ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಸರ್ಕಾರ ರಚನೆಗೆ ರಾತ್ರೋ ರಾತ್ರಿ ಶಾ ಒಪ್ಪಿದ್ದು ಏಕೆ?

Last Updated 26 ಜುಲೈ 2019, 19:51 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯ ಸಂಬಂಧ ‘ದಿವ್ಯ ಮೌನ’ ವಹಿಸಿದ್ದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಇದ್ದಕ್ಕಿದ್ದ ಹಾಗೆ ಒಪ್ಪಿಗೆ ನೀಡಲು ಕಾರಣಗಳೇನು? ಅವರನ್ನು ಮನವೊಲಿಸಲು ಕಾರಣವಾದ ಅಂಶಗಳೇನು ಎಂಬ ಚರ್ಚೆ ರಾಜಕೀಯ ವಲಯದಲ್ಲಿ ನಡೆದಿದೆ.

ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್‌ ಕುಮಾರ್‌ ಅವರು ಗುರುವಾರ ರಾತ್ರಿ ಮೂವರು ಶಾಸಕರನ್ನು ಅನರ್ಹಗೊಳಿಸಿದ ಬಳಿಕ ರಾಜ್ಯದಲ್ಲಿ ಬಿಜೆಪಿಯ ಕೈಗೆ ಬಂದ ತುತ್ತು ಜಾರಿ ಹೋಗುತ್ತಿರುವುದನ್ನು ಶಾ ಅವರ ಗಮನಕ್ಕೆ ದೆಹಲಿಗೆ ತೆರಳಿದ್ದ ರಾಜ್ಯ ಬಿಜೆಪಿ ನಾಯಕರ ನಿಯೋಗ ಮನವರಿಕೆ ಮಾಡಿತು. ಇದು ವರಿಷ್ಠರ ನಿಲುವು ಬದಲಾಗಲು ಕಾರಣ ಎಂದು ಮೂಲಗಳು ಹೇಳಿವೆ.

ಆ ಬಳಿಕ ಅಮಿತ್‌ ಶಾ ಅವರು ಕಾನೂನು ಪರಿಣಿತರ ಜತೆಗೆ ಚರ್ಚೆ ಮಾಡಿ, ರಾಜ್ಯದಲ್ಲಿ ಈಗಿರುವ ರಾಜಕೀಯ ಗೊಂದಲದ ಸನ್ನಿವೇಶದಲ್ಲಿ ಅಧಿಕಾರ ಹಿಡಿದರೆ ಆಗುವ ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಸಿದರು. ರಾತ್ರಿ ಯಡಿಯೂರಪ್ಪ ಅವರಿಗೂ ಒಮ್ಮೆ ದೂರವಾಣಿ ಕರೆ ಮಾಡಿ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದರು.

ಬಿಜೆಪಿ ಸರ್ಕಾರ ರಚನೆಗೆ ಮುಂದಾಗದೇ ಇರುವುದನ್ನು ಗಮನಿಸಿರುವ ಕಾಂಗ್ರೆಸ್‌ ಮತ್ತೆ ಜೆಡಿಎಸ್‌ ಜತೆಗೆ ಸೇರಿ ಅಧಿಕಾರ ಹಿಡಿಯುವ ಬಗ್ಗೆ ಗಂಭೀರವಾಗಿ ಪರಿಶೀಲನೆ ನಡೆಸಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಎಚ್‌.ಡಿ.ರೇವಣ್ಣ ಅವರನ್ನು ಉಪಮುಖ್ಯಮಂತ್ರಿ ಮಾಡಲು ಚರ್ಚೆ ನಡೆದಿರುವುದನ್ನು ಶಾ ಅವರ ಗಮನಕ್ಕೆ ತರಲಾಯಿತು ಎಂದು ದೆಹಲಿಗೆ ತೆರಳಿದ ಬಿಜೆಪಿ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಿಜೆಪಿಗೆ ಈಗ ಸಿಕ್ಕಿರುವ ಅವಕಾಶವನ್ನು ಕಳೆದುಕೊಂಡರೆ ನಾಲ್ಕು ವರ್ಷಗಳ ಕಾಲ ಅಧಿಕಾರ ಸಿಗುವುದಿಲ್ಲ. ಪಕ್ಷದಲ್ಲಿರುವ ಕೆಲವು ಶಾಸಕರೂ ಪಕ್ಷ ನಿಷ್ಠೆ ಬದಲಿಸಿದರೂ ಅಚ್ಚರಿ ಇಲ್ಲ. ಇದರಿಂದ ಪಕ್ಷಕ್ಕೂ ಹಾನಿ ಆಗಲಿದೆ’ ಎಂಬುದನ್ನೂ ಮನದಟ್ಟು ಮಾಡಲಾಯಿತು.

ಈ ಹಿಂದೆಯೂ ಒಮ್ಮೆ ಬಹುಮತ ಇಲ್ಲದೆ, ಪ್ರಮಾಣ ಸ್ವೀಕರಿಸಿ ಬಳಿಕ ಮುಖಭಂಗಕ್ಕೆ ಒಳಗಾದ ವಿಚಾರವನ್ನು ಅಮಿತ್‌ ಶಾ ಪ್ರಸ್ತಾಪಿಸಿದರು. ಒಂದು ವೇಳೆ ಎಂತಹುದೇ ಸವಾಲು ಎದುರಾದರೂ ಅದನ್ನು ನೀವೇ ನಿಭಾಯಿಸಲು ಸಾಧ್ಯವೇ ಎಂದೂ ಅವರು ಪ್ರಶ್ನಿಸಿದರು.

ಯಡಿಯೂರಪ್ಪ ಅವರ ಬಳಿ ದೂರವಾಣಿಯಲ್ಲಿ ಮಾತನಾಡಿದ ಸಂದರ್ಭವೂ ಶಾ ಅವರು ಇದೇ ಪ್ರಶ್ನೆಯನ್ನು ಕೇಳಿದರು.

‘ನಿಮ್ಮ ಜವಾಬ್ದಾರಿಯಲ್ಲಿ ಸರ್ಕಾರ ರಚಿಸಲು ಸಾಧ್ಯವೇ? ನೀವೇ ಪೂರ್ತಿ ರಿಸ್ಕ್ ತೆಗೆದುಕೊಳ್ಳುವಿರಾ’ ಎಂದು ಪ್ರಶ್ನಿಸಿದರು.

‘ಆ ವಿಚಾರ ನನಗೆ ಬಿಡಿ, ನೀವು ಗ್ರೀನ್ ಸಿಗ್ನಲ್ ಕೊಡಿ’ ಎಂದು ಯಡಿಯೂರಪ್ಪ ಮನವಿ ಮಾಡಿದರು. ‘ಮುಂಜಾನೆ ಕರೆ ಮಾಡುತ್ತೇನೆ’ ಎಂದು ಹೇಳಿದ್ದ ಅಮಿತ್‌ ಶಾ, ಬೆಳಿಗ್ಗೆ 6 ಗಂಟೆ ಸುಮಾರಿಗೆ ಕರೆ ಮಾಡಿ, ‘ನಿಮಗೆ ವಿಶ್ವಾಸ ಇದ್ದರೆ ಸರ್ಕಾರ ರಚನೆ ಮಾಡಿ. ಅಗತ್ಯ ಸಲಹೆ– ಸೂಚನೆಗಳನ್ನು ನೀಡುತ್ತೇನೆ’ ಎಂದು ಭರವಸೆ ನೀಡಿದರು ಎಂದು ಬಿಜೆಪಿ ಮೂಲಗಳು ಹೇಳಿವೆ.

ಶಾ ಅವರ ಕರೆ ಬಂದ ಬಳಿಕ ಯಡಿಯೂರಪ್ಪ ಅವರು ನಿರಾಳರಾದರು. ಆದರೆ, ದೆಹಲಿಯಲ್ಲಿದ್ದ ಬಿಜೆಪಿ ನಿಯೋಗಕ್ಕೆ ಶಾ ಅವರು ಹಸಿರು ನಿಶಾನೆ ನೀಡಿರುವ ಸುದ್ದಿ ತಿಳಿಯುವಾಗ ಬೆಳಿಗ್ಗೆ ಬಹಳ ಹೊತ್ತು ಕಳೆದಿತ್ತು.

ಅತೃಪ್ತ ಶಾಸಕರ ಒತ್ತಡ: ಅಮಿತ್‌ ಶಾ ಮನ್ನಣೆ

ನವದೆಹಲಿ: ಮುಂಬೈನಲ್ಲಿರುವ ಅತೃಪ್ತ ಶಾಸಕರು ಬಿಜೆಪಿ ಹೈಕಮಾಂಡ್‌ ಮೇಲೆ ಒತ್ತಡ ಹೇರಿರುವುದು ರಾಜ್ಯದಲ್ಲಿ ಸರ್ಕಾರ ರಚನೆ ಕುರಿತ ತ್ವರಿತ ನಿರ್ಧಾರ ಕೈಗೊಳ್ಳಲು ಕಾರಣವಾಗಿದೆ.

‘ಇನ್ನು ಹೆಚ್ಚು ದಿನ ನಮಗೆ ರಾಜ್ಯ ಬಿಟ್ಟು ಹೊರಗಿರಲು ಸಾಧ್ಯವಿಲ್ಲ. ನಂತರ ಆಗುವ ಬೆಳವಣಿಗೆಗಳಿಗೆ ನಾವು ಜವಾಬ್ದಾರರಲ್ಲ’ ಎಂದು ಜುಲೈ 6ರಿಂದ ಮುಂಬೈನಲ್ಲಿ ತಂಗಿರುವ ಕಾಂಗ್ರೆಸ್‌– ಜೆಡಿಎಸ್‌ ಶಾಸಕರು ಗುರುವಾರ ರಾತ್ರಿ ತಿಳಿಸಿದರು. ಅಂತೆಯೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ತ್ವರಿತ ನಿರ್ಧಾರ ಕೈಗೊಂಡು ಅಧಿಕಾರ ಸ್ವೀಕಾರಕ್ಕೆ ಯಡಿಯೂರಪ್ಪ ಅವರಿಗೆ ಸೂಚಿಸಿದರು ಎಂದು ಪಕ್ಷದ ಮೂಲಗಳು ತಿಳಿಸಿವೆ.

‘ಕಾಂಗ್ರೆಸ್‌ನಿಂದ ನಮ್ಮ ಮೇಲೆ ಒತ್ತಡ ಇರುವುದು ನಿಜ. ಹಾಗಾಗಿ, ವಿಳಂಬ ಮಾಡುವುದರಿಂದ ನಮ್ಮ ರಾಜಕೀಯ ಭವಿಷ್ಯದ ಮೇಲೂ ದುಷ್ಪರಿಣಾಮ ಉಂಟಾಗಬಹುದು ಎಂಬ ಅತೃಪ್ತ ಶಾಸಕರ ಸಂದೇಶಕ್ಕೆ ಬಿಜೆಪಿ ವರಿಷ್ಠರು ಅನಿವಾರ್ಯವಾಗಿ ತಲೆ ಬಾಗಬೇಕಾಯಿತು’ ಎಂದು ಪಕ್ಷದ ಹಿರಿಯ ಮುಖಂಡರೊಬ್ಬರು ಹೇಳಿದರು.

ಗುರುವಾರ ಮಧ್ಯರಾತ್ರಿ ಯಡಿಯೂರಪ್ಪ ಅವರೊಂದಿಗೆ ಮಾತನಾಡಿದ ಶಾ, ‘ಮೊದಲು ನೀವು ಪ್ರಮಾಣ ವಚನ ಸ್ವೀಕರಿಸಿ. ವಿಶ್ವಾಸಮತ ಸಾಬೀತುಪಡಿಸಿದ ನಂತರ ಸಚಿವ ಸಂಪುಟದ ಪ್ರಮಾಣ ವಚನ ಕಾರ್ಯಕ್ರಮ ಆಯೋಜಿಸಿದರಾಯಿತು’ ಎಂದು ಸೂಚಿಸಿದ್ದಾಗಿ ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT