ಎಸ್‌ಸಿ, ಎಸ್‌ಟಿ ಸಿನಿಮಾ ಉಚಿತ ಪ್ರದರ್ಶನಕ್ಕೆ ಸರ್ಕಾರದ ಪ್ರಸ್ತಾವ: ವಿರೋಧ

7

ಎಸ್‌ಸಿ, ಎಸ್‌ಟಿ ಸಿನಿಮಾ ಉಚಿತ ಪ್ರದರ್ಶನಕ್ಕೆ ಸರ್ಕಾರದ ಪ್ರಸ್ತಾವ: ವಿರೋಧ

Published:
Updated:
Deccan Herald

ಬೆಂಗಳೂರು: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳಿಗೆ ಸೇರಿದವರು ನಿರ್ಮಾಣ ಮಾಡಿದ, ನಿರ್ದೇಶಿಸಿದ ಚಿತ್ರಗಳನ್ನು ಉಚಿತವಾಗಿ ತೋರಿಸುವ ವಿಚಾರದಲ್ಲಿ ಸರ್ಕಾರದ ಜೊತೆ ಕೈಜೋಡಿಸಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿರಾಕರಿಸಿದೆ.

ವಾರಾಂತ್ಯದಲ್ಲಿ ನಡೆದ ವಾಣಿಜ್ಯ ಮಂಡಳಿಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ‘ಚಿತ್ರಗಳ ಆಯ್ಕೆ ವಿಚಾರದಲ್ಲಿ ಜಾತಿಯನ್ನು ಆಧಾರವಾಗಿ ಇರಿಸಿಕೊಳ್ಳುವ ಕ್ರಮಕ್ಕೆ ಬೆಂಬಲ ಕೊಡುವುದು ಬೇಡ’ ಎನ್ನುವ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು ಎಂದು ಗೊತ್ತಾಗಿದೆ.

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ಸೇರಿದ ನಿರ್ಮಾಪಕರು ಹಾಗೂ ನಿರ್ದೇಶಕರ ಸಿನಿಮಾಗಳನ್ನು ಜಿಲ್ಲಾ ಕೇಂದ್ರಗಳ ಸಿನಿಮಾ ಮಂದಿರಗಳಲ್ಲಿ ಉಚಿತವಾಗಿ ಪ್ರದರ್ಶಿಸಲು ಸಮಾಜ ಕಲ್ಯಾಣ ಇಲಾಖೆ ಆದೇಶ ಮಾಡಿದೆ.

ನವೆಂಬರ್ ತಿಂಗಳ ಕೊನೆಯಲ್ಲಿ ವಾಣಿಜ್ಯ ಮಂಡಳಿಗೆ ಪತ್ರ ಬರೆದಿದ್ದ ಸಮಾಜ ಕಲ್ಯಾಣ ಇಲಾಖೆ, ‘ಉಚಿತ ಪ್ರದರ್ಶನಕ್ಕೆ ಅರ್ಹವಾಗುವ ಸಿನಿಮಾಗಳನ್ನು ಆಯ್ಕೆ ಮಾಡಲು ರಚಿಸಲಾಗಿರುವ ಆಯ್ಕೆ ಸಮಿತಿಗೆ ಇಬ್ಬರ ಹೆಸರು ಸೂಚಿಸಬೇಕು’ ಎಂದು ಕೋರಿತ್ತು. ಸಿನಿಮಾಗಳ ಉಚಿತ ‍ಪ್ರದರ್ಶನಕ್ಕೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ಸೇರಿದ ನಿರ್ದೇಶಕ ಅಥವಾ ನಿರ್ಮಾಪಕರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದೂ ಇಲಾಖೆಯಲ್ಲಿ ಪತ್ರದಲ್ಲಿ ಹೇಳಲಾಗಿದೆ.

ಆಯ್ಕೆ ಸಮಿತಿಗೆ ಬೇಕಿರುವ ಇಬ್ಬರು ‘ಸಮಾಜದ ಹಿತ ಚಿಂತಕ’ರಾಗಿರಬೇಕು ಎಂದು ಪತ್ರದಲ್ಲಿ ಹೇಳಲಾಗಿದೆ. ಈ ಪತ್ರದ ಬಗ್ಗೆ ತೀರ್ಮಾನ ಕೈಗೊಳ್ಳಲು ವಾಣಿಜ್ಯ ಮಂಡಳಿಯ ಸಭೆ ವಾರಾಂತ್ಯದಲ್ಲಿ ನಡೆಯಿತು. ‘ಡಾ. ರಾಜ್‌ಕುಮಾರ್‌, ವಿಷ್ಣುವರ್ಧನ್, ಅಂಬರೀಷ್‌ ಅವರೆಲ್ಲ ತಮ್ಮ ಪಾತ್ರಗಳ ಮೂಲಕ ಜಾತಿಯನ್ನೇ ಮಿರಿದ್ದಾರೆ. ಅಲ್ಲದೆ, ಕನ್ನಡ ಚಿತ್ರರಂಗಕ್ಕೆ ಜಾತಿಯ ಲೇಪ ಬೇಕಿಲ್ಲ. ಸರ್ಕಾರ ಕೈಗೊಂಡಿರುವ ತೀರ್ಮಾನ ತಪ್ಪು. ಈ ತಪ್ಪಿನಲ್ಲಿ ನಾವು ಭಾಗಿಯಾಗುವುದು ಬೇಡ ಎಂದು ನಾನು ಸಭೆಯಲ್ಲಿ ಹೇಳಿದೆ’ ಎಂದು ಸಮಿತಿ ಸದಸ್ಯ ಉಮೇಶ್ ಬಣಕಾರ್ ‘ಪ್ರಜಾವಾಣಿಗೆ’ ತಿಳಿಸಿದರು.

ಯಾರ ಹೆಸರನ್ನೂ ಶಿಫಾರಸು ಮಾಡಬಾರದು ಎಂಬ ತೀರ್ಮಾನವನ್ನು ಸಭೆ ಕೈಗೊಂಡಿದೆ ಎಂದು ಗೊತ್ತಾಗಿದೆ. ‘ನಮ್ಮಲ್ಲಿ ಜಾತಿ ಭೇದ ಇಲ್ಲ. ನಾವೆಲ್ಲ ಒಂದೇ ಎನ್ನುವ ಒಕ್ಕೊರಲ ತೀರ್ಮಾನ ಸಭೆಯಲ್ಲಿ ಆಯಿತು’ ಎಂದು ವಾಣಿಜ್ಯ ಮಂಡಳಿ ಕಾರ್ಯದರ್ಶಿ ಭಾ.ಮ. ಹರೀಶ್ ತಿಳಿಸಿದರು.

Tags: 

ಬರಹ ಇಷ್ಟವಾಯಿತೆ?

 • 11

  Happy
 • 1

  Amused
 • 0

  Sad
 • 1

  Frustrated
 • 2

  Angry

Comments:

0 comments

Write the first review for this !