ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸ್‌ ಅಧಿಕಾರಿಗಳ ಜತೆ ಸಿ.ಎಂ ಸರಣಿ ಸಭೆ

ಸಿಎಂ ಭೇಟಿ ಮಾಡಿದ ಮುಸ್ಲಿಂ ಮುಖಂಡರು
Last Updated 19 ಡಿಸೆಂಬರ್ 2019, 19:46 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ವಿವಿಧೆಡೆ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಗುರುವಾರ ಬೆಳಗ್ಗೆಯಿಂದ ಪೊಲೀಸ್‌ ಅಧಿಕಾರಿಗಳ ಸರಣಿ ಸಭೆ ನಡೆಸಿದರು.

ಎಲ್ಲ ಜಿಲ್ಲೆಗಳಿಂದಲೂ ಕ್ಷಣ ಕ್ಷಣದ ಮಾಹಿತಿ ತರಿಸಿಕೊಂಡು ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸಲಹೆ ಸೂಚನೆಗಳನ್ನು ನೀಡಿದರು. ಸಂಜೆ ಕೃಷ್ಣಾದಲ್ಲಿ ಮುಸ್ಲಿಂ ಸಮುದಾಯದ ಮುಖಂಡರು ಮತ್ತು ಧರ್ಮ ಗುರುಗಳ ಜತೆ ಸಭೆ ನಡೆಸಿ, ‘ಪ್ರತಿಭಟನೆ ನಡೆಸುವ ಹಕ್ಕು ಎಲ್ಲರಿಗೂ ಇದೆ. ಅದರ ಜತೆಗೆ ಶಾಂತಿಯನ್ನೂ ಕಾಪಾಡಬೇಕು. ಎಲ್ಲರಿಗೂ ರಕ್ಷಣೆ ನೀಡಲಾಗುವುದು’ ಎಂದು ಮುಖ್ಯಮಂತ್ರಿ ಮನವಿ ಮಾಡಿದರು.

ಪ್ರತಿಭಟನೆ ಹಿನ್ನೆಲೆಯಲ್ಲಿ ಬೆಳಿಗ್ಗೆಯೇ ಡಿಜಿಪಿನೀಲಮಣಿ ಎನ್‌. ರಾಜು, ಗುಪ್ತಚರ ಇಲಾಖೆ ಎಡಿಜಿಪಿ ಕಮಲ್ ಪಂತ್, ಬೆಂಗಳೂರು ನಗರ ಪೊಲೀಸ್‌ ಕಮಿಷನರ್‌ ಭಾಸ್ಕರರಾವ್‌ ಸೇರಿದಂತೆ ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಿ, ರಾಜ್ಯದ ಸ್ಥಿತಿಗತಿಯ ಬಗ್ಗೆ ಮಾಹಿತಿ ಪಡೆದರು.

ಈ ಸಂದರ್ಭದಲ್ಲಿ ಮಾತನಾಡಿದ ಯಡಿಯೂರಪ್ಪ, ಗೂಂಡಾ ಚಟುವಟಿಕೆಯಲ್ಲಿ ತೊಡಗಿರುವವರನ್ನು ಬಿಟ್ಟು, ಸಾಮಾನ್ಯ ಜನರ ಮೇಲೆ ಲಾಠಿ ಬೀಸಿದರೆ ಅಂತಹ ಪೊಲೀಸರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಎರಡು ಬಾರಿ ವರದಿಗೆ ಸೂಚನೆ: ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ನೀಲಮಣಿ ಎನ್.ರಾಜು, ಕಮಿಷನರ್ ಭಾಸ್ಕರ ರಾವ್ ಸೇರಿದಂತೆ ಹಿರಿಯ ಅಧಿಕಾರಿಗಳನ್ನು ಕರೆಸಿಕೊಂಡು ಯಡಿಯೂರಪ್ಪ, ಎರಡನೇ ಬಾರಿ ತುರ್ತು ಸಭೆ ನಡೆಸಿದರು.

‘ಹಿಂದು–ಮುಸ್ಲಿಮರು ಒಂದೇ ತಾಯಿಯ ಮಕ್ಕಳು. ಮುಸ್ಲಿಂ ಸಮುದಾಯದ ಬಂಧುಗಳು ಭಯಪಡಬೇಕಾಗಿಲ್ಲ. ನಾನು ಎಲ್ಲ ರೀತಿಯ ರಕ್ಷಣೆ ನೀಡುತ್ತೇನೆ. ವದಂತಿಗಳಿಗೆ ಕಿವಿಗೊಡದೇ ಶಾಂತಿಯಿಂದ ಇರಬೇಕು’ ಎಂದು ತಮ್ಮನ್ನು ಭೇಟಿ ಮಾಡಿದ ಮುಸ್ಲಿಂ ಮುಖಂಡರ ನಿಯೋಗಕ್ಕೆ ಯಡಿಯೂರಪ್ಪ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT