ಹೊಸದುರ್ಗದಲ್ಲಿ 100ಕ್ಕೂ ಹೆಚ್ಚು ಮಂದಿಗೆ ಚಿಕೂನ್‌ಗುನ್ಯಾ ಶಂಕೆ

7

ಹೊಸದುರ್ಗದಲ್ಲಿ 100ಕ್ಕೂ ಹೆಚ್ಚು ಮಂದಿಗೆ ಚಿಕೂನ್‌ಗುನ್ಯಾ ಶಂಕೆ

Published:
Updated:
Deccan Herald

ಹೊಸದುರ್ಗ: ‘ಹಾಸಿಗೆ ಹಿಡಿದು ಎರಡು ತಿಂಗಳಾಯ್ತು ಸ್ವಾಮಿ. ನನಗೆ ಸರಾಗವಾಗಿ ಓಡಾಡಲು, ಕುಳಿತುಕೊಳ್ಳಲು, ನೇರವಾಗಿ ನಿಲ್ಲಲು, ಮನೆ ಕೆಲಸವನ್ನು ಮಾಡಲೂ ಆಗುತ್ತಿಲ್ಲ’..

ತಾಲ್ಲೂಕಿನ ಮಧುರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ರಹ್ಮವಿದ್ಯಾನಗರ ಗ್ರಾಮದ ಗಂಗಮ್ಮ, ಪಾರ್ವತಮ್ಮ, ಪೂಜಾರಿ ಮೂರ್ತಪ್ಪ, ಹರೀಶ್‌ ಭಾನುವಾರ ‘ಪ್ರಜಾವಾಣಿ’ ಜತೆ ತಮ್ಮ ಅಳಲು ತೋಡಿಕೊಂಡಿದ್ದು ಹೀಗೆ.

‘ಕೀಲು, ಮೂಳೆ ನೋವು, ಮುಖ ಹಾಗೂ ಕೈಕಾಲು ಬಾವು ಬರುತ್ತಿದೆ. ರಾತ್ರಿ ಹಾಸಿಗೆಯಲ್ಲಿ ಮಲಗಿದರೆ ಬೆಳಿಗ್ಗೆ 8 ಗಂಟೆಯಾದರೂ ಏಳಲು ಆಗೊಲ್ಲ. ಇಬ್ಬರು ಹಿಡಿದುಕೊಂಡು ಮೇಲಕ್ಕೆತ್ತಿ ಕೂರಿಸಬೇಕು. ಹಲ್ಲು ಉಜ್ಜಲು ಕೈಬೆರಳು ಸರಿಯಾಗಿ ಆಡುವುದಿಲ್ಲ. ಒಂದೂವರೆ ಅಡಿ ಇರುವ ಚರಂಡಿ ದಾಟಲು ಆಗುವುದಿಲ್ಲ. ಊಟ ಮಾಡುವುದೂ ಕಷ್ಟವಾಗುತ್ತಿದೆ. ನಿಶ್ಶಕ್ತಿ ಕಾಡುತ್ತಿದೆ’ ಎನ್ನುತ್ತಾರೆ ಗಂಗಮ್ಮ.

‘ನಮ್ಮ ಮನೆಯಲ್ಲಿ ಮೂವರಿಗೆ ಈ ರೀತಿ ಆಗಿದ್ದು, ಎರಡು ತಿಂಗಳಿನಿಂದ ಆಸ್ಪತ್ರೆಗೆ ಹೋಗಿ ಬರುತ್ತಿದ್ದೇವೆ. ಬರಗಾಲದಿಂದ ಕೈಯಲ್ಲಿ ದುಡ್ಡು ಇಲ್ಲದಿರುವಾಗ ಇಂಜೆಕ್ಷನ್‌, ಔಷಧ ಹಾಗೂ ಗುಳಿಗೆಗೆ ₹ 10 ಸಾವಿರದಷ್ಟು ಖರ್ಚು ಮಾಡಿದ್ದೇವೆ. ಇಷ್ಟಾದರೂ ವೈದ್ಯರು ಇದು ಏನು ಕಾಯಿಲೆ ಎಂದು ಸರಿಯಾಗಿ ಹೇಳುತ್ತಿಲ್ಲ. ವೈರಲ್‌ ಫೀವರ್‌ನಿಂದ ಈ ರೀತಿ ಆಗಿದೆ. ಎರಡ್ಮೂರು ತಿಂಗಳವರೆಗೂ ನೋವು ಬರುತ್ತದೆ ಎಂದು ಹೇಳುತ್ತಾರೆ ಅಷ್ಟೆ. ಗ್ರಾಮದಲ್ಲಿ ಮೂರು ತಿಂಗಳ ಹಿಂದೆ ಇಬ್ಬರಿಗಿದ್ದ ಈ ಕಾಯಿಲೆ ಈಗ ನೂರಾರು ಜನರಿಗೆ ಆಗಿದೆ’ ಎನ್ನುತ್ತಾರೆ ಶಿಕ್ಷಕ ಮೂಡಲಗಿರಿಯಪ್ಪ.

‘120 ಮನೆಗಳಿರುವ ಈ ಗ್ರಾಮದಲ್ಲಿ 600 ಜನರು ವಾಸಿಸುತ್ತಿದ್ದು, 200ಕ್ಕೂ ಅಧಿಕ ಜನರು ಕೀಲು ಹಾಗೂ ಮೂಳೆನೋವು ಬಾಧೆಯಿಂದ ಬಳಲುತ್ತಿದ್ದಾರೆ. ಹಣ ಇರುವವರು ಶಿವಮೊಗ್ಗ, ದಾವಣಗೆರೆ ಆಸ್ಪತ್ರೆಗಳಿಗೂ ಹೋಗಿ ತೋರಿಸಿದ್ದಾರೆ. ಪರಿಸ್ಥಿತಿ ಹೀಗಿದ್ದರೂ ಆರೋಗ್ಯ ಇಲಾಖೆಯ ಯಾರೊಬ್ಬರೂ ಭೇಟಿ ನೀಡಿಲ್ಲ’ ಎನ್ನುತ್ತಾರೆ ರೋಗಕ್ಕೆ ತುತ್ತಾಗಿರುವ ಹರೀಶ್‌, ಬಸವರಾಜು, ರವಿ, ತಿಪ್ಪೇಶಪ್ಪ, ಮಲ್ಲಿಕಾರ್ಜುನ್‌, ಸಚಿನ್‌, ರಾಜಪ್ಪ, ಷಡಕ್ಷರಿ, ಓಂಕಾರಪ್ಪ, ಕಿರಣ್‌.

**

ಸೋಮವಾರ ವೈದ್ಯರು ಹಾಗೂ ಅರೆ ವೈದ್ಯಕೀಯ ಸಿಬ್ಬಂದಿಯನ್ನು ಕಳುಹಿಸುತ್ತೇನೆ. ಅಲ್ಲಿನ ಜನರ ಆರೋಗ್ಯ ಸಮಸ್ಯೆ ಕುರಿತು ಸಮೀಕ್ಷೆ ಮಾಡಿಸಿ, ರೋಗ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುವುದು.
- ಡಾ.ಬಿ.ವಿ. ನೀರಜ್‌, ಜಿಲ್ಲಾ ಆರೋಗ್ಯಾಧಿಕಾರಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !