ಮೊದಲು ಕನ್ನಡ, ನಂತರ ಉಳಿದದ್ದು: ಚಂದ್ರಶೇಖರ ಕಂಬಾರ ಸಂದರ್ಶನ

7

ಮೊದಲು ಕನ್ನಡ, ನಂತರ ಉಳಿದದ್ದು: ಚಂದ್ರಶೇಖರ ಕಂಬಾರ ಸಂದರ್ಶನ

Published:
Updated:

ಬೆಂಗಳೂರು: ಇಂದಿನಿಂದ ಜ. 6ರವರೆಗೆ ಧಾರವಾಡದಲ್ಲಿ ನಡೆಯುತ್ತಿರುವ 84ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಚಂದ್ರಶೇಖರ ಕಂಬಾರರು ಸಮಕಾಲೀನ ಭಾರತೀಯ ಸಾಹಿತ್ಯದ ಪ್ರಮುಖ ಕವಿ–ನಾಟಕಕಾರಲ್ಲೊಬ್ಬರು. ಸಮ್ಮೇಳನದ ಹಿನ್ನೆಲೆಯಲ್ಲಿ ಅವರು ‘ಪ್ರಜಾವಾಣಿ’ಗೆ ನೀಡಿದ ವಿಶೇಷ ಸಂದರ್ಶನ ಇಲ್ಲಿದೆ.

* ಸರ್ಕಾರಿ ಶಾಲೆಗಳಲ್ಲಿ ‘ಇಂಗ್ಲಿಷ್‌ ಮಾಧ್ಯಮ ತರಗತಿ’ಗಳನ್ನು ಆರಂಭಿಸುವ ಸರ್ಕಾರದ ನಿರ್ಧಾರ ಸಾಹಿತ್ಯ ಸಮ್ಮೇಳನ ನಡೆಯುವ ಸಂದರ್ಭದಲ್ಲೇ ಚರ್ಚೆಗೆ ಕಾರಣವಾಗಿದೆ. ನಿಮ್ಮ ಪ್ರತಿಕ್ರಿಯೆ ಏನು?

ಇಂಗ್ಲಿಷ್‌ ಮಾಧ್ಯಮದಲ್ಲಿ ಪ್ರಾಥಮಿಕ ಶಿಕ್ಷಣ ನೀಡುವುದರಿಂದ ತಾಯಿಭಾಷೆ ಸರಿಯಾಗಿ ಬರೋದಿಲ್ಲ, ಮತ್ತೊಂದು ಭಾಷೆಯೂ ಬರೊಲ್ಲ. ಈ ಕಲಬೆರಕೆಯಲ್ಲಿ ಮಕ್ಕಳಿಗೆ ಒಳ್ಳೆಯ ತಿಳಿವಳಿಕೆ ಬರೊಲ್ಲ ಎಂದುಕೊಂಡಿದ್ದೇನೆ. ಒಂದರಿಂದ ಏಳನೇ ತರಗತಿಯವರೆಗೆ ಮಾತೃಭಾಷೆಯಲ್ಲೇ ಶಿಕ್ಷಣ ಇರಬೇಕು. ಏಳನೇ ತರಗತಿಯ ನಂತರ ಇಂಗ್ಲಿಷ್‌ ಅಥವಾ ಬೇರೆ ಯಾವ ಭಾಷೆಯನ್ನಾದರೂ ಸರಿಯಾಗಿ ಕಲಿಯಬಹುದು ಎಂದು ಎಲ್ಲ ದೊಡ್ಡ ವಿದ್ವಾಂಸರು ಹೇಳುತ್ತಾರೆ, ನಾನೂ ಹೇಳುತ್ತೇನೆ.

* ಸಾಹಿತ್ಯ ‍ಪರಿಷತ್‌ ನೇತೃತ್ವದಲ್ಲಿ ನಡೆದ ಸಾಹಿತಿಗಳ ಸಭೆ, ಇಂಗ್ಲಿಷ್‌ ಮಾಧ್ಯಮ ತರಗತಿಗಳನ್ನು ಆರಂಭಿಸುವ ಸರ್ಕಾರದ ನಿರ್ಧಾರವನ್ನು ವಿರೋಧಿಸಿದೆ. ಈ ನಿಲುವು ದಲಿತ ವಿರೋಧಿಯಾದುದು ಹಾಗೂ ಜನಸಾಮಾನ್ಯರ ಹಿತಾಸಕ್ತಿಗೆ ಪೂರಕವಾಗಿಲ್ಲ ಎಂದು ಕೆಲವರು ಹೇಳುತ್ತಿದ್ದಾರೆ.

ನಮ್ಮ ನಿಲುವು ದಲಿತ ವಿರೋಧಿ ಅಲ್ಲ. ಒಂದು ಭಾಷೆಯನ್ನು ಸರಿಯಾಗಿ ಕಲಿತ ನಂತರ ಉಳಿದ ಭಾಷೆಗಳನ್ನು ಸರಿಯಾಗಿ ಕಲಿಯಬಹುದು ಎನ್ನುವುದನ್ನು ನಾನು ಹೇಳುತ್ತಿದ್ದೇನೆ. ಗಾಂಧೀಜಿ ಇದನ್ನೇ ಹೇಳಿದ್ದರು.

* ಇಂಗ್ಲಿಷ್‌ ಮಾಧ್ಯಮ ಬೇಡ ಎನ್ನುವ ಸಾಹಿತಿಗಳು ತಮ್ಮ ಮಕ್ಕಳನ್ನು ಮಾತ್ರ ಇಂಗ್ಲಿಷ್‌ ಶಾಲೆಗೆ ಕಳುಹಿಸುತ್ತಿದ್ದಾರೆ ಎನ್ನುವುದು ಜನರ ಆರೋಪ...

ಇದೊಂದು ತರ್ಕ. ಎಲ್ಲರೂ ಹಾಗೆ ಮಾಡಿಲ್ಲ. ಇಂಗ್ಲಿಷ್‌ ಕಲಿಯಬೇಡಿ ಎಂದು ನಾವು ಹೇಳಿಯೇ ಇಲ್ಲ. ದಯವಿಟ್ಟು ಕಲಿಯಿರಿ ಎಂದು ಕೈಮುಗಿದು ಹೇಳ್ತೀನಿ. ಆದರೆ ಯಾವಾಗ ಕಲಿಯಬೇಕು ಎಂದರೆ, ಕೊನೇಪಕ್ಷ ಒಂದು ಭಾಷೆಯ ತಿಳಿವಳಿಕೆ ಬಂದ ನಂತರ. ಒಂದು ಭಾಷೆಯ ರೂಪಕಶಕ್ತಿ, ನಾದಶಕ್ತಿ, ಅದರ ಗ್ರಹಿಕೆಯ ಶಕ್ತಿ, ಅಭಿವ್ಯಕ್ತಿಸುವ ಶಕ್ತಿ – ಇವೆಲ್ಲವೂ ಯೋಗ್ಯವಾದ ರೀತಿಯಲ್ಲಿ ಬರಬೇಕಾದರೆ ಏಳು ವರ್ಷ ತಾಯ್ನುಡಿಯಲ್ಲಿಯೇ ಕಲಿಯುವುದು ಒಳ್ಳೆಯದು.

‘ಸರ್ಕಾರಿ ಶಾಲೆ ಮುಚ್ಚಿ ಇಲ್ಲಿಗೆ ಬನ್ನಿ, ನಾವು ಒಳ್ಳೆಯ ಶಿಕ್ಷಣ ಕೊಡ್ತೇವೆ, ಅನ್ನ ಕೊಡ್ತೇವೆ’ ಎಂದು ಕೆಲವರು ಹೇಳುತ್ತಿದ್ದಾರಲ್ಲ. ಅವರು ಇಲ್ಲಿಯವರೆಗೆ ಎಲ್ಲಿದ್ದರು? ಎಲ್ಲವನ್ನೂ ವ್ಯಾಪಾರವಾಗಿ ಪರಿವರ್ತಿಸುವ ಸಂದರ್ಭದಲ್ಲಿ ನಾವು ಏನು ಮಾಡಬೇಕು? ಸರ್ಕಾರಿ ಶಾಲೆಗಳ ಬಗ್ಗೆ, ಕನ್ನಡದ ಬಗ್ಗೆ ಕಾಳಜಿಯುಳ್ಳವರು ಕೆಲವು ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು ಅವುಗಳನ್ನು ಸುಧಾರಿಸಬಹುದಿತ್ತು. ಅದರ ಬದಲಾಗಿ ಸರ್ಕಾರಿ ಶಾಲೆಗಳನ್ನು ಮುಚ್ಚಲು ಪ್ರೇರೇಪಿಸಿ, ತಾವೇ ಖಾಸಗಿ ಶಾಲೆಗಳನ್ನು ತೆರೆಯತೊಡಗಿದರು. ಇಂಥ ಪ್ರಯತ್ನಗಳ ಹಿಂದೆ ಯಾರಿದ್ದಾರೆ ಎನ್ನುವ ಬಗ್ಗೆ ನಾವೆಲ್ಲ ಯೋಚಿಸಬೇಕು.

* ಸಾಹಿತ್ಯ ಸಮ್ಮೇಳನ ಎಂದಾಕ್ಷಣ ಪ್ರತಿವರ್ಷ ಸಂಭ್ರಮ–ಟೀಕೆ ಎದುರಾಗುತ್ತೆ. ಈ ಸಮ್ಮೇಳನಗಳನ್ನು ನೀವು ಹೇಗೆ ನೋಡ್ತೀರಿ?

ಇದು ನುಡಿಹಬ್ಬ. ಒಂದು ನುಡಿಯನ್ನು ಮಾತನಾಡುವ ಎಲ್ಲರೂ ಒಂದು ಕಡೆ ಕೂಡಿ ತಂತಮ್ಮ ಸುಖ–ದುಃಖ ಹೇಳಿಕೊಳ್ಳುವ, ವಿಚಾರ ವಿನಿಮಯ ಮಾಡಿಕೊಳ್ಳುವ ಸಂದರ್ಭ. ಜನ ಪುಸ್ತಕ ನೋಡುತ್ತಾರೆ. ಪುಸ್ತಕದ ಬಗ್ಗೆ ಚರ್ಚೆ ಮಾಡುತ್ತಾರೆ. ಇದರಲ್ಲೇನೋ ಸುಖ ಇದೆ. ಇದನ್ನು ಬೇಕಾದರೆ ಜಾತ್ರೆ ಅಂದುಕೊಳ್ಳಿ. ಜಾತ್ರೆ ಎಂದರೆ ತಿಳಿವಳಿಕೆಯನ್ನು ಹಂಚಿಕೊಳ್ಳುವ ವ್ಯವಹಾರ. ಬೇರೆ ಭಾಷೆಗಳಲ್ಲಿ ಇಲ್ಲದ ಇಂಥ ಜಾತ್ರೆ ನಮ್ಮ ಭಾಷೆಯಲ್ಲಿ ಇದೆ ಎಂದು ನನಗೆ ಹೆಮ್ಮೆಯೂ ಇದೆ.

* ಈವರೆಗಿನ ಎಂಬತ್ತಮೂರು ಜಾತ್ರೆಗಳಿಂದ ಆಗಿರುವ ಸಾಧನೆ ಏನು?

ವಿದೇಶದ ವಿಚಾರಗಳಿಗೆ ನಮ್ಮಷ್ಟು ಮುಕ್ತವಾಗಿ ತೆರೆದುಕೊಂಡು, ಪ್ರಬುದ್ಧವಾಗಿ ಆಲೋಚನೆ ಮಾಡಬಲ್ಲವರ ಪ್ರಮಾಣ ಬೇರೆ ಭಾಷೆಯಲ್ಲಿಲ್ಲ. ನಮ್ಮ ವಿಚಾರಗಳು, ನಮ್ಮ ಸಾಹಿತ್ಯ ಹೊರಗೆ ಹೋಗಿರುವುದು ಕೂಡ ಹೆಚ್ಚು. ಇಂಥ ಕೊಡುಕೊಳ್ಳುವಿಕೆ ಸಮ್ಮೇಳನಗಳಿಂದ ಸಾಧ್ಯ. ಮೊದಲು ಹಬ್ಬ ಹರಿದಿನಗಳಲ್ಲಿ ಎರಡು ಮೂರು ಹಳ್ಳಿಗಳ ಜನರ ಸೇರುತ್ತಿದ್ದರು. ಈಗ ಸಮ್ಮೇಳನದ ನೆಪದಲ್ಲಿ ಇಡೀ ನಾಡು ಒಂದು ಕಡೆ ಸೇರುತ್ತಿದ್ದರೆ ಅದು ಏಕೆ ಬೇಡ?

* ಹೊಸ ತಲೆಮಾರು, ಇಂಗ್ಲಿಷ್‌ ಬಗ್ಗೆ ಒಲವುಳ್ಳ ಯುವಜನರನ್ನು ಸಮ್ಮೇಳನಗಳಿಗೆ ಸೆಳೆಯುವುದು ಹೇಗೆ?

ನಮ್ಮ ಯುವಜನ ತಮ್ಮ ಕೈಗಳಲ್ಲಿ ಏನೆಲ್ಲವನ್ನು ಹಿಡಿದುಕೊಂಡಿದ್ದಾರೋ ಅದನ್ನು ನಾವು ಮೊದಲು ಗೆಲ್ಲಬೇಕು. ‘ನಮ್ಮ ಭಾಷೆ ಉಳಿಯಬೇಕೆಂದರೆ, ಇಂಗ್ಲಿಷ್‌ನಂತೆ ನಮ್ಮ ಭಾಷೆಯಲ್ಲೂ ತಂತ್ರಾಂಶವನ್ನು ಪರಿಪೂರ್ಣವಾಗಿ ಬಳಸುವಂತಾಗಬೇಕು’ ಎಂದು ತೇಜಸ್ವಿ ಹೇಳುತ್ತಿದ್ದರು. ಆ ಮಾತು ನಿಜ. ಇಂಗ್ಲಿಷ್‌ ಮಾಧ್ಯಮ ಉಂಟು ಮಾಡಿರುವ ಆತಂಕದ ಬಗ್ಗೆ ಮಾತನಾಡುತ್ತೇವಲ್ಲ; ನಿಜವಾದ ಆತಂಕ ತಂತ್ರಾಂಶವನ್ನು ಕನ್ನಡಕ್ಕೆ ಸಮರ್ಪಕವಾಗಿ ಒಗ್ಗಿಸಿಕೊಳ್ಳುವುದರಲ್ಲಿ ವಿಫಲವಾಗಿರುವುದರಲ್ಲಿದೆ.

ನಮ್ಮ ಮಕ್ಕಳು ಹೇಗೆ ಕೂತಿದ್ದಾರೆಂದರೆ ಅವರು ನಮ್ಮ ಕಡೆಯೇ ನೋಡುತ್ತಿಲ್ಲ. ಅದನ್ನು ಏನಾದರೂ ಮಾಡಿ ತಪ್ಪಿಸಬೇಕು. ಸಂಬಂಧಗಳಲ್ಲಿ, ಭೇಟಿಯಾಗಿರುವುದರಲ್ಲಿ, ಬೇರೆ ಬೇರೆ ಕನ್ನಡಗಳನ್ನು ಕೇಳುವುದರಲ್ಲಿ, ಜ್ಞಾನ ಹಂಚಿಕೊಳ್ಳುವುದರಲ್ಲಿ – ಇದೆಲ್ಲದರಲ್ಲಿ ಲಾಭವಿದೆ ಎನ್ನುವುದನ್ನು ಯುವಜನಕ್ಕೆ ಅರ್ಥ ಮಾಡಿಸಬೇಕು.

* ಧಾರವಾಡ ನಿಮ್ಮ ಸೃಜನಶೀಲತೆಯ ಪ್ರೇರಣೆಗಳಲ್ಲೊಂದು. ಅಲ್ಲಿ ಸಮ್ಮೇಳನ ನಡೆಯುತ್ತಿರುವುದಕ್ಕೆ ಏನನ್ನಿಸುತ್ತಿದೆ?

ಸಂತೋಷವೂ ಆಗ್ತಿದೆ. ದುಃಖವೂ ಇದೆ. ನನಗೆ ಕಲಿಸಿದ ಒಬ್ಬ ಗುರುವೂ ಬದುಕಿಲ್ಲ. ನಮ್ಮ ಕಲಬುರ್ಗಿ, ಗಿರಡ್ಡಿಯವರೂ ಹೋದರು. ನಾನು, ಕಲಬುರ್ಗಿ, ಪಟ್ಟಣಶೆಟ್ಟಿ, ಗಿರಡ್ಡಿ ಹಾಗೂ ಚಂಪಾ ಅವರನ್ನು ‘ಪಂಚ ಪಾಂಡವರು’ ಎನ್ನುತ್ತಿದ್ದರು. ನಾವು ಏನೆಲ್ಲ ಆಟ ಆಡಿದ್ದೇವೆ, ಏನೆಲ್ಲ ಸಾಹಸ ಮಾಡಿದ್ದೇವೆ, ಕೆಲವರಿಗೆ ಸ್ವಲ್ಪ ದುಃಖವನ್ನೂ ಕೊಟ್ಟಿದ್ದೇವೆ... ಅದೆಲ್ಲ ನೆನಪಾದರೆ ದುಃಖವಾಗ್ತದೆ. ಆದರೆ ನಮ್ಮ ಊರಿನಾಗ, ನಮ್ಮ ಜನರ ಎದುರು ಸಮ್ಮೇಳನದಲ್ಲಿ ಭಾಗವಹಿಸೋದು ಸಂತೋಷ ಅನ್ನಿಸ್ತದ.

* 1957ರಲ್ಲಿ ಧಾರವಾಡದಲ್ಲಿ ಸಮ್ಮೇಳನ ನಡೆದಾಗ ಭಾಗವಹಿಸಿದ್ದಿರಾ?

ನಾನಾಗ ಪಿಯುಸಿಯಲ್ಲಿದ್ದೆ. ಕುವೆಂಪು ಅವರನ್ನು ನೋಡಿದ್ದೆ. ಕವಿ ಆಗಬೇಕು ಎನ್ನುವ ಕನಸು ನಮಗೂ ಇದ್ದವಲ್ಲ. ಆ ಸಮ್ಮೇಳನದಲ್ಲಿ ಬೇಂದ್ರೆ ಕರಡಿ ಆಡಿಸುವವನ ಪದ್ಯ ವಾಚಿಸಿದ್ದರು. ಕುವೆಂಪು ಭಾಷಣ ಕೇಳಿದ ನೆನಪೂ ಇದೆ.

* ಪ್ರಸ್ತುತ ಸಮಾಜದಲ್ಲಿ ಕಾಣಿಸುತ್ತಿರುವ ಅಸಹಿಷ್ಣುತೆಯಲ್ಲಿ ಸಾಹಿತ್ಯ ವರ್ಗದ ಪಾತ್ರವೂ ಇದೆ ಎನ್ನುವ ಅಭಿಪ್ರಾಯವಿದೆ. ನಿಮ್ಮ ಪ್ರತಿಕ್ರಿಯೆ ಏನು?

ಅಸಹಿಷ್ಣುತೆ ಉಂಟುಮಾಡುವಲ್ಲಿ ಸಾಹಿತ್ಯ ವರ್ಗದ ಪಾತ್ರದ ಬಗ್ಗೆ ನನಗೆ ಗೊತ್ತಿಲ್ಲ. ಆದರೆ ನಮ್ಮ ಸಾಹಿತ್ಯಕ್ಕೆ, ಕಾವ್ಯಮೀಮಾಂಸೆಗೆ ಅಸಹಿಷ್ಣುತೆಯನ್ನು ಮೀರುವ ಶಕ್ತಿಯಿದೆ.

* ರಾಮಮಂದಿರ ಕಟ್ಟಬೇಕು ಎಂದು ಒಬ್ಬ ಲೇಖಕ ಹೇಳುವುದು, ಮತ್ತೊಬ್ಬ ಲೇಖಕ ರಾಮನನ್ನು ಅವಹೇಳನ ಮಾಡುವುದು – ಎರಡೂ ಅಸಹಿಷ್ಣುತೆ ಉಂಟುಮಾಡುವ ಪ್ರಯತ್ನಗಳಲ್ಲವೇ?

ಇಂಥ ಪ್ರಯತ್ನಗಳನ್ನು ಮಾಡಬಾರದು ಅಂತ ನಾನು ಹೇಳ್ತೇನೆ.

ಇಂದಿನಿಂದ ಅಕ್ಷರ ಜಾತ್ರೆ

ಧಾರವಾಡ: ಸಾಹಿತ್ಯ, ಸಂಗೀತ, ಜಾನಪದದ ತವರೂರು ಎನಿಸಿರುವ ಧಾರವಾಡದಲ್ಲಿ ಶುಕ್ರವಾರದಿಂದ (ಜ.4) ಜ.6ರ ವರೆಗೆ 84ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ.

ಬೇಂದ್ರೆ ಅವರಂಥ ಕವಿಗಳ ಕಾವ್ಯಸೆಲೆಯಾದ ಧಾರಾನಗರಿ ಆರು ದಶಕಗಳ ನಂತರ ನುಡಿಜಾತ್ರೆಗೆ ಅಣಿಗೊಂಡಿದೆ.

ಬರಹ ಇಷ್ಟವಾಯಿತೆ?

 • 16

  Happy
 • 4

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !