ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾನೆಲ್‌ ದರ ಸಮರದ ಸಂಘರ್ಷ ತಾರಕಕ್ಕೆ

ರಾಜ್ಯದಾದ್ಯಂತ ಗ್ರಾಹಕರ ಪ್ರತಿರೋಧ; ಕೇಬಲ್‌ ಆಪರೇಟರ್‌ಗಳ ಅಳಲು
Last Updated 5 ಮಾರ್ಚ್ 2019, 19:52 IST
ಅಕ್ಷರ ಗಾತ್ರ

ಬೆಂಗಳೂರು: ‘ತಮಿಳು, ತೆಲುಗು ಚಾನೆಲ್‌ ಕೊಡುತ್ತಿಲ್ಲ ಎಂಬ ಕಾರಣಕ್ಕೆ ಸ್ಲಂಗಳಲ್ಲಿ ಮಹಿಳೆಯರು ಕಲ್ಲೆತ್ತಿಕೊಂಡು ನಮ್ಮನ್ನು ಹೊಡೆಯಲು ಬರುತ್ತಾರೆ, ಅವಾಚ್ಯ ಪದಗಳಿಂದ ನಿಂದಿಸುತ್ತಾರೆ. ಎಂಎಸ್‌ಒ ಮತ್ತು ಗ್ರಾಹಕರ ಮಧ್ಯೆ ಪೋಸ್ಟ್‌ಮನ್‌ಗಳ ತರ ಕೆಲಸ ಮಾಡುವ ನಾವು ಅಸಹಾಯಕರಾಗಿದ್ದೇವೆ’.

"ಟ್ರಾಯ್‌ ರೂಪಿಸಿರುವ ಹೊಸ ದರ ಪಟ್ಟಿ ಜಾರಿ ತಂದ ಬಳಿಕ ನಿತ್ಯವೂ ಗ್ರಾಹಕರು ಮತ್ತು ಕೇಬಲ್ ಆಪರೇಟರ್‌ಗಳ ಸಂಘರ್ಷವೇ ನಡೆಯುತ್ತಿದೆ. ನಮ್ಮದಲ್ಲದ ಕಾರಣಕ್ಕೆ ನಮ್ಮನ್ನು ಗುರಿಯಾಗಿಸಲಾಗಿದೆ' ಎಂದು ಕರ್ನಾಟಕ ಡಿಜಿಟಲ್‌ ಕೇಬಲ್ ಆಪರೇಟರ್‌ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಯತೀಶ್‌ ‘ಪ್ರಜಾವಾಣಿ’ಗೆ ಅಳಲು ತೋಡಿಕೊಂಡರು.

ಇಡೀ ದೇಶಕ್ಕೆ ಒಂದೇ ಸರ್ವರ್‌ ಇದೆ. ರಾಜ್ಯದಲ್ಲಿ ಸುಮಾರು 3 ಕೋಟಿ ಸಂಪರ್ಕ (ಕನೆಕ್ಷನ್‌)ಗಳಿವೆ. ಪ್ರತಿಯೊಂದು ಸಂಪರ್ಕವನ್ನು ಆ್ಯಕ್ಟಿವೇಟ್‌ ಮಾಡಲು ಕನಿಷ್ಠ ಒಂದು ಗಂಟೆಯಾದರೂ ಬೇಕು. ಒಂದು ದಿನಕ್ಕೆ 10 ಗ್ರಾಹಕರ, ಅವರು ಕೇಳಿದ ಚಾನೆಲ್‌ಗಳನ್ನು ಆ್ಯಕ್ಟಿವೇಟ್‌ ಮಾಡಲು ಸಾಧ್ಯವಾಗುತ್ತದೆ. ಪ್ರತಿಯೊಬ್ಬ ಕೇಬಲ್‌ ಆಪರೇಟರ್‌ ಬಳಿ ಸಾವಿರಾರು ಕನೆಕ್ಷನ್‌ಗಳು ಇರುತ್ತವೆ. ಆದರೆ, ಗ್ರಾಹಕರು ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ ಎಂದರು.

ಮಾರ್ಚ್‌ 31 ರವರೆಗೆ ಗ್ರಾಹಕರಿಗೆ ಹೊರೆಯಾಗದಿರಲು ‘ಬೆಸ್ಟ್‌ ಫಿಟ್‌ ಪ್ಯಾಕೇಜ್‌’ ಕೊಡುವಂತೆ ಟ್ರಾಯ್‌ ಎಂಎಸ್‌ಒಗಳಿಗೆ ಸೂಚಿಸಿದೆ. ಗ್ರಾಹಕರಿಗೆ ಅಗತ್ಯವಿರುವ ತಲಾ ಎರಡೆರಡು ಮನರಂಜನೆ, ಸುದ್ದಿ ಮತ್ತು ಸಿನಿಮಾ ಚಾನೆಲ್‌ಗಳನ್ನು ಒಂದು ಗುಚ್ಛವಾಗಿ ನೀಡಲು ಹೇಳಿದೆ. ಆದರೆ ಎಂಎಸ್‌ಒಗಳು ಅದಕ್ಕೆ ಮಹತ್ವ ನೀಡದೇ ತಮಗೆ ತೋಚಿದ ಚಾನೆಲ್‌ಗಳನ್ನು ನೀಡುತ್ತಿದ್ದಾರೆ ಎಂದು ಯತೀಶ್‌ ಹೇಳಿದರು.

‘ಗ್ರಾಹಕರು ಸೂಚಿಸಿದ ಚಾನೆಲ್‌ಗಳನ್ನು ಆ್ಯಕ್ಟಿವೇಟ್‌ ಮಾಡುವುದಷ್ಟೇ ನಮ್ಮ ಕೆಲಸ. ಇದಕ್ಕೆ ಸಂಬಂಧಿಸಿದ ಸಾಫ್ಟ್‌ವೇರ್‌ ಮತ್ತು ನಿಯಂತ್ರಣ ವ್ಯವಸ್ಥೆ ಸಂಪೂರ್ಣವಾಗಿ ಎಂಎಸ್‌ಒಗಳ ಬಳಿಯೇ ಇರುತ್ತದೆ. ಎಷ್ಟೋ ಸಲ ಕೆಲವು ಚಾನೆಲ್‌ಗಳು ಆ್ಯಕ್ಟಿವೇಟ್‌ ಆಗುವುದೇ ಇಲ್ಲ. ಆದರೆ, ಗ್ರಾಹಕರು ನಮ್ಮನ್ನು ದೂರುತ್ತಾರೆ’ ಎಂದು ಸಂಘದ ಅಧ್ಯಕ್ಷ ಮಲ್ಲರಾಜೇ ಅರಸ್‌ ವಿವರಿಸಿದರು.

ಜಿಎಸ್‌ಟಿ ಕಡಿಮೆ ಮಾಡಿ: ಕೇಬಲ್‌ ಮೇಲೆ ಶೇ18 ರಷ್ಟು ಜಿಎಸ್‌ಟಿ ವಿಧಿಸಲಾಗಿದೆ. ಇದರಿಂದ ಗ್ರಾಹಕರಿಗೆ ಹೊರೆ ಆಗುತ್ತಿದೆ. ತೆರಿಗೆ ಶೇ 5 ಕ್ಕೆ ಇಳಿಸಿದರೆ, ಗ್ರಾಹರಿಕೆ ₹50 ರಿಂದ ₹60 ರಷ್ಟು ಕಡಿಮೆ ಆಗುತ್ತದೆ ಎಂದು ಸಂಘದ ಸಂಘಟನಾ ಕಾರ್ಯದರ್ಶಿ ತಾಜ್‌ ಆರಿಫ್‌ ಹೇಳಿದರು.

ರಾಜ್ಯದಲ್ಲಿ ಕೇಬಲ್‌ ಸಂಪರ್ಕ

ಒಟ್ಟು; 3 ಕೋಟಿ

ಆ್ಯಕ್ಟಿವೇಟ್‌ ಆದ ಸಂಪರ್ಕ; ಶೇ 30

ಕೇಬಲ್‌ ಆಪರೇಟರ್‌ಗಳು;6000

ಪ್ರಮುಖ ಎಂಎಸ್‌ಒಗಳು;ಸಿಟಿ ಕೇಬಲ್; ಹ್ಯಾಥ್‌ವೇ;ಡೆನ್‌

*ಗ್ರಾಹಕರು ಮತ್ತು ನಮ್ಮ ನಡುವಿನ ಸಂಬಂಧ 20–25 ವರ್ಷಗಳದ್ದು, ಹೊಸ ವ್ಯವಸ್ಥೆಯಿಂದ ಸಂಬಂಧ ಬಿಗಡಾಯಿಸಿದೆ

-ಮಲ್ಲರಾಜೇಅರಸ್‌, ಅಧ್ಯಕ್ಷ, ಕರ್ನಾಟಕ ಡಿಜಿಟಲ್‌ ಕೇಬಲ್ ಆಪರೇಟರ್‌ ಕ್ಷೇಮಾಭಿವೃದ್ಧಿ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT