ಮಂಗಳವಾರ, ಮೇ 26, 2020
27 °C
ಊರ ಹಿತಕ್ಕೆ ಸ್ವಂತ ನಿವೇಶನ ಮಾರಾಟ: ದಿನವಿಡೀ ಅನ್ನ ದಾಸೋಹ

ಕೋಲಾರ: ಹಸಿದವರ ಬದುಕಿಗೆ ಆಸರೆಯಾದ ಸಹೋದರರು

ಜೆ.ಆರ್‌.ಗಿರೀಶ್‌ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಜಾರಿಯಾಗಿರುವ ದಿಗ್ಬಂಧನ ಆದೇಶದಿಂದ ತತ್ತರಿಸಿರುವ ಜಿಲ್ಲೆಯ ಬಡ ಜನರ ಕಷ್ಟಕ್ಕೆ ಮಿಡಿಯುತ್ತಿರುವ ಸಹೋದರರಿಬ್ಬರು ಸ್ವಂತ ನಿವೇಶನ ಮಾರಿ ಊರ ಜನರ ಹಿತ ಕಾಯುತ್ತಿದ್ದಾರೆ.

ನಗರದ ಹೌಸಿಂಗ್‌ ಬೋರ್ಡ್‌ ಬಡಾವಣೆ ನಿವಾಸಿಗಳಾದ ತಜ್ಮುಲ್ ಪಾಷಾ ಮತ್ತು ಅವರ ಸಹೋದರ ಮುಜಾಮಿಲ್‌ ಪಾಷಾ ತಮ್ಮ ನಿವೇಶನ ಮಾರಾಟ ಮಾಡಿ ಬಂದ ₹ 25 ಲಕ್ಷವನ್ನು ದಿಗ್ಬಂಧನ ಆದೇಶದಿಂದ ಬಾಧಿತರಾಗಿರುವ ಬಡ ಜನರ ನೆರವಿಗೆ ಮೀಸಲಿಟ್ಟಿದ್ದಾರೆ.

4ನೇ ತರಗತಿ ಓದಿರುವ ಸಹೋದರರು ಊರು ಕೇರಿ ಸುತ್ತಿ ಹಸಿದ ಜನರ ಕಣ್ಣೀರು ಒರೆಸುತ್ತಿದ್ದಾರೆ. ಕಷ್ಟವೆಂದು ಕರೆ ಮಾಡುವ ಜನರ ಮನೆ ಬಾಗಿಲಿಗೆ ದಿನಸಿ ಪದಾರ್ಥ ತಲುಪಿಸುತ್ತಾರೆ. ಮನೆಯ ಪಕ್ಕದಲ್ಲೇ ಶಾಮಿಯಾನ ಹಾಕಿ ದಿನವಿಡೀ ಅನ್ನ ದಾಸೋಹ ಸಹ ನಡೆಸುತ್ತಿದ್ದಾರೆ.

15 ದಿನಕ್ಕೆ ಆಗುವಷ್ಟು ಅಕ್ಕಿ, ಮೈದಾ, ತೊಗರಿ ಬೇಳೆ, ಸಕ್ಕರೆ, ಉಪ್ಪು, ಕಾರದ ಪುಡಿ, ಟೀ ಪುಡಿ, ಅರಿಶಿನ ಪುಡಿ, ಅಡುಗೆ ಎಣ್ಣೆಯನ್ನು ಚೀಲದಲ್ಲಿ ತುಂಬಿಸಿ ಮನೆ ಮನೆಗೆ ವಿತರಣೆ ಮಾಡುತ್ತಿದ್ದಾರೆ. ಅಡುಗೆ ಮಾಡಿಕೊಳ್ಳುವ ವ್ಯವಸ್ಥೆಯಿಲ್ಲದ ರಸ್ತೆ ಬದಿಯ ಭಿಕ್ಷುಕರು ಹಾಗೂ ನಿರ್ಗತಿಕರಿಗೆ ದಿನದ ಮೂರೂ ಹೊತ್ತು ಆಹಾರದ ಪೊಟ್ಟಣ ಹಂಚುತ್ತಾರೆ.

ಬವಣೆಯ ಬದುಕು: ಬಾಲ್ಯದಲ್ಲೇ ತಂದೆ ತಾಯಿಯನ್ನು ಕಳೆದುಕೊಂಡು ಅಜ್ಜಿಯ ಆಸರೆಯಲ್ಲಿ ಬೆಳೆದ ಸಹೋದರರು ಆರಂಭದಲ್ಲಿ ಬಾಳೆ ಹಣ್ಣು ವ್ಯಾಪಾರ ಮಾಡಿ ಬದುಕು ಕಟ್ಟಿಕೊಂಡರು. ನಂತರ ರಿಯಲ್‌ ಎಸ್ಟೇಟ್‌ ಉದ್ಯಮವು ಸಹೋದರರ ಕೈ ಹಿಡಿಯಿತು. ಬಾಲ್ಯದಲ್ಲಿ ತುತ್ತು ಅನ್ನಕ್ಕೂ ಕಷ್ಟಪಟ್ಟಿದ್ದ ತಜ್ಮುಲ್ ಸಹೋದರರು ತಮ್ಮ ಬವಣೆಯ ಬದುಕು ಬೇರೆಯವರಿಗೆ ಬರಬಾರದೆಂದು ಗೆಳೆಯರ ಜತೆಗೂಡಿ ಹಸಿದವರ ಬದುಕಿಗೆ ಆಸರೆಯಾಗಿದ್ದಾರೆ.

ಸಹೋದರರ ಕುಟುಂಬ ಸದಸ್ಯರೆಲ್ಲಾ ಸೇರಿ ಮನೆಯಲ್ಲಿ ರಾತ್ರಿಯಿಡೀ ದಿನಸಿ ಪದಾರ್ಥಗಳ ಪೊಟ್ಟಣ ಕಟ್ಟುತ್ತಾರೆ. ರಾತ್ರಿ ಕಳೆದು ಬೆಳಗಾಗುವುದೆ ತಡ ಮುಜಾಮಿಲ್‌ ಅವರ ಮೊಬೈಲ್‌ ಸಂಖ್ಯೆ 7899346674ಕ್ಕೆ ಕರೆ ಮಾಡುವ ಬಡ ಜನರ ಮನೆಗಳಿಗೆ ದಿನಸಿ ರವಾನೆಯಾಗುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು