ಮಂಗಳವಾರ, ಫೆಬ್ರವರಿ 18, 2020
31 °C
ಸಂಪುಟ ವಿಸ್ತರಣೆ ವೇಳೆ ಮತ್ತೆ ಯಾರಿಗೆ ಸ್ಥಾನ?

ಬೆಳಗಾವಿಗೆ ಬಂಪರ್‌ ರಾಜಕೀಯ ಪ್ರಾತಿನಿಧ್ಯ

ಎಂ. ಮಹೇಶ Updated:

ಅಕ್ಷರ ಗಾತ್ರ : | |

ಬೆಳಗಾವಿ: ಪ್ರಸ್ತುತ ಬಿಜೆಪಿ ಸರ್ಕಾರದಲ್ಲಿ ಗಡಿ ನಾಡು ಬೆಳಗಾವಿ ಜಿಲ್ಲೆಗೆ ಹೆಚ್ಚಿನ ‘ರಾಜಕೀಯ ಪ್ರಾತಿನಿಧ್ಯ’ ದೊರೆತಿದ್ದು, ಫೆ.6ರಂದು ನಡೆಯಲಿರುವ ಸಚಿವ ಸಂಪುಟ ವಿಸ್ತರಣೆ ವೇಳೆ ಮತ್ತೆ ಯಾರ‍್ಯಾರಿಗೆ ಸಚಿವ ಸ್ಥಾನ ಸಿಗಲಿದೆ ಎನ್ನುವ ಕುತೂಹಲ ಮೂಡಿದೆ.

‘ಇತ್ತೀಚೆಗೆ ನಡೆದ ಉಪ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಗೆದ್ದಿರುವ ಮೂವರಿಗೂ (ಗೋಕಾಕ–ರಮೇಶ ಜಾರಕಿಹೊಳಿ, ಅಥಣಿ–ಮಹೇಶ ಕುಮಠಳ್ಳಿ, ಕಾಗವಾಡ– ಶ್ರೀಮಂತ ಪಾಟೀಲ) ಸಚಿವ ಸ್ಥಾನ ದೊರೆಯಲಿದೆ. ಅವರೊಂದಿಗೆ ಹಿರಿಯ ಶಾಸಕ ಉಮೇಶ ಕತ್ತಿ ಅವರನ್ನೂ ಮಂತ್ರಿ ಮಾಡಲಾಗುವುದು’ ಎಂದು ಸ್ವತಃ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೇ ಹೇಳಿದ್ದಾರೆ. ಹೀಗಾಗಿ, ಜಿಲ್ಲೆಗೆ ‘ಬಂಪರ್’ ಅವಕಾಶ’ದ ನಿರೀಕ್ಷೆ ಇದೆ. ಹೆಚ್ಚಿನ ರಾಜಕೀಯ ಪ್ರಾತಿನಿಧ್ಯ ಸಿಗುವುದರಿಂದ, ಈ ಭಾಗದ ಅಭಿವೃದ್ಧಿ ಸಾಧ್ಯವಾಗುವುದೇ ಎನ್ನುವ ಆಸೆಗಣ್ಣಿನಲ್ಲಿ ಜನರಿದ್ದಾರೆ.

ಕೆಲವು ಜಿಲ್ಲೆಗಳಿಗೆ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯವೇ ದೊರೆತಿಲ್ಲ. ಹೀಗಿರುವಾಗ ಬೆಳಗಾವಿಗೆ ಆದ್ಯತೆ ದೊರೆತಿರುವುದು ಸಹಜವಾಗಿಯೇ ಇಲ್ಲಿನವರ ಸಂತಸಕ್ಕೆ ಕಾರಣವಾಗಿದೆ.

ಉಪ ಮುಖ್ಯಮಂತ್ರಿ ಸ್ಥಾನದಿಂದ ಹಿಡಿದು:

ಇದೇ ಮೊದಲಿಗೆ ಜಿಲ್ಲೆಗೆ ಉಪ ಮುಖ್ಯಮಂತ್ರಿ ಸ್ಥಾನ ಸಿಕ್ಕಿದೆ. ಲಕ್ಷ್ಮಣ ಸವದಿ ಆ ಹುದ್ದೆ ಗಿಟ್ಟಿಸಿದ್ದಾರೆ. ಅವರಿಗೆ ಸಾರಿಗೆ ಹಾಗೂ ಕೃಷಿ ಖಾತೆ ನೀಡಲಾಗಿದೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಅಥಣಿ ಮತಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದ ಅವರಿಗೆ ಬಿಜೆಪಿ ಪಕ್ಷ ದೊಡ್ಡ ಹುದ್ದೆಯನ್ನೇ ನೀಡಿದೆ. ಬಳ್ಳಾರಿ ಜಿಲ್ಲೆಯ ಉಸ್ತುವಾರಿಯನ್ನೂ ವಹಿಸಲಾಗಿದೆ. ವಿಧಾನಪರಿಷತ್‌ ಉಪ ಚುನಾವಣೆಗೂ ಅವರಿಗೆ ಟಿಕೆಟ್‌ ಸಿಕ್ಕಿದೆ. ಅವರ ಗೆಲುವು ಬಹುತೇಕ ಖಚಿತವಾಗಿದೆ ಎನ್ನಲಾಗುತ್ತಿದೆ. ಅಲ್ಲದೇ, ಅವರ ಡಿಸಿಎಂ ಹುದ್ದೆಯೂ ಮುಂದುವರಿಯಲಿದೆ ಎಂದು ಮುಖ್ಯಮಂತ್ರಿಯೇ ಘೋಷಿಸಿದ್ದಾರೆ.

ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಮಹಿಳಾ ಮತ್ತು ಮಕ್ಕಳ ಕಲ್ಯಾಣದೊಂದಿಗೆ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆಯನ್ನೂ ವಹಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಕೊಡಲಾಗಿದೆ. ವಿಧಾನಪರಿಷತ್‌ ಸದಸ್ಯ ಮಹಾಂತೇಶ ಕವಟಗಿಮಠ ಅವರನ್ನು ಸರ್ಕಾರದ ಮುಖ್ಯಸಚೇತಕರನ್ನಾಗಿ ಮಾಡಲಾಗಿದೆ.

ಹಲವು ನಿಗಮಗಳಿಗೆ: ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಕರ್ನಾಟಕ ಹಾಲು ಒಕ್ಕೂಟದ ಅಧ್ಯಕ್ಷ (ಕೆಎಂಎಫ್‌)ರಾಗಿದ್ದಾರೆ. ಅವರ ಸಹೋದರ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಪುತ್ರ ಅಮರನಾಥ ಜಾರಕಿಹೊಳಿ ಕೆಎಂಎಫ್‌ ನಿರ್ದೇಶಕರಾಗಿದ್ದಾರೆ.

ಶಂಕರಗೌಡ ಪಾಟೀಲ ಅವರಿಗೆ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಹುದ್ದೆ ಸಿಕ್ಕಿದೆ. ಕುಡಚಿ ಶಾಸಕ ಪಿ. ರಾಜೀವ ಅವರಿಗೆ ತಾಂಡಾ ಅಭಿವೃದ್ಧಿ ನಿಗದಮ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಖ್ತಾರಹುಸೇನ ಫ.ಪಠಾಣ ಕೂಡ ಬೆಳಗಾವಿಯವರು.

ಇನ್ನೂ ಹಲವು ನಿಗಮ, ಮಂಡಳಿಗಳು ಖಾಲಿ ಇವೆ. ಅವುಗಳ ನೇಮಕಾತಿ ಸಂದರ್ಭದಲ್ಲೂ ಜಿಲ್ಲೆಯ ಬಿಜೆಪಿಯ ಜನಪ್ರತಿನಿಧಿಗಳು ಹಾಗೂ ಹಿರಿಯ ಕಾರ್ಯಕರ್ತರಿಗೆ ಅವಕಾಶ ದೊರೆಯುವ ಸಾಧ್ಯತೆ ಇದೆ.

ಕೇಂದ್ರದಲ್ಲಿ ಸಂಸದ ಸುರೇಶ ಅಂಗಡಿ ಅವರಿಗೆ ಮಹತ್ವದ ರೈಲ್ವೆ ಖಾತೆ ರಾಜ್ಯ ಸಚಿವ ಹುದ್ದೆ ದೊರೆತಿದೆ. ಪ್ರಭಾಕರ ಕೋರೆ ಅವರಿಗೆ ರಾಜ್ಯಸಭಾ ಸದಸ್ಯ ಸ್ಥಾನ ಸಿಕ್ಕಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು