಗೆದು ಹಾಕಿದ್ದಾರೆ. 

ಇಂದಿರಾ ಗಾಂಧಿ ಹತ್ಯೆಯ ನಂತರ 1984ರಲ್ಲಿ ನಡೆದ ಸಿಖ್‌ ವಿರೋಧಿ ಗಲಭೆಯಲ್ಲಿ ಸಾವಿರಾರು ಜನರು ಸಾವಿಗೀಡಾಗಿದ್ದರು. ಈ ಘಟನೆಯನ್ನು ಬಿಜೆಪಿ ಕಾಂಗ್ರೆಸ್‌ ವಿರುದ್ಧ ಟೀಕಾಸ್ತ್ರವಾಗಿ ಬಳಕೆ ಮಾಡಿಕೊಳ್ಳುತ್ತಿದೆ. 

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 21

  Angry

Comments:

0 comments

Write the first review for this !