ಭಾನುವಾರ, ಸೆಪ್ಟೆಂಬರ್ 26, 2021
27 °C

ಬಹುಮಹಡಿ ವಸತಿ ಸಮುಚ್ಚಯಕ್ಕೆ ತಡೆ: ಸಚಿವ ಮಾಧುಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಸತಿ ಇಲಾಖೆ ಇನ್ನು ಮುಂದೆ ಬಹುಮಹಡಿ ವಸತಿ ಸಮುಚ್ಚಯಗಳನ್ನು ನಿರ್ಮಿಸುವುದಿಲ್ಲ. ಜಿ+3ಗೆ ಮಾತ್ರ ಸೀಮಿತಗೊಳಿಸಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.

ಸಚಿವ ಸಂಪುಟ ಸಭೆಯ ಬಳಿಕ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಮಾಧ್ಯಮ ಪ್ರತಿನಿಧಿಗಳಿಗೆ ಈ ವಿಷಯ ತಿಳಿಸಿದರು.  

ಹಿಂದಿನ ಸರ್ಕಾರ ಜಿ+13, ಜಿ+14 ಅಂತಸ್ತುಗಳ ವಸತಿ ಸಮುಚ್ಚಯ ನಿರ್ಮಿಸಲು ತೀರ್ಮಾನಿಸಿತ್ತು. ಇಂತಹ ಬಹುಮಹಡಿ ಕಟ್ಟಡಗಳಲ್ಲಿ ವಾಸ ಮಾಡುವುದು ಕಷ್ಟ, ನಿರ್ವಹಣೆಯೂ ಅಸಾಧ್ಯ. ಮನೆ ಖರೀದಿಸಿದವರಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು.

ಈಗಾಗಲೇ ಕಾಮಗಾರಿ ಆರಂಭಿಸಿರುವ ಮತ್ತು ಟೆಂಡರ್‌ ಕರೆದಿರುವುದನ್ನು ಹೊರತುಪಡಿಸಿ ಉಳಿದ ಎಲ್ಲ ಕಡೆಗಳಲ್ಲಿ ಜಿ+3 ಮಾತ್ರ ಇರುತ್ತದೆ. 1 ಬಿಎಚ್‌ಕೆ ಮನೆಗೆ ₹10 ಲಕ್ಷ ಮತ್ತು 2 ಬಿಎಚ್‌ಕೆ ಮನೆಗೆ ₹15 ಲಕ್ಷ ಬೆಲೆ ಇದೆ.

ಈ ಮನೆಗಳಿಗೆ ಸರ್ಕಾರ ಖರೀದಿದಾರರಿಗೆ ಸಹಾಯಧನವನ್ನು ನೀಡುತ್ತದೆ. ಇವುಗಳ ಖರೀದಿಗೆ ಇದ್ದ ಆದಾಯ ಮಿತಿಯನ್ನು ವಾರ್ಷಿಕ ₹87,500ರಿಂದ ₹ 3 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಇನ್ನು ಮುಂದೆ ₹3 ಲಕ್ಷ ಆದಾಯ ಮಿತಿಯೊಳಗಿನವರೂ ಮನೆಗಳಿಗೆ ಅರ್ಜಿ ಹಾಕಿಕೊಳ್ಳಬಹುದು ಎಂದು ಸಚಿವರು ಹೇಳಿದರು.

ಮೇಲ್ದರ್ಜೆಗೇರಿದ ಪಟ್ಟಣ ಪಂಚಾಯಿತಿಗಳು
ದಾವಣಗೆರೆ ಜಿಲ್ಲೆಯ ನ್ಯಾಮತಿ, ಕಲಬುರ್ಗಿ ಜಿಲ್ಲೆಯ ಯಡ್ರಾಮಿ ಗ್ರಾಮ ಪಂಚಾಯಿತಿಗಳನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಲಾಗಿದೆ. ಅಲ್ಲದೆ, ಬಾದಾಮಿ ಪಟ್ಟಣಕ್ಕೆ ಕೆಲವು ಸರ್ವೆ ಸಂಖ್ಯೆಗಳನ್ನು ಸೇರಿಸಿ ಪ್ರದೇಶದ ವ್ಯಾಪ್ತಿ ವಿಸ್ತರಿಸಲು ತೀರ್ಮಾನಿಸಲಾಗಿದೆ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು