ಬುಧವಾರ, ಸೆಪ್ಟೆಂಬರ್ 18, 2019
25 °C

ಡಿಕೆಶಿ ವಿರುದ್ಧ ಬಿಜೆಪಿ ಸೇಡಿನ ರಾಜಕಾರಣ: ಸಿದ್ದರಾಮಯ್ಯ ಗುಡುಗು

Published:
Updated:

ಬೆಂಗಳೂರು: ‘ಅಧಿಕಾರ ದುರುಪಯೋಗಪಡಿಸಿಕೊಂಡು ಬಿಜೆಪಿ ಡಿ.ಕೆ.ಶಿವಕುಮಾರ್ ವಿರುದ್ಧ ಸೇಡಿನ ರಾಜಕಾರಣ ಮಾಡುತ್ತಿದೆ’ ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ನೇರ ಆರೋಪ ಮಾಡಿದರು.

ನಗರದಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಗುಜರಾತ್‌ನ ಕಾಂಗ್ರೆಸ್ ಶಾಸಕರಿಗೆ ರಕ್ಷಣೆ ಕೊಟ್ಟಿದ್ದನ್ನೇ ಮನಸ್ಸಿನಲ್ಲಿಟ್ಟುಕೊಂಡಿರುವ ಬಿಜೆಪಿ ಶಿವಕುಮಾರ್ ವಿರುದ್ಧ ಸೇಡು ತೀರಿಸಿಕೊಳ್ಳಲು ಹಾತೊರೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಪಕ್ಷ ಇಂಥದ್ದಕ್ಕೆಲ್ಲ ಹೆದರುವುದಿಲ್ಲ. ಅಧಿಕಾರದಲ್ಲಿರುವ ಮಾಡುತ್ತಿರುವ ಅಕ್ರಮಗಳಿಗೆ ಜನರು ತಕ್ಕ ಪಾಠ ಕಲಿಸುತ್ತಾರೆ. ಈ ದೇಶದ ಜನರು ದಡ್ಡರಲ್ಲ. ಅವರಿಗೆ ಎಲ್ಲವೂ ಅರ್ಥವಾಗುತ್ತೆ. ಮುಂಚೂಣಿ ಕಾಂಗ್ರೆಸ್ ನಾಯಕರನ್ನು ಮುಗಿಸಿದರೆ ಬಿಜೆಪಿ ತನ್ನಿಂತಾನೆ ಬೆಳೆಯುತ್ತೆ ಅಂತ ಇವರಿಗೆ ರಾಜಕೀಯ ದುರುದ್ದೇಶವಿದೆ. ಇದರ ವಿರುದ್ಧ ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ ಧ್ವನಿ ಎತ್ತುತ್ತೇವೆ ಎಂದು ಘೋಷಿಸಿದರು.

‘ವಿನಾಕಾರಣ ಕಾನೂನು ಬಾಹಿರವಾಗಿ ಡಿ.ಕೆ.ಶಿವಕುಮಾರ್ ಅವರನ್ನು ದಸ್ತಗಿರಿ ಮಾಡಲಾಗಿದೆ. ಸಾಕ್ಷಿ ಹಾಳು ಮಾಡ್ತಾರೆ, ವಿಚಾರಣೆಗೆ ಬರುವುದಿಲ್ಲ ಎನ್ನುವವರನ್ನು ಬಂಧಿಸಿದರೆ ಒಂದು ಲೆಕ್ಕ. ಆದರೆ ಡಿ.ಕೆ.ಶಿವಕುಮಾರ್ ವಿಚಾರಣೆಗೆ ಸಂಪೂರ್ಣ ಸಹಕರಿಸಿದ್ದಾರೆ. ಹೀಗಾಗಿಯೇ ಇದು ದುರುದ್ದೇಶದಿಂದ ಕೂಡಿದ, ರಾಜಕೀಯ ಪ್ರೇರಿತ ದಸ್ತಗಿರಿ ಎಂದು ಮೇಲ್ನೋಟಕ್ಕೆ ಗೊತ್ತಾಗುತ್ತದೆ’ ಎಂದು ಸಿದ್ದರಾಮಯ್ಯ ಹೇಳಿದರು.

‘ಅವರು ತಪ್ಪು ಮಾಡಿದ್ರೆ ಕಾನೂನು ಪ್ರಕಾರ ಕ್ರಮ ತಗೊಳ್ಳಿ. ಹಬ್ಬದ ದಿನವೂ ಅವರಿಗೆ ಪೂಜೆ ಮಾಡಲು ಬಿಟ್ಟಿಲ್ಲ ಪಾಪ. ನಾನು ಈವರೆಗೆ ಡಿಕೆಶಿ ಕಣ್ಣೀರು ಹಾಕಿದ್ದನ್ನು ನೋಡಿರಲಿಲ್ಲ. ತಂದೆಗೆ ಎಡೆ ಹಾಕಬೇಕಿತ್ತು ಅಂತ ಕಣ್ಣೀರಿಟ್ಟರು. ಒಂದು ದಿನದ ಮಟ್ಟಿಗೆ ವಿಚಾರಣೆಯಿಂದ ರಿಯಾಯ್ತಿ ಕೊಟ್ಟಿದ್ರೆ ಏನಾಗ್ತಿತ್ತು? ಶಿವಕುಮಾರ್ ಅವರನ್ನು ತುಂಬಾ ಅಮಾನವೀಯವಾಗಿ ನಡೆಸಿಕೊಳ್ಳಲಾಗಿದೆ. ಇಂಥದ್ದನ್ನು ನಾನು ಈ ಹಿಂದೆ ನೋಡಿರಲಿಲ್ಲ’ ಎಂದು ಸಿದ್ದರಾಮಯ್ಯ ನುಡಿದರು.

Post Comments (+)