ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಯುವುದಷ್ಟೇ ಬಿಜೆಪಿ ಕಾಯಕ

Last Updated 22 ಜುಲೈ 2019, 19:32 IST
ಅಕ್ಷರ ಗಾತ್ರ

ಬೆಂಗಳೂರು: ಬಹಳಷ್ಟು ವರ್ಷ ವಿರೋಧ ಪಕ್ಷದಲ್ಲೇ ಕಾಲ ಕಳೆದ ಬಿಜೆಪಿ ನಾಯಕರು, ಅಧಿವೇಶನ ನಡೆಯುವಾಗಲೆಲ್ಲ ಗಲಾಟೆ, ಗದ್ದಲ ಎಬ್ಬಿಸಿ ಧರಣಿ–ಪ್ರತಿಭಟನೆಯ ಮೂಲಕ ಆಳುವವರಿಗೆ ಬಿಸಿ ಮುಟ್ಟಿಸುತ್ತಿದ್ದುದು ಸಾಮಾನ್ಯವಾಗಿರುತ್ತಿತ್ತು. ಆದರೆ, ಈ ಬಾರಿ ಮಾತ್ರ ಮೌನ ವ್ರತದಲ್ಲಿದ್ದಾರೆ.

ವಿರೋಧ ಪಕ್ಷದಲ್ಲೇ ಹೆಚ್ಚು ಸಮಯ ಕಳೆದಿದ್ದ ಹಾಲಿ ನಾಯಕರೂ ಆಗಿರುವ ಬಿ.ಎಸ್‌. ಯಡಿಯೂರಪ್ಪ ಅವರು ಸದನದಲ್ಲಿ ಅಬ್ಬರಿಸುವುದು ಸರ್ವೇ ಸಾಮಾನ್ಯ. ಪ್ರತಿ ದಿನ ಧರಣಿ ನಡೆಸಿ, ಸರ್ಕಾರದ ವಿರುದ್ಧ ಹರಿಹಾಯುವ ಪರಿಪಾಠ ಬೆಳೆಸಿಕೊಂಡೇ ಬಂದವರು. ಮೂರು ವರ್ಷ ಮುಖ್ಯಮಂತ್ರಿಯಾಗಿದ್ದಾಗಲೂ ಅದೇ ಅಭ್ಯಾಸ ಬಲದಿಂದ ಅಂದಿನ ವಿರೋಧ ಪಕ್ಷ ಕಾಂಗ್ರೆಸ್‌ ನಾಯಕರ ಮೇಲೆ ಕಿಡಿಕಾರಿದ್ದೂ ಇದೆ.

ಇದೇ 12ರಿಂದ ಅಧಿವೇಶನ ಆರಂಭವಾಗಿದ್ದು, ಸರ್ಕಾರ ಆಗ ಬೀಳುತ್ತದೆ ಈಗ ಉರುಳುತ್ತದೆ ಎಂಬ ನಿರೀಕ್ಷೆಯಲ್ಲೇ ಕಾಯುತ್ತಿರುವ ಕಾಯಕವನ್ನಷ್ಟೇ ಬಿಜೆಪಿ ಶಾಸಕರು ಮಾಡುತ್ತಿರುವುದು ಸದನದಲ್ಲಿ ಕಾಣಿಸುತ್ತದೆ. ‘ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುವುದು’ ಎಂಬ ಮಾತನ್ನು ಸುಳ್ಳಾಗಿಸುವ ರೀತಿಯಲ್ಲಿ ವಿರೋಧ ಪಕ್ಷದ ನಾಯಕರು ಕೂಡ ತುಟಿಪಿಟಕ್‌ ಎನ್ನುತ್ತಿಲ್ಲ. ಸಚಿವರು, ಶಾಸಕರು ಎಷ್ಟೇ ಕೆರಳಿಸಿದರೂ ಅವರು ದುಮುಗುಡುವ ಸಿಟ್ಟಿನಲ್ಲಿ ಎದುರಾಳಿಯ ಕಡೆ ನೋಡುವುದು ಬಿಟ್ಟರೆ, ಎದ್ದು ನಿಂತು ಒಂದು ಶಬ್ಧವನ್ನೂ ಹೊರಡಿಸುತ್ತಿಲ್ಲ. ಹಿಂದೆಲ್ಲ ಇಂತಹ ಪರಿಸ್ಥಿತಿಯಲ್ಲಿ ದಿನಕ್ಕೆ ಎರಡು ಮೂರು ಬಾರಿ ಧರಣಿ ನಡೆಸಿ, ಮೇಜು ಕುಟ್ಟಿ, ಕಲಾಪ ಮುಂದೂಡುವಂತೆ ಮಾಡಿದ್ದು ವಿಧಾನಸಭೆಯ ದಾಖಲೆಗಳೇ ಹೇಳುತ್ತವೆ.

ಜಾಣಮೌನದ ನಡೆ: 15 ಶಾಸಕರು ರಾಜೀನಾಮೆ ಕೊಟ್ಟಿದ್ದರಿಂದಾಗಿ ಸರ್ಕಾರ ಅಲ್ಪಮತಕ್ಕೆ ಕುಸಿದಿದ್ದು, ವಿಶ್ವಾಸಮತ ನಿರ್ಣಯದ ಮೇಲೆ ಚರ್ಚೆ ನಡೆಯುತ್ತಿದೆ. ಇಂತಹ ಹೊತ್ತಿನಲ್ಲಿ ಗಲಾಟೆ, ಗದ್ದಲ ಮಾಡಿದರೆ ಬಿಜೆಪಿಯ ಏಳೆಂಟು ಸದಸ್ಯರನ್ನು ಅಮಾನತು ಮಾಡಿ, ಸದನದಿಂದ ಹೊರಗಿಟ್ಟು ವಿಶ್ವಾಸಮತ ನಿರ್ಣಯವನ್ನು ಮತಕ್ಕೆ ಹಾಕಿ ಗೆಲುವು ಸಾಧಿಸಿಬಿಡುವ ಸಾಧ್ಯತೆ ಇದೆ ಎಂಬ ಭಯವೇ ಬಿಜೆಪಿಯವರ ಮೌನಕ್ಕೆ ಕಾರಣ ಎನ್ನಲಾಗಿದೆ.

‘ಕಾಂಗ್ರೆಸ್– ಜೆಡಿಎಸ್‌ನವರು ಎಷ್ಟೇ ಕೆರಳಿಸಿದರೂ ಯಾರೊಬ್ಬರೂ ಮಾತನಾಡಬಾರದು. ಕೆಲವರು ಮಾತ್ರ ಮಾತನಾಡಬೇಕು’ ಎಂದು ಯಡಿಯೂರಪ್ಪ ಸೂಚಿಸಿದ್ದಾರೆ.

ಆಡಳಿತ ಪಕ್ಷದ ಟೀಕೆಗೆ ಪ್ರತಿಕ್ರಿಯೆ ನೀಡುವ, ಬಿಜೆಪಿ ಪರ ವಾದ ಮಂಡಿಸುವ ಹೊಣೆಯನ್ನು ಜಗದೀಶ ಶೆಟ್ಟರ್, ಜೆ.ಸಿ. ಮಾಧುಸ್ವಾಮಿ, ಬಸವರಾಜ ಬೊಮ್ಮಾಯಿ, ಎಸ್.ಸುರೇಶ್‌ಕುಮಾರ್ ಅವರಿಗೆ ಮಾತ್ರ ನೀಡಲಾಗಿದೆ. ಯಾವಾಗಲೂ ಸದ್ದು ಮಾಡುತ್ತಿದ್ದ ಸಿ.ಟಿ. ರವಿ, ಎಂ.ಪಿ. ರೇಣುಕಾಚಾರ್ಯ, ವಿ.ಸುನಿಲ್ ಕುಮಾರ್ ಅವರಿಗೆ ಈ ಬಾರಿ ಮೌನವಾಗಿರುವಂತೆ ಸೂಚಿಸಲಾಗಿದೆ ಎಂದು ಹೇಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT