ಚಿಕ್ಕೋಡಿ ಲೋಕಸಭಾ ಕ್ಷೇತ ಟಿಕೆಟ್‌ ವಂಚಿತ ರಮೇಶ ಕತ್ತಿಗೆ ಸಮಾಧಾನಪಡಿಸಿದ ಬಿಎಸ್‌ವೈ

ಬುಧವಾರ, ಏಪ್ರಿಲ್ 24, 2019
32 °C

ಚಿಕ್ಕೋಡಿ ಲೋಕಸಭಾ ಕ್ಷೇತ ಟಿಕೆಟ್‌ ವಂಚಿತ ರಮೇಶ ಕತ್ತಿಗೆ ಸಮಾಧಾನಪಡಿಸಿದ ಬಿಎಸ್‌ವೈ

Published:
Updated:

ಬೆಳಗಾವಿ: ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಟಿಕೆಟ್‌ ವಂಚಿತ ರಮೇಶ ಕತ್ತಿ ಅವರನ್ನು ಸೋಮವಾರ ನಗರದಲ್ಲಿ ಭೇಟಿಯಾದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ, ಅವರ ಅಸಮಾಧಾನ ಶಮನಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ರಮೇಶ ಕತ್ತಿ ಅವರನ್ನು ಸೆಳೆಯಲು ಕಾಂಗ್ರೆಸ್‌ನ ಕೆಲವು ಮುಖಂಡರು ಪ್ರಯತ್ನಿಸುತ್ತಿದ್ದಾರೆ ಎನ್ನುವ ವರದಿಗಳು ಮಾಧ್ಯಮಗಳಲ್ಲಿ ಪ್ರಕಟಗೊಂಡ ಬೆನ್ನಲ್ಲೇ ನಗರಕ್ಕೆ ಧಾವಿಸಿ ಬಂದ ಯಡಿಯೂರಪ್ಪ ಅವರು, ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಸುಮಾರು ಎರಡು ಗಂಟೆಗಳ ಕಾಲ ಕತ್ತಿ ಸಹೋದರರು ಹಾಗೂ ಪಕ್ಷದ ಮುಖಂಡರ ಜೊತೆ ಗೋಪ್ಯ ಸಭೆ ನಡೆಸಿದರು.

ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಟಿಕೆಟ್‌ ಹಂಚಿಕೆ ನನ್ನ ತೀರ್ಮಾನ ಅಲ್ಲ. ಪಕ್ಷದ ಹೈಕಮಾಂಡ್‌ ತೀರ್ಮಾನ. ಇದಕ್ಕೆ ನಾವೆಲ್ಲರೂ ಬದ್ಧರಾಗಿದ್ದೇವೆ. ಪಕ್ಷದ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಅವರನ್ನು ಗೆಲ್ಲಿಸಲು ಒಗ್ಗಟ್ಟಾಗಿ ಪ್ರಯತ್ನಿಸುತ್ತೇವೆ. ರಮೇಶ ಅವರಿಗೆ ಯಾವುದೇ ಅಸಮಾಧಾನ ಇಲ್ಲ’ ಎಂದರು.

‘ಟಿಕೆಟ್‌ ಬದಲಿಗೆ ರಮೇಶ ಅವರು ಯಾವುದೇ ಬೇಡಿಕೆ ಇಲ್ಲ. ಆದರೂ, ಅವರಿಗೆ ಪಕ್ಷವು ಸೂಕ್ತ ಸಮಯದಲ್ಲಿ ಸೂಕ್ತ ಸ್ಥಾನಮಾನ ನೀಡಲಿದೆ’ ಎಂದು ಹೇಳಿದರು.

ರಮೇಶ ಕತ್ತಿ ಮಾತನಾಡಿ, ‘ಚಿಕ್ಕೋಡಿಯಿಂದ ಸ್ಪರ್ಧಿಸಲು ನಾನು ಕೂಡ ಬಯಸಿದ್ದೆ. ಆದರೆ, ಪಕ್ಷದ ಹೈಕಮಾಂಡ್‌ ಜೊಲ್ಲೆ ಅವರಿಗೆ ಟಿಕೆಟ್‌ ನೀಡಿದೆ. ಪಕ್ಷದ ನಿರ್ಧಾರವನ್ನು ಗೌರವಿಸುತ್ತೇನೆ. ಅವರನ್ನು ಗೆಲ್ಲಿಸಲು ಪ್ರಯತ್ನಿಸುತ್ತೇನೆ. ಪಕ್ಷ ಬಿಟ್ಟು ಹೋಗುವ ಪ್ರಶ್ನೆಯಿಲ್ಲ. ಯಾವುದೇ ಅಸಮಾಧಾನವೂ ಇಲ್ಲ’ ಎಂದು ಹೇಳಿದರು.

‘ಟಿಕೆಟ್‌ ಬದಲಾಗಿ ಬೇರೆ ಏನೂ ಬೇಡಿಕೆ ಇಟ್ಟಿಲ್ಲ, ಯಾವ ಷರತ್ತೂ ವಿಧಿಸಿಲ್ಲ. ವಿಧಾನ ಪರಿಷತ್ ಸದಸ್ಯ ಸ್ಥಾನದ ಬೇಡಿಕೆ ಇಟ್ಟಿಲ್ಲ. ಪಕ್ಷದವರೇ ನೀಡಲು ಮುಂದೆ ಬಂದರೂ ನಾನು ಸ್ವೀಕರಿಸುವುದಿಲ್ಲ. ಹಿಂಬಾಗಿಲಿನ ಮೂಲಕ ಪ್ರವೇಶಿಸುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಎಲ್ಲ ಪಕ್ಷಗಳಂತೆ ಕಾಂಗ್ರೆಸ್‌ನಲ್ಲಿಯೂ ನನಗೆ ಸ್ನೇಹಿತರಿದ್ದಾರೆ. ಬಿಜೆಪಿ ಟಿಕೆಟ್‌ ತಪ್ಪಿದಾಗ ಫೋನ್‌ ಮಾಡಿ ವಿಚಾರಿಸಿದರು. ಸಹಾನುಭೂತಿ ತೋರಿಸಿದರು. ಆದರೆ, ಯಾರೂ ಪಕ್ಷಕ್ಕೆ ಆಹ್ವಾನಿಸಿರಲಿಲ್ಲ’ ಎಂದು ತಿಳಿಸಿದರು.

ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ, ಪತ್ನಿ ಶಾಸಕಿ ಶಶಿಕಲಾ ಜೊಲ್ಲೆ, ಇತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !