ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸರ ರಕ್ಷಣೆಗಾಗಿ ಬಿಎಸ್‌ವೈ ಸಿಐಡಿ ತನಿಖೆಗೆ ಒಪ್ಪಿಸಿದ್ದಾರೆ : ಸಿದ್ದರಾಮಯ್ಯ

ರಾಜ್ಯ ಸರ್ಕಾರದ ವಿರುದ್ಧ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ
Last Updated 23 ಡಿಸೆಂಬರ್ 2019, 15:00 IST
ಅಕ್ಷರ ಗಾತ್ರ

ಮಂಗಳೂರು: ಗುರುವಾರ ನಗರದಲ್ಲಿ ನಡೆದ ಗೋಲಿಬಾರ್‌ನಲ್ಲಿ ಅಮಾಯಕರನ್ನು ಗುಂಡಿಕ್ಕಿ ಕೊಲೆ ಮಾಡಿದ ಪೊಲೀಸರನ್ನು ರಕ್ಷಿಸುವ ದುರುದ್ದೇಶದಿಂದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಸಿಐಡಿ ತನಿಖೆಗೆ ಮುಂದಾಗಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದರು.

ಸೋಮವಾರ ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿ, ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪೊಲೀಸರು ದುರುದ್ದೇಶದಿಂದ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದ್ದಾರೆ. ಇಬ್ಬರು ಬಡವರು ಬಲಿಯಾಗಿದ್ದಾರೆ. ಈಗ ತಪ್ಪು ಮುಚ್ಚಿಕೊಳ್ಳಲು ಕಟ್ಟುಕತೆಗಳನ್ನು ಹೆಣೆಯುತ್ತಿದ್ದಾರೆ’ ಎಂದರು.

ಪ್ರತಿಭಟನಾಕಾರರನ್ನು ಕೊಂದ ಆರೋಪ ಪೊಲೀಸರ ಮೇಲಿದೆ. ಸಿಐಡಿಯಲ್ಲಿರುವುದೂ ಪೊಲೀಸರೇ. ಪೊಲೀಸರ ವಿರುದ್ಧ ಪೊಲೀಸರೇ ನಡೆಸುವ ತನಿಖೆಯಿಂದ ಸತ್ಯಾಂಶ ಹೊರಬರಲು ಸಾಧ್ಯವಿದೆಯೇ? ತಪ್ಪಿತಸ್ಥ ಪೊಲೀಸರನ್ನು ತನಿಖೆಯಿಂದ ಪಾರುಮಾಡಲು ರಾಜ್ಯ ಸರ್ಕಾರ ಈ ತಂತ್ರ ಹಣೆದಿದೆ. ಸಿಐಡಿ ತನಿಖೆಯನ್ನು ಕಾಂಗ್ರೆಸ್‌ ಪಕ್ಷ ಒಪ್ಪುವುದಿಲ್ಲ ಎಂದು ಹೇಳಿದರು.

‘ಪ್ರತಿಭಟನೆ ಮತ್ತು ಗೋಲಿಬಾರ್‌ ಕುರಿತು ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿಗಳಿಂದ ಸಮಗ್ರವಾದ ನ್ಯಾಯಾಂಗ ತನಿಖೆ ನಡೆಸಬೇಕು. ಈ ಬೇಡಿಕೆ ಈಡೇರುವವರೆಗೂ ನಾವು ಹೋರಾಟ ಮಾಡುತ್ತೇವೆ. ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ಒದಗಿಸುವುದಕ್ಕಾಗಿ ಶಾಸನಸಭೆಯ ಒಳಗೆ ಮತ್ತು ಹೊರಗೆ ನಿರಂತರವಾಗಿ ಹೋರಾಟ ಮಾಡುತ್ತೇವೆ. ನ್ಯಾಯಾಂಗ ತನಿಖೆಗೆ ಆದೇಶಿಸದಿದ್ದರೆ ಜನವರಿಯಲ್ಲಿ ನಿಗದಿಯಾಗಿರುವ ವಿಧಾನಮಂಡಲ ಅಧಿವೇಶನದ ಕಲಾಪ ನಡೆಯಲು ಅವಕಾಶ ನೀಡುವುದಿಲ್ಲ’ ಎಂದು ಸಿದ್ದರಾಮಯ್ಯ ಪ್ರಕಟಿಸಿದರು.

ಪೌರತ್ವ (ತಿದ್ದುಪಡಿ) ಕಾಯ್ದೆ ವಿರುದ್ಧ ಪ್ರತಿಭಟನೆಗೆ ಪೊಲೀಸರು ಅನುಮತಿ ನೀಡಿದ್ದರೆ ಯಾವುದೇ ದುರ್ಘಟನೆ ಸಂಭವಿಸುತ್ತಿರಲಿಲ್ಲ. ಜನರ ಹಕ್ಕುಗಳನ್ನು ಮೊಟಕುಗೊಳಿಸಿ ನಿಷೇಧಾಜ್ಞೆ ಹೇರುವ ಮೂಲಕ ಪೊಲೀಸರೇ ಹಿಂಸೆಗೆ ಪ್ರಚೋದನೆ ನೀಡಿದರು. ಇಡೀ ಘಟನೆಯ ಹೊಣೆಯನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮತ್ತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೊತ್ತುಕೊಳ್ಳಬೇಕು ಎಂದು ಹೇಳಿದರು.

ಬಲವಾದ ಕೈವಾಡದ ಶಂಕೆ:ಗೋಲಿಬಾರ್‌ ಹಿಂದೆ ಯಾವುದೋ ವ್ಯಕ್ತಿಗಳ ಬಲವಾದ ಕೈವಾಡ ಇರುವ ಶಂಕೆ ಇದೆ. ಜನರಲ್ಲಿ ಭಯ ಹುಟ್ಟಿಸುವುದಕ್ಕಾಗಿಯೇ ಪೊಲೀಸರು ಗುಂಡು ಹಾರಿಸಿ, ಹತ್ಯೆ ಮಾಡಿರುವಂತೆ ಕಾಣಿಸುತ್ತಿದೆ. 150ರಿಂದ 200 ಮಂದಿ ಇದ್ದ ಪ್ರತಿಭಟನಾಕಾರರ ಗುಂಪನ್ನು ನಿಯಂತ್ರಿಸುವಲ್ಲಿ ಎಡವಿರುವ ಪೊಲೀಸ್‌ ಇಲಾಖೆ, ಈಗ ಕತೆಗಳನ್ನು ಸೃಷ್ಟಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.

‘ಪ್ರತಿಭಟನಾಕಾರರ ಗುಂಪು ಪೊಲೀಸ್‌ ಠಾಣೆಗೆ ದಾಳಿ ಮಾಡಿ, ಶಸ್ತ್ರಾಸ್ತ್ರ ದೋಚಲು ಯತ್ನಿಸಿತ್ತು ಎಂದು ಮುಖ್ಯಮಂತ್ರಿಯೇ ಹೇಳಿದ್ದಾರೆ. ಇದು ಶುದ್ಧ ಸುಳ್ಳು. ನಾನು ಘಟನಾ ಸ್ಥಳವನ್ನು ಕಣ್ಣಾರೆ ನೋಡಿ ಬಂದಿದ್ದೇನೆ. ಮಂಗಳೂರು ಉತ್ತರ (ಬಂದರು) ಪೊಲೀಸ್‌ ಠಾಣೆಗೂ ಗೋಲಿಬಾರ್‌ ನಡೆದಿರುವ ಸ್ಥಳಕ್ಕೂ ಒಂದರಿಂದ ಒಂದೂವರೆ ಕಿಲೋಮೀಟರ್‌ ಅಂತರವಿದೆ. ಠಾಣೆಯ ಮೇಲಿನ ದಾಳಿಯ ಕುರುಹುಗಳೇ ಕಾಣಿಸುವುದಿಲ್ಲ. ಘಟನೆ ನಡೆದ ಪ್ರದೇಶದಲ್ಲಿ ಯಾವುದೇ ಅಂಗಡಿ, ಮುಗ್ಗಟ್ಟುಗಳ ಮೇಲೂ ದಾಳಿ ನಡೆದಿಲ್ಲ’ ಎಂದರು.

ಕೇರಳದಿಂದ ಬಂದವರು ಗಲಭೆ ನಡೆಸುತ್ತಿದ್ದರು ಎಂದು ಹೇಳುತ್ತಿದ್ದಾರೆ. ಕೇರಳದಿಂದ ಬಂದು ಗಲಭೆ ನಡೆಸಿದ್ದವರಲ್ಲಿ ಯಾರನ್ನು ಬಂಧಿಸಲಾಗಿದೆ ಎಂಬುದನ್ನು ಬಹಿರಂಗಪಡಿಸಲಿ. ಕೇರಳದ ಪತ್ರಕರ್ತರನ್ನು ಬಂಧಿಸಿಟ್ಟಿದ್ದರು. ಅಮಾಯಕ ವಿದ್ಯಾರ್ಥಿಗಳು ಮತ್ತು ಯುವಕರನ್ನು ಪ್ರಕರಣದಲ್ಲಿ ಸಿಲುಕಿಸಿ, ಬಂಧಿಸುತ್ತಿರುವುದನ್ನು ಪೊಲೀಸ್‌ ಇಲಾಖೆ ತಕ್ಷಣವೇ ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಶಾಸಕರಾದ ಎಂ.ಬಿ.ಪಾಟೀಲ, ಬಿ.ಜೆಡ್‌.ಜಮೀರ್‌ ಅಹಮ್ಮದ್ ಖಾನ್‌, ಯು.ಟಿ.ಖಾದರ್‌, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಕೆ.ಹರೀಶ್‌ ಕುಮಾರ್‌, ಮಾಜಿ ಸಚಿವ ಬಿ.ರಮಾನಾಥ ರೈ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT