ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ ಅಖಾಡದಲ್ಲೊಂದು ಸುತ್ತು| ಮೂವರ ಸಮಬಲದ ಸ್ಪರ್ಧೆ

ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿಯ ಕಾರ್ಪೊರೇಟ್‌ ಶೈಲಿ ಚುನಾವಣೆ
Last Updated 1 ಡಿಸೆಂಬರ್ 2019, 11:01 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳು ಗಟ್ಟಿ ನೆಲೆ ಹೊಂದಿರುವ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕಮಲ ಅರಳಿಸುವ ಸಾಹಸಕ್ಕೆ ಡಾ.ಕೆ.ಸುಧಾಕರ್‌ ಕೈ ಹಾಕಿದ್ದಾರೆ. ಬಿಜೆಪಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

ಮೊದಲಿನಿಂದಲೂ ಕ್ಷೇತ್ರ ಕಾಂಗ್ರೆಸ್‌ನ ಭದ್ರ ಕೋಟೆ. ನಾಲ್ಕು ದಶಕಗಳಿಂದ ಕಾಂಗ್ರೆಸ್‌ಗೆ ತೀವ್ರ ಸ್ಪರ್ಧೆ ನೀಡುತ್ತಿರುವ ದಳ ಕೂಡ ಇಲ್ಲಿ ಪ್ರಬಲ ನೆಲೆ ಹೊಂದಿದೆ. 2018ರ ಚುನಾವಣೆಯಲ್ಲಿ ಇಲ್ಲಿ ಬಿಜೆಪಿ ಪಡೆದದ್ದು ಐದೂವರೆ ಸಾವಿರ ಮತಗಳಷ್ಟೇ.

ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಆದರೆ ಆ ಚುನಾವಣೆಗೂ ಈಗಿನ ಉಪ ಚುನಾವಣೆಗೂ ಯಾವುದೇ ರೀತಿಯಲ್ಲಿಯೂ ಹೋಲಿಕೆ ಮಾಡುವಂತಿಲ್ಲ ಎಂದು ಸ್ವತಃ ಬಿಜೆಪಿ ಕಾರ್ಯಕರ್ತರೇ ಹೇಳುತ್ತಾರೆ.

ಬಿಜೆಪಿ ಸಂಸದ ಬಿ.ಎನ್‌.ಬಚ್ಚೇಗೌಡ ಅವರು ಈ ತನಕ ತಮ್ಮ ಪಕ್ಷದ ಅಭ್ಯರ್ಥಿ ಪರ ಒಮ್ಮೆಯೂ ಕಾಣಿಸಿಕೊಂಡಿಲ್ಲ. ಸಂಘಟನೆ ದೃಷ್ಟಿಯಿಂದ ಬಿಜೆಪಿ ದುರ್ಬಲವಾಗಿದ್ದರೂ ಸ್ವಂತ ವರ್ಚಸ್ಸು ಮತ್ತು ರಾಜ್ಯ ಸರ್ಕಾರದ ಬಲದೊಂದಿಗೆ ಗೆಲುವಿನ ದಡ ಮುಟ್ಟುವ ವಿಶ್ವಾಸದಲ್ಲಿದ್ದಾರೆ ಸುಧಾಕರ್‌.ಪ್ರಚಾರ ಮತ್ತು ತಂತ್ರಗಾರಿಕೆಯಲ್ಲಿ ಕಾರ್ಪೊರೇಟ್‌ ಶೈಲಿ ಅನುಸರಿಸುತ್ತಿರುವ ಸುಧಾಕರ್‌, ಉಳಿದ ಅಭ್ಯರ್ಥಿಗಳಿಗಿಂತ ಮುಂದಿದ್ದಾರೆ.

ಮೇಲ್ನೋಟಕ್ಕೆ ಪ್ರಚಾರದಲ್ಲಿ ಹಿಂದೆ ಬಿದ್ದಂತೆ ಕಂಡರೂ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಅಭ್ಯರ್ಥಿಗಳು ತಳಮಟ್ಟದಲ್ಲಿ ಬಲವನ್ನು ಕ್ರೋಡೀಕರಿಸಿಕೊಳ್ಳುವುದರಲ್ಲಿ ನಿರತರಾಗಿದ್ದಾರೆ. ಪಕ್ಷ ಬಿಟ್ಟು ಹೋಗಿದ್ದವರನ್ನು ಮರಳಿ ಕರೆ ತರುತ್ತಿದ್ದಾರೆ. ಸ್ಪರ್ಧೆ ಇರುವುದು ಕಾಂಗ್ರೆಸ್‌ ಮತ್ತು ದಳದ ನಡುವೆ ಮಾತ್ರ; ಈ ಬಾರಿ ಸುಧಾಕರ್‌ಗೆ ಮೂರನೇ ಸ್ಥಾನ ಎಂದು ಉಭಯ ಪಕ್ಷಗಳ ಕಾರ್ಯಕರ್ತರು ಭವಿಷ್ಯ ನುಡಿಯುತ್ತಾರೆ.

ಕಾಂಗ್ರೆಸ್‌ನ ಅಂಜನಪ್ಪ ಸಮಾಜ ಸೇವೆ ಮೂಲಕ ಗುರುತಿಸಿಕೊಂಡಿದ್ದಾರೆ. ಇದೇ ಸುಧಾಕರ್‌ ಕಾರಣಕ್ಕೆ 2013ರಲ್ಲಿ ಕಡೇ ಗಳಿಗೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ ವಂಚಿತರಾಗಿದ್ದರು. ಸಿದ್ದರಾಮಯ್ಯ ಅವರ ಆಪ್ತರಾದ ಅಂಜನಪ್ಪ 2012ರಲ್ಲಿ ಎಂಟು ತಿಂಗಳ ಕಾಲ ಕ್ಷೇತ್ರದ ಸಾವಿರಾರು ಕುಟುಂಬಗಳಿಗೆ ಉಚಿತವಾಗಿ ಪಡಿತರ ವಿತರಣೆ ಮಾಡಿದ್ದನ್ನು ಕೆಲವರು ಈಗಲೂ ನೆನಪಿಸಿ
ಕೊಳ್ಳುತ್ತಾರೆ.

ಇನ್ನು ವರಸೆಯಲ್ಲಿ ಎಚ್‌.ಡಿ.ಕುಮಾರಸ್ವಾಮಿಅವರಿಗೆ ಸೋದರ ಸಂಬಂಧಿಯಾದ ಉದ್ಯಮಿ ಎನ್‌.ರಾಧಾಕೃಷ್ಣ ಜೆಡಿಎಸ್‌ ಅಭ್ಯರ್ಥಿಯಾದ ಮೇಲೆ ಪಕ್ಷದ ಕಾರ್ಯಕರ್ತರಲ್ಲಿ ಹುಮ್ಮಸ್ಸು ಮೂಡಿದೆ. ರಾಧಾಕೃಷ್ಣ ಅವರಿಗೆ ಕ್ಷೇತ್ರ ಬಿಟ್ಟುಕೊಟ್ಟಿರುವ ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ಅವರು ತಾವೇ ಅಭ್ಯರ್ಥಿಯಂತೆ ಓಡಾಡುತ್ತಿದ್ದಾರೆ.

ಕಣದಲ್ಲಿಬಿಎಸ್‌ಪಿ ಅಭ್ಯರ್ಥಿಡಿ.ಆರ್.ನಾರಾಯಣಸ್ವಾಮಿ ಸೇರಿ ಒಟ್ಟು ಒಂಬತ್ತು ಅಭ್ಯರ್ಥಿಗಳಿದ್ದಾರೆ.

ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರು, ಒಕ್ಕಲಿಗರು, ಬಲಿಜ ಸಮುದಾಯಗಳ ಮತಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಪ್ರಮುಖ ಪಕ್ಷಗಳ ಮೂವರೂ ಅಭ್ಯರ್ಥಿಗಳು ಒಕ್ಕಲಿಗ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಬಲಿಜ ಮುಖಂಡರಾದಕೆ.ವಿ.ನವೀನ್ ಕಿರಣ್ ಅವರು ಕಳೆದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗಣನೀಯ ಪ್ರಮಾಣದಲ್ಲಿ ಮತ ಪಡೆದಿದ್ದರು. ಅವರೀಗ ಕಾಂಗ್ರೆಸ್‌ ಅಭ್ಯರ್ಥಿ ಪರ ಸಕ್ರಿಯ ಪ್ರಚಾರದಲ್ಲಿ ತೊಡಗಿದ್ದಾರೆ. ಮುಸ್ಲಿಮರು ಸೇರಿದಂತೆ ಅಹಿಂದ ಮತಗಳು ಸೋಲು ಗೆಲುವಿನಲ್ಲಿ ನಿರ್ಣಾಯಕವಾಗಿವೆ.

ಸದಾ ಬರಪೀಡಿತ ಪ್ರದೇಶ ವಾಗಿರುವ ಚಿಕ್ಕಬಳ್ಳಾಪುರದಲ್ಲಿ ಅಂತರ್ಜಲದ ಅತಿ ಬಳಕೆಯಿಂದಾಗಿ ಕೃಷಿ ಇರಲಿ, ಶುದ್ಧ ಕುಡಿಯುವ ನೀರಿಗೂ ತತ್ವಾರ ಉಂಟಾಗಿದೆ. ಇಂತಹ ಜ್ವಲಂತ ಸಮಸ್ಯೆ ಬಗ್ಗೆ ಚುನಾವಣೆ ಸಂದರ್ಭದಲ್ಲಿ ಯಾರೂ ಚರ್ಚಿಸುತ್ತಿಲ್ಲ, ಯಾವ ಪಕ್ಷದವರೂ ಪರಿಹಾರ ಕಾರ್ಯಕ್ರಮಗಳ ಬಗ್ಗೆ ಮಾತನಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸುವರು ಬಯಲುಸೀಮೆ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್‌.ಆಂಜನೇಯ ರೆಡ್ಡಿ.

ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಶಂಕುಸ್ಥಾಪನೆ, ಮಂಚೇನಹಳ್ಳಿ ತಾಲ್ಲೂಕು ರಚನೆ- ಈ ಕೊಡುಗೆಗಳು ಬಿಜೆಪಿಗೆ ಲಾಭ ತಂದುಕೊಡಲಿವೆ ಎಂಬುದು ಎಂಬುದು ಸುಧಾಕರ್‌ ಬೆಂಬಲಿಗರ ವಾದ. ಇವೆಲ್ಲ ಚುನಾವಣೆ ಗಿಮಿಕ್‌, ಸುಧಾಕರ್‌ ನಿಜ ಬಣ್ಣ ಜನರಿಗೆ ಗೊತ್ತಾಗಿದ್ದು ಅವರಿಗೆ ಸರಿಯಾದ ಪಾಠ ಕಲಿಸುತ್ತಾರೆ ಎಂಬುದು ಕಾಂಗ್ರೆಸ್‌, ಜೆಡಿಎಸ್‌ ಬೆಂಬಲಿಗರ ತಿರುಗೇಟು.

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ

ಮತದಾರರ ವಿವರ

99,322 - ಪುರುಷರು
1,00,532 - ಮಹಿಳೆಯರು
26 - ಇತರೆ


1,99,880 -ಒಟ್ಟು ಮತದಾರರು

ಕಣದಲ್ಲಿರುವ ಪ್ರಮುಖರು

ಡಾ.ಕೆ.ಸುಧಾಕರ್ (ಬಿಜೆಪಿ)
ನಂದಿ ಎಂ.ಅಂಜನಪ್ಪ (ಕಾಂಗ್ರೆಸ್)
ಎನ್.ರಾಧಾಕೃಷ್ಣ (ಜೆಡಿಎಸ್)

2018ರ ಚುನಾವಣಾ ಫಲಿತಾಂಶ

ಅಭ್ಯರ್ಥಿ ಪಕ್ಷ ಪಡೆದ ಮತ
ಡಾ.ಕೆ. ಸುಧಾಕರ್ – ಕಾಂಗ್ರೆಸ್ 82,006
ಕೆ.ಪಿ. ಬಚ್ಚೇಗೌಡ – ಜೆಡಿಎಸ್ 51,575
ಕೆ.ವಿ. ನವೀನ್ ಕಿರಣ್– ಪಕ್ಷೇತರ 29,433
ಡಾ.ಜಿ.ವಿ. ಮಂಜುನಾಥ್ – ಬಿಜೆಪಿ 5,576

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT