ಶನಿವಾರ, ಮಾರ್ಚ್ 6, 2021
32 °C

ಬುದ್ಧಿಮಾಂದ್ಯ ಮಕ್ಕಳ ಬಾಳಿನ ‘ಅಮೃತ’ವಲ್ಲಿ

ಎಂ.ರಾಮಕೃಷ್ಣಪ್ಪ Updated:

ಅಕ್ಷರ ಗಾತ್ರ : | |

ಬುದ್ಧಿಮಾಂದ್ಯ, ಅಂಗವಿಕಲ ಮಕ್ಕಳ ಪಾಲನೆ, ಪೋಷಣೆಗೆ ಹೆತ್ತವರೇ ಹಿಂದೇಟು ಹಾಕುವರು. ಕೆಲವರು ಅಂಥ ಮಕ್ಕಳನ್ನು ಎಲ್ಲೋ ಬಿಟ್ಟು ಬಂದರೆ ಮತ್ತೆ ಕೆಲವರು ವಸತಿ ಶಾಲೆಗೆ ಸೇರಿಸಿ ತಮ್ಮ ಜವಾಬ್ದಾರಿಯಿಂದ ಮುಕ್ತಿ ಪಡೆಯಲು ಮುಂದಾಗುವರು. ಆದರೆ ಇಂಥ ಮಕ್ಕಳ ಬಾಳಿಗೆ ಬೆಳಕಾದವರು ಶಿಕ್ಷಕಿ ಅಮೃತವಲ್ಲಿ.

ಅಮೃತವಲ್ಲಿ ಟೀಚರ್ ಎಂದೇ ಖ್ಯಾತಿ ಗಳಿಸಿದ್ದಾರೆ. ಚಿಂತಾಮಣಿಯ ಕಿಶೋರ ಶಾಲೆಯಲ್ಲಿ ಇಪ್ಪತ್ತು ವರ್ಷಕ್ಕೂ ಹೆಚ್ಚು ಕಾಲ ಶಿಕ್ಷಕಿಯಾಗಿ ನಿವೃತ್ತಿಯಾಗಿದ್ದಾರೆ. ಅಮೃತವಲ್ಲಿ ಟೀಚರ್ ಅಂಧರು. ಆದರೂ ಮಕ್ಕಳ ಸೇವೆಯಲ್ಲಿ ತಮ್ಮನ್ನು ಸಂಪೂರ್ಣ ತೊಡಗಿಸಿಕೊಂಡಿದ್ದಾರೆ. ಅದಕ್ಕಾಗಿ ಆಧಾರ್ ಬುದ್ಧಿ ಮಾಂದ್ಯ ಮಕ್ಕಳ ಶಾಲೆ ತೆರೆದು ಕಾರ್ಯ ನಿರ್ವಹಿಸುತ್ತಿದ್ದಾರೆ.

ಹತ್ತು ಹಲವು ಸಂಕಷ್ಟಗಳ ನಡುವೆಯೂ ಶಾಲೆ ನಡೆಸುತ್ತಿದ್ದಾರೆ. ಬುದ್ಧಿಮಾಂದ್ಯ ಮತ್ತು ಅಂಗವಿಕಲ ಮಕ್ಕಳನ್ನು ‘ದೈವಿಕ ಮಕ್ಕಳು’, ‘ಹೃದಯವಂತ ಮಕ್ಕಳು’ ಎಂದೇ ಕರೆಯುತ್ತಾರೆ. ಅವರ ಸೇವೆಯಲ್ಲಿ ದೇವರನ್ನು ಕಾಣುತ್ತಿದ್ದಾರೆ. ಮಕ್ಕಳ ಮನಸ್ಸಿಗೆ ಯಾವುದೇ ರೀತಿ ನೋವು ಆಗದಂತೆ ಕಾಳಜಿ ವಹಿಸಿದ್ದಾರೆ.

ನಗರದ ಟ್ಯಾಂಕ್‌ ಬಂಡ್‌ ರಸ್ತೆಯಲ್ಲಿ ಆಧಾರ್ ಶಾಲೆ ಇದೆ. 2006ರಲ್ಲಿ 7 ಮಕ್ಕಳಿಂದ ಆರಂಭವಾದ ಶಾಲೆಯಲ್ಲಿ ಸದ್ಯ 40 ಜನ ಮಕ್ಕಳಿದ್ದಾರೆ. ಇಲ್ಲಿ ಯಾವುದೇ ಜಾತಿ, ಧರ್ಮದ ಭೇದವಿಲ್ಲ. ಎಲ್ಲರೂ ಒಂದೇ. ನಿತ್ಯವೂ 30 ಜನ ಮಕ್ಕಳು ಕಲಿಯಲು ಬರುತ್ತಾರೆ. ಐದು ಮಕ್ಕಳು ಅವರ ಮನೆಗಳಲ್ಲಿದ್ದಾರೆ. ಅವರ ಮನೆಗೆ ಹೋಗಿ ಪಾಠ ಮಾಡುವ, ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳುವಂತೆ ಪ್ರೇರೇಪಿಸಲಾಗುತ್ತದೆ. ಸಮಾಜದಲ್ಲಿ ಎಲ್ಲ ಮಕ್ಕಳಂತೆ ಈ ಮಕ್ಕಳು ಬೆಳೆಯಬೇಕು. ಅವರಿಗೂ ಪ್ರೀತಿ, ವಿಶ್ವಾಸ ಸಿಗಬೇಕು. ಸಮಾಜದ ಮುಖ್ಯವಾಹಿನಿಗೆ ಬಂದು ಸ್ವಾವಲಂಬನೆಯಿಂದ ಬದುಕ ಬೇಕು ಎಂಬ ಉದ್ದೇಶವೂ ಶಾಲೆಯ ಆರಂಭದ ಹಿಂದಿನ ಮಹತ್ವದ ಸಂಕಲ್ಪವಾಗಿದೆ.

ಬುದ್ಧಿ ಇಲ್ಲದ ಮಕ್ಕಳು, ಅಪ್ರಯೋಜಕರು, ತಂದೆ-ತಾಯಿ ಮತ್ತು ಸಮಾಜಕ್ಕೆ ಹೊರೆ ಎಂದು ಪೋಷಕರಿಂದ, ಸಮಾಜದಿಂದ ತಾತ್ಸಾರಕ್ಕೆ ಒಳಗಾದ ಮಕ್ಕಳನ್ನು ಪ್ರೀತಿಸುವ ಮನಸ್ಸು ಬೇಕು. ಸಮಾಜದ ಜನರ ಮನೋಭಾವ ಬದಲಾದರೆ ಎಲ್ಲವೂ ಸುಧಾರಣೆ ಆಗುವುದು. ಲೋಕದ ವ್ಯವಹಾರ ವನ್ನೇ ಅರಿಯದ ಮಕ್ಕಳಲ್ಲಿ ವಿಶೇಷ ಪ್ರೀತಿ, ವಿಶ್ವಾಸ ಇರುತ್ತದೆ. ಯಾವುದೇ ಆಡಂಬರ, ಅಪೇಕ್ಷೆ ಇಲ್ಲದೆ ಸರಳವಾಗಿರುತ್ತಾರೆ. ಆಚಾರ್ಯ ವಿನಯ್ ವಿನೇಕರ್ ಅವರ ಪ್ರಭಾವದಿಂದ ಶಾಲೆ ತೆರೆದಿದ್ದು, ಶಿಕ್ಷಕಿಯಾಗಿ ಹಾಗೂ ಸ್ಪೋಕನ್ ಇಂಗ್ಲಿಷ್ ಪಾಠ ಮಾಡಿ ಗಳಿಸಿದ ಹಣವನ್ನು ಈ ಮಕ್ಕಳ ಏಳ್ಗೆಗೆ, ಪರಿವರ್ತನೆಗೆ ಬಳಸಲಾಗಿದೆ. ಸದುದ್ದೇಶದಿಂದ ಮಾಡುತ್ತಿರುವ ಸೇವೆ ಭಗವಂತನಿಗೆ ಅರ್ಪಣೆ. ಇದರಲ್ಲಿ, ಲಾಭದ ಬಗ್ಗೆ ಎಂದಿಗೂ ಯೋಚನೆ ಮಾಡಿಲ್ಲ. ಅಥವಾ ಯಾರಾದರೂ ಸಹಾಯ ಮಾಡುತ್ತಾರೆ ಎಂಬ ಕಲ್ಪನೆಯೂ ಇಲ್ಲ ಎನ್ನುತ್ತಾರೆ ಅಮೃತವಲ್ಲಿ ಟೀಚರ್‌.

ಶಾಲೆಯಲ್ಲಿ ದೈಹಿಕ ಮತ್ತು ಮಾನಸಿಕ ವಿಕಲಚೇತನರು ಇದ್ದಾರೆ. ಕೆಲವರಿಗೆ ನಡೆಯಲೂ ಸಾಧ್ಯವಾಗುತ್ತಿಲ್ಲ. ಕೆಲವರಿಗೆ ಮಾತಾ ಡಲು ಬರುವುದಿಲ್ಲ. ಇವರಲ್ಲಿ ಕೆಲವರು ಯಾರೊಂದಿಗೂ ಸೇರಲ್ಲ, ಒಂದೇ ಕಡೆ ನಿಂತಲ್ಲಿ ನಿಲ್ಲಲ್ಲ. ಇವರನ್ನೆಲ್ಲ ನಿಭಾಯಿಸುವುದು, ಅವರ ಬೇಕು ಬೇಡಗಳಿಗೆ ಸ್ಪಂದಿಸಿ ಕೆಲಸ ಮಾಡುವುದು ಕಷ್ಟ. ಆದರೆ ತಾಳ್ಮೆ, ಪ್ರೀತಿ, ವಿಶ್ವಾಸದಿಂದ ಅಮೃತವಲ್ಲಿ ಟೀಚರ್ ಎಲ್ಲವನ್ನೂ ನಿರ್ವಹಿಸುವರು. ಈ ಮಕ್ಕಳ ಜೊತೆಗೆ ಅಮೃತವಲ್ಲಿ ಟೀಚರ್‌ ತಮ್ಮ 93 ವರ್ಷದ ತಾಯಿಯ ಸೇವೆಯೂ ಮಾಡುತ್ತಿದ್ದಾರೆ.

ಆರಂಭದಲ್ಲಿ ಶಾಲೆಯನ್ನು ಟ್ರಸ್ಟಿ ಮದ್ದಿರೆಡ್ಡಿ ಎಂಬುವರ ಕಾರ್ಖಾನೆಯಲ್ಲಿ ತೆರೆಯಲಾಗಿತ್ತು. ನಂತರ ಉತ್ತಮವಾದ ಸ್ಥಳ ಪಡೆದು ನೂತನ ಕಟ್ಟಡ ನಿರ್ಮಿಸಲಾಗಿದೆ. ಬೆಳಿಗ್ಗೆಯಿಂದ ಸಂಜೆಯವರೆಗೆ ಮಕ್ಕಳ ಜತೆಯಲ್ಲಿ ಆಟ ಪಾಠ ಇರುತ್ತದೆ. ಮಕ್ಕಳಲ್ಲಿ ಸಾಧ್ಯವಾದಷ್ಟೂ ಸ್ವಂತಿಕೆ ರೂಢಿಸಲು ಪ್ರಯತ್ನ ಮಾಡಲಾಗುತ್ತದೆ.

ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿರುವ ಅಮೃತವಲ್ಲಿ ಟೀಚರ್‌ಗೆ ಸಾವಿರಾರು ಶಿಷ್ಯರಿದ್ದಾರೆ. ಅವರಲ್ಲಿ ಬಹುತೇಕ ಜನರು ಉನ್ನತ ಹುದ್ದೆ, ಸ್ಥಾನಗಳಲ್ಲಿದ್ದಾರೆ. ಅನೇಕ ಜನ ಮಕ್ಕಳ ಪೋಷಣೆಗೆ ದಾನ ನೀಡಿದ್ದರೆ. ಸರ್ಕಾರದ ನೆರವಿಲ್ಲದೆ ಸೇವಕ್ ಸಂಸ್ಥೆ ಹಾಗೂ ದಾನಿಗಳ ನೆರವಿನಿಂದ ಆಧಾರ್ ಶಾಲೆ ನಿರ್ವಹಿಸಲಾಗುತ್ತಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು