ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮುದಾಯದ ಬೆಂಬಲ ಇಲ್ಲದೆ ಸರ್ಕಾರಿ ಶಾಲೆಗಳ ಉಳಿವು ಕಷ್ಟ: ಸಿಎಂ ಬಿ.ಎಸ್.ಯಡಿಯೂರಪ್ಪ

ಮುಖ್ಯಮಂತ್ರಿ ಅಸಹಾಯಕತೆ
Last Updated 5 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಶ್ರೀವಿಜಯ ಪ್ರಧಾನ ವೇದಿಕೆ (ಕಲಬುರ್ಗಿ): ‘ಖಾಸಗಿ ಶಾಲೆಗಳಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಬೋಧಿಸುವುದನ್ನು ಖಾತರಿ ಪಡಿಸಲು ಮತ್ತು ಸರ್ಕಾರಿ ಶಾಲೆಗಳನ್ನು ಬಲಪಡಿಸಲು ಸರ್ಕಾರ ಬದ್ಧವಾಗಿದೆ. ಆದರೆ, ಸಮುದಾಯದ ಬೆಂಬಲ ಇಲ್ಲದೆ ಸರ್ಕಾರಿ ಶಾಲೆಗಳನ್ನು ಉಳಿಸುವುದು ಕಷ್ಟ’ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅಸಹಾಯಕತೆ ವ್ಯಕ್ತಪಡಿಸಿದರು.

ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ‘ಪೋಷಕರು ತಮ್ಮ ಮಕ್ಕಳ ಶಿಕ್ಷಣದ ವಿಷಯದಲ್ಲಿ ಸಕ್ರಿಯರಾಗಿ ಆಸಕ್ತಿ ವಹಿಸಿ, ಸರ್ಕಾರಿ ಶಾಲೆಗಳತ್ತ ಒಲವು ಬೆಳೆಸಿಕೊಂಡಾಗ ಶಾಲೆಗಳು ಉನ್ನತಿಗೇರುತ್ತವೆ. ಆ ಮೂಲಕ ಮಕ್ಕಳ ಉನ್ನತಿಯೂ ಸಾಧ್ಯವಾಗುತ್ತದೆ’ ಎಂದು ಅವರು ಪ್ರತಿಪಾದಿಸಿದರು.

‘ಕರ್ನಾಟಕದ ನೆಲ–ಜಲ–ಅಸ್ಮಿತೆಯ ವಿಚಾರದಲ್ಲಿ ನಾವು ರಾಜಿ ಮಾಡಿಕೊಳ್ಳುವುದಿಲ್ಲ.‌ ಮಹಾರಾಷ್ಟ್ರದಲ್ಲಿರುವ ಸಮ್ಮಿಶ್ರ ಸರ್ಕಾರ ಮತ್ತೆ ಗಡಿ ತಂಟೆಗೆ ಮುಂದಾಗಿದೆ. ರಾಜಕೀಯ ಕಾರಣಕ್ಕಾಗಿ ಗೊಂದಲವೆಬ್ಬಿಸುವ ಪ್ರಯತ್ನ ನಡೆಯುತ್ತಿದೆ. ವಿವಾದ ಸುಪ್ರೀಂ ಕೋರ್ಟ್‌
ನಲ್ಲಿದ್ದು, ಇದಕ್ಕೆ ತಾರ್ಕಿಕ ಅಂತ್ಯ ಕಾಣಿಸುವ ಕಾರ್ಯತಂತ್ರವನ್ನು ನಮ್ಮ ಸರ್ಕಾರ ರೂಪಿಸಲಿದೆ’ ಎಂದರು.

‘ಕನ್ನಡ ಸಾಹಿತ್ಯ ಸಮೃದ್ಧಿಯೊಂದಿಗೆ ಆಡುಭಾಷೆಯಾಗಿಯೂ ಕಂಪು ಹರಡಬೇಕು. ಇತರ ಭಾಷೆಗಳ ಜ್ಞಾನ ನಮ್ಮ ಯೋಚನೆಯ ಪರಿಧಿಯನ್ನು ವಿಸ್ತರಿಸಲಿ. ಆದರೆ, ನಮ್ಮ ಆಲೋಚನೆ ಕನ್ನಡದಲ್ಲಿಯೇ ಇರಲಿ’ ಎಂದು ಕಿವಿಮಾತು ಹೇಳಿದ ಅವರು, ‘ಖಾಸಗಿ ವಲಯದ ಗ್ರೂಪ್‌ ಸಿ ಮತ್ತು ಡಿ ಹುದ್ದೆಗಳ ಭರ್ತಿಯಲ್ಲಿ ಕನ್ನಡಿಗರಿಗೇ ಪ್ರಥಮ ಆದ್ಯತೆ ನೀಡಬೇಕು ಎಂಬ ಆದೇಶ ಹೊರಡಿಸುವ ಮೂಲಕ ಕನ್ನಡವನ್ನು ಉದ್ಯೋಗ ಭಾಷೆಯನ್ನಾಗಿಸುವಲ್ಲಿ ಸರ್ಕಾರ ಮುಂದಡಿ ಇಟ್ಟಿದೆ’ ಎಂದು ಹೇಳಿದರು.

‘ಅಭಿವೃದ್ಧಿ, ಉದ್ಯೋಗ ಲಭ್ಯತೆ, ಸಂಘ–ಸಂಸ್ಥೆಗಳಲ್ಲಿ ಪ್ರಾತಿನಿಧ್ಯದ ಕೊರತೆ ಮತ್ತಿತರ ಕಾರಣಗಳಿಗೆ ನಾಡಿನ ಒಳಗಡೆ ಒಡಕಿನ ಧ್ವನಿ ಆಗಾಗ ಕೇಳಿ ಬರುವುದುಂಟು. ಏಕೀಕರಣ ಪ್ರತ್ಯೇಕೀಕರಣಕ್ಕೆ ಎಡೆಯಾಗಬಾರದು; ಏಕತೆಗೆ ಧಕ್ಕೆಯಾಗದಂತೆ ನಮ್ಮೊಳಗಿನ ಸಮಸ್ಯೆ ನಿವಾರಿಸಿಕೊಳ್ಳಬೇಕಾಗಿದೆ’ ಎಂದ ಅವರು ‘ಇಂತಹ ತಾರತಮ್ಯ ನಿವಾರಣೆಗೆ ನಮ್ಮ ಸರ್ಕಾರ ಬದ್ಧ’ ಎಂದರು.

2 ವರ್ಷಕ್ಕೊಮ್ಮೆ ಕಲ್ಯಾಣ ಕರ್ನಾಟಕ ಉತ್ಸವ

ಕಲ್ಯಾಣ ಕರ್ನಾಟಕ ಭಾಗದ ಸಾಂಸ್ಕೃತಿಕ ವೈವಿಧ್ಯಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪ್ರತಿ ಎರಡು ವರ್ಷಕ್ಕೊಮ್ಮೆ ‘ಕಲ್ಯಾಣ ಕರ್ನಾಟಕ ಉತ್ಸವ’ ಆಯೋಜಿಸುವ ಚಿಂತನೆ ಸರ್ಕಾರಕ್ಕೆ ಇದೆ. ಈ ಭಾಗದ ವಿದ್ಯಾರ್ಥಿಗಳು ಬೆಂಗಳೂರಿಗೆ ಬಂದಾಗ ವಸತಿಗಾಗಿ ಅಲೆದಾಡುವುದನ್ನು ತಪ್ಪಿಸಲು ನಾಗರಬಾವಿಯ ಬಳಿ 500 ಕೊಠಡಿಗಳುಳ್ಳ ವಸತಿ ನಿಲಯನ್ನು ನಿರ್ಮಿಸಲಾಗುತ್ತಿದೆ. ಅದಕ್ಕಾಗಿ 3 ಎಕರೆ ಜಾಗವನ್ನೂ ನೀಡಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT