‘ಮೋದಿ ವಿರುದ್ಧದ ಒಳಪ್ರವಾಹವೇ ಇದೆ’

ಶುಕ್ರವಾರ, ಏಪ್ರಿಲ್ 19, 2019
22 °C
ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಿ.ಕೆ. ಹರಿಪ್ರಸಾದ್‌

‘ಮೋದಿ ವಿರುದ್ಧದ ಒಳಪ್ರವಾಹವೇ ಇದೆ’

Published:
Updated:
Prajavani

ರಾಜ್ಯಸಭೆ ಸದಸ್ಯ ಬಿ.ಕೆ. ಹರಿಪ್ರಸಾದ್‌ ಅವರು ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿಕೂಟದ ಅಭ್ಯರ್ಥಿ. ಕಾಂಗ್ರೆಸ್‌ ಪಕ್ಷದಲ್ಲಿ ವಿವಿಧ ಜವಾಬ್ದಾರಿ ನಿರ್ವಹಿಸಿರುವ ಇವರು, ಸುಮಾರು 17 ರಾಜ್ಯಗಳ ಉಸ್ತುವಾರಿಯಾಗಿ ಅನೇಕ ಚುನಾವಣೆಗಳನ್ನು ನಿರ್ವಹಿಸಿದವರು. ಅವರ ಸಂದರ್ಶನ ಇಲ್ಲಿದೆ. 

* ದಕ್ಷಿಣ ಕ್ಷೇತ್ರದ ಸಮಸ್ಯೆಗಳೇನು, ಇಲ್ಲಿ ಏನು ಆಗಬೇಕಾಗಿದೆ.

25 ವರ್ಷಗಳ ದೂರದೃಷ್ಟಿ ಇಟ್ಟು ಕೊಂಡು ಬಿಬಿಎಂಪಿಯಲ್ಲಿ ಯೋಜನೆ ರೂಪಿಸಬೇಕಾಗಿದೆ. ಬೆಂಗಳೂರು ನಿವೃತ್ತರ ಸ್ವರ್ಗವಾಗಿತ್ತು. ಈ ನಗರ ಇವತ್ತು ಅವಕಾಶಗಳೆಂಬ ಸ್ವರ್ಗದ ಬಾಗಿಲಿನಂತಾಗಿದೆ. ಮೊದಲು ಇಲ್ಲಿಗೆ ಕಟ್ಟಡ ನಿರ್ಮಾಣ ಕೆಲಸ ಮಾಡುವವರು ವಲಸೆ ಬರುತ್ತಿದ್ದವರು. ಇವತ್ತು ಭಾರತದ ಬೇರೆ ಬೇರೆ ರಾಜ್ಯಗಳವರು ಮಾತ್ರವಲ್ಲ; ಇಡೀ ವಿಶ್ವದ ನಾನಾ ಮೂಲೆಗಳಿಂದ ಟೆಕಿಗಳು ಇಲ್ಲಿಗೆ ಬರುತ್ತಿದ್ದಾರೆ. ಅಂತರರಾಷ್ಟ್ರೀಯ ಗುಣಮಟ್ಟದ ನಗರವಾಗಿ ಮೇಲ್ದರ್ಜೆಗೆ ಏರಿಸಬೇಕಾದರೆ ನಾಗರಿಕ ಸಂಘಸಂಸ್ಥೆಗಳ ಜತೆ ಒಗ್ಗೂಡಿ ಅವರ ಸಲಹೆ ಆಧರಿಸಿ ಯೋಜನೆಗಳನ್ನು ರೂಪಿಸಬೇಕಾಗಿದೆ.

* ಕ್ಷೇತ್ರದ ಅಭಿವೃದ್ಧಿಗೆ ನಿಮ್ಮ ಕಾರ್ಯಸೂಚಿ?

ಬೆಂಗಳೂರು ಹಿಂದೆ ಉದ್ಯಾನ ನಗರಿಯೂ ಆಗಿತ್ತು. ತ್ವರಿತಗತಿಯ ಅಭಿವೃದ್ಧಿಯಿಂದಾಗಿ ಸ್ವಲ್ಪಮಟ್ಟಿಗೆ ಹಸಿರು ಕಳೆದುಕೊಂಡಿದ್ದೇವೆ. ಬೊಮ್ಮನಹಳ್ಳಿ ಭಾಗದಲ್ಲಿ ವಿಶಾಲ ಜಾಗ ಹುಡುಕಿ ಲಾಲ್‌ಬಾಗ್ ಅಥವಾ ಕಬ್ಬನ್ ಪಾರ್ಕ್‌ ಮಾದರಿಯಲ್ಲಿ ಉದ್ಯಾನವನ್ನು
ನಿರ್ಮಿಸಬೇಕಾಗಿದೆ. ನಗರ ಸೌಂದರ್ಯೀಕರಣಕ್ಕೆ ಆದ್ಯತೆ ಕೊಡಬೇಕಿದೆ. ಬೆಂಗಳೂರಿನಲ್ಲಿ ಇರುವ ಎಲ್ಲ ಕೆರೆ
ಗಳನ್ನು ಅಭಿವೃದ್ಧಿ ಪಡಿಸುವುದು, ಅಲ್ಲಿ ಜನರು ತಮ್ಮ ಸಮಯ ಕಳೆಯಲು ಅನುವಾಗುವಂತಹ ವಾತಾವರಣ ಸೃಷ್ಟಿಸುವುದು ನನ್ನ ಆದ್ಯತೆ.

* ಕೊನೆಗಳಿಗೆಯಲ್ಲಿ ಟಿಕೆಟ್ ಕೊಟ್ಟರು. ಪ್ರಚಾರಕ್ಕೆ ಸಿಕ್ಕಿರುವ ಕಡಿಮೆ ಅವಧಿ ನಿಮಗೆ ಸವಾಲಾ?

1999ರಲ್ಲಿ ಸ್ಪರ್ಧಿಸಿದಾಗ 14 ದಿನ ಮಾತ್ರ ಸಿಕ್ಕಿತ್ತು. ಆದರೆ, ಈ ಬಾರಿ ಇಲ್ಲಿ ಸ್ಪರ್ಧಿಸಬೇಕು ಎಂಬ ಅಪೇಕ್ಷೆ ಇರಲಿಲ್ಲ. ನರೇಂದ್ರ ಮೋದಿ ಅವರು ಇಲ್ಲಿ ಸ್ಪರ್ಧಿಸುತ್ತಾರೆ ಎಂಬ ಸುದ್ದಿ ಹರಿಬಿಡಲಾಯಿತೋ ಆಗ, ಅವರಿಗೆ ಎದುರಾಳಿ ಅಭ್ಯರ್ಥಿಯಾಗಿ ಪಕ್ಷದ ಹೈಕಮಾಂಡ್ ನನ್ನನ್ನು ಕಣಕ್ಕೆ ಇಳಿಸಿತು. ಸವಾಲು ಇದೆ.

*1999ರಲ್ಲಿ ನಿಂತಾಗ 66 ಸಾವಿರ ಮತಗಳ ಅಂತರದಿಂದ ಸೋಲು ಕಂಡಿದ್ದೀರಿ. ಈಗ ನಿಮ್ಮ ಗುರಿ ಏನು?

1998ರಲ್ಲಿ ಚುನಾವಣೆಯಲ್ಲಿ 2 ಲಕ್ಷ ಮತಗಳ ಅಂತರದಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಸೋತಿದ್ದರು. ಅದನ್ನೇ ಸವಾಲಾಗಿ ಸ್ವೀಕರಿಸಿದ್ದ ನಾನು 1999ರಲ್ಲಿ ಸ್ಪರ್ಧಿಸಿ, ಸೋಲಿನ ಅಂತರವನ್ನು 66 ಸಾವಿರಕ್ಕೆ ಇಳಿಸಿದ್ದೆ. 2014ರಲ್ಲಿ ಕಾಂಗ್ರೆಸ್‌ ಇದ್ದಂತಹ ಪರಿಸ್ಥಿತಿ ಈಗ ಭಿನ್ನವಾಗಿದೆ. ಅಣ್ಣಾ ಹಜಾರೆ, ಕೇಜ್ರಿವಾಲ್ ಅವರನ್ನು ಬಳಸಿಕೊಂಡಿದ್ದ ವಿರೋಧ ಪಕ್ಷಗಳು ಕಾಂಗ್ರೆಸ್‌ ಅನ್ನು ಟಾರ್ಗೆಟ್ ಮಾಡಿದ್ದವು. ಈಗ ಆ ರೀತಿಯ ಅಲೆ ಇಲ್ಲ. ಹಾಗಾಗಿ ದಾರಿ ಸುಗಮ. 

* 2014ರಲ್ಲಿ ಮೋದಿ ಅಲೆ ಇತ್ತು. ಈಗ ಅದು ಅಂಡರ್ ಕರೆಂಟ್‌ (ಒಳ ಪ್ರವಾಹ) ರೂಪದಲ್ಲಿದೆ ಎನ್ನುತ್ತಾರೆ?

ಅಂಡರ್ ಕರೆಂಟ್ ಇದೆ. ಆದರೆ, ಅದು ಮೋದಿ ಪರವಲ್ಲ. ಅವರ ಆಡಳಿತದ ವಿರುದ್ಧವಾಗಿ ಖಂಡಿತಾ ಇದೆ. ಜಿಎಸ್‌ಟಿ, ನೋಟು ರದ್ದತಿಯಿಂದ ಹೊಡೆತ ತಿಂದ ಜನ ಇವತ್ತು ಪರಿತಪಿಸುತ್ತಿದ್ದಾರೆ. ವಿದೇಶದ ಕಪ್ಪು ಹಣ ತರುತ್ತೇನೆ ಎಂದು ಹೇಳಿದ್ದ ಮೋದಿ, ದೇಶದ ಮಹಿಳೆಯರು ಆಪತ್ಕಾಲಕ್ಕಾಗಿ ಸಕ್ಕರೆ ಡಬ್ಬಿ, ಕೊತ್ತಂಬರಿ ಡಬ್ಬಿಯಲ್ಲಿ ಕೂಡಿಟ್ಟ ಹಣವನ್ನು ನೋಟು ರದ್ದತಿ ಹೆಸರಿನಲ್ಲಿ ಬ್ಯಾಂಕಿಗೆ ಹಾಕಿಸಿ, ಅದನ್ನೇ ಬ್ಲ್ಯಾಕ್ ಮನಿ ಎಂದು ತೋರಿಸಿದರು. ಇದರಿಂದ ಬ್ಯಾಂಕುಗಳ ಉದ್ಧಾರವಾದವು ಅಷ್ಟೆ. ಈ ಸಿಟ್ಟು ಒಳಪ್ರವಾಹವಾಗಿ ಹರಿಯುತ್ತಿದೆ.

* ಮೋದಿಯವರೇ ಅಭ್ಯರ್ಥಿ ಎಂದು ನಿಮ್ಮ ಎದುರಾಳಿ ತೇಜಸ್ವಿ ಸೂರ್ಯ ಹೇಳುತ್ತಿದ್ದಾರೆ?

ಬಿಜೆಪಿ ಮುಖರಹಿತರ ಪಕ್ಷ. ಮೋದಿ ಇಲ್ಲದೇ ಇದ್ದರೆ ಮತ್ತೊಬ್ಬರ ಮುಖ ತೋರಿಸಿ ವೋಟು ಕೇಳುವ ಧೈರ್ಯವೇ ಆ ಪಕ್ಷಕ್ಕೆ ಇಲ್ಲ. ಮೋದಿ ಜನಪ್ರಿಯತೆ ಹಿಂದಿ ಭಾಷಿಕ ರಾಜ್ಯಗಳಲ್ಲಿ ಮಾತ್ರ; ಈಶಾನ್ಯ ರಾಜ್ಯಗಳಲ್ಲಿ, ದಕ್ಷಿಣ ಭಾರತದಲ್ಲಿ ಮೋದಿಗೆ ಜನಪ್ರಿಯತೆ ಎಲ್ಲಿದೆ?

* ನಿಮ್ಮ ಮತ್ತು ಮೋದಿ ಮಧ್ಯೆ ಸ್ಪರ್ಧೆನಾ ಹೇಗೆ?

ನೋ... ನಾನು ಸ್ಪರ್ಧೆ ಮಾಡುತ್ತಿರು ವುದು ಸಂವಿಧಾನದ ಆಶಯಗಳನ್ನು ಉಳಿಸುವ ಸಲುವಾಗಿ. ಅಪಾಯದಲ್ಲಿರುವ ಪ್ರಜಾ
ಪ್ರಭುತ್ವ ಹಾಗೂ ಜನರ ಸ್ವಯಮಾಧಿಕಾರ ವ್ಯವಸ್ಥೆಯನ್ನು ಕಾಪಾಡುವುದು ನನ್ನ ಪ್ರಥಮ ಆದ್ಯತೆ.

*ತೇಜಸ್ವಿನಿ ಬದಲು ತೇಜಸ್ವಿಗೆ ಕೊಟ್ಟಿದ್ದರಿಂದ ನಿಮಗೆ ಸ್ಪರ್ಧೆ ಕಡಿಮೆಯಾಯ್ತ?

ಪಕ್ಷಕ್ಕಾಗಿ ಅನಂತ ಕುಮಾರ್‌ ಕೊಡುಗೆ ದೊಡ್ಡದಿದೆ. ಅವರ ಪತ್ನಿಗೆ ಟಿಕೆಟ್ ತಪ್ಪಿಸಲು ಯಾರಿಗೋ ಟಿಕೆಟ್ ಕೊಟ್ಟು, ಈಗ ಯಂಗ್‌ ಫೇಸ್‌ಗೆ ಕೊಟ್ಟಿದ್ದೇವೆ ಎಂದು ಹೇಳಿ ಕೊಳ್ಳುತ್ತಿದ್ದಾರೆ.

* ದೇವೇಗೌಡರ ರಕ್ಷಣೆ ಇದ್ದರೆ ನಿಮ್ಮ ಕ್ಷೇತ್ರದಲ್ಲಿ ಗೆಲುವು ಸುಲಭ ಎಂದು ಹೇಳಲಾಗುತ್ತಿದೆ. ನಿಮಗೆ ಅವರ ಅಭಯ ಇದೆಯಾ?

ಖಂಡಿತಾ ಅವರ ಆಶೀರ್ವಾದ ಇದೆ. ಯಾವಾಗಲೂ ರಾಜ್ಯದಲ್ಲಿ ತ್ರಿಕೋನ ಸ್ಪರ್ಧೆ ಇರುತ್ತಿತ್ತು. ಈಗ ಜೆಡಿಎಸ್–ಕಾಂಗ್ರೆಸ್ ಒಟ್ಟಾಗಿ ಬಿಜೆಪಿ ಸೋಲಿಸುವ ಪಣತೊಟ್ಟು ಕೆಲಸ ಮಾಡುತ್ತಿದ್ದೇವೆ. ಇದು ಪರಿವರ್ತನೆಗೆ ಕಾರಣವಾಗಲಿದೆ.

* ಮೈತ್ರಿ ಸರ್ಕಾರದ ಸಾಧನೆ ನಿಮಗೆ ನೆರವಾಗಲಿದೆಯೇ?

ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ನೇತೃತ್ವದ ಒಟ್ಟು ಆರು ವರ್ಷದ ಅವಧಿಯ ಸಾಧನೆಗಳು ನೆರವಾಗಲಿವೆ.  ಗುಜರಾತ್ ಮಾಡೆಲ್ ಎನ್ನುತ್ತಿದ್ದವರು ಇವತ್ತು ಕರ್ನಾಟಕದ ಕಡೆಗೆ ನೋಡುತ್ತಿದ್ದಾರೆ. ಈ ಬಗ್ಗೆ ಮೋದಿ–ಅಮಿತ್ ಶಾ ಚರ್ಚೆಗೆ ಬರಲಿ. ಜೆಡಿಎಸ್‌–ಕಾಂಗ್ರೆಸ್ ಸರ್ಕಾರ ನಿಜಕ್ಕೂ ದೇಶಕ್ಕೆ ಮಾದರಿ. ಬೆಂಗಳೂರು ಹೆಮ್ಮೆಯ ನಗರ. ಕೆಂಪೇಗೌಡರು, ಟಿಪ್ಪು ಸುಲ್ತಾನ್ ಕಾಲದಲ್ಲಿನ ಸಿಲ್ಕ್ ಸಿಟಿ ಈಗ ಸಿಲಿಕಾನ್‌ ಸಿಟಿಯಾಗಿದೆ.  ಇಂತಹ ಯಾವುದಾದರೂ ಒಂದು ನಗರ ಉತ್ತರ ಭಾರತದಲ್ಲಿದೆಯೇ ಎಂಬುದನ್ನು ಮೋದಿ, ಶಾ ತೋರಿಸಲಿ.

ಬರಹ ಇಷ್ಟವಾಯಿತೆ?

 • 11

  Happy
 • 2

  Amused
 • 1

  Sad
 • 0

  Frustrated
 • 9

  Angry

Comments:

0 comments

Write the first review for this !