ಗುರುವಾರ , ಸೆಪ್ಟೆಂಬರ್ 16, 2021
29 °C
₹ 50 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಹೇಮಂತ್; ಮನೆ, ಕಚೇರಿ ಮೇಲೆ ಸಿಸಿಬಿ ದಾಳಿ

ಅರವಿಂದ ಲಿಂಬಾವಳಿಗೆ ಬ್ಲ್ಯಾಕ್‌ಮೇಲ್‌: ‘ಫೋಕಸ್‌’ ವ್ಯವಸ್ಥಾಪಕ ನಿರ್ದೇಶಕ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಶಾಸಕ ಅರವಿಂದ ಲಿಂಬಾವಳಿ ಅವರಿಗೆ ಬ್ಲ್ಯಾಕ್‌ಮೇಲ್‌ ಮಾಡಿ, ₹ 50 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಆರೋಪದಡಿ ‘ಫೋಕಸ್‌’ ಸುದ್ದಿವಾಹಿನಿಯ ವ್ಯವಸ್ಥಾಪಕ ನಿರ್ದೇಶಕ (ಎಂ.ಡಿ) ಹೇಮಂತ್‌ಕುಮಾರ್ ಕಮ್ಮಾರ (40) ಅವರನ್ನು ಸಿಸಿಬಿ ಪೊಲೀಸರು ಭಾನುವಾರ ಬಂಧಿಸಿದ್ದಾರೆ.

‘ಬ್ಲ್ಯಾಕ್‌ಮೇಲ್ ಸಂಬಂಧ ಶಾಸಕರ ಆಪ್ತ ಸಹಾಯಕ ಗಿರೀಶ್ ಭಾರದ್ವಾಜ್ ಅವರು ವೈಟ್‌ಫೀಲ್ಡ್‌ ಠಾಣೆಗೆ ದೂರು ನೀಡಿದ್ದರು. ಆರೋಪಿ ಮನೆ ಹಾಗೂ ವಾಹಿನಿಯ ಕಚೇರಿ ಮೇಲೆ ಭಾನುವಾರ ದಾಳಿ ಮಾಡಿ ಕಂಪ್ಯೂಟರ್, ಲ್ಯಾಪ್‌ಟಾಪ್ ಹಾಗೂ ಕೆಲ ಸಿ.ಡಿಗಳನ್ನು ಜಪ್ತಿ ಮಾಡಿದ್ದೇವೆ’ ಎಂದು ಸಿಸಿಬಿ ಡಿಸಿಪಿ ಎಸ್‌.ಗಿರೀಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ವಿಡಿಯೊ ಬ್ಲ್ಯಾಕ್‌ಮೇಲ್: ‘ಫೆ. 10ರಂದು ಶಾಸಕರ ಪರಿಚಯಸ್ಥರೊಬ್ಬರಿಗೆ ಕರೆ ಮಾಡಿದ್ದ ಹೇಮಂತ್, ‘ಲಿಂಬಾವಳಿ ಅವರಿಗೆ ಸಂಬಂಧಿಸಿದ ಆಡಿಯೊ ಹಾಗೂ ವಿಡಿಯೊ ನನ್ನ ಬಳಿ ಇದೆ. ಆ ಬಗ್ಗೆ ಮಾತನಾಡಬೇಕಿದೆ’ ಎಂದಿದ್ದರು. ಆ ವಿಷಯ ಗೊತ್ತಾಗಿ  ಭಾರದ್ವಾಜ್‌ ಕರೆ ಮಾಡಿದಾಗ, ‘ಆಡಿಯೊ ಹಾಗೂ ವಿಡಿಯೊಗಳ 25 ಪ್ರತಿಗಳನ್ನು ತಮಗೆ ನೀಡುವಂತೆ ಮುಖ್ಯಮಂತ್ರಿ ಅವರ ಆಪ್ತ ಸಹಾಯಕ ಸತೀಶ್ ಒತ್ತಾಯಿಸುತ್ತಿದ್ದಾರೆ. ಜೆಡಿಎಸ್ ಕಾರ್ಪೊರೇಟರ್ ಆನಂದ್, ಹೆಬ್ಬಾಳ ಜೆಡಿಎಸ್ ಮುಖಂಡ ಹನುಮಂತಗೌಡ ಹಾಗೂ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಎಸಿಪಿ ಬಡಿಗೇರ್ ಕೂಡ ಸಿ.ಡಿ ಕೇಳುತ್ತಿದ್ದಾರೆ’ ಎಂಬುದಾಗಿಯೂ ಹೇಮಂತ್ ಬೆದರಿಸಿದ್ದರು’ ಎಂದು ಡಿಸಿಪಿ ಹೇಳಿದರು.

‘ಫೆ. 11ರಂದು ಬೆಳಿಗ್ಗೆ ಎರಡನೇ ಬಾರಿ ಹೇಮಂತ್‌ಗೆ ಕರೆ ಮಾಡಿದ್ದ ಭಾರದ್ವಾಜ್, ‘ನಾವು ಏನು ಮಾಡಬೇಕು ಹೇಳಿ’ ಎಂದು ಪ್ರಶ್ನಿಸಿದ್ದರು. ಅದಕ್ಕೆ ಅವರು, ‘ಶಾಸಕರ ಹತ್ತಿರ ಡಿಮ್ಯಾಂಡ್ ಮಾಡುವಷ್ಟು ದೊಡ್ಡವ ನಾನಲ್ಲ. ನನಗೂ ಕಮಿಟ್‌ಮೆಂಟ್ ಇದೆ. ಒಂದು ₹ 50 ಲಕ್ಷಕ್ಕೆ ಡೀಲ್ ಮಾಡಿಸಿಬಿಡಿ. ಇನ್ನು ಮುಂದೆ ಇದ್ಯಾವುದೂ ಶಾಸಕ ಬಳಿ ಸುಳಿಯದಂತೆ ನೋಡಿಕೊಳ್ಳುತ್ತೇನೆ’ ಎಂದು ಹಣಕ್ಕೆ ಬೇಡಿಕೆ ಇಟ್ಟಿದ್ದರು’ ಎಂದು ಡಿಸಿಪಿ ಮಾಹಿತಿ ನೀಡಿದರು.

ನಕಲಿ ವಾಟ್ಸ್‌ಆ್ಯಪ್‌ ಸೃಷ್ಟಿಸಿದ್ದರು: ‘ಮುಖ್ಯಮಂತ್ರಿಯವರ ಆಪ್ತ ಸತೀಶ್ ಹೆಸರಿನಲ್ಲಿ ನಕಲಿ ವಾಟ್ಸ್‌ಆ್ಯಪ್ ಸೃಷ್ಟಿಸಿದ್ದ ಹೇಮಂತ್, ಅದೇ ನಂಬರ್‌ನಿಂದ ಸಂದೇಶ ಬಂದಂತೆ ಬಿಂಬಿಸಿ ಶಾಸಕ ಹಾಗೂ ಆಪ್ತರಿಗೆ ಕಳುಹಿಸಿದ್ದರು’ ಎಂದು ಡಿಸಿಪಿ ಗಿರೀಶ್ ಹೇಳಿದರು.

‘ಆ ಸಂದೇಶವನ್ನು ಆರಂಭದಲ್ಲಿ ದೂರುದಾರರು ನಿಜವೆಂದು ನಂಬಿದ್ದರು ಕೆಲವರನ್ನು ವಿಚಾರಣೆ ಮಾಡಿದಾಗ ನಕಲಿ ಎಂಬುದು ತಿಳಿದಿತ್ತು’ ಎಂದರು.

‘ಪ್ರೋಮೊ’ ಬಿಟ್ಟು ಹೆದರಿಸುತ್ತಿದ್ದರು

‘ವಿಧಾನಸಭಾ ಚುನಾವಣೆ ಆರಂಭಕ್ಕೂ ಮುನ್ನ ‘ಫೋಕಸ್‌’ ವಾಹಿನಿ ಆರಂಭಿಸಿದ್ದ ಹೇಮಂತ್, ಇತ್ತೀಚೆಗೆ ವಾಹಿನಿಯ ಪ್ರಸಾರ ಸ್ಥಗಿತಗೊಳಿಸಿದ್ದರು. ಅಷ್ಟಾದರೂ ಸಾಮಾಜಿಕ ಜಾಲತಾಣಗಳಲ್ಲಿ ‘ಪ್ರೋಮೊ’ ಪ್ರಸಾರ ಮಾಡಿ ಕೆಲ ರಾಜಕಾರಣಿ ಹಾಗೂ ಉದ್ಯಮಿಗಳನ್ನು ಬ್ಲ್ಯಾಕ್‌ಮೇಲ್‌ ಮಾಡಲಾರಂಭಿಸಿದ್ದರು’ ಎಂದು ಸಿಸಿಬಿ ಪೊಲೀಸರು ಹೇಳಿದರು.

‘ವಾಹಿನಿಯ ಜಾಲತಾಣ, ಫೇಸ್‌ಬುಕ್ ಪೋಸ್ಟ್‌ ಹಾಗೂ ಯುಟ್ಯೂಬ್‌ ಖಾತೆಯಲ್ಲಿರುವ ವಿಡಿಯೊಗಳನ್ನು ಪರಿಶೀಲಿಸಲಾಗುತ್ತಿದೆ’ ಎಂದು ತಿಳಿಸಿದರು.

ರಾಜಕಾರಣಿ, ಉದ್ಯಮಿಗಳೇ ‘ಫೋಕಸ್‌’

‘ಆರೋಪಿ ಹೇಮಂತ್‌, ರಾಜಕಾರಣಿಗಳು ಹಾಗೂ ಉದ್ಯಮಿಗಳಿಗೂ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದರು. ಆ ಬಗ್ಗೆ ಈಗಾಗಲೇ ಹಲವರು ಸಿಸಿಬಿಗೆ ಮಾಹಿತಿ ನೀಡಿದ್ದರು. ಅವರಿಂದ ಪ್ರತ್ಯೇಕ ದೂರು ಪಡೆದು ವಿಚಾರಣೆ ನಡೆಸಲಿದ್ದೇವೆ’ ಎಂದು ಡಿಸಿಪಿ ಗಿರೀಶ್ ಹೇಳಿದರು.

‘ಆರೋಪಿಯು ಯಾರಿಗಾದರೂ ಬ್ಲ್ಯಾಕ್‌ಮೇಲ್ ಮಾಡಿ ಹಣ ಪಡೆದಿದ್ದರೆ, ಅಂಥವರು ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ಬಂದು ದೂರು ನೀಡಬಹುದು’ ಎಂದು ಅವರು ಕೋರಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು