ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

18ಕ್ಕೇರಿತು ಸಂಪುಟ ಸಂಖ್ಯೆ: ಅತೃಪ್ತಿ ಸ್ಫೋಟ

ಕತ್ತಿ, ತಿಪ್ಪಾರೆಡ್ಡಿ ಬೆಂಬಲಿಗರಿಂದ ಪ್ರತಿಭಟನೆ: ನಾಯಕರ ವಿರುದ್ಧವೇ ಕಿಡಿಕಾರಿದ ಅಪ್ಪಚ್ಚು, ಗೂಳಿಹಟ್ಟಿ
Last Updated 20 ಆಗಸ್ಟ್ 2019, 20:15 IST
ಅಕ್ಷರ ಗಾತ್ರ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಸಂಪುಟಕ್ಕೆ 17 ಸಚಿವರು ಸೇರಿಕೊಂಡ ಬೆನ್ನಲ್ಲೇ, ಮಂತ್ರಿಗಿರಿ ಕೈತಪ್ಪಿದ ಶಾಸಕರು ಹಾಗೂ ಅವರ ಬೆಂಬಲಿಗರ ಅತೃಪ್ತಿ ಸ್ಫೋಟಗೊಂಡಿದೆ.

25 ದಿನಗಳಷ್ಟು ಸುದೀರ್ಘ ಅವಧಿ ಅಳೆದು ತೂಗಿದ ಬಿಜೆಪಿ ವರಿಷ್ಠರು ಸಚಿವ ಸಂಪುಟದಲ್ಲಿ ಯಾರು ಇರಬೇಕು ಎಂಬ ಪಟ್ಟಿಯನ್ನು ಸೋಮವಾರ ತಡರಾತ್ರಿ ಬೆಂಗಳೂರಿಗೆ ತಲುಪಿಸಿದರು. ಪ‍ಟ್ಟಿ ಹೊರಬೀಳುತ್ತಿದ್ದಂತೆಸಂಪುಟ ಸೇರುವ ನಿರೀಕ್ಷೆಯಲ್ಲಿದ್ದ ಹಿರಿಯರು–ಕಿರಿಯರು ತಮ್ಮ ಅಸಮಾಧಾನವನ್ನು ಹೊರಹಾಕಿದರು.

ಚಿತ್ರದುರ್ಗದಲ್ಲಿ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಹಾಗೂ ಹುಕ್ಕೇರಿಯಲ್ಲಿ ಶಾಸಕ ಉಮೇಶ ಕತ್ತಿ ಬೆಂಬಲಿಗರು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಚಿತ್ರದುರ್ಗದಲ್ಲಿ ಪ್ರತಿಭಟನಾ ನಿರತರ ಸಿಟ್ಟು ತಣಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಬೇಕಾದ ಅನಿವಾರ್ಯವೂ ಸೃಷ್ಟಿಯಾಗಿತ್ತು.

ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಉಮೇಶ ಕತ್ತಿ, ‘ನನ್ನಂತ ಹಿರಿಯರನ್ನು ಕಡೆಗಣಿಸಲಾಗಿದೆ’ ಎಂದು ತಮ್ಮ ಅಸಹನೆ ಹೊರಹಾಕಿದರು.

ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಸಚಿವರಾಗುವ ಅವಕಾಶವನ್ನು ಕೊನೆಗಳಿಗೆಯಲ್ಲಿ ಕಳೆದುಕೊಂಡಿದ್ದ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ‘ಎಲ್ಲಾ ಚುನಾವಣೆಗಳಲ್ಲೂ ಬಿಜೆಪಿಯ ಗೆಲುವಿಗೆ ಶ್ರಮಿಸಿದ್ದೇನೆ. ಲಾಬಿ ಮಾಡಿ ಸಚಿವ ಸ್ಥಾನ ಪಡೆಯುವುದು ಗೊತ್ತಿಲ್ಲ. ಸಚಿವ‌ ಸ್ಥಾನ ಸಿಗದ ಕುರಿತು ಬಿಜೆಪಿ ನಾಯಕರನ್ನೇ ಕೇಳಿ’ ತಮ್ಮ ದುಗುಡವನ್ನು ಪ್ರದರ್ಶಿಸಿದರೆ, ‘ತತ್ವ ಸಿದ್ಧಾಂತಕ್ಕೆ ಬೆಲೆ ಇಲ್ಲ ಎಂದಾದರೆ ಏನು ಮಾಡುವುದು’ ಎಂದು ಹಿರಿಯ ಶಾಸಕ ಸುಳ್ಯದ ಎಸ್. ಅಂಗಾರ ತಮ್ಮ ನೋವು ಹೊರಹಾಕಿದರು.

ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್‌, ‘ಹಿಂದೆ ಬಿಜೆಪಿ ಸರ್ಕಾರ ಇದ್ದಾಗಲೂ ನನಗೆ ಅನ್ಯಾಯವಾಗಿತ್ತು. ಈಗ ಅದು ಮತ್ತೆ ಮರುಕಳಿಸಿದೆ. ಬಿಜೆಪಿಗೆ ಹೋಗಿ ನಾನು ತಪ್ಪು ಮಾಡಿದೆ ಅನ್ನಿಸುತ್ತಿದೆ. ಯಡಿಯೂರಪ್ಪ ನಂಬಿದ್ದಕ್ಕೆ ಹೀಗಾಯಿತು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್‌, ‘ನನಗೆ ಸಚಿವ ಸ್ಥಾನ ತಪ್ಪಿರುವುದು ಕೊಡವರಿಗೆ ಮಾಡಿದ ಅವಮಾನ. ಪ್ರಾಮಾಣಿಕರು ಹಾಗೂ ಪಕ್ಷ ನಿಷ್ಠರನ್ನು ಕಡೆಗಣಿಸಲಾಗಿದೆ. ಬಿಜೆಪಿಯನ್ನು ಯಾವತ್ತೂ ಬೆಂಬಲಿಸುವ ಕೊಡವರಿಗೆ ಪ್ರಾತಿನಿಧ್ಯ ನೀಡದಿರುವುದು ಸರಿಯಲ್ಲ’ ಎಂದು ಕಿಡಿಕಾರಿದರು.

ಸಚಿವ ಸ್ಥಾನ ಕೈತಪ್ಪಿದ ಶಾಸಕರ ಪೈಕಿ ಕೆಲವರು ಸಭೆ ಸೇರಿ ಮುಂದಿನ ನಡೆ ಬಗ್ಗೆ ಚರ್ಚೆ ನಡೆಸಿದರು. ದಕ್ಷಿಣ ಕನ್ನಡ, ಬಾಗಲಕೋಟೆ ಹಾಗೂ ಚಿತ್ರದುರ್ಗ ಪ್ರತಿನಿಧಿಸುವ ಬಿಜೆಪಿ ಶಾಸಕರು ಸದ್ಯವೇ ಸಭೆ ಸೇರಿ ಚರ್ಚೆ ನಡೆಸುವುದಾಗಿ, ತಮ್ಮ ನೋವನ್ನು ವರಿಷ್ಠರಿಗೆ ಮನವರಿಕೆ ಮಾಡಿಕೊಡುವುದಾಗಿ ಹೇಳಿಕೊಂಡಿದ್ದಾರೆ.

ಅನರ್ಹಗೊಂಡಿರುವ ಶಾಸಕ ರಮೇಶ ಜಾರಕಿ ಹೊಳಿ ಭೇಟಿ ಮಾಡಿದ ಅವರ ತಮ್ಮ ಬಿಜೆಪಿಯ ಬಾಲಚಂದ್ರ ಜಾರಕಿಹೊಳಿ ಕೆಲಹೊತ್ತು ಚರ್ಚೆ ನಡೆಸಿದರು. ಉಮೇಶ ಕತ್ತಿ ಅವರನ್ನು ಬಿಟ್ಟು ಲಕ್ಷ್ಮಣ ಸವದಿ ಅವರಿಗೆ ಸಚಿವ ಸ್ಥಾನ ನೀಡಿರುವುದು ಸರಿಯಲ್ಲ ಎಂದು ಇಬ್ಬರು ಸಹೋದರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಈ ಬೆಳವಣಿಗೆ ಬೆನ್ನಲ್ಲೇ, ಬಾಲಚಂದ್ರ ಅವರನ್ನು ಕರೆಯಿಸಿಕೊಂಡ ಯಡಿಯೂರಪ್ಪ ಅವರು, ರಾಜಕೀಯ ಪರಿಸ್ಥಿತಿಯನ್ನು ವಿವರಿಸಿ ಮನವರಿಕೆ ಮಾಡಿಕೊಟ್ಟರು. ಅಲ್ಲದೇ, ಕತ್ತಿ ಅವರನ್ನು ಸಮಾಧಾನ ಪಡಿಸುವ ಜವಾಬ್ದಾರಿಯನ್ನು ಬಾಲಚಂದ್ರ ಅವರಿಗೆ ನೀಡಿದರು ಎಂದು ಮೂಲಗಳು ವಿವರಿಸಿವೆ.

ಯಡಿಯೂರಪ್ಪ ಮೇಲುಗೈ

ವರಿಷ್ಠರ ಅನುಮೋದಿತ ಪಟ್ಟಿ ಅನ್ವಯವೇ ಸಂಪುಟ ವಿಸ್ತರಣೆ ನಡೆದಿದ್ದರೂ ಸಚಿವರಾಗಿರುವ ಪೈಕಿ ಬಹುತೇಕರು ಯಡಿಯೂರಪ್ಪನವರ ಬೆಂಬಲಿಗರೇ ಆಗಿರುವುದು ವಿಶೇಷ. ಯಡಿಯೂರಪ್ಪನವರು ವರಿಷ್ಠರಿಗೆ ಸಲ್ಲಿಸಿದ್ದ ಪಟ್ಟಿಯಲ್ಲಿದ್ದ ಕೆಲವರ ಹೆಸರು ಕೈ ಬಿಟ್ಟು ಹೋಗಿದೆ. ಆದರೆ, ಪಟ್ಟಿಗೆ ಹೊಸದಾಗಿ ಸೇರ್ಪಡೆಯಾದವರು ಅವರ ವಿರೋಧಿಗಳೇನಲ್ಲ ಎಂಬ ಚರ್ಚೆ ಬಿಜೆಪಿ ಪಡಸಾಲೆಯಲ್ಲಿ ನಡೆಯುತ್ತಿದೆ.

ಸಿ.ಟಿ. ರವಿ, ಎಸ್‌. ಸುರೇಶಕುಮಾರ್‌, ಲಕ್ಷ್ಮಣ ಸವದಿ ಅವರ ಹೆಸರುಗಳು ಯಡಿಯೂರಪ್ಪ ಅವರ ಪಟ್ಟಿಯಲ್ಲಿ ಇರಲಿಲ್ಲ. ಅವರ ಬದಲು ಉಮೇಶ ಕತ್ತಿ, ಬಸನಗೌಡ ಪಾಟೀಲ ಯತ್ನಾಳ, ಎಸ್.ಎ. ರಾಮದಾಸ್‌, ರೇಣುಕಾಚಾರ್ಯ, ಹಾಲಾಡಿ ಶ್ರೀನಿವಾಸ ಶೆಟ್ಟಿ, ಎಸ್. ಅಂಗಾರ ಅವರ ಹೆಸರುಗಳು ಇದ್ದವು. ಆದರೆ, ಅವೆಲ್ಲವೂ ಬದಲಾಗಿ ಹೊಸಬರು ಸೇರ್ಪಡೆಯಾದರು ಎಂದು ಬಿಜೆಪಿ ಮೂಲಗಳು ಹೇಳಿವೆ.

ಅಲ್ಪಸಂಖ್ಯಾತರಿಲ್ಲ: ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಕ್ರೈಸ್ತ, ಮುಸ್ಲಿಂ, ಜೈನ ಹೀಗೆ ಯಾವುದೇ ಅಲ್ಪಸಂಖ್ಯಾತ ಸಮುದಾಯದ ಸಚಿವರಿಲ್ಲದ ಸಂಪುಟ ಅಸ್ತಿತ್ವಕ್ಕೆ ಬಂದಿದೆ. ಹಿಂದೆ ಬಿಜೆಪಿ ಸರ್ಕಾರ ಇದ್ದಾಗ, ಮುಮ್ತಾಜ್‌ ಅಲಿಖಾನ್ ಸಚಿವರಾಗಿದ್ದರು. ಕಾಂಗ್ರೆಸ್‌ ಹಾಗೂ ಮೈತ್ರಿ ಸರ್ಕಾರ ಇದ್ದಾಗ ಮುಸ್ಲಿಂ, ಕ್ರೈಸ್ತ ಸಮುದಾಯಕ್ಕೆ ಹೆಚ್ಚಿನ ಅವಕಾಶ ಸಿಕ್ಕಿತ್ತು.

ಲಕ್ಷ್ಮಣ ಸವದಿ ಅದೃಷ್ಟದ ಗುಟ್ಟು?

ಚುನಾವಣೆಯಲ್ಲಿ ಸೋಲುಕಂಡಿದ್ದ ಲಕ್ಷ್ಮಣ ಸವದಿ ಅವರು ಸಚಿವರಾಗಿದ್ದು ಹೇಗೆ ಎಂಬ ಚರ್ಚೆ ಬಿಜೆಪಿ ಪಡಸಾಲೆಯಲ್ಲಿ ನಡೆದಿದೆ. ಸವದಿ ಸಂಪುಟ ಸೇರಲಿದ್ದಾರೆ ಎಂಬ ವಿಷಯ ಸೋಮವಾರ ತಡರಾತ್ರಿವರೆಗೆ ಯಡಿಯೂರಪ್ಪಗೂ ಗೊತ್ತಿರಲಿಲ್ಲ .

ಬೆಳಗಾವಿಯಲ್ಲಿರುವ ಉಮೇಶ ಕತ್ತಿ ಹಾಗೂ ಜಾರಕಿಹೊಳಿ ‘ಸಾಮ್ರಾಜ್ಯ’ದ ಎದುರು ತಮ್ಮದೇ ಶಕ್ತಿ ಇರುವ ಸವದಿ, ‘ಒಳ’ ರಾಜಕಾರಣದಿಂದಾಗಿ 2018ರ ವಿಧಾನಸಭೆ ಚುನಾವಣೆಯಲ್ಲಿ ಅಥಣಿ ಕ್ಷೇತ್ರದಲ್ಲಿ ಸೋಲು ಕಂಡಿದ್ದರು. ಆದರೆ, ಸವದಿ ಪಕ್ಷ ನಿಷ್ಠೆಯೇ ಅವರನ್ನು ಸಚಿವ ಸ್ಥಾನಕ್ಕೇರಿಸಿತು. ‘ಪ್ರಬಲ ಸಾಮ್ರಾಜ್ಯ’ಕ್ಕೆ ಎದಿರೇಟು ಕೊಡುವುದು, ಅಥಣಿ ಹಾಗೂ ಕಾಗವಾಡ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸಿಕೊಂಡು ಬರುವ ಉದ್ದೇಶಕ್ಕೆ ಸವದಿಗೆ ಮಂತ್ರಿಗಿರಿ ಕೊಡಲು ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್‌ ಮುತುವರ್ಜಿ ತೋರಿದರು ಎಂದು ಬಿಜೆಪಿ ಮೂಲಗಳು ಹೇಳಿವೆ.

ಜಾರಕಿಹೊಳಿ ಕುಟುಂಬಕ್ಕೆ ಸಿಗದ ಅಧಿಕಾರ

ಯಾವುದೇ ಪಕ್ಷದ ಸರ್ಕಾರ ಇದ್ದರೂ ಬೆಳಗಾವಿಯ ಜಾರಕಿಹೊಳಿ ಕುಟುಂಬದ ಒಬ್ಬ ಶಾಸಕರಾದರೂ ಸಚಿವರಾಗಿ ಇರುತ್ತಿದ್ದುದು ಕಳೆದ 15 ವರ್ಷದ ರಾಜಕೀಯ ಇತಿಹಾಸದಲ್ಲಿ ಸಾಮಾನ್ಯವಾಗಿತ್ತು. ಇದೇ ಮೊದಲ ಬಾರಿಗೆ, ಈ ಕುಟುಂಬ ಇಲ್ಲದ ಸಚಿವ ಸಂಪುಟ ರಚನೆಯಾಗಿದೆ.

2004ರಿಂದ ಶುರುವಾಗಿದ್ದ ಈ ಪದ್ಧತಿ ಕುಮಾರಸ್ವಾಮಿ ಸರ್ಕಾರದವರೆಗೂ ಮುಂದುವರಿದಿತ್ತು. ಸಹೋದರರಾದ ಸತೀಶ, ಬಾಲಚಂದ್ರ ಹಾಗೂ ರಮೇಶ ಇವರ ಪೈಕಿ ಒಬ್ಬರಲ್ಲದಿದ್ದರೆ ಮತ್ತೊಬ್ಬರು ಸಚಿವರಾಗಿರುತ್ತಿದ್ದರು. ಕಾಂಗ್ರೆಸ್ ತೊರೆದು ಅನರ್ಹಗೊಂಡಿರುವ ರಮೇಶ ಜಾರಕಿಹೊಳಿಗೆ ಸಚಿವ ಸ್ಥಾನ ಮೀಸಲಿಡುವ ಕಾರಣಕ್ಕೆ ಈಗ ಅವಕಾಶ ಸಿಕ್ಕಿಲ್ಲ ಎನ್ನಲಾಗುತ್ತಿದೆ.

* ಇವನ್ನೂ ಓದಿ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT