ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ ಮೇಲ್ವಿಚಾರಕನ ಮೇಲೆ ಪೊಲೀಸರಿಂದ ಲಾಠಿಚಾರ್ಜ್‌

Last Updated 28 ಮಾರ್ಚ್ 2020, 12:03 IST
ಅಕ್ಷರ ಗಾತ್ರ

ಬೆಳಗಾವಿ: ಕಚೇರಿಗೆ ತೆರಳುತ್ತಿದ್ದ ಜಿಲ್ಲಾ ಪ್ರಭಾರ ಆರೋಗ್ಯ ಮೇಲ್ವಿಚಾರಕ ಬಸವರಾಜ ಎಸ್‌. ಡೊಳ್ಳಿನ ಅವರ ಮೇಲೆ ಶನಿವಾರ ಮೂರು ಜನ ಪೊಲೀಸರು ಲಾಠಿಯಿಂದ ಬೇಕಾಬಿಟ್ಟಿ ಹೊಡೆದಿದ್ದು, ಅವರ ಎಡಗೈ ಮೂಳೆ ಮುರಿದಿದೆ.

ಇಲ್ಲಿನ ಮಾಳಮಾರುತಿ ನಿವಾಸಿ ಬಸವರಾಜ ಡೊಳ್ಳಿನ ಅವರು ಬೆಳಿಗ್ಗೆ ಕಚೇರಿಗೆ ತೆರಳಲು ಗಾಂಧಿನಗರದ ಅಂಡರ್‌ಪಾಸ್‌ ಬಳಿ ಬಂದಾಗ ಪೊಲೀಸರು ತಡೆಹಿಡಿದಿದ್ದರು. ತಾವು ಆರೋಗ್ಯ ಇಲಾಖೆಯ ಸಿಬ್ಬಂದಿ ಎಂದು ಹೇಳಿಕೊಂಡರೂ ಕೇಳಿಸಿಕೊಳ್ಳದ ಪೊಲೀಸರು ಕೈ, ಮೈ, ಬೆನ್ನಿನ ಮೇಲೆ ತೀವ್ರವಾಗಿ ಲಾಠಿಯಿಂದ ಹೊಡೆದಿದ್ದಾರೆ.

ಪೊಲೀಸರ ಹೊಡೆತಗಳಿಂದ ಅರೆಪ್ರಜ್ಞಾವಸ್ಥೆ ತಲುಪಿದ್ದ ಬಸವರಾಜ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

‘ಬೆಳಿಗ್ಗೆ 9.45ಕ್ಕೆ ಕಚೇರಿಗೆ ಬರುತ್ತಿದ್ದೆ. ಗಾಂಧಿ ನಗರದ ಅಂಡರ್‌ಪಾಸ್‌ ಬಳಿ ಬಂದಾಗ ಮೂರು ಜನ ಪೊಲೀಸರು ತಡೆದು ನಿಲ್ಲಿಸಿದರು. ಇಬ್ಬರು ಪೊಲೀಸರು ಸಮವಸ್ತ್ರದಲ್ಲಿದ್ದರೆ, ಮೂರನೇಯವರು ಮಫ್ತಿಯಲ್ಲಿದ್ದರು. ನಾನು ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರೂ ಕೇಳಿಸಿಕೊಳ್ಳದೇ ಲಾಠಿಯಿಂದ ಹೊಡೆದರು’ ಎಂದು ಬಸವರಾಜ ಡೊಳ್ಳಿನ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಮ್ಮ ಜೀವನವನ್ನು ಪಣಕ್ಕಿಟ್ಟು ಕೊರೊನಾ ಸೋಂಕಿನ ವಿರುದ್ಧ ಹೋರಾಡುತ್ತಿದ್ದೇವೆ. ಆದರೆ, ನಮಗೆ ರಕ್ಷಣೆ ಇಲ್ಲವೆಂದಾದರೆ ಹೇಗೆ’ ಎಂದು ಅಳಲು ತೋಡಿಕೊಂಡರು.

ಮೆಡಿಕಲ್‌ ಕೇಸ್‌

‘ಬಸವರಾಜ ಅವರು ಕಚೇರಿಗೆ ಬರುತ್ತಿದ್ದಾಗ ಘಟನೆ ನಡೆದಿದೆ. ಇದಕ್ಕೆ ಸಂಬಂಧಿಸಿದಂತೆ ಎಂಎಲ್‌ಸಿ (ಮೆಡಿಕಲ್‌ ಲೀಗಲ್‌ ಕೇಸ್‌) ಮಾಡಿದ್ದೇವೆ. ಜಿಲ್ಲಾಧಿಕಾರಿಯವರ ಗಮನಕ್ಕೆ ತಂದಿದ್ದೇವೆ. ಹಲ್ಲೆ ಮಾಡಿದ ಪೊಲೀಸರ ಮೇಲೆ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದೇವೆ’ ಎಂದು ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್‌.ವಿ. ಮುನ್ಯಾಳ ಹೇಳಿದರು.

‘ಘಟನೆ ಬಗ್ಗೆ ನಮ್ಮ ಗಮನಕ್ಕೂ ಬಂದಿದೆ. ಯಾವ ಪೊಲೀಸರು ಹೊಡೆದಿದ್ದಾರೆ ಎನ್ನುವುದನ್ನು ಪತ್ತೆ ಹಚ್ಚುತ್ತಿದ್ದೇವೆ’ ಎಂದು ನಗರ ಪೊಲೀಸ್‌ ಆಯುಕ್ತ ಬಿ.ಎಸ್‌. ಲೋಕೇಶಕುಮಾರ್‌ ತಿಳಿಸಿದರು.

ದೂರು ನೀಡದಂತೆ ಒತ್ತಡ?

ದೂರು ನೀಡದಂತೆ ಬಸವರಾಜ ಅವರ ಮೇಲೆ ಕೆಲವು ಪೊಲೀಸರು ಒತ್ತಡ ಹೇರಿದ್ದಾರೆ ಎಂದು ಹೇಳಲಾಗುತ್ತಿದೆ.

‘ನಿಮ್ಮನ್ನು ಹೊಡೆದಿರುವ ಪೊಲೀಸರಿಂದ ಕ್ಷಮಾಪಣೆ ಕೇಳಿಸುತ್ತೇವೆ. ವೈದ್ಯಕೀಯ ವೆಚ್ಚವನ್ನು ಭರಿಸುತ್ತೇವೆ. ದೂರು ನೀಡಬೇಡಿ’ ಎಂದು ಕೆಲವರು ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT