ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2030ಕ್ಕೆ ವಿಜ್ಞಾನ ಸಂಶೋಧನೆಯಲ್ಲಿ ಭಾರತ 2ನೇ ಸ್ಥಾನ ಪಡೆಯಲಿದೆ: ಹರ್ಷವರ್ಧನ್

Last Updated 3 ಜನವರಿ 2020, 5:45 IST
ಅಕ್ಷರ ಗಾತ್ರ

ಬೆಂಗಳೂರು: ‘ವಿಜ್ಞಾನ ಸಂಶೋಧನಾ ವರದಿಗಳ ಪ್ರಕಟಣೆಯಲ್ಲಿ 2030ರ ವೇಳೆಗೆ ಭಾರತ ಈಗಿರುವ ಆರನೇ ಸ್ಥಾನದಿಂದ ಎರಡು ಅಥವಾ ಮೂರನೇ ಸ್ಥಾನಕ್ಕೆ ಏರಲಿದ್ದು, ಮುಂದಿನ ದಶಕ ವಿಜ್ಞಾನದ ದಶಕವಾಗಿರಲಿದೆ’ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಹರ್ಷವರ್ಧನ ತಿಳಿಸಿದರು.

ಇಲ್ಲಿನ ಜಿಕೆವಿಕೆ ಆವರಣದಲ್ಲಿ ನಡೆಯುತ್ತಿರುವ ರೈತ ವಿಜ್ಞಾನ ಕಾಂಗ್ರೆಸ್‌ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ಇತ್ತೀಚೆಗೆ ಅಮೆರಿಕದ ರಾಷ್ಟ್ರೀಯ ವಿಜ್ಞಾನ ಪ್ರತಿಷ್ಠಾನವು ಭಾರತ 3ನೇ ಸ್ಥಾನ ಪಡೆದಿದೆ ಎಂದು ಘೋಷಿಸಿದೆ. ಪರಿಸರ, ಕೃಷಿ ಅಥವಾ ಯಾವುದೇ ಕ್ಷೇತ್ರವಿರಲಿ ವಿಜ್ಞಾನಿಗಳು ದೇಶಕ್ಕೆ ಅತ್ಯಗತ್ಯ ಎಂದು ಪ್ರಧಾನಿ ಹೇಳುತ್ತಿರುತ್ತಾರೆ. ಅಲ್ಲದೆ ಅವರು ಎಲ್ಲ ಕ್ಷೇತ್ರಗಳಿಗೂ ಗುರಿಗಳನ್ನು ನಿಗದಿಪಡಿಸಿ, ಅದಕ್ಕೆ ಅನುಗುಣವಾಗಿ ನೀತಿ ರೂಪಿಸುತ್ತಾರೆ. ಎಲ್ಲರನ್ನೂ ಭಾಗಿದಾರರನ್ನಾಗಿ ಮಾಡಿ ಅನುಷ್ಠಾನಕ್ಕೆ ತರಲು ಶ್ರಮಿಸುತ್ತಾರೆ’ ಎಂದರು.

‘2022ರ ವೇಳೆಗೆ ಹೊಸ ಭಾರತ ರೂಪಿಸಬೇಕು, 2024–25ರವೇಳೆಗೆ 5 ಟ್ರಿಲಿಯನ್ ಡಾಲರ್ ಅರ್ಥವ್ಯವಸ್ಥೆ ಆಗಬೇಕು ಎಂಬುದು ಮೋದಿ ಅವರ ಕನಸಾಗಿದೆ’ ಎಂದು ಹೇಳಿದರು.

‘1947ರಿಂದ ಪ್ರತಿ ವರ್ಷದ ಶುರುವಿನಲ್ಲಿ ನಡೆಯುವ ಈ ವಿಜ್ಞಾನ ಕಾಂಗ್ರೆಸ್‌ ಸಮಾವೇಶ ಪ್ರಧಾನಿ ಆಶೀರ್ವಾದಿಂದ ಪ್ರಾರಂಭವಾಗುತ್ತದೆ. ಜವಾಹರಲಾಲ್ ನೆಹರು ಅವರಿಂದ ನರೇಂದ್ರ ಮೋದಿವರೆಗೆ ಎಲ್ಲ ಪ್ರಧಾನಿಗಳು ಇದರಲ್ಲಿ ಭಾಗಿಯಾಗಿದ್ದಾರೆ’ ಎಂದು ವಿವರಿಸಿದರು.

‘ಸಂಶೋಧನೆ ಗುಣಮಟ್ಟ ವೃದ್ಧಿಗೆ ನಮ್ಮ ಸಚಿವಾಲಯ ಶ್ರಮಿಸುತ್ತಿದೆ. ವಿಶ್ವದ ಪ್ರತಿಭಾವಂತ ವಿಜ್ಞಾನಿಗಳನ್ನು ಭಾರತಕ್ಕೆ ಕರೆಸಲು ಯತ್ನಿಸುತ್ತಿದ್ದೇವೆ. ಸಂಶೋಧನೆಗಳು ಜನಸಾಮಾನ್ಯರ ಬಳಕೆಗೆ ದೊರೆಯಬೇಕೆಂದು ಶ್ರಮಿಸುತ್ತಿದ್ದೇವೆ’ ಎಂದರು.

‘2015ರಲ್ಲಿ ನಡೆದ ಈ ಸಮಾವೇಶದಲ್ಲಿ ಪ್ರಧಾನಿ ಮೋದಿ ಅವರು ವೈಜ್ಞಾನಿಕ ಸಾಮಾಜಿಕ ಜವಾಬ್ದಾರಿ ಬಗ್ಗೆ ಹೇಳಿದ್ದರು. ಅದನ್ನು ಸಾಕಾರಗೊಳಿಸುವ ಬಗ್ಗೆ ನಮ್ಮ ವಿಜ್ಞಾನಿಗಳು ಕಾರ್ಯಪ್ರವೃತ್ತರಾಗಿದ್ದಾರೆ. ವಿಜ್ಞಾನ ಕ್ಷೇತ್ರದಿಂದ ಎಲ್ಲರನ್ನು ತಲುಪುವ ಪ್ರಯತ್ನ ನಡೆಯುತ್ತಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT