ಸೋಮವಾರ, ಆಗಸ್ಟ್ 19, 2019
28 °C

ಬೆಳಗಾವಿಗೆ ಬಾರದ ಬಿಎಸ್‌ವೈ: ಆಕ್ರೋಶ

Published:
Updated:

ಬೆಳಗಾವಿ: ಕೃಷ್ಣಾ ನದಿ ಉಕ್ಕಿ ಹರಿಯುತ್ತಿರುವುದರಿಂದ ಹೆಚ್ಚಿನ ಹಾನಿಯಾಗಿರುವುದು, ಜನರು ಸಂತ್ರಸ್ತರಾಗಿರುವುದು ಜಿಲ್ಲೆಯಲ್ಲಿ. ಆದರೆ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಆ. 5ರಂದು ಕೈಗೊಳ್ಳಲಿರುವ ನೆರೆಪೀಡಿತ ಪ್ರದೇಶಗಳ ಭೇಟಿ ಪಟ್ಟಿಯಿಂದ ಬೆಳಗಾವಿಯನ್ನು  ಪರಿಗಣಿಸದಿರುವುದು ಇಲ್ಲಿನವರ ಆಕ್ರೋಶಕ್ಕೆ ಕಾರಣವಾಗಿದೆ.

ಚಿಕ್ಕೋಡಿ, ರಾಯಬಾಗ, ಅಥಣಿ ತಾಲ್ಲೂಕುಗಳಲ್ಲಿ ಪ್ರವಾಹ ಭೀತಿ ಇದೆ. ಈಗಾಗಲೇ ತೋಟಪಟ್ಟಿಗಳು ಸೇರಿದಂತೆ ಹಲವು ಗ್ರಾಮಗಳಿಗೆ ನೀರು ನುಗ್ಗಿದ್ದರಿಂದ ನೂರಾರು ಮಂದಿಯನ್ನು ಸ್ಥಳಾಂತರಿಸಲಾಗಿದೆ. ಸಾವಿರಾರು ಎಕರೆ ಬೆಳೆ ಹಾನಿಗೊಳಗಾಗಿದೆ. ಇದನ್ನು ಮುಖ್ಯಮಂತ್ರಿ ವೀಕ್ಷಿಸಿ, ಪರಿಹಾರ ಕಲ್ಪಿಸಬೇಕು ಎನ್ನುವುದು ಜನರ ಒತ್ತಾಯವಾಗಿದೆ.

ಭಾನುವಾರ ಬೆಳಿಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ್ದ ಅವರು, ಜಿಲ್ಲೆಗೆ ಭೇಟಿ ನೀಡುವುದಾಗಿ ತಿಳಿಸಿದ್ದರು. ಆದರೆ, ರಾತ್ರಿವರೆಗೂ ಜಿಲ್ಲಾಡಳಿತಕ್ಕೆ ಅಧಿಕೃತ ಮಾಹಿತಿ ಬಂದಿರಲಿಲ್ಲ.

ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ, ‘ಮುಖ್ಯಮಂತ್ರಿ ಜಿಲ್ಲಾ ಪ್ರವಾಸದ ಬಗ್ಗೆ ಮಾಹಿತಿ ಬಂದಿಲ್ಲ. ಅಥಣಿ, ಚಿಕ್ಕೋಡಿ, ರಾಯಬಾಗ ಭಾಗದಲ್ಲಿ ಮಳೆಯಾಗುತ್ತಿರುವುದರಿಂದ ಅವರು ಹೆಲಿಕಾಪ್ಟರ್‌ನಲ್ಲಿ ವೀಕ್ಷಿಸುವುದೂ ಸಾಧ್ಯವಾಗುತ್ತಿಲ್ಲ. ನಾಳೆವರೆಗೆ ಹವಾಮಾನ ಸಹಕರಿಸಿದರೆ ಅಥಣಿ ಭಾಗದಲ್ಲಿ ವೀಕ್ಷಣೆ ನಡೆಸಬಹುದು’ ಎಂದು ತಿಳಿಸಿದರು.

Post Comments (+)