ಹೈಕಮಾಂಡ್ ಸೂಚಿಸಿದ 24 ಗಂಟೆಯೊಳಗೆ ಸಚಿವ ಸಂಪುಟ ರಚನೆ: ಯಡಿಯೂರಪ್ಪ

ಬೆಂಗಳೂರು: ಇದೇ ತಿಂಗಳ 6, 7 ಮತ್ತು 8ರಂದು ದೆಹಲಿಯಲ್ಲಿ ಇರುತ್ತೇನೆ. ಈ ಸಂದರ್ಭ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಚರ್ಚಿಸುತ್ತೇನೆ. ವರಿಷ್ಠರು ಸೂಚಿಸಿದ 24 ಗಂಟೆಗಳ ಒಳಗೆ ಸಚಿವ ಸಂಪುಟ ರಚಿಸುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಇದನ್ನೂ ಓದಿ: ಸಂಪುಟ ರಚನೆ ವಿಳಂಬಕ್ಕೆ ವ್ಯಂಗ್ಯ- ಬಿಎಸ್ವೈ ಕಾಲೆಳೆದ ಕಾಂಗ್ರೆಸ್, ಜೆಡಿಎಸ್
ತಮ್ಮ ನಿವಾಸದ ಸಮೀಪದ ಮಾಧ್ಯಮ ಪ್ರತಿನಿಧಿಗಳೊಡನೆ ಮಾತನಾಡಿದ ಅವರು, ‘ನಮ್ಮದು ರಾಷ್ಟ್ರೀಯ ಪಕ್ಷ. ನಾನೊಬ್ಬನೇ ತೀರ್ಮಾನಗಳನ್ನು ತೆಗೆದುಕೊಳ್ಳಲು ಆಗುವುದಿಲ್ಲ’ ಎಂದರು.
ಕೃಷ್ಣಾನದಿಯ ಪ್ರವಾಹ ಸ್ಥಿತಿಯ ಬಗ್ಗೆ ಪ್ರಸ್ತಾಪಿಸಿದ ಅವರು, ‘ಬಿಜಾಪುರ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಹಲವು ಹಳ್ಳಿಗಳು ಮುಳುಗಡೆ ಆಗಿವೆ. ಜಿಲ್ಲಾಧಿಕಾರಿಗಳ ಜೊತೆಗೆ ನಿನ್ನೆ ಚರ್ಚಿಸಿದ್ದೇನೆ. ನಿರಾಶ್ರಿತರಿಗೆ ಶಾಲೆಗಳಲ್ಲಿ ಉಳಿಯಲು ವ್ಯವಸ್ಥೆ ಮಾಡಲಾಗಿದೆ. ನಾಳೆ ನಿರಾಶ್ರಿತ ಕೇಂದ್ರಗಳಿಗೆ ಭೇಟಿ ಕೊಡುತ್ತೇನೆ’ ಎಂದರು.
ಇದನ್ನೂ ಓದಿ: ಅತೃಪ್ತರಲ್ಲಿ 12 ಮಂದಿಗೆ ಸಚಿವ ಸ್ಥಾನ– ಎರಡು ಹಂತಗಳಲ್ಲಿ ಸಂಪುಟ ವಿಸ್ತರಣೆ?
ಬಿಬಿಎಂಪಿ ಬಜೆಟ್ ಯೋಜಬೆಗಳಿಗೆ ತಡೆ ಕೊಟ್ಟ ವಿಚಾರ ಕುರಿತು ಪ್ರಸ್ತಾಪಿಸಿದ ಅವರು, ‘ಬಿಬಿಎಂಪಿಯಲ್ಲಿ ಅನಗತ್ಯವಾಗಿ ಫುಟ್‌ಪಾತ್ಗಳನ್ನು ಕಿತ್ತು ರಿಪೇರಿ ಕೆಲಸ ಮಾಡ್ತಿದ್ದಾರೆ. ವೈಟ್ ಟಾಪಿಂಗ್‌ನಲ್ಲೂ ಅನಗತ್ಯ ವೆಚ್ಚ ಮಾಡಲಾಗುತ್ತಿದೆ. ಬಿಬಿಎಂಪಿಯಲ್ಲಿ ಲೂಟಿ ನಡೀತಿದೆ. ಅದನ್ನು ತಡೆಯುವುದು ನನ್ನ ಉದ್ದೇಶ. ನಗರದ ಅಭಿವೃದ್ಧಿ ಕಾರ್ಯ ನಿಲ್ಲಿಸಬೇಕು ಅಂತ ಬಜೆಟ್‌ಗೆ ತಡೆ ಕೊಟ್ಟಿಲ್ಲ’ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಸಂಪುಟ ರಚನೆ ಯಾವಾಗ ಎಂಬ ಪ್ರಶ್ನೆಗಳ ನಡುವೆಯೇ 6ರಂದು ಮೋದಿ–ಬಿಎಸ್ವೈ ಭೇಟಿ
‘ನಗರದಲ್ಲಿ ಕಸ ತೆರವು ಮಾಡಬೇಕು ಅಂತ ಅಧಿಕಾರಿಗಳಿಗೆ ಕಡ್ಡಾಯವಾಗಿ ಸೂಚಿಸಿದ್ದೇನೆ. ಮೂರು ದಿನಗಳ ಬಳಿಕ ದೆಹಲಿಯಿಂದ ವಾಪಸ್ ಬರುತ್ತೇನೆ. ಅಷ್ಟುಹೊತ್ತಿಗೆ ನಗರದಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆ ಪರಿಹಾರವಾಗಿರಬೇಕು’ ಎಂದು ಅಧಿಕಾರಿಕಗಳಿಗೆ ಎಚ್ಚರಿಕೆ ಕೊಟ್ಟಿದ್ದೇನೆ’ ಎಂದು ಹೇಳಿದರು.

ವಿಡಿಯೊ ಸಂವಾದ
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಗೃಹ ಕಚೇರಿ ಕೃಷ್ಣಾದಲ್ಲಿ ರಾಜ್ಯದ ಪ್ರವಾಹ ಪೀಡಿತ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೊ ಸಂವಾದ ನಡೆಸಿ ಪರಿಸ್ಥಿತಿ ಅವಲೋಕಿಸಿದರು.
ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಮುಖ್ಯಮಂತ್ರಿಗಳ ಸಲಹೆಗಾರ ಎಂ.ಲಕ್ಷ್ಮೀನಾರಾಯಣ, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಕಾರ್ಯದರ್ಶಿ ಶಿವಯೋಗಿ ಸಿ. ಕಳಸದ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್, ಎನ್‌ಡಿಆರ್‌ಎಫ್ ಅಧಿಕಾರಿಗಳು ಉಪಸ್ಥಿತರಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.