ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪುಟ ವಿಸ್ತರಣೆ: ಕಾಂಗ್ರೆಸ್ ಹೈಕಮಾಂಡ್ ಹೆಗಲಿಗೆ ಹೊಣೆ

ದೆಹಲಿಯತ್ತ ದೃಷ್ಟಿ ನೆಟ್ಟ ಸಚಿವ ಸ್ಥಾನ ಆಕಾಂಕ್ಷಿಗಳು
Last Updated 2 ಅಕ್ಟೋಬರ್ 2018, 20:01 IST
ಅಕ್ಷರ ಗಾತ್ರ

ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಚಿವ ಸಂಪುಟ ವಿಸ್ತರಣೆಯ ಚೆಂಡು ಕಾಂಗ್ರೆಸ್ ಹೈಕಮಾಂಡ್ ಅಂಗಳದಲ್ಲಿದ್ದು, ಸಂಪುಟ ಸೇರಲು ಉತ್ಸುಕರಾಗಿರುವವರು ದೆಹಲಿಯತ್ತ ದೃಷ್ಟಿ ಹರಿಸಿದ್ದಾರೆ.

ಇದೇ ತಿಂಗಳು 10 ಅಥವಾ 12ರಂದು ಸಂಪುಟ ವಿಸ್ತರಣೆಯಾಗಲಿದೆ ಎಂದು ಮುಖ್ಯಮಂತ್ರಿ ಸ್ಪಷ್ಟ ಮಾತುಗಳಲ್ಲಿ ಹೇಳಿದ್ದರು. ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಸಿದ್ದರಾಮಯ್ಯ ಅವರು ಇದೇ ಧಾಟಿಯಲ್ಲಿ ಮಾತನಾಡಿದ್ದರು. ಈ ಬೆಳವಣಿಗೆಗಳ ಬೆನ್ನಲ್ಲೇ ಸಂಪುಟ ಸೇರಲು ಉತ್ಸುಕರಾಗಿರುವವರು ತಮ್ಮದೇ ಪ್ರಭಾವ ಬಳಸಲು ತಯಾರಿ ನಡೆಸಿದ್ದಾರೆ.

ಪಕ್ಷದಲ್ಲಿ ಕುದಿಯುತ್ತಿರುವ ಅಸಮಾಧಾನ, ಅತೃಪ್ತಿಯ ಬೇಗೆಗೆ ಸಂಪುಟ ವಿಸ್ತರಣೆ ಮದ್ದಾಗುವುದು ಅನುಮಾನ. ಅದು ಇನ್ನಷ್ಟು ಪ್ರಖರಗೊಂಡು, ಸಮ್ಮಿಶ್ರ ಸರ್ಕಾರದ ಅಡಿಗಲ್ಲನ್ನೇ ಅಲ್ಲಾಡಿಸಬಹುದು ಎಂಬ ಆತಂಕದಲ್ಲಿರುವ ಕಾಂಗ್ರೆಸ್ ಹೈಕಮಾಂಡ್‌, ವಿಸ್ತರಣೆಗೆ ಒಪ್ಪಿಗೆ ಕೊಡುವ ಸಾಧ್ಯತೆ ಕಡಿಮೆ ಎಂದು ಪಕ್ಷದ ಮೂಲಗಳು ಹೇಳಿವೆ.

ಲೋಕಸಭೆ ಚುನಾವಣೆ ಮುಗಿಯುವವರೆಗಾದರೂ ಸಮ್ಮಿಶ್ರ ಸರ್ಕಾರವನ್ನು ಭದ್ರವಾಗಿ ಉಳಿಸಿಕೊಳ್ಳಬೇಕು ಎಂಬುದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆಶಯ. ಸಂಪುಟದಲ್ಲಿ ಖಾಲಿ ಇರುವ 7 ಸ್ಥಾನಗಳ ಪೈಕಿ 6 ಸ್ಥಾನಗಳು ಮಾತ್ರ ಕಾಂಗ್ರೆಸ್ ಪಾಲಿಗೆ ಸಿಗಲಿವೆ. ಹಿರಿಯರು, ಕಿರಿಯರು, ವಲಸಿಗರು ಸೇರಿ 22 ಕ್ಕೂ ಶಾಸಕರು ಸಂಪುಟ ಸೇರಲು ತುದಿಗಾಲಲ್ಲಿ ಇದ್ದಾರೆ. ಜಾತಿವಾರು, ಪ್ರದೇಶವಾರು ಪ್ರಾತಿನಿಧ್ಯವನ್ನೂ ನೀಡಬೇಕು. ಇದರ ಜತೆಗೆ ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಜಿ. ಪರಮೇಶ್ವರ, ಡಿ.ಕೆ. ಶಿವಕುಮಾರ್, ದಿನೇಶ್‌ ಗುಂಡೂರಾವ್‌ ಅವರ ಅಭಿಪ್ರಾಯಕ್ಕೂ ಮನ್ನಣೆ ನೀಡಬೇಕಾಗುತ್ತದೆ. ಹೀಗಾದಲ್ಲಿ ಅತೃಪ್ತರ ಸಂಖ್ಯೆ ಹೆಚ್ಚಿ ಬಂಡಾಯ ಉಲ್ಬಣವಾಗಲು ದಾರಿ ಮಾಡಿಕೊಡುತ್ತದೆ ವಿನಾ, ಆಕ್ರೋಶ ಶಮನಕ್ಕೆ ಪರಿಹಾರವಾಗದು. ಈ ಲೆಕ್ಕಾಚಾರ ಹೈಕಮಾಂಡ್‌ ನಾಯಕರದ್ದಾಗಿದೆ.

ಆದರೆ, ಶಾಸಕರ ಅತೃಪ್ತಿ ಶಮನಗೊಂಡು ಸಮ್ಮಿಶ್ರ ಸರ್ಕಾರ ಸುಸ್ಥಿರವಾಗಿ ಮುಂದುವರಿಯಬೇಕಾದರೆ ಸಚಿವ ಸ್ಥಾನ ಹಾಗೂ ನಿಗಮ, ಮಂಡಳಿಗಳ ಅಧ್ಯಕ್ಷರನ್ನು ನೇಮಕ ಮಾಡಬೇಕು. ವಿಸ್ತರಣೆಯನ್ನು ಲೋಕಸಭೆ ಚುನಾವಣೆವರೆಗೆ ಮುಂದುವರಿಸಿದರೆ ತಿಂಗಳ ಹಿಂದೊಮ್ಮೆ ಬಿಜೆಪಿ ಕಡೆಗೆ ವಾಲಿದ್ದ ಶಾಸಕರನ್ನು ಮತ್ತೆ ಸೆಳೆಯಲು ಆ ಪಕ್ಷದ ನಾಯಕರು ಯತ್ನಿಸಬಹುದು. ಸರ್ಕಾರ ಅಸ್ಥಿರಗೊಳಿಸುವ ಯತ್ನಕ್ಕೆ ಚಾಲನೆ ನೀಡಬಹುದು. ಈ ಆತಂಕ ತಪ್ಪಬೇಕಾದರೆ ಇನ್ನೂ ಬಿಜೆಪಿ ನಾಯಕರ ಸಂಪರ್ಕದಲ್ಲಿದ್ದಾರೆ ಎಂದು ಹೇಳಲಾಗುತ್ತಿರುವ ಶಾಸಕರಿಗೆ ಸಚಿವ ಅಥವಾ ಆಯಕಟ್ಟಿನ ನಿಗಮ, ಮಂಡಳಿಯ ಅಧ್ಯಕ್ಷ ಸ್ಥಾನ ಕೊಡುವುದು ಸೂಕ್ತ ಎಂಬುದು ರಾಜ್ಯ ನಾಯಕರ ನಿಲುವು ಎಂದು ಮೂಲಗಳು ತಿಳಿಸಿವೆ.

ಇದೇ ಪ್ರಸ್ತಾವನೆಯನ್ನು ಹೈಕಮಾಂಡ್ ಮುಂದಿಡಲು ನಿರ್ಧರಿಸಲಾಗಿದೆ. ಒಂದು ವೇಳೆ ವರಿಷ್ಠರು ಒಪ್ಪಿದರೆ ಸಂಪುಟ ವಿಸ್ತರಣೆಯಾಗಲಿದೆ ಎಂದೂ ಮೂಲಗಳು ಹೇಳಿವೆ.

ದೆಹಲಿ ಯಾತ್ರೆ ಇಂದು ತೀರ್ಮಾನ: ಮಹಾರಾಷ್ಟ್ರದ ವಾರ್ದಾದಲ್ಲಿ ಮಂಗಳವಾರ ನಡೆದ ಎಐಸಿಸಿ ಕಾರ್ಯಕಾರಿಣಿಯಲ್ಲಿ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯಿಲಿ, ಕೆ.ಎಚ್. ಮುನಿಯಪ್ಪ ಪಾಲ್ಗೊಂಡಿದ್ದರು. ಈ ವೇಳೆ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ವಿಚಾರ ವಿನಿಮಯ ಮಾಡಿದ್ದಾರೆ. ಆದರೆ, ಯಾವುದೇ ತೀರ್ಮಾನಕ್ಕೆ ಬಂದಿಲ್ಲ.

ಈಗಿನ ಲೆಕ್ಕಾಚಾರದಂತೆ ಇದೇ 6ರಂದು ರಾಜ್ಯ ನಾಯಕರು ದೆಹಲಿಗೆ ತೆರಳಬೇಕಾಗಿದೆ. ದಿನೇಶ್ ಗುಂಡೂರಾವ್ ಅವರು ಕುಟುಂಬ ಸಮೇತ ಲಂಡನ್ ಪ್ರವಾಸದಲ್ಲಿದ್ದಾರೆ. ಅವರು ಬುಧವಾರ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ. ಸಂಪುಟ ವಿಸ್ತರಣೆ ಸಂಬಂಧ ಸಿದ್ದರಾಮಯ್ಯ ಅವರು ದಿನೇಶ್ ಜೊತೆ ಇನ್ನೊಂದು ಸುತ್ತಿನ ಚರ್ಚೆ ನಡೆಸಿದ ಬಳಿಕವಷ್ಟೇ ದೆಹಲಿಗೆ ಹೋಗಬೇಕೋ ಬೇಡವೋ ಎಂಬುದು ನಿರ್ಧಾರವಾಗಲಿದೆ.

ಸಂ‍ಪುಟ ವಿಸ್ತರಣೆ ಅನುಮಾನ?

ಲೋಕಸಭೆ ಚುನಾವಣೆ ಮುಗಿಯವವರೆಗೂ ಸಂಪುಟ ವಿಸ್ತರಣೆ ನಡೆಯುವುದೇ ಅನುಮಾನ ಎಂಬ ಚರ್ಚೆ ಮೈತ್ರಿ ಪಕ್ಷದ ಪಡಸಾಲೆಯಲ್ಲಿ ದಟ್ಟವಾಗಿದೆ.

ಮುಖ್ಯಮಂತ್ರಿ ಮತ್ತು ಸಮನ್ವಯ ಸಮಿತಿ ಅಧ್ಯಕ್ಷರು ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ಆದರೆ, ವಿಸ್ತರಣೆಯಾದರೆ ಅತೃಪ್ತಿಯ ಬೇಗುದಿ ಹೆಚ್ಚಲಿದೆ ಎಂಬ ಆತಂಕ ಇದೆ. ಅತೃಪ್ತರಲ್ಲಿ ಆಸೆ ಹುಟ್ಟಿಸಿ ಅವರನ್ನು ತಣ್ಣಗಾಗಿಸುವುದಷ್ಟೇ ಇದರ ಹಿಂದಿನ ತಂತ್ರ ಎಂದು ಸರ್ಕಾರದ ಉನ್ನತ ಸ್ಥಾನದಲ್ಲಿರುವ ನಾಯಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT