ವಿಶಿಷ್ಟ ಆಲೋಚನೆಗಳ ಸಂಘಟನಾ ಚತುರ

7
ಕೇಂದ್ರ ಸಚಿವ ಅನಂತಕುಮಾರ್‌ ನಿಧನ

ವಿಶಿಷ್ಟ ಆಲೋಚನೆಗಳ ಸಂಘಟನಾ ಚತುರ

Published:
Updated:

ಬೆಂಗಳೂರು: ರಾಜಕೀಯ ತಂತ್ರಗಾರಿಕೆ, ಪಕ್ಷ ಸಂಘಟನೆ ಮತ್ತು ವಿಶಿಷ್ಟ ಆಲೋಚನೆಗಳ ಮೂಲಕ ಹೊಸ ಹೊಸ ಕಾರ್ಯಕ್ರಮಗಳನ್ನು ಪಟ್ಟು ಹಿಡಿದು ಅನುಷ್ಠಾನಗೊಳಿಸುವಲ್ಲಿ ಅನಂತಕುಮಾರ್ ನಿಸ್ಸೀಮರು. ಚಿಕ್ಕವಯಸ್ಸಿನಲ್ಲೇ ಅಟಲ್‌ ಬಿಹಾರಿ ವಾಜಪೇಯಿ ಅವರ ಸಚಿವ ಸಂಪುಟದಲ್ಲಿ ಸಚಿವರಾಗುವ ಅವಕಾಶ ಸಿಕ್ಕಿತು. ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡು ಯಶಸ್ಸಿನ ಮೆಟ್ಟಿಲು ಹತ್ತುತ್ತಲೇ ಹೋದರು.

ಸಮಾಜ ಸೇವೆ ಹಿನ್ನೆಲೆಯ ಕುಟುಂಬದಲ್ಲಿ ಜನಿಸಿದ ಅನಂತ್‌, ಕಾಲೇಜು ದಿನಗಳಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ (ಎಬಿವಿಪಿ) ಸದಸ್ಯರಾಗಿದ್ದರು. 1975–77 ರ ಅವಧಿಯಲ್ಲಿ ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಘೋಷಿಸಿದಾಗ ಜಯಪ್ರಕಾಶ್‌ ನಾರಾಯಣ್‌ ಕರೆಗೆ ಓಗೊಟ್ಟು ಹೋರಾಟಕ್ಕೆ ಧುಮುಕಿದರು. ತುರ್ತು ಪರಿಸ್ಥಿತಿ ಜೈಲು ವಾಸ ಅನುಭವಿಸಿದಾಗ ಅವರಿಗೆ ಕೇವಲ 16 ವರ್ಷ ವಯಸ್ಸು.

1987ರಲ್ಲಿ ಭಾರತೀಯ ಜನತಾ ಪಕ್ಷವನ್ನು ಸೇರಿದರು. ಬಿಜೆಪಿ ಯುವ ಮೋರ್ಚಾದ ರಾಜ್ಯ ಕಾರ್ಯದರ್ಶಿ ಮತ್ತು ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು. 1988ರಲ್ಲಿ ರಾಜ್ಯ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡರು. 1995ರ ವರೆಗೆ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದರು. 1995 ರಲ್ಲಿ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿಯಾಗಿ ನಿಯುಕ್ತಿಗೊಂಡರು.

ಹಿಂತಿರುಗಿ ನೋಡದ ಅನಂತ್: 1996 ರಲ್ಲಿ ಮೊದಲ ಬಾರಿಗೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಆಯ್ಕೆಯಾದರು. ಆ ಬಳಿಕ ನಡೆದ ಎಲ್ಲ ಚುನಾವಣೆಗಳಲ್ಲೂ ನಿರಂತರವಾಗಿ ಗೆಲುವು ಸಾಧಿಸಿದರು. ಒಟ್ಟು 22 ವರ್ಷ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಮೊದಲ ಬಾರಿಗೆ ಆಯ್ಕೆಯಾದಾಗ ಅವರು, ರೈಲ್ವೆ ಮತ್ತು ಕೈಗಾರಿಕಾ ಇಲಾಖೆಯ ವಿವಿಧ ಸಮಿತಿಗಳಿಗೆ ಸದಸ್ಯರಾಗಿ ಕಾರ್ಯ ನಿರ್ವಹಿಸಿದರು. 1998 ರಲ್ಲಿ ವಾಜಪೇಯಿ ಅವರ ಸಚಿವ ಸಂಪುಟದಲ್ಲಿ ನಾಗರೀಕ ವಿಮಾನ ಯಾನ ಖಾತೆ ಸಚಿವರಾದರು. ಆಗ ಅವರು ಅತ್ಯಂತ ಕಿರಿಯ ವಯಸ್ಸಿನ ಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ಬಳಿಕ ಅವರು ಪ್ರವಾಸೋದ್ಯಮ, ಕ್ರೀಡೆ, ಯುವ ಜನ ಸೇವೆಗಳು ಮತ್ತು ಸಂಸ್ಕೃತಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌, ನಗರಾಭಿವೃದ್ಧಿ ಮತ್ತು ಬಡತನ ನಿವಾರಣೆ ಸಚಿವರಾಗಿಯೂ ವಾಜಪೇಯಿ ಸಂಪುಟದಲ್ಲಿ ಕಾರ್ಯ ನಿವರ್ಹಿಸಿದ್ದರು. ನಗರಾಭಿವೃದ್ಧಿ ಸಚಿವರಾಗಿ ನಗರ ಪ್ರದೇಶಗಳ ಬಡವರಿಗಾಗಿ ವಾಂಬೆ (ವಾಲ್ಮೀಕಿ ಅಂಬೇಡ್ಕರ್‌ ಆವಾಸ್‌ ಯೋಜನಾ) ಮನೆಗಳ ನಿರ್ಮಾಣ ಯೋಜನೆ ಆರಂಭಿಸಿದರು. ಮನೆ ಮತ್ತು ಶೌಚಾಲಯವನ್ನು ಒಳಗೊಂಡ ಯೋಜನೆ ಇದಾಗಿತ್ತು.

2003 ರಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಪಕ್ಷವನ್ನು ಬೇರುಮಟ್ಟದಿಂದ ಕಟ್ಟಿ ಬೆಳೆಸಲು ಶ್ರಮಿಸಿದರು. ಇದರಿಂದಾಗಿ ಬಿಜೆಪಿ 2004ರ ಚುನಾವಣೆಯಲ್ಲಿ 79 ಸ್ಥಾನಗಳನ್ನು ಗೆಲ್ಲುವ ಮೂಲಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಅದೇ ಸಂದರ್ಭದಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ 17 ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿತು.

ಮಧ್ಯಪ್ರದೇಶ, ಜಾರ್ಖಂಡ್‌, ಛತ್ತಿಸಘಡ ಮತ್ತು ಬಿಹಾರ ವಿಧಾನಸಭೆ ಚುನಾವಣೆ ಉಸ್ತುವಾರಿ ವಹಿಸಿದ್ದರು. ಬಿಹಾರ ಬಿಟ್ಟು ಉಳಿದ ಕಡೆಗಳಲ್ಲಿ ಬಿಜೆಪಿ ವಿಜಯದ ಪತಾಕೆ ಹಾರಿಸುವಂತೆ ಮಾಡಿದ್ದರು.

ಅದಮ್ಯ ಚೇತನ
ತಮ್ಮ ಪತ್ನಿ ಜತೆ ಸೇರಿ ಅದಮ್ಯ ಚೇತನ ಎಂಬ ಸೇವಾ ಸಂಸ್ಥೆಯನ್ನು ಆರಂಭಿಸಿದರು. ಕರ್ನಾಟಕ ಮತ್ತು ರಾಜಸ್ಥಾನದ ಜೋಧಪುರ್‌ದಲ್ಲಿ ಶಾಲಾ ಮಕ್ಕಳಿಗಾಗಿ ಮಧ್ಯಾಹ್ನದ ಬಿಸಿಯೂಟ ಪೂರೈಸುವ ಕಾರ್ಯವನ್ನು ಬಹಳ ವರ್ಷಗಳಿಂದ ನಡೆಸಿಕೊಂಡು ಬಂದಿದ್ದಾರೆ. ಅಲ್ಲದೆ, ಈ ಸಂಸ್ಥೆಯ ಮೂಲಕ ನಗರದಲ್ಲಿ ಕೋಟಿ ಸಸಿ ನೆಟ್ಟು ಹಸಿರೀಕರಣಕ್ಕೆ ಕಾರ್ಯಕ್ಕೆ ಕೈಜೋಡಿಸಿದ್ದರು

ಬರಹ ಇಷ್ಟವಾಯಿತೆ?

 • 16

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !