ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ ‘ತೀರ್ಥೋದ್ಭವ’ ಸಂಭ್ರಮಕ್ಕೆ ಕ್ಷಣಗಣನೆ

ವಿಸ್ಮಯ ನೋಡಲು ಭಕ್ತರ ಕಾತರ, ತಲಕಾವೇರಿಯತ್ತ ಭಕ್ತರು, ಮಳೆಯ ಆತಂಕ
Last Updated 16 ಅಕ್ಟೋಬರ್ 2019, 18:31 IST
ಅಕ್ಷರ ಗಾತ್ರ

ಮಡಿಕೇರಿ: ‘ಜೀವನದಿ’ ಕಾವೇರಿಯ ಉಗಮ ಸ್ಥಳವಾದ ತಲಕಾವೇರಿಯಲ್ಲಿ ನಡೆಯುವ ವಾರ್ಷಿಕ ತೀರ್ಥೋದ್ಭವಕ್ಕೆ ಕ್ಷಣಗಣನೆ ಆರಂಭವಾಗಿದೆ. ಅ.18ರಂದು ರಾತ್ರಿ 12.59ಕ್ಕೆ ‘ತೀರ್ಥೋದ್ಭವ’ಕ್ಕೆ ಸಮಯ ನಿಗದಿಯಾಗಿದೆ.

ಕರ್ಕಾಟಕ ಲಗ್ನದಲ್ಲಿ ಕಾವೇರಿಯು ತೀರ್ಥರೂಪಿಣಿಯಾಗಿ ಭಕ್ತರಿಗೆ ಒಲಿಯಲಿದ್ದು ಬರುವ ಭಕ್ತರಿಗೆ ಎಲ್ಲ ವ್ಯವಸ್ಥೆ ಮಾಡಲಾಗಿದೆ. ಈ ವರ್ಷ ತೀರ್ಥೋದ್ಭವಕ್ಕೆ ಮಳೆಯ ಆತಂಕ ಎದುರಾಗಿದ್ದು, ತಗಡಿನ ಶೀಟ್‌ ಅಳವಡಿಸಲಾಗಿದೆ.

ತಲಕಾವೇರಿಯಿಂದ ಭಾಗಮಂಡಲದ ತನಕ ಟ್ಯೂಬ್‌ ಲೈಟ್‌ ಹಾಕಿ ಬೆಳಕಿನ ವ್ಯವಸ್ಥೆ ಮಾಡಲಾಗಿದೆ. ಗುರುವಾರ ರಾತ್ರಿಯಿಂದಲೇ ಕ್ಷೇತ್ರಕ್ಕೆ ಬರುವ ಭಕ್ತರಿಗೆ ಅನ್ನಸಂತರ್ಪಣೆ ಆರಂಭವಾಗಲಿದೆ. ಒಂದು ತಿಂಗಳು ದಾಸೋಹ ವ್ಯವಸ್ಥೆ ಇರಲಿದೆ.

ಕಾವೇರಿ ನೀರು ಬಳಸುವ ಮಂಡ್ಯ, ಮೈಸೂರು ಜಿಲ್ಲೆಯ ರೈತರು ಪ್ರತಿವರ್ಷ ಕಾವೇರಿ ಜಾತ್ರೆಗೆ ಆಗಮಿಸುತ್ತಾರೆ. ಈ ವರ್ಷವೂ ಕೆಆರ್‌ಎಸ್‌ ಭರ್ತಿಯಾಗಿದ್ದು ಜಾತ್ರೆಗೆ ಆ ಭಾಗದ ಜನರು ಬರುವ ಸಾಧ್ಯತೆಯಿದೆ. ಮಧ್ಯರಾತ್ರಿ ತೀರ್ಥೋದ್ಭವ ನಡೆಯುತ್ತಿರುವ ಕಾರಣಕ್ಕೆ ಭಕ್ತರ ಸಂಖ್ಯೆ ಇಳಿಮುಖವಾಗುವ ಸಾಧ್ಯತೆಯಿದೆ.

ಸೂಕ್ಷ್ಮ ಪ್ರದೇಶದಲ್ಲಿ ಸಿಸಿ ಟಿ.ವಿ ಕ್ಯಾಮೆರಾ ಅಳವಡಿಸಲಾಗಿದೆ. ನೂಕುನುಗ್ಗಲು ತಡೆಯಲು ಬ್ಯಾರಿಕೇಡ್‌ ಹಾಕಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮ ನಡೆಯುವ ಸ್ಥಳದಲ್ಲೂ ಶೀಟ್‌ಹಾಕಿ ಮಳೆಯಿಂದ ತೊಂದರೆ ಆಗದಂತೆ ವ್ಯವಸ್ಥೆ ಕೈಗೊಳ್ಳಲಾಗಿದೆ.

ಪೊಲೀಸ್‌ ಬಂದೋಬಸ್ತ್‌:ತೀರ್ಥೋದ್ಭವಕ್ಕೆ ಬರುವ ಭಕ್ತರಿಗೆ ತೊಂದರೆಯಾಗದಂತೆ ಪೊಲೀಸ್‌ ಬಂದೋಬಸ್ತ್‌ ಮಾಡಿಕೊಳ್ಳಲಾಗಿದೆ. ಮಡಿಕೇರಿ ಡಿವೈಎಸ್‌ಪಿ ದಿನೇಶ್ ಕುಮಾರ್‌ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗಿದೆ. ಬಂದೋಬಸ್ತ್‌ಗೆ ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ.

ಗಣ್ಯರು ಭಾಗಿ: ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಸಂಸದ ಪ್ರತಾಪ್ ಸಿಂಹ, ಜಿಲ್ಲೆಯ ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್‌, ಕೆ.ಜಿ.ಬೋಪಯ್ಯ, ವಿಧಾನ ಪರಿಷತ್‌ ಸದಸ್ಯರಾದ ಎಂ.ಪಿ.ಸುನಿಲ್‌ ಸುಬ್ರಹ್ಮಣಿ, ವೀಣಾ ಅಚ್ಚಯ್ಯ, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಮನ್‌ ಡಿ. ಪನ್ನೇಕರ್, ಸಿಇಒ ಕೆ.ಲಕ್ಷ್ಮೀಪ್ರಿಯಾ ಅವರು ತೀರ್ಥೋದ್ಭವಕ್ಕೆ ಸಾಕ್ಷಿ ಆಗಲಿದ್ದಾರೆ.

ಭಕ್ತರ ಸಂಖ್ಯೆ ಇಳಿಮುಖ ಸಾಧ್ಯತೆ:ಮಧ್ಯರಾತ್ರಿ 12.59ಕ್ಕೆ ಕಾವೇರಿ ತೀರ್ಥರೂಪಿಣಿಯಾಗಿ ಕಾಣಿಸಿಕೊಳ್ಳುತ್ತಿದ್ದು ಭಕ್ತರ ಸಂಖ್ಯೆ ಇಳಿಮುಖವಾಗುವ ಸಾಧ್ಯತೆಯಿದೆ. ಮಧ್ಯಾಹ್ನ ಇಲ್ಲವೇ ಸಂಜೆಯಾಗಿದ್ದರೆ, ಹೊರ ಜಿಲ್ಲೆಯಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಕ್ಷೇತ್ರಕ್ಕೆ ಬರುತ್ತಿದ್ದರು. ಭೂಕುಸಿತ ಹಾಗೂ ಪ್ರವಾಹದ ನಂತರ ಕೊಡಗಿನಲ್ಲಿ ಪ್ರವಾಸೋದ್ಯಮ ಚೇತರಿಸಿಕೊಂಡಿಲ್ಲ. ಪ್ರತಿವರ್ಷವೂ ತೀರ್ಥೋದ್ಭವ ಕಣ್ತುಂಬಿಕೊಳ್ಳಲು ಬರುತ್ತಿದ್ದ ತಮಿಳುನಾಡು, ಕೇರಳ ರಾಜ್ಯದ ಭಕ್ತರ ಸಂಖ್ಯೆಯೂ ಈ ವರ್ಷ ಇಳಿಮುಖವಾಗುವ ಸಾಧ್ಯತೆಯಿದೆ.

ಮದ್ಯ ಮಾರಾಟ ನಿಷೇಧ:ತಲಕಾವೇರಿಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಅ.16ರ ಮಧ್ಯರಾತ್ರಿಯಿಂದ ಅ.19ರ ಬೆಳಿಗ್ಗೆ 6ರ ತನಕ ಭಾಗಮಂಡಲ ಪೊಲೀಸ್‌ ಠಾಣೆಯ 20 ಕಿ.ಮೀ. ವ್ಯಾಪ್ತಿಯಲ್ಲಿ (ಭಾಗಮಂಡಲ ಮತ್ತು ಚೇರಂಬಾಣೆ ಸೇರಿದಂತೆ) ಇರುವ ಎಲ್ಲ ರೀತಿಯ ಮದ್ಯದ ಅಂಗಡಿ, ಬಾರ್, ಹೋಟೆಲ್ ಮತ್ತು ಕ್ಲಬ್‌ಗಳಲ್ಲಿ ಎಲ್ಲಾ ವಿಧದ ಮದ್ಯ ಮಾರಾಟವನ್ನು ಪೂರ್ಣವಾಗಿ ನಿಷೇಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT