ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ಕಾರ್ಮಿಕರು ಜೀತ ಮುಕ್ತ

ನೀಲಗಿರಿ ತೋಪುಗಳಲ್ಲಿ 2ರಿಂದ 15 ವರ್ಷಗಳಿಂದಲೂ ಇರಿಸಿದ್ದ ಮಾಲೀಕರು
Last Updated 14 ಮಾರ್ಚ್ 2020, 21:18 IST
ಅಕ್ಷರ ಗಾತ್ರ

ಬೆಂಗಳೂರು: ನೀಲಗಿರಿ ತೋಪುಗಳಲ್ಲಿ ಜೀತದಾಳುಗಳಾಗಿ ದುಡಿಯುತ್ತಿದ್ದ 50 ಕಾರ್ಮಿಕರನ್ನು ಬೆಂಗಳೂರು ಗ್ರಾಮೀಣ ಹಾಗೂ ಬೆಂಗಳೂರು ನಗರ ಜಿಲ್ಲಾಡಳಿತವು ಪೊಲೀಸರ ನೆರವಿನಿಂದ ಶುಕ್ರವಾರ ಬಿಡುಗಡೆ ಮಾಡಿದೆ. ಇವರಲ್ಲಿ 15 ಬಾಲ ಕಾರ್ಮಿಕರು ಹಾಗೂ ಮಹಿಳೆಯರೂ ಇದ್ದಾರೆ.

ಶಿವಮೊಗ್ಗ, ತಮಿಳುನಾಡಿನ ಕೃಷ್ಣಗಿರಿಯಿಂದ ₹4–5 ಸಾವಿರ ಮುಂಗಡ ಕೊಟ್ಟು ಕಾರ್ಮಿಕರನ್ನು ಕರೆತಂದು ನೀಲಗಿರಿ ತೋಪುಗಳಲ್ಲಿ ಅಕ್ರಮವಾಗಿ ಇರಿಸಲಾಗಿತ್ತು. ರಾಜ್ಯ ಮಾನವ ಹಕ್ಕುಗಳ ಆಯೋಗ (ಎಸ್‌ಎಚ್‌ಆರ್‌ಸಿ) ಹಾಗೂ ಇಂಟರ್‌ನ್ಯಾಷನಲ್‌ ಜಸ್ಟೀಸ್‌ ಮಿಷನ್‌ (ಐಜೆಎಂ) ಸಹಕಾರದೊಂದಿಗೆ ಜೀತ ಕಾರ್ಮಿಕರನ್ನು ಬಂಧಮುಕ್ತಗೊಳಿಸಲಾಗಿದೆ.

ವಾರ, ತಿಂಗಳಿಗೆ ₹ 1ರಿಂದ 2 ಸಾವಿರ ಕೊಟ್ಟು ದಿನದ 12 ಗಂಟೆ ಒಂದೂ ರಜೆ ಕೊಡದೆ ದುಡಿಸಿಕೊಳ್ಳುತ್ತಿದ್ದರು. ನೀಲಗಿರಿ ಮರಗಳನ್ನು ಕಡಿದು, ತುಂಡರಿಸಿ ಟ್ರಕ್‌, ಟ್ರ್ಯಾಕ್ಟರ್‌ಗಳಿಗೆ ತುಂಬಿಸುತ್ತಿದ್ದರು. ಬೇಡಿಕೆ ಆಧರಿಸಿ ಇವರನ್ನು ತೋಪಿನಿಂದ ತೋಪಿಗೆ ಸ್ಥಳಾಂತರಿಸುತ್ತಿದ್ದರು. ಮೂರು ತೋಪುಗಳಲ್ಲಿ ಅಕ್ರಮವಾಗಿ ಕೂಡಿಟ್ಟಿದ್ದ ಇವರನ್ನು ಬಿಡುಗಡೆ ಮಾಡಲಾಗಿದೆ ಎಂದು ಐಜೆಎಂ ಮೂಲಗಳು ತಿಳಿಸಿವೆ.

ಕುಟುಂಬಗಳಿಗೆ ಬೇಕಾಗುವ ಅಗತ್ಯ ವಸ್ತುಗಳನ್ನು ಖರೀದಿಸಿ ತರಲು ಪುರುಷ ಕಾರ್ಮಿಕರನ್ನು ಕಳುಹಿಸಲಾಗುತಿತ್ತು. ತುರ್ತು ಸಂದರ್ಭಗಳಲ್ಲಿ ಅಥವಾ ಕೆಲಸದ ನಿಮಿತ್ತ ಊರಿಗೆ ಹೋಗಬೇಕಾದಾಗ ಕಾರ್ಮಿಕರು ಹೆಂಡತಿ, ಮಕ್ಕಳನ್ನು ಇಲ್ಲೇ ಬಿಟ್ಟು ಹೋಗಬೇಕಿತ್ತು. ಎಲ್ಲರನ್ನೂ ಒಟ್ಟಿಗೆ ಕಳುಹಿಸುತ್ತಿರಲಿಲ್ಲ. ಕುಟುಂಬ ಸಮೇತ ಊರಿಗೆ ಹೋಗಬೇಕು ಎಂದು ಕೇಳಿದ ಕಾರ್ಮಿಕರನ್ನು ಥಳಿಸಲಾಗುತಿತ್ತು ಎಂದು ಈ ಸಂಘಟನೆ ಆರೋಪಿಸಿದೆ.

ಕೃಷ್ಣಗಿರಿ ಜಿಲ್ಲೆಯ ಸಂತ್ರಸ್ತರೊಬ್ಬರ ಅಣ್ಣ, ತನ್ನ ಸೋದರಿ ಮತ್ತು ಅವರ ಕುಟುಂಬ ಜೀತದ ಬಲೆಯಲ್ಲಿ ಸಿಕ್ಕಿದ್ದು, ಬಿಡುಗಡೆ ಮಾಡಿಸಬೇಕೆಂದು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಇದರಿಂದಾಗಿ ಪ್ರಕರಣ ಬಯಲಿಗೆ ಬಂತು. ಬಿಡುಗಡೆಯಾದ ಜೀತದಾಳುಗಳೆಲ್ಲರೂ ಪರಿಶಿಷ್ಟ‍ಪಂಗಡಕ್ಕೆ ಸೇರಿದ್ದು, ಜೀತಕ್ಕಿಟ್ಟುಕೊಂಡವರು ಕನಿಷ್ಠ ಸೌಲಭ್ಯಗಳನ್ನೂ ನೀಡಿರಲಿಲ್ಲ. ಟಾರ್ಪಾಲ್‌ನಿಂದ ನಿರ್ಮಿಸಿದ್ದ ತಾತ್ಕಾಲಿಕ ಟೆಂಟ್‌ಗಳಲ್ಲಿ ವರಿದ್ದರು ಎಂದು ಐಜೆಎಂ ಸ್ಪಷ್ಟಪಡಿಸಿದೆ.

ಕೆಲವು ಕಾರ್ಮಿಕರು ಎರಡು ವರ್ಷದ ಹಿಂದೆ ಮಾಲೀಕರ ಬಲೆಯಲ್ಲಿ ಸಿಲುಕಿದ್ದರೆ, ಇನ್ನೂ ಕೆಲವರು 15 ವರ್ಷಗಳಿಂದಲೂ ದುಡಿಯುತ್ತಿದ್ದರು. ಪ್ರಕರಣದ ಸಂಬಂಧ ಆರೋಪಿಗಳಿಬ್ಬರನ್ನು ದೊಡ್ಡಬೆಳವಂಗಲ ಹಾಗೂ ಮಾದನಾಯಕನಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಾನವ ಕಳ್ಳಸಾಗಣೆ ತಡೆ ಕಾಯ್ದೆ, ಜೀತ ಕಾರ್ಮಿಕ ನಿರ್ಮೂಲನಾ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT