ಗೋವಾ, ಅಹಮದಾಬಾದ್‌ನಲ್ಲೂ ಅತೃಪ್ತ ಶಾಸಕರನ್ನು ಕೂಡಿಟ್ಟ ಬಿಜೆಪಿ?

7

ಗೋವಾ, ಅಹಮದಾಬಾದ್‌ನಲ್ಲೂ ಅತೃಪ್ತ ಶಾಸಕರನ್ನು ಕೂಡಿಟ್ಟ ಬಿಜೆಪಿ?

Published:
Updated:
Prajavani

ಬೆಂಗಳೂರು: ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ ಅತೃಪ್ತ ಶಾಸಕರು ಮುಂಬೈ ಮಾತ್ರವಲ್ಲದೆ, ಗೋವಾ ಹಾಗೂ ಅಹಮದಾಬಾದ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಹರಿದಾಡುತ್ತಿವೆ.

‘ಆಪರೇಷನ್‌ ಕಮಲ’ದ ಮೂಲಕ ಹಂತ ಹಂತವಾಗಿ ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸಬೇಕು ಎಂದು ಸಂಕಲ್ಪ ತೊಟ್ಟಿರುವ ಬಿಜೆಪಿಯು, ವಿಭಿನ್ನ ಕಾರ್ಯತಂತ್ರ ಹೆಣೆದಿದೆ. ಎಲ್ಲ ಶಾಸಕರು ಒಂದೇ ಕಡೆಯಲ್ಲಿ ವಾಸ್ತವ್ಯ ಹೂಡಿದರೆ ಕಾಂಗ್ರೆಸ್‌ ನಾಯಕರು ಸಮರ್ಥವಾಗಿ ಪ್ರತಿತಂತ್ರ ರೂಪಿಸುತ್ತಾರೆ. ಮುಂಬೈಯಲ್ಲಿರುವ ಶಾಸಕರ ಕಡೆಗೆ ಮಾತ್ರ ಗಮನ ಕೇಂದ್ರೀಕರಿಸು‌ವಂತೆ ಮಾಡಿ ಸದ್ದಿಲ್ಲದೆ ಕಾರ್ಯಾಚರಣೆ ನಡೆಸುವುದು ಕಮಲ ನಾಯಕರ ಆಲೋಚನೆ. ಜತೆಗೆ, ಅತೃಪ್ತರ ಗುಂಪಿನಲ್ಲಿ ಗುರುತಿಸಿಕೊಂಡಿರುವ ಶಾಸಕರು ಆಗೊಮ್ಮೆ ಈಗೊಮ್ಮೆ ಕಾಂಗ್ರೆಸ್‌ ಗುಂಪಿನಲ್ಲಿ ಕಾಣಿಸಿಕೊಂಡು ಹೇಳಿಕೆಗಳನ್ನು ನೀಡುವಂತೆ ಮಾಡುವುದು ಕಾರ್ಯತಂತ್ರದ ಇನ್ನೊಂದು ಭಾಗ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಈ ಹಿಂದಿನ ರಾಜ್ಯ ನಾಯಕರ ಎಡವಟ್ಟುಗಳಿಂದ ಪಾಠ ಕಲಿತಿರುವ ಪಕ್ಷದ ರಾಷ್ಟ್ರೀಯ ಮುಖಂಡರು ಈ ಸಲ ‘ಆಪರೇಷನ್ ಕಮಲ’ದ ಜವಾಬ್ದಾರಿಯನ್ನು ಮಹಾರಾಷ್ಟ್ರದ ಲೋಕೋಪಯೋಗಿ ಸಚಿವ ಚಂದ್ರಕಾಂತ ಪಾಟೀಲ ಅವರಿಗೆ ನೀಡಿದ್ದಾರೆ. ಇವರ ಜತೆಗೆ ಮಹಾರಾಷ್ಟ್ರದ ನಾಲ್ಕು ಪ್ರಭಾವಿ ಸಚಿವರೂ ಕೈಜೋಡಿಸಿದ್ದಾರೆ. 

ಪೂರಕ ಕಾರ್ಯತಂತ್ರ ರೂಪಿಸಲು ರಾಜ್ಯದ ಐದಾರು ನಾಯಕರ ತಂಡವನ್ನು ರಚಿಸಿದ್ದಾರೆ. ಅತೃಪ್ತ ಶಾಸಕರ ಮೇಲ್ವಿಚಾರಣೆಯ ಹೊಣೆಯನ್ನು ಮಲ್ಲೇಶ್ವರ ಶಾಸಕ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರಿಗೆ ವಹಿಸಲಾಗಿದೆ. ಈ ನಾಯಕರು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ಹಿರಿಯ ಶಾಸಕ ಜಗದೀಶ ಶೆಟ್ಟರ್‌ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಚಿವ ಸ್ಥಾನದಿಂದ ಕೈಬಿಟ್ಟಿರುವ ಕಾರಣಕ್ಕೆ ಮುನಿಸಿಕೊಂಡಿರುವ ರಮೇಶ ಜಾರಕಿಹೊಳಿ ಹಾಗೂ ಚಿಂಚೋಳಿ ಶಾಸಕ ಡಾ. ಉಮೇಶ್‌ ಜಾಧವ ಅವರು ಈಗಾಗಲೇ ಮಾನಸಿಕವಾಗಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ರಮೇಶ ಜಾರಕಿಹೊಳಿ ಗರಡಿಯಲ್ಲಿ ಪಳಗಿರುವ ಅಥಣಿ ಶಾಸಕ ಮಹೇಶ ಕುಮಟಳ್ಳಿ ಅವರದ್ದೂ ಸಮಸ್ಯೆ ಇಲ್ಲ. ಕೆಲವರು ಬೇಲಿ ಮೇಲೆ ಕುಳಿತಿದ್ದಾರೆ. ಅವರ ಬಗ್ಗೆ ನಾಯಕರು ಹೆಚ್ಚಿನ ನಿಗಾ
ಇಟ್ಟಿದ್ದಾರೆ. ಒಂದು ವೇಳೆ ಅವರು ಕೈಕೊಟ್ಟರೆ ಬೇರೆ ಶಾಸಕರನ್ನು ಸೆಳೆಯಲು ಸಹ ಕಾರ್ಯತಂತ್ರ ರೂಪಿಸಿದ್ದಾರೆ. ಇನ್ನೆರಡು ದಿನ ಕಾಯಿರಿ ಎಂಬ ಯಡಿಯೂರಪ್ಪ ಅವರ ಹೇಳಿಕೆಯೇ ಅದಕ್ಕೆ ಸಾಕ್ಷಿ ಎಂದು ಬಿಜೆಪಿ ನಾಯಕರೊಬ್ಬರು ವ್ಯಾಖ್ಯಾನಿಸಿದರು.

**

ಕೆಲಸದ ನಿಮಿತ್ತ ದುಬೈಗೆ ಹೋಗಿದ್ದ ನಾನು ಬೆಂಗಳೂರಿಗೆ ಮರಳಿದ್ದೇನೆ. ಪಕ್ಷಕ್ಕೆ ಸೇರಿದರೆ ₹25 ಕೋಟಿಯಿಂದ ₹30 ಕೋಟಿ ಕೊಡುತ್ತೇವೆ ಎಂದು ಬಿಜೆಪಿಯವರು ಈ ಹಿಂದೆ ಆಮಿಷ ಒಡ್ಡಿದ್ದರು. ಅದಕ್ಕೆ ನಾನು ಬಲಿಯಾಗಿರಲಿಲ್ಲ. ಅಂತಹ ಆಮಿಷಗಳಿಗೆ ಯಾವತ್ತೂ ಬಲಿಯಾಗುವುದಿಲ್ಲ. ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಹಾಗೂ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಬಿಟ್ಟು ನಾನು ಎಲ್ಲಿಗೂ ಹೋಗುವುದಿಲ್ಲ.
– ಮಹದೇವು, ಪಿರಿಯಾಪಟ್ಟಣ ಕ್ಷೇತ್ರದ ಜೆಡಿಎಸ್‌ ಶಾಸಕ

**
ನಾನು ಈಗ ಬೆಂಗಳೂರಿನಲ್ಲಿ ಇದ್ದೇನೆ. ವಿಚಾರ ಸಂಕಿರಣದಲ್ಲಿ ಪಾಲ್ಗೊಳ್ಳುವ ಸಲುವಾಗಿ ದೆಹಲಿಗೆ ತೆರಳುತ್ತೇನೆ. ಬಿಜೆಪಿ ವರಿಷ್ಠರನ್ನು ಭೇಟಿ ಮಾಡುತ್ತೇನೆ ಎಂದು ಅದರ ಅರ್ಥವಲ್ಲ. ಇದು ಈ ಹಿಂದೆಯೇ ನಿಗದಿಯಾದ ಕಾರ್ಯಕ್ರಮ. ಜೆಡಿಎಸ್‌ನಲ್ಲೇ ಇರುತ್ತೇನೆ.
– ಅಶ್ವಿನ್‌ ಕುಮಾರ್‌, ಟಿ. ನರಸೀಪುರ ಕ್ಷೇತ್ರದ ಜೆಡಿಎಸ್‌ ಶಾಸಕ

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 7

  Angry

Comments:

0 comments

Write the first review for this !