ಮಂಗಳವಾರ, ಏಪ್ರಿಲ್ 7, 2020
19 °C
ಸಿಐಐಎಲ್: ಶಾಸ್ತ್ರೀಯ ಕನ್ನಡ ಕೇಂದ್ರಕ್ಕೆ ಯೋಜನಾ ನಿರ್ದೇಶಕ, ಸಂಶೋಧನಾ ಸಿಬ್ಬಂದಿ ನೇಮಕಾತಿ

ನಿಯಮ ಉಲ್ಲಂಘಿಸಿ ಅಧಿಸೂಚನೆ: ಆರೋಪ

ಎನ್‌. ನವೀನ್‌ ಕುಮಾರ್‌ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕರು ಹಾಗೂ ಸಂಶೋಧನಾ ಸಿಬ್ಬಂದಿ ನೇಮಕಾತಿಗಾಗಿ ಭಾರತೀಯ ಭಾಷಾ ಸಂಸ್ಥಾನವು (ಸಿಐಐಎಲ್‌) ಅಧಿಸೂಚನೆ ಹೊರಡಿಸಿದ್ದು, ಈ ವೇಳೆ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ (ಎಂಎಚ್‌ಆರ್‌ಡಿ) ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಯೋಜನಾ ನಿರ್ದೇಶಕರು, 5 ಹಿರಿಯ ಸಂಶೋಧಕರು, 10 ಸಹ ಸಂಶೋಧಕರು ಹಾಗೂ ಕಿರಿಯ ದರ್ಜೆ ಸಹಾಯಕರ ಒಂದು ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.

ಶಾಸ್ತ್ರೀಯ ಕನ್ನಡ ಕೇಂದ್ರಕ್ಕೆ ನೇಮಕವಾಗುವ ಪ್ರತಿ ಸಿಬ್ಬಂದಿಯ ಸೇವಾವಧಿ ಮೂರು ವರ್ಷ. ಆದರೆ, ಈಗಾಗಲೇ ಹುದ್ದೆಯಲ್ಲಿರುವ ಯೋಜನಾ ನಿರ್ದೇಶಕರ ಸೇವಾವಧಿ ಇನ್ನೂ 10 ತಿಂಗಳು ಇದೆ. ಹತ್ತು ಸಹ ಸಂಶೋಧಕರ ಸೇವಾವಧಿ ಕೂಡ ಇನ್ನೂ ಒಂದೂವರೆ ವರ್ಷ ಇದೆ.

‘ಯೋಜನಾ ನಿರ್ದೇಶಕರ ನೇಮಕಾತಿಗೆ ಎಂಎಚ್‌ಆರ್‌ಡಿ ಮೂಲಕ ಅಧಿಸೂಚನೆ ಹೊರಡಿಸಬೇಕಿತ್ತು. ಸಂಶೋಧಕರ ಹುದ್ದೆಗಳಿಗೆ ನೇಮಕಾತಿ ಮಾಡುವ ಸಂದರ್ಭದಲ್ಲಿ ಯೋಜನಾ ನಿರ್ದೇಶಕರೊಂದಿಗೆ ಚರ್ಚಿಸಿ, ಶಾಸ್ತ್ರೀಯ ಕನ್ನಡ ಅಧ್ಯಯನ ಕೇಂದ್ರದ ಯೋಜನಾ ಮೇಲುಸ್ತುವಾರಿ ಮಂಡಳಿಯಿಂದ (ಪಿಎಂಬಿ) ಅನುಮೋದನೆ ಪಡೆಯಬೇಕು ಎಂದು ಎಂಎಚ್‌ಆರ್‌ಡಿ ನಿಯಮ ಹೇಳುತ್ತದೆ. ಆದರೆ, ಎಲ್ಲ ನಿಯಮಗಳನ್ನು ಉಲ್ಲಂಘಿಸಿ ಮಾರ್ಚ್ 5ರಂದು ಅಧಿಸೂಚನೆ ಹೊರಡಿಸಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ’ ಎಂಬುದು ಆರೋಪ.

ಈ ಕೇಂದ್ರದಲ್ಲಿರುವ ಕಚೇರಿ ಅಧೀಕ್ಷಕ ಹಾಗೂ ಲೆಕ್ಕಾಧಿಕಾರಿ ಕಳೆದ ಐದು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ, ನೇಮಕಾತಿ ಅಧಿಸೂಚನೆಯಲ್ಲಿ ಈ ಹುದ್ದೆಗಳ ಪ್ರಸ್ತಾಪವಿಲ್ಲ.

ಶಾಸ್ತ್ರೀಯ ಕನ್ನಡ ಕೇಂದ್ರ ಆರಂಭಗೊಂಡು 10 ವರ್ಷಗಳಾದರೂ ಸ್ವಾಯತ್ತೆ ಪಡೆಯುವ ನಿಟ್ಟಿನಲ್ಲಿ ಗಮನಾರ್ಹ ಕೆಲಸಗಳು ಆಗಿರಲಿಲ್ಲ. ಈಚೆಗೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಅವರು ಮೈಸೂರು ವಿಶ್ವವಿದ್ಯಾಲಯದಿಂದ ನೂತನ ಕಟ್ಟಡ ದೊರಕಿಸಿಕೊಟ್ಟಿದ್ದರು. ಈ ಕೇಂದ್ರವು ಸಿಐಐಎಲ್‌ನಿಂದ ನೂತನ ಕಟ್ಟಡಕ್ಕೆ ಸ್ಥಳಾಂತರಗೊಳ್ಳುವ ಪ್ರಕ್ರಿಯೆಯಲ್ಲಿ ನಿರತವಾಗಿದೆ. ಇಂತಹ ಸಂದರ್ಭದಲ್ಲಿ ಕೇಂದ್ರದ ಯೋಜನಾ ನಿರ್ದೇಶಕರು, ಸಂಶೋಧನಾ ಸಿಬ್ಬಂದಿಯನ್ನು ಏಕಾಏಕಿ ಮರುನೇಮಕ ಮಾಡಿಕೊಳ್ಳುವ ಅಧಿಸೂಚನೆ ಹೊರಡಿಸಿರುವುದರ ಹಿಂದೆ ಸ್ವಾಯತ್ತೆಯ ಚಟುವಟಿಕೆಗಳಿಗೆ ತೊಡಕು ಉಂಟು ಮಾಡುವ ಹುನ್ನಾರ ಅಡಗಿದೆ ಎಂದು ಕನ್ನಡ ವಿದ್ವಾಂಸರು ಹಾಗೂ ಕನ್ನಡಪರ ಹೋರಾಟಗಾರರು ಆರೋಪಿಸುತ್ತಾರೆ.

ಶಾಸ್ತ್ರೀಯ ತೆಲುಗು ಕೇಂದ್ರದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಮಾತ್ರ ಇತ್ತೀಚೆಗೆ ಎರಡನೇ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ, ಶಾಸ್ತ್ರೀಯ ಕನ್ನಡ ಕೇಂದ್ರದ ಸಿಬ್ಬಂದಿಯ ಸೇವಾವಧಿ ಬಾಕಿ ಇರುವಾಗಲೇ ಅಧಿಸೂಚನೆ ಹೊರಡಿಸಲಾಗಿದೆ. ಇದರಿಂದ, ಈಗಾಗಲೇ ಪ್ರಗತಿಯಲ್ಲಿರುವ ಸಂಶೋಧನಾ ಕಾರ್ಯ ಯೋಜನೆಗಳಿಗೆ ಹಿನ್ನಡೆಯಾಗಲಿದೆ. ಈಗ ಕಾರ್ಯನಿರ್ವಹಿಸುತ್ತಿರುವ ಸಂಶೋಧಕರಲ್ಲೂ ಅತಂತ್ರ ಪರಿಸ್ಥಿತಿ ಉಂಟು ಮಾಡಿ, ಈ ಮೂಲಕ ಸ್ವಾಯತ್ತೆಗೆ ಅಡ್ಡಗಾಲು ಹಾಕುವ ದುರುದ್ದೇಶ ಇದೆ ಎಂಬ ಮಾತು ಕೇಳಿಬರುತ್ತಿದೆ.‌

ಈ ವಿಚಾರವಾಗಿ, ಸಿಐಐಎಲ್‌ ನಿರ್ದೇಶಕ ಡಾ.ಡಿ.ಜಿ.ರಾವ್‌ ಅವರಿಗೆ ಎರಡು ಬಾರಿ ದೂರವಾಣಿ ಕರೆ ಮಾಡಿದರೂ ಅವರು ಪ್ರತಿಕ್ರಿಯಿಸಲು ನಿರಾಕರಿಸಿದರು.

ಸಂಶೋಧನಾ ಚಟುವಟಿಕೆಗೆ ಧಕ್ಕೆ
‌‘ನಿಯಮಾವಳಿ ಪ್ರಕಾರ, ಯೋಜನಾ ನಿರ್ದೇಶಕರ ಹುದ್ದೆಯನ್ನು ಎಂಎಚ್‌ಆರ್‌ಡಿ ಭರ್ತಿ ಮಾಡಬೇಕು. ಸಂಶೋಧನಾ ಸಿಬ್ಬಂದಿ ನೇಮಕಾತಿ ಸಂಬಂಧ ನನ್ನ ಹಾಗೂ ಪಿಎಂಬಿ ಅನುಮೋದನೆ ಪಡೆಯಬೇಕು. ಆದರೆ, ಯಾರ ಗಮನಕ್ಕೂ ತಾರದೆ ಅಧಿಸೂಚನೆ ಹೊರಡಿಸಲಾಗಿದೆ’ ಎಂದು ಶಾಸ್ತ್ರೀಯ ಕನ್ನಡ ಕೇಂದ್ರದ ಯೋಜನಾ ನಿರ್ದೇಶಕ ಡಾ.ಕೆ.ಆರ್‌. ದುರ್ಗಾದಾಸ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈಗಾಗಲೇ ಸಂಶೋಧನಾ ಸಿಬ್ಬಂದಿಯು ಶೇ 60ರಿಂದ 70ರಷ್ಟು ಪ್ರಾಜೆಕ್ಟ್‌ ಕೆಲಸವನ್ನು ಮುಗಿಸಿದ್ದಾರೆ. ಉಳಿದ ಕೆಲಸವನ್ನು ಪೂರ್ಣಗೊಳಿಸುವ ಮುನ್ನವೇ ಅಧಿಸೂಚನೆ ಹೊರಡಿಸಿರುವುದರಿಂದ ಕಾರ್ಯಚಟುವಟಿಕೆ ಅರ್ಧಕ್ಕೇ ನಿಲ್ಲಲಿದೆ. ಈ ಬಗ್ಗೆ ಸಿಐಐಎಲ್‌ ನಿರ್ದೇಶಕರೊಂದಿಗೆ ಮಾತನಾಡಿದೆ. ಆದರೆ, ಸಕಾರಾತ್ಮಕ ಸ್ಪಂದನೆ ಸಿಗಲಿಲ್ಲ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು