ಶುಕ್ರವಾರ, ಫೆಬ್ರವರಿ 28, 2020
19 °C

ಮೋದಿ, ಶಾ ಕಪಾಳಕ್ಕೆ ಬಾರಿಸಿದ ದೆಹಲಿ ಮತದಾರ: ಬೃಂದಾ ಕಾರಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ಅಭಿವೃದ್ಧಿ ಕೆಲಸಗಳಿಗೆ ಬೆನ್ನು ತಿರುಗಿಸಿ ಬರೀ ಪಾಕಿಸ್ತಾನ ಪಾಕಿಸ್ತಾನ ಎಂದು ಬಡಬಡಿಸುವ ನರೇಂದ್ರ ಮೋದಿ ಹಾಗೂ ಅಮಿತ್‌ ಶಾ ನೇತೃತ್ವದ ಬಿಜೆಪಿಯನ್ನು ಚುನಾವಣೆಯಲ್ಲಿ ಹೀನಾಯವಾಗಿ ಸೋಲಿಸುವ ಮೂಲಕ ದೆಹಲಿ ಮತದಾರ ಮೋದಿ ಹಾಗೂ ಶಾ ಕಪಾಳಕ್ಕೆ ಸರಿಯಾದ ಏಟನ್ನೇ ಕೊಟ್ಟಿದ್ದಾರೆ’ ಎಂದು ಸಿಪಿಎಂ ಪಾಲಿಟ್‌ ಬ್ಯೂರೊ ಸದಸ್ಯೆ, ಮಾಜಿ ಸಂಸದೆ ಬೃಂದಾ ಕಾರಟ್ ಹೇಳಿದರು.

ಜನವಾದಿ ಮಹಿಳಾ ಸಂಘಟನೆಯಿಂದ ಗುರುವಾರ ನಗರದಲ್ಲಿ ಆಯೋಜಿಸಿದ್ದ ಸಿಎಎ, ಎನ್‌ಆರ್‌ಸಿ, ಎಪಿಆರ್‌ ವಿರೋಧಿ ಸಮಾವೇಶದಲ್ಲಿ ಭಾಗವಹಿಸಿದ್ದ ಸಹಸ್ರಾರು ಮಹಿಳೆಯರನ್ನು ಉದ್ದೇಶಿಸಿ ಅವರು ಮಾತನಾಡಿದರು.

‘ಚುನಾವಣೆ ಮುಗಿಯುವವರೆಗೂ ಬರೀ ಪಾಕಿಸ್ತಾನ, ಶಾಹೀನ್ ಭಾಗ್ ಎಂಬ ಎರಡು ಹೆಸರುಗಳನ್ನಷ್ಟೇ ಪ್ರಧಾನಿ ಹೆಚ್ಚಾಗಿ ಬಳಸುತ್ತಿದ್ದರು. ಆ ಮೂಲಕ ಹಿಂದು ಮತಗಳ ಧ್ರುವೀಕರಣ ಸಾಧ್ಯವಾಗಲಿದೆ ಎಂದು ನಂಬಿದ್ದರು. ಆದರೆ, ಕೋಮು ಭಾವನೆಗಳನ್ನು ಕೆರಳಿಸುವ ಭಾಷಣಗಳಿಗೆ ಅಷ್ಟಾಗಿ ಕಿಮ್ಮತ್ತು ಕೊಡದ ದೆಹಲಿ ಮತದಾರರು ಅಭಿವೃದ್ಧಿ ರಾಜಕಾರಣಕ್ಕೆ ಮಣೆ ಹಾಕಿದ್ದಾರೆ’ ಎಂದರು.

‘ಸದಾ ಪಾಕಿಸ್ತಾನವನ್ನು ನಿಂದಿಸುವ ಮೋದಿ ಅವರು ಪಾಕಿಸ್ತಾನ ಪ್ರಧಾನಿ ಕರೆಯದೇ ಇದ್ದರೂ ಹೋಗಿ ಬಿರಿಯಾನಿ ತಿಂದು ಬರುತ್ತಾರೆ. ಆದರೆ, ಭಾರತದಲ್ಲಿ ನಿಂತುಕೊಂಡು ಪಾಕಿಸ್ತಾನವನ್ನು ಟೀಕಿಸುತ್ತಾರೆ. ಬಹುಶಃ ಪಾಕಿಸ್ತಾನದ ಹೆಸರು ತೆಗೆದುಕೊಳ್ಳದಿದ್ದರೆ ತಿಂದ ಅನ್ನ ಪಚನವಾಗುವುದಿಲ್ಲವೋ ಏನೋ’ ಎಂದು ವ್ಯಂಗ್ಯವಾಡಿದರು.

ಚುನಾವಣೆಯ ಸಂದರ್ಭದಲ್ಲಿ ಕೇಂದ್ರ ಗೃಹಸಚಿವರ ಅಧೀನದಲ್ಲಿ ಬರುವ ದೆಹಲಿ ಪೊಲೀಸರನ್ನು ತಮ್ಮದೇ ಖಾಸಗಿ ಪೊಲೀಸರು ಎಂಬಂತೆ ದುರ್ಬಳಕೆ ಮಾಡಿಕೊಳ್ಳಲಾಯಿತು. ಎರಡು ತಿಂಗಳಿಂದ ದೆಹಲಿಯ ಶಾಹೀನ್ ಭಾಗ್‌ನಲ್ಲಿ ಕೊರೆಯುವ ಚಳಿಯನ್ನೂ ಲೆಕ್ಕಿಸದೇ ಹೋರಾಟ ಮಾಡುತ್ತಿರುವ ಮಹಿಳೆಯರ ಬಗ್ಗೆ ನಾವು ಹೆಮ್ಮೆ ಪಡಲೇಬೇಕು ಎಂದರು.

‘ಗೋಲಿ ಮತ್ತು ಗಾಲಿ (ಗುಂಡು ಮತ್ತು ಬಯ್ಗುಳಗಳು)ಗಳನ್ನು ಬಿಜೆಪಿ ನಾಯಕರು ಯಥೇಚ್ಛಾವಾಗಿ ದೆಹಲಿ ಚುನಾವಣೆಯಲ್ಲಿ ಬಳಕೆ ಮಾಡಿದರು. ಆದರೆ, ಕಠಿಣ ಕ್ರಮ ಕೈಗೊಳ್ಳಬೇಕಿದ್ದ ಚುನಾವಣಾ ಆಯೋಗ ಬರೀ ನೋಟಿಸ್‌ ಜಾರಿ ಮಾಡಿ ಕೈತೊಳೆದುಕೊಂಡಿತು. ಬಿಜೆಪಿ ಮತದಾರರಿಗೆ ಗುಂಡು ಹೊಡೆಯಿರಿ ಎಂದು ಭಾಷಣ ಮಾಡಿದ್ದ ತನ್ನ ಪಕ್ಷದ ಸಂಸದನ ವಿರುದ್ಧ ಯಾವ ಕ್ರಮವನ್ನೂ ಕೈಗೊಳ್ಳಲಿದೆ’ ಎಂದು ಪ್ರಶ್ನಿಸಿದರು.

ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಸಂಚಾಲಕಿ ಕೆ. ನೀಲಾ ಮಾತನಾಡಿ, ‘ಎಲ್ಲ ಧರ್ಮೀಯರೂ ಒಂದಾಗಿ ಬಾಳುತ್ತಿದ್ದಾರೆ. ಹಿಟ್ಲರ್‌ ಯಹೂದಿಗಳು ಹಾಗೂ ಆರ್ಯರನ್ನು ಪ್ರತ್ಯೇಕಿಸಿ ಯಹೂದಿಗಳನ್ನು ವಿಷದ ಗ್ಯಾಸ್‌ ಚೇಂಬರ್‌ನಲ್ಲಿಟ್ಟು ಕೊಂದು ಹಾಕಿದ ಮಾದರಿಯಲ್ಲಿಯೇ ಮೋದಿ ಅಲ್ಪಸಂಖ್ಯಾತರನ್ನು ದೇಶದಿಂದ ಹೊರಗಟ್ಟುವ ಸಲುವಾಗಿ ಸಿಎಎ, ಎನ್ಆರ್‌ಸಿ ಕಾಯ್ದೆಗಳನ್ನು ಜಾರಿಗೆ ತರುತ್ತಿದ್ದಾರೆ. ಇದು ಬರೀ ಮುಸ್ಲಿಮರಿಗಷ್ಟೇ ಅಲ್ಲ, ದಲಿತರು, ಹಿಂದುಳಿದವರು, ಆದಿವಾಸಿಗಳಿಗೂ ಸಮಸ್ಯೆಯಾಗಲಿದೆ. ಅಸ್ಸಾಂನಲ್ಲಿ ಎನ್‌ಆರ್‌ಸಿ ಜಾರಿಗೆ ತಂದಾಗ 19 ಲಕ್ಷ ಜನರು ಪಟ್ಟಿಯಿಂದ ಹೊರಗುಳಿದರು. ಅದರಲ್ಲಿ 13 ಲಕ್ಷ ಜನಗಳು ಹಿಂದುಗಳೇ ಆಗಿದ್ದಾರೆ. ಹೀಗಾಗಿ, ನಾವು ಸಿಎಎ, ಎನ್‌ಆರ್‌ಸಿಗೆ ದಾಖಲೆ ಕೇಳಲು ಬಂದವರಿಗೆ ತೋರಿಸಬಾರದು’ ಎಂದು ಮನವಿ ಮಾಡಿದರು.

ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷೆ ದೇವಿ, ರೇಷ್ಮಾ, ಸುರೇಖಾ ರಜಪೂತ, ರೀನಾ ಡಿಸೋಜಾ, ಮೇರಿ, ನುಜತ್, ಅಮೀನಾ ಬೇಗಂ, ನಂದಾದೇವಿ, ಚಂದ್ರಮ್ಮ, ಪದ್ಮಾ ಪಾಟೀಲ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು