ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲ್ಯ ವಿವಾಹ ನೋಂದಣಿ ಮಾಡಿದ ಅಧಿಕಾರಿ!

ಇಬ್ಬರು ಹುಡುಗಿಯರಿಗೆ ಅಪ್ತಾಪ್ತ ವಯಸ್ಸಿನಲ್ಲೇ ಮದುವೆ
Last Updated 9 ಜನವರಿ 2019, 19:55 IST
ಅಕ್ಷರ ಗಾತ್ರ

ಬಳ್ಳಾರಿ: ಬಾಲ್ಯ ವಿವಾಹ ನಿಷೇಧದ ನಡುವೆಯೂ, ನಗರದ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಎರಡು ಬಾಲ್ಯವಿವಾಹಗಳು ನೋಂದಣಿಯಾಗಿವೆ.

18 ವರ್ಷ ತುಂಬುವ ಮೊದಲೇ ಇಬ್ಬರು ಬಾಲಕಿಯರಿಗೆ ಮದುವೆ ಮಾಡಲಾಗಿದ್ದು, ಅದನ್ನು ಅಧಿಕಾರಿ ನೋಂದಣಿ ಮಾಡಿದ್ದಾರೆ.

ಅವರನ್ನು ಮದುವೆಯಾದವರು ಕಟ್ಟಡ ಕಾರ್ಮಿಕರು. ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು ನೀಡುವ, ಮದುವೆ ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಆ ದಾಖಲೆಗಳ ಪರಿಶೀಲನೆ ಸಂದರ್ಭದಲ್ಲಿ ಬಾಲ್ಯವಿವಾಹ ನಡೆದಿರುವುದು ಬೆಳಕಿಗೆ ಬಂದಿದೆ. ಕಳೆದ ವರ್ಷ ಆಗಸ್ಟ್‌ ಮತ್ತು ಸೆಪ್ಟೆಂಬರ್‌ನಲ್ಲಿಯೇ ನೋಂದಣಿಯಾಗಿದ್ದರೂ ಇದುವರೆಗೂ ಅಧಿಕಾರಿ ವಿರುದ್ಧ ಕ್ರಮ ಕೈಗೊಂಡಿಲ್ಲ. ಆದರೆ, ಸಹಾಯಧನ ವಿತರಣೆಯನ್ನು ತಡೆಹಿಡಿಯಲಾಗಿದೆ.

ನಗರದ ರಂಗಸ್ವಾಮಿ ಎಂಬುವವರು ಅರ್ಜಿ ಸಲ್ಲಿಸಿದಾಗ ಅವರ ಪತ್ನಿಗೆ 17 ವರ್ಷ 10 ತಿಂಗಳಿಗೆ ಮದುವೆಯಾಗಿರುವುದಾಗಿ ತಿಳಿದು ಬಂದಿದೆ. ರಂಗಮ್ಮ ಎಂಬುವವರು ಅದೇ ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸಿದಾಗ, ಅವರ ಮಗಳಿಗೆ 17 ವರ್ಷ, 11 ತಿಂಗಳಿಗೆ ಮದುವೆ ಮಾಡಲಾಗಿದೆ ಎಂಬುದು ಗೊತ್ತಾಗಿದೆ.

ರಂಗಸ್ವಾಮಿ ಹಿಂದಿನ ವರ್ಷ ಏಪ್ರಿಲ್‌ನಲ್ಲಿ ಮದುವೆಯಾಗಿ ಆಗಸ್ಟ್‌ನಲ್ಲಿ ನೋಂದಣಿ ಮಾಡಿಸಿದ್ದಾರೆ. ರಂಗಮ್ಮನವರ ಮಗಳಿಗೆ ಅದೇ ವರ್ಷ ಜೂನ್‌ನಲ್ಲಿ ಮದುವೆಯಾಗಿ ಸೆಪ್ಟೆಂಬರ್‌ನಲ್ಲಿ ನೋಂದಣಿ ಮಾಡಿಸಲಾಗಿದೆ.

ತನಿಖೆ: ‘ಉಪ ನೋಂದಣಾಧಿಕಾರಿಯು ತಪ್ಪೆಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಬಗ್ಗೆ ಸಂಪೂರ್ಣ ತನಿಖೆ ನಡೆಸಿ ವರದಿ ನೀಡುವಂತೆ ಜಿಲ್ಲಾ ನೋಂದಣಾಧಿಕಾರಿಗೆ ಸೂಚಿಸಲಾಗುವುದು’ ಎಂದು ಬಾಲ್ಯ ವಿವಾಹ ತಡೆ ಸಮಿತಿಯ ಸದಸ್ಯರೂ ಆಗಿರುವ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ವಿ.ರಾಜೇಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಾಲಕಿಯರ ಮದುವೆ ನೋಂದಣಿ ಹೇಗೆ ನಡೆಯಿತು? ಯಾರು ಪ್ರಭಾವ ಬೀರಿದರು? ಅದು ಅಧಿಕಾರಿಯ ಗಮನದಲ್ಲಿತ್ತೇ? ಇರಲಿಲ್ಲವೇ? ಎಂಬುದನ್ನೂ ತಿಳಿದುಕೊಳ್ಳಬೇಕು. ಆ ಬಗ್ಗೆ ಪರಿಶೀಲಿಸಿ ವರದಿ ಕೊಡುವಂತೆ ಸೂಚಿಸಲಾಗುವುದು. ನಂತರ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ನೋಂದಣಿ ಇಲಾಖೆಯ ಮಹಾನಿರ್ದೇಶಕರಿಗೆ ಶಿಫಾರಸು ಪತ್ರ ಬರೆಯಲಾಗುವುದು’ ಎಂದು ಅವರು ಹೇಳಿದರು.

**

18 ವರ್ಷ ತುಂಬುವ ಮುನ್ನವೇ ಬಾಲಕಿಯರಿಗೆ ಮದುವೆ ಮಾಡುವುದು ಅಪರಾಧ. ಅಂಥ ಮದುವೆಯನ್ನು ನೋಂದಣಿ ಮಾಡುವುದು ಕೂಡ ಅಪರಾಧವೇ.

–ಡಾ.ಕೆ.ವಿ.ರಾಜೇಂದ್ರ, ಜಿ.ಪಂ ಸಿಇಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT