ಗುರುವಾರ , ಡಿಸೆಂಬರ್ 5, 2019
20 °C
ಅಮಿತ್ ಶಾ ನಂತರದ ಮಹತ್ವದ ಹೊಣೆ ಹೆಗಲಿಗೆ

ರಾಷ್ಟ್ರ ರಾಜಕಾರಣಕ್ಕೆ ಸಂತೋಷ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ (ಸಂಘಟನೆ) ಬಿ.ಎಲ್‌.ಸಂತೋಷ್‌ ಅವರನ್ನು ಭಾನುವಾರ ನೇಮಕ ಮಾಡುವ ಮೂಲಕ ಅವರಿಗೆ ರಾಷ್ಟ್ರ ಮಟ್ಟದ ಮಹತ್ವದ ಹೊಣೆಯನ್ನು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ವಹಿಸಿದ್ದಾರೆ.

ಪಕ್ಷದಲ್ಲಿ ರಾಷ್ಟ್ರೀಯ ಅಧ್ಯಕ್ಷರ ನಂತರದ ಅತ್ಯಂತ ಪ್ರಮುಖ ಹುದ್ದೆ ಇದು. 13 ವರ್ಷಗಳಿಂದ ರಾಮ್‌ಲಾಲ್‌ ಅವರು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಅವರು ಇತ್ತೀಚೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ (ಅಖಿಲ ಭಾರತ ಸಹ ಸಂಪರ್ಕ ಪ್ರಮುಖ ಹುದ್ದೆಗೆ) ಮರಳಿದ್ದರು. ಈ ಜಾಗಕ್ಕೆ ಸಂತೋಷ್‌ ಅವರನ್ನು ನೇಮಕ ಮಾಡಲಾಗಿದೆ.

ರಾಜ್ಯದಲ್ಲಿ ಅಧಿಕಾರದ ಗದ್ದುಗೆಗೆ ಮತ್ತೆ ಏರುವ ಅಮಿತ ವಿಶ್ವಾಸದಲ್ಲಿ ಬಿಜೆಪಿ ನಾಯಕರಿದ್ದಾರೆ. ಅದೇ ಹೊತ್ತಿನಲ್ಲಿ, ಸಂತೋಷ್‌ ಅವರಿಗೆ ಬಡ್ತಿ ನೀಡಲಾಗಿದೆ.

ಇದನ್ನೂ ಓದಿ: ಬಿಜೆಪಿಯ ಮತ್ತೊಬ್ಬ ಮುಖ್ಯಮಂತ್ರಿ ಆಕಾಂಕ್ಷಿ ಬಿಎಲ್ ಸಂತೋಷ್

ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಯಡಿಯೂರಪ್ಪನವರ ವಿರುದ್ಧದ ಪ್ರಬಲ ಬಣದ ಹಿಂದಿನ ಸೂತ್ರಧಾರರಾಗಿದ್ದರು ಎಂಬ ಟೀಕೆಯೂ ಸಂತೋಷ್‌ ಅವರ ಮೇಲಿತ್ತು. ಯಡಿಯೂರಪ್ಪ ಮತ್ತೆ ಪಕ್ಷಕ್ಕೆ ವಾಪಸ್ ಆಗಿ, ರಾಜ್ಯ ಘಟಕದ ಚುಕ್ಕಾಣಿ ಹಿಡಿದರು. ಇಬ್ಬರ ಮಧ್ಯದ ವೈಮನಸ್ಸು ಗೊತ್ತಿದ್ದ ಪಕ್ಷ ಮತ್ತು ಪರಿವಾರದ ಹಿರಿಯರು ಸಂತೋಷ್ ಅವರಿಗೆ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಹುದ್ದೆ ನೀಡಿ, ರಾಜ್ಯದ ಜವಾಬ್ದಾರಿಯಿಂದ ಪರೋಕ್ಷವಾಗಿ ಹೊರಗಿಟ್ಟಿದ್ದರು.

ಲೋಕಸಭಾ ಚುನಾವಣೆ ವೇಳೆ ಸಂತೋಷ್‌ ಅವರ ಸಲಹೆ ಮೇರೆಗೆ ಕೋಲಾರ, ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಹೊಸಮುಖಗಳಿಗೆ ಮಣೆ ಹಾಕಲಾಗಿತ್ತು. ಚಿಕ್ಕೋಡಿಯಲ್ಲಿ ಅಣ್ಣಾ ಸಾಹೇಬ ಜೊಲ್ಲೆ ಅವರಿಗೆ ಟಿಕೆಟ್‌ ನೀಡಲಾಗಿತ್ತು. ರಾಜ್ಯದಲ್ಲಿ ಪಕ್ಷ 26 ಸ್ಥಾನಗಳನ್ನು ಗೆಲ್ಲಲಿದೆ ಎಂದು ಕರಾರುವಕ್ಕಾಗಿ ಸಂತೋಷ್‌ ಹೇಳಿದ್ದರು. 

ಎಂಜಿನಿಯರಿಂಗ್‌ ಪದವೀಧರ: ಉಡುಪಿ ಜಿಲ್ಲೆಯ ಹಿರಿಯಡ್ಕದಲ್ಲಿ ಸಾಧಾರಣ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಸಂತೋಷ್ ಪಡೆದಿದ್ದು ಎಂಜಿನಿಯರಿಂಗ್ ಪದವಿ. ದಾವಣಗೆರೆಯ ಬಿಡಿಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಇ. ಮುಗಿಸುತ್ತಲೇ ಪೂರ್ಣಾವಧಿ ಪ್ರಚಾರಕರಾಗಿ ತಮ್ಮ ಜೀವನ ಆರಂಭಿಸಿದರು. ಮದುವೆಯಾಗದೆ ಮೈಸೂರು ನಗರದ ಪ್ರಚಾರಕರಾಗಿ ಕೆಲಸ ಮಾಡಿ, ಸಂಘವನ್ನು ಕಟ್ಟಿ ಬೆಳೆಸಿದರು. ಸಂಘ ಪರಿವಾರದ ಗರಡಿಮನೆಯಂತಿರುವ ಶಿವಮೊಗ್ಗ ಜಿಲ್ಲಾ ಪ್ರಚಾರಕರಾಗಿ ಕೆಲಸ ಮಾಡಿದರು.

ಬಳಿಕ ಬಿಜೆಪಿ ಜವಾಬ್ದಾರಿಗೆ ನಿಯುಕ್ತರಾದರು. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಏರುವುದಕ್ಕಿಂತ ಮುಂಚಿನ ಪಕ್ಷದ ಸಂಕಷ್ಟದ ದಿನಗಳಲ್ಲಿ (2006ರಿಂದ 2014) ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿದ್ದರು. ತಳಮಟ್ಟದಿಂದ ಪಕ್ಷ ಸಂಘಟಿಸುವಲ್ಲಿ ಸಿದ್ಧಹಸ್ತರಾದ ಸಂತೋಷ್, ಗ್ರಾಮ ಮಟ್ಟದ ಆರೆಸ್ಸೆಸ್ ಕಾರ್ಯಕರ್ತರ ನಾಡಿಮಿಡಿತ ಬಲ್ಲವರು ಮತ್ತು ಅವರ ಒಡನಾಟವನ್ನು ಹತ್ತಿರದಿಂದ ಇಟ್ಟುಕೊಂಡವರು.

ಸಂತೋಷ್ 2014ರಿಂದ ಈವರೆಗೆ ಪಕ್ಷದ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿಯಾಗಿದ್ದರು. ದಕ್ಷಿಣ ಭಾರತದ ರಾಜ್ಯಗಳಲ್ಲಿ ಕಮಲ ಪಕ್ಷದ ಸಂಘಟನೆ ಹೊಣೆ ಸಹ ವಹಿಸಲಾಗಿತ್ತು.

**

ಬಿ.ಎಲ್‌.ಸಂತೋಷ್‌ ಅವರು ಮುಂದಿನ ದಿನಗಳಲ್ಲಿ ರಾಷ್ಟ್ರ ಮಟ್ಟದಲ್ಲಿ ಪಕ್ಷವನ್ನು ಬೆಳೆಸುವುದರ ಜತೆಗೆ ಪಕ್ಷದ ಬೇರುಗಳನ್ನು ಇನ್ನಷ್ಟು ಗಟ್ಟಿಗೊಳಿಸುತ್ತಾರೆ ಎಂಬ ಭರವಸೆ ನನಗಿದೆ
– ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು