ಚಿಕ್ಕಬಳ್ಳಾಪುರ: ಭೀಕರ ಅಪಘಾತ: 11 ಜನ ಸಾವು

ಶುಕ್ರವಾರ, ಜೂಲೈ 19, 2019
23 °C
ಖಾಸಗಿ ಬಸ್‌ ಮತ್ತು ಖಾಸಗಿ ಸಾರಿಗೆ ವಾಹನದ ನಡುವೆ ಮುಖಾಮುಖಿ ಡಿಕ್ಕಿ

ಚಿಕ್ಕಬಳ್ಳಾಪುರ: ಭೀಕರ ಅಪಘಾತ: 11 ಜನ ಸಾವು

Published:
Updated:
Prajavani

ಚಿಕ್ಕಬಳ್ಳಾಪುರ: ಅಪ್ಪಚ್ಚಿಯಾದ ಗಾಡಿಗಳ ಸುತ್ತ ಎಲ್ಲೆಂದರಲ್ಲಿ ಚೆದುರಿ ಬಿದ್ದ ಚಪ್ಪಲಿಗಳು, ರಸ್ತೆಯನ್ನು ಕೆಂಪುಗೊಳಿಸಿದ ರಕ್ತದ ಕಲೆಗಳು, ಅನಾಥ ಸ್ಥಿತಿಯಲ್ಲಿ ಗೋಚರಿಸಿದ ಮಾರುಕಟ್ಟೆಯಿಂದ ಅದೇ ತಾನೇ ಖರೀದಿಸಿದ ಪದಾರ್ಥಗಳನ್ನೇ ದಿಟ್ಟಿಸುತ್ತ ಅತ್ತಿಂದಿತ್ತ ಹೆಜ್ಜೆ ಹಾಕಿ ನೋಡುತ್ತಿದ್ದವರ ಮುಖದಲ್ಲಿ ಕಾಣುತ್ತಿದ್ದದ್ದು ಮಾತ್ರ ಭಯದ ಛಾಯೆ.

ಚಿಂತಾಮಣಿ ತಾಲ್ಲೂಕಿನ ಮುರುಗಮಲ್ಲ ರಸ್ತೆಯಲ್ಲಿ ಕೆಂಚಾರ್ಲಹಳ್ಳಿ ಪೊಲೀಸ್‌ ಠಾಣೆ ಸರಹದ್ದಿನ ಗಡಿಗೆ ಹೊಂದಿಕೊಂಡಂತೆ, ಬಾರ್ಲಹಳ್ಳಿ ಗೇಟ್‌ ಬಳಿ ಬುಧವಾರ ಬೆಳಿಗ್ಗೆ ಖಾಸಗಿ ಬಸ್‌ ಮತ್ತು ಖಾಸಗಿ ಸಾರಿಗೆ ವಾಹನದ (ಟಾಟಾ ಮ್ಯಾಜಿಕ್) ನಡುವೆ ನಡೆದ ಭೀಕರ ಅಪಘಾತದ ಸ್ಥಳದಲ್ಲಿ ಕಂಡುಬಂದ ಚಿತ್ರಣವಿದು.

ಜಿಲ್ಲೆಯ ಪ್ರಸಿದ್ಧ ಯಾತ್ರಾ ಕ್ಷೇತ್ರಗಳಲ್ಲಿ ಒಂದಾದ ಮುರುಗಮಲ್ಲ ಸಮೀಪ ನಡೆದ ಘೋರ ದುರಂತದಲ್ಲಿ ಟಾಟಾ ಮ್ಯಾಜಿಕ್ ವಾಹನದಲ್ಲಿದ್ದ 11 ಜನರು ಅಪಘಾತದ ಸ್ಥಳದಲ್ಲಿಯೇ ಜವರಾಯನ ಅಟ್ಟಹಾಸಕ್ಕೆ ಬಲಿಯಾದ ಸುದ್ದಿ ಜನಸಾಮಾನ್ಯರು, ಖಾಸಗಿ ವಾಹನಗಳ ಪ್ರಯಾಣಿಕರನ್ನು ಬೆಚ್ಚಿ ಬೀಳಿಸಿತು.

ಅಪಘಾತದ ಸುದ್ದಿ ಕೇಳಿ ಸ್ಥಳಕ್ಕೆ ದೌಡಾಯಿಸಿದವರು ಜಜ್ಜಿ ಹೋದ ಚಿಕ್ಕ ಗಾಡಿಯೊಳಗೆ ಹೃದಯ ವಿದ್ರಾವಕ ಸ್ಥಿತಿಯಲ್ಲಿ ಪ್ರಾಣ ಬಿಟ್ಟವರನ್ನು ಕಂಡು ಭಯಭೀತಗೊಂಡಿದ್ದರು. ಟಾಟಾ ಮ್ಯಾಜಿಕ್‌ ವಾಹನದಲ್ಲಿದ್ದ ಪ್ರಯಾಣಿಕರ ಪೈಕಿ ಮಹಿಳೆಯೊಬ್ಬರು ಅಪ್ಪಚ್ಚಿಯಾದ ಮುಖ ಅಪಘಾತದ ಭೀಕರತೆ ಬಿಂಬಿಸುತ್ತಿತ್ತು.

ಅಪಘಾತಕ್ಕೆ ಈಡಾದ ಖಾಸಗಿ ಬಸ್‌ನಲ್ಲಿದ್ದ, ಭಾರಿ ದುರಂತಕ್ಕೆ ಸಾಕ್ಷಿಯಾಗಿ ಚಿಂತಾಮಣಿಯ ಸರ್ಕಾರಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದ ಗಾಯಾಳುಗಳು ಆತಂಕದ ಕನವರಿಕೆಯಲ್ಲಿಯೇ ಇದ್ದದ್ದು ಕಂಡುಬಂತು.

‘ಆತ ಚಾಲಕನಲ್ಲ ರಾಕ್ಷಸ. ಅತಿ ವೇಗದಲ್ಲಿ ಓಲಾಡುತ್ತ ಓಡುತ್ತಿದ್ದ ಬಸ್‌ ಅಲ್ಲಲ್ಲಿ ಎಗರಿ ಬೀಳುತ್ತಿತ್ತು. ಚಿಕ್ಕ ರಸ್ತೆಯಲ್ಲಿ ಬಸ್‌ ಓಡುವ ಪರಿ ಕಂಡು ಮೈ ಬೇವರಿತ್ತು. ಏನೋ ಅನಾಹುತವಾಗಲಿದೆ ಎಂಬ ಆತಂಕ ಮನದ ಮೂಲೆಯಲ್ಲಿ ಮೂಡಿದ ಮರುಗಳಿಗೆಯಲ್ಲೇ ಬಸ್ ಎದುರುಗಡೆಯಿಂದ ಬರುತ್ತಿದ್ದ ಗಾಡಿಯನ್ನು ಅಪ್ಪಚ್ಚಿ ಮಾಡಿತ್ತು. ಮುರುಗಮಲ್ಲದ ಅಮ್ಮಾಜಾನ್ ಮತ್ತು ಭಾವಾಜಾನ್ ನಮ್ಮನ್ನು ಕಾಪಾಡಿರಬೇಕು’ ಎಂದು ಗಾಯಾಳುಯೊಬ್ಬರು ತಿಳಿಸಿದರು.

ನೋವಿನಿಂದ ಬಳಲುತ್ತಿದ್ದ ಬೆಂಗಳೂರಿನ ಚಂದ್ರಾಲೇಔಟ್‌ ನಿವಾಸಿ ಇರ್ಫಾನ್ ಬಸ್‌ ಚಾಲಕನಿಗೆ ಹಿಡಿಶಾಪ ಹಾಕುತ್ತಿದ್ದರು. ವಿಚಾರಿಸಿದರೆ, ‘ಅದು ದ್ವಿಮುಖ ಸಂಚಾರವಿರುವ ಸಣ್ಣ ರಸ್ತೆ, ಚಾಲಕ ಅದರಲ್ಲಿ ನಿಧಾನವಾಗಿ ಬಸ್ ಓಡಿಸಬೇಕಿತ್ತು. ಆದರೆ ಆತ ತುಂಬಾ ವೇಗವಾಗಿಯೇ ಓಡಿಸುತ್ತಿದ್ದ. ಜಂಪ್ ಆಗುತ್ತಿತ್ತು. ಆ ರೇಜ್‌ನಲ್ಲಿ ಗಾಡಿ ಓಡಿಸುವುದು ನೋಡಿರಲಿಲ್ಲ. ಇನ್ನೇನು ಬಸ್‌ ಬಿದ್ದೇ ಹೋಯಿತು ಎನ್ನುವುದರ ಒಳಗೆ ಮುಂದೆ ಹೋಗಿ ಟಾಟಾ ಮ್ಯಾಜಿಕ್ ಗಾಡಿಗೆ ಗುದ್ದಿತ್ತು’ ಎಂದು ಹೇಳಿದರು.

ಆಸ್ಪತ್ರೆಯ ಮುಂದೆ ಕುಟುಂಬದ ಸದಸ್ಯರನ್ನು, ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರ ರೋಧನ ಮುಗಿಲು ಮುಟ್ಟಿ ನೋಡುವವರ ಕರಳು ಹಿಂಡುತಿತ್ತು. ಶವಾಗಾರದ ಆವರಣದಲ್ಲಿ ಜೋಡಿಸಿಟ್ಟ ಶವಗಳನ್ನು ಪಡೆಯಲು ಹಿಂಡುಹಿಂಡಾಗಿ ಬರುತ್ತಿದ್ದ ಸಂಬಂಧಿಕರ ಗೋಳಾಟ ಮನಕರಗಿಸುವಂತಿತ್ತು. ನೆರೆದವರ ಪೈಕಿ ಕೆಲವರು ಖಾಸಗಿ ಬಸ್‌ನವರಿಗೆ, ಚಾಲಕರಿಗೆ, ಮತ್ತೆ ಕೆಲವರು ಆರ್‌ಟಿಒ ಅಧಿಕಾರಿಗಳಿಗೆ, ಆಡಳಿತ ವ್ಯವಸ್ಥೆಗೆ ಹಿಡಿಶಾಪ ಹಾಕುತ್ತಿದ್ದದ್ದು ಕಂಡುಬಂತು.

ಮೃತರ ಪೈಕಿ ಚಿಂತಾಮಣಿ ತಾಲ್ಲೂಕಿನ ಮುರುಗಲ್ಲ ನಿವಾಸಿ, ಟಾಟಾ ಮ್ಯಾಜಿಕ್ ವಾಹನ ಚಾಲಕ ಶಾಬಾಜ್‌ (19), ಮುರುಗಮಲ್ಲ ನಿವಾಸಿಗಳಾದ ಸುರೇಶ್‌ (38), ಗೌರಮ್ಮ (45), ಪಾತಪೇಟೆ ಗ್ರಾಮದ ನಿವಾಸಿ ಕೃಷ್ಣಪ್ಪ (45), ದಂಡುಪಾಳ್ಯ ನಿವಾಸಿ ನಾರಾಯಣಸ್ವಾಮಿ (55), ಬೈನಹಳ್ಳಿ ನಿವಾಸಿ ವೆಂಕಟರವಣಪ್ಪ (50), ಕೋನಪಲ್ಲಿ ಗ್ರಾಮದ ತಿಮ್ಮಯ್ಯ (56), ತಮಿಳುನಾಡಿನ ಹೊಸೂರು ನಿವಾಸಿ ಕುಮಾರ್, ಕೇರಳದ ಎ.ಎ.ಸಿದ್ಧಿಕ್ (50) ಮತ್ತು ರಜೀನಾ ಸಿದ್ಧಿಕಿ (48) ಎಂಬುವರ ಗುರುತು ಪತ್ತೆಯಾಗಿವೆ. ಒಬ್ಬ ಮಹಿಳೆಯ ಗುರುತು ಪತ್ತೆ ಆಗಿಲ್ಲ.

ಬೆಂಗಳೂರಿನ ಚಂದ್ರಾಲೇಔಟ್‌ನ ನಿವಾಸಿಗಳಾದ ಇರ್ಫಾನ್ (26), ಸಮ್ರೀನ್ (19), ಕೌಸರ್‌ (51), ತುರ್ಕಿನ್ನಾಸ್‌ (54), ತಾಜ್ (35), ಮುಬೀನ್ (16), ಬೆಂಗಳೂರಿನ ಆರ್.ಟಿ.ನಗರ ನಿವಾಸಿ ಫೈಯಾಜುದ್ಧಿನ್ (43), ಮುರುಗಲ್ಲ ನಿವಾಸಿ ಅಶ್ವಿನಿ (19), ಮಿಟ್ಟೇಮರಿ ನಿವಾಸಿ ದೊಡ್ಡ ನರಸಪ್ಪ (64) ಅಪಘಾತದಲ್ಲಿ ಗಾಯಗೊಂಡಿದ್ದಾರೆ.

ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್, ಕೇಂದ್ರ ವಲಯ ಐಜಿಪಿ ಶರತ್ ಚಂದ್ರ, ಎಸ್ಪಿ ಎಸ್‌ಪಿ ಕೆ.ಸಂತೋಷ್ ಬಾಬು, ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ನಾಗರಾಜ್ ಅವರು ಅಪಘಾತದ ಸ್ಥಳ ಮತ್ತು ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದರು. ಜಿಲ್ಲಾಧಿಕಾರಿ ಅವರು, ‘ಸದ್ಯ ಅಂತ್ಯಸಂಸ್ಕಾರಕ್ಕೆ ತಾಲ್ಲೂಕು ಆಡಳಿತದ ವತಿಯಿಂದ ಮೃತರ ಕುಟುಂಬಕ್ಕೆ ತಲಾ ₹5 ಸಾವಿರ ನೀಡಲಾಗುವುದು. ಮೃತರ ಕುಟುಂಬಗಳಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಪರಿಹಾರ ಕೊಡಿಸಲು ಕ್ರಮಕೈಗೊಳ್ಳುತ್ತೇವೆ’ ಎಂದು ತಿಳಿಸಿದರು.

ವಿಧಾನಸಭೆ ಉಪ ಸಭಾಧ್ಯಕ್ಷ ಎಂ.ಕೃಷ್ಣಾರೆಡ್ಡಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಪೊಲೀಸ್‌ ಅಧಿಕಾರಿಗಳಿಂದ ಘಟನೆಯ ಮಾಹಿತಿ ಪಡೆದು, ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಇದೇ ವೇಳೆ ಅವರು ‘ವೈಯಕ್ತಿಕವಾಗಿ ಮೃತರ ಕುಟುಂಬಗಳಿಗೆ ತಲಾ ₹25 ಸಾವಿರ ಮತ್ತು ಗಾಯಾಳುಗಳಿಗೆ ತಲಾ ₹5 ಸಾವಿರ ಪರಿಹಾರ ನೀಡುವೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 3

  Sad
 • 0

  Frustrated
 • 1

  Angry

Comments:

0 comments

Write the first review for this !