ಮಂಗಳವಾರ, ಮೇ 26, 2020
27 °C

ಚೆಂಡೆವಾದಕ ಕೃಷ್ಣ ಯಾಜಿ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಯಕ್ಷಗಾನದ ಪ್ರಸಿದ್ಧ ಚೆಂಡೆ ವಾದಕ ಕೃಷ್ಣಯಾಜಿ (7‌4) ಶುಕ್ರವಾರ ಹೃದಯಾಘಾತದಿಂದ ನಿಧನರಾದರು. ಹೊನ್ನಾವರ ತಾಲ್ಲೂಕಿನ ಮಾವಿನಕೆರೆಯ ತಮ್ಮ ನಿವಾಸದಲ್ಲಿ ತೀವ್ರ ಅಸ್ವಸ್ಥರಾಗಿದ್ದ ಅವರನ್ನು ಪಟ್ಟಣದ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು.

ಅವರಿಗೆ ಪತ್ನಿ, ಮೂವರು ಪುತ್ರಿಯರು ಇದ್ದಾರೆ. ಸುಮಾರು 50 ವರ್ಷಗಳಿಂದ ಯಕ್ಷಗಾನ ಲೋಕಕ್ಕೆ ಕಲಾ ಸೇವೆ ನೀಡುತ್ತಿದ್ದ ಅವರು, ಚೆಂಡೆಗೇ ತಾರಾಮೌಲ್ಯವನ್ನು ತಂದುಕೊಟ್ಟಿದ್ದರು. ಒಂದೇ ಬಾರಿಗೆ ಆರೇಳು ಚೆಂಡೆಗಳನ್ನು ಸಾಲಾಗಿ ಇರಿಸಿಕೊಂಡು ನುಡಿಸುವುದರಲ್ಲೂ ಪ್ರಸಿದ್ಧರಾಗಿದ್ದರು. ತಮ್ಮ ಆತ್ಮೀಯರ ವಲಯದಲ್ಲಿ ಕುಟ್ಟು ಯಾಜಿ ಎಂದೇ ಪರಿಚಿತರಾಗಿದ್ದರು.

ಅವರು ಇಡಗುಂಜಿ, ಕರ್ಕಿ ಹಾಸ್ಯಗಾರ, ಕಮಲಶಿಲೆ, ಸಾಲಿಗ್ರಾಮ, ಅಮೃತೇಶ್ವರಿ, ಮುಲ್ಕಿ, ಗುಂಡಬಾಳ ಮೇಳಗಳಲ್ಲಿ ಚೆಂಡೆವಾದಕರಾಗಿದ್ದರು. ಆರಂಭದಲ್ಲಿ ‍ಪಾತ್ರಧಾರಿಯಾಗಿದ್ದ ಕೃಷ್ಣ ಯಾಜಿ, ಕೋಡಂಗಿ, ಬಾಲಗೋಪಾಲ, ಸುಬ್ರಹ್ಮಣ್ಯ, ಅರ್ಜುನ, ಅಭಿಮನ್ಯು, ಚಂದ್ರಹಾಸ ಮುಂತಾದ ವಿವಿಧ ಪಾತ್ರಗಳಿಗೆ ಅವರು ಬಣ್ಣ ಹಚ್ಚಿದ್ದರು. ಬಳಿಕ ಕಿನ್ನೀರು ನಾರಾಯಣ ಹೆಗ್ಡೆ ಅವರಿಂದ ಮದ್ದಲೆ ವಾದನದಲ್ಲಿ ತರಬೇತಿ ಪಡೆದರು. ಗುಂಡ್ಮಿ ರಾಮಚಂದ್ರ ನಾವಡ ಅವರ ಬಳಿ ಮದ್ದಲೆ ಹಾಗೂ ಚೆಂಡೆ ವಾದನ ಕಲಿತರು. 

ಯಕ್ಷಗಾನಕ್ಕೆ ಸೀಮಿತವಾಗಿರುವ ಚೆಂಡೆಯನ್ನು ನಾಟಕಗಳಲ್ಲೂ ಪ್ರಯೋಗಿಸಿ ಯಶಸ್ವಿಯಾಗಿದ್ದರು. ದೇಶ ವಿದೇಶಗಳಲ್ಲಿ ಯಕ್ಷಗಾನದ ಚೆಂಡೆಯ ನಾದವನ್ನು ಪಸರಿಸಿದ ಹೆಗ್ಗಳಿಕೆ ಅವರದ್ದಾಗಿತ್ತು. 10 ವರ್ಷಗಳಿಂದ ನೂರಾರು ವಿದ್ಯಾರ್ಥಿಗಳಿಗೆ ಯಕ್ಷಗಾನದಲ್ಲಿ ತರಬೇತಿಯನ್ನೂ ನೀಡುತ್ತಿದ್ದರು.

ಹತ್ತಾರು ಪ್ರಶಸ್ತಿಗಳು: ಕಿನ್ನೀರು ನಾರಾಯಣ ಹೆಗ್ಡೆ ಪ್ರತಿಷ್ಠಾನದ ಪ್ರಶಸ್ತಿ, ಭಾಗವತ ನಾರಾಯಣಪ್ಪ ಉಪ್ಪೂರ ಪ್ರಶಸ್ತಿ, ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿ ಮುಂತಾದ ಗೌರವಗಳಿಗೂ ಅವರು ಪಾತ್ರರಾಗಿದ್ದರು. 

ಅವರ ಅಂತ್ಯಕ್ರಿಯೆಯು ಮಾವಿನಕೆರೆಯಲ್ಲಿ ಶನಿವಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು