ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯ ಅಶ್ವಮೇಧ ಕುದುರೆಯನ್ನು ಕಟ್ಟಿಹಾಕಿದ್ದೇವೆ: ಕುಮಾರಸ್ವಾಮಿ

ಸುದ್ದಿಗೋಷ್ಠಿಯುದ್ಧಕ್ಕೂ ಬಿಜೆಪಿ ವಿರುದ್ಧ ಆಕ್ರೋಶ
Last Updated 23 ಮೇ 2018, 13:42 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ಅಶ್ವಮೇಧದ ಕುದುರೆಯನ್ನು ಕಟ್ಟಿಹಾಕಿದ್ದೇವೆ ಎಂದು ನೂತನ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಮುಖ್ಯಮಂತ್ರಿಯಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದ ಬಳಿಕ ಮೊದಲ ಬಾರಿ ಸುದ್ದಿಗೋಷ್ಠಿ ನಡೆಸಿದ ಅವರು, ಬಿಜೆಪಿಯ ಅಶ್ವಮೇಧದ ಕುದುರೆಯನ್ನು ಕಟ್ಟಿಹಾಕಿದ್ದೇವೆ. ಇನ್ನೇನಿದ್ದರೂ ಅಮಿತ್‌ ಶಾ ಅವರು ಸತ್ತ ಕುದುರೆಯನ್ನು ಮೋದಿ ಬಳಿ ತೆಗೆದುಕೊಂಡು ಹೋಗಬೇಕಷ್ಟೆ ಎಂದು ವ್ಯಂಗ್ಯವಾಡಿದರು.

ಸುದ್ದಿಗೋಷ್ಠಿಯುದ್ದಕ್ಕೂ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು ಐದು ವರ್ಷ ಆಡಳಿತದಲ್ಲಿದ್ದಾಗ ಬಿಜೆಪಿ ಜನರಿಗೆ ಏನು ಕೊಟ್ಟಿದೆ ಎಂದು ಪ್ರಶ್ನಿಸಿದರು.

ನ್ಯಾಯಾಧಿಕರಣದ ತೀರ್ಪಿನ ಬಳಿಕ ಮಹದಾಯಿ ಬಗ್ಗೆ ಕ್ರಮ: ಮಹದಾಯಿ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸುಳ್ಳು ಹೇಳಿಕೊಂಡು ತಿರುಗಿದ್ದಾರೆ. ಜನರ ಕಿವಿ ಮೇಲೆ ಹೂವು ಇಡುವುದು ಹೇಗೆಂದು ಅವರಿಗೆ ಚೆನ್ನಾಗಿ ಗೊತ್ತಿದೆ. ಸದ್ಯ, ನ್ಯಾಯಾಧಿಕರಣ ಮೂರೂ ರಾಜ್ಯಗಳ ವಾದ ಆಲಿಸಿದೆ. ತೀರ್ಪು ಬರುವುದು ಬಾಕಿ ಇದೆ. ತೀರ್ಪು ಬಂದ ಬಳಿಕ ಮುಂದಿನ ನಡೆಯ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಕುಮಾರಸ್ವಾಮಿ ಹೇಳಿದರು.

ಯಡಿಯೂರಪ್ಪ ಭಾಷಣಕ್ಕೆ ತಿರುಗೇಟು: ವಿಶ್ವಾಸಮತ ಯಾಚಿಸದೆ ರಾಜೀನಾಮೆ ನೀಡುವುದಕ್ಕೂ ಮುನ್ನ ಸದಸನದಲ್ಲಿ ಮಾಡಿದ ಭಾಷಣದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ರೈತರ ಬಗ್ಗೆ ಆಡಿದ್ದ ಕಾಳಜಿಯ ಮಾತಿಗೆ ಕುಮಾರಸ್ವಾಮಿ ತಿರುಗೇಟು ನೀಡಿದರು. ಎರಡು ವರ್ಷ ರಾಜ್ಯದಾದ್ಯಂತ ಸಂಚರಿಸಿ ರೈತರ ಕಷ್ಟಗಳ ಬಗ್ಗೆ ಅಧ್ಯಯನ ನಡೆಸಿದ್ದೇನೆ ಎಂದಿದ್ದಾರೆ ಯಡಿಯೂರಪ್ಪ. ರೈತರ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ, ಸಾಲ ಮನ್ನಾ ಮಾಡದಿದ್ದರೆ ರೈತರನ್ನು ಬೀದಿಗಿಳಿಸಿ ಹೋರಾಟ ನಡೆಸಿ ಸರ್ಕಾರ ಪತನಗೊಳಿಸುವೆ ಎಂದು ಹೇಳಿದ್ದಾರೆ. ಆದರೆ, ರೈತರಿಗೆ ಅಂತಹ ಸ್ಥಿತಿ ಬರಲು ಬಿಡುವುದಿಲ್ಲ. ರೈತರು ದಂಗೆ ಏಳುವಂತಹ ಸ್ಥಿತಿ ನಿರ್ಮಾಣ ಮಾಡುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿದರು. ಅಲ್ಲದೆ, ಯಡಿಯೂರಪ್ಪನವರು ರೈತರ ಕಷ್ಟಗಳ ಬಗ್ಗೆ ತಾವು ಕಂಡುಕೊಂಡ ಮಾಹಿತಿಗಳನ್ನು ನೀಡಲಿ. ಆ ಬಗ್ಗೆಯೂ ಕ್ರಮ ಕೈಗೊಳ್ಳುವೆ ಎಂದರು.

‘ಸಾಲಮನ್ನಾ ವಿಚಾರದಲ್ಲಿ ಆರ್ಥಿಕ ತಜ್ಞರ ಅಭಿಪ್ರಾಯ, ನನ್ನ ಅಭಿಪ್ರಾಯವನ್ನು ಸಮನ್ವಯಗೊಳಿಸಿ ಅನುಷ್ಠಾನಕ್ಕೆ ತರಲು ಪ್ರಯತ್ನಿಸುತ್ತೇನೆ. ನನ್ನ ಸರ್ಕಾರದ ಯೋಜನೆಗಳ ಶ್ರೇಯ ಕಾಂಗ್ರೆಸ್‌ಗೂ ಇರಲಿದೆ. ಹೊಸ ಬಜೆಟ್‌ ಮಂಡಿಸುವಾಗ ನನ್ನ ಯೋಜನೆಗಳ ಬಗ್ಗೆ ನಿಮಗೆ ಅರಿವಿಗೆ ಬರಲಿದೆ’ ಎಂದು ಕುಮಾರಸ್ವಾಮಿ ಹೇಳಿದರು.

‘ಒಗ್ಗಟ್ಟಿನ ಸಂಕೇತ’: ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ರಾಷ್ಟ್ರ ಮಟ್ಟದ ನಾಯಕರು ಬಂದಿರುವುದು ಕೇವಲ ನಮ್ಮ ಸರ್ಕಾರಕ್ಕೆ ಬೆಂಬಲ ಸೂಚಿಸಲು ಅಲ್ಲ. ನಾವೆಲ್ಲ ಒಗ್ಗಟ್ಟಾಗಿದ್ದೇವೆ ಎಂಬ ಸಂದೇಶವನ್ನು ದೇಶಕ್ಕೆ ಸಾರಲು ಅವರೆಲ್ಲ ಬಂದಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.

ಅಸ್ಥಿರ ಸರ್ಕಾರ ಎಂಬ ತಪ್ಪುಕಲ್ಪನೆ ಬದಿಗಿಡಿ: ‘ನಮ್ಮದು ಅಸ್ಥಿರ ಸರ್ಕಾರ ಎಂಬ ತಪ್ಪುಕಲ್ಪನೆ ಬದಿಗಿಡಿ. ಉತ್ತಮವಾಗಿ ಸಮ್ಮಿಶ್ರ ಸರ್ಕಾರ ನಡೆಸಬಹುದು ಎಂಬುದನ್ನು ತೋರಿಸಿಕೊಡಲಿದ್ದೇವೆ. ನಾವೆಲ್ಲ ಒಗ್ಗಟ್ಟಾಗಿದ್ದೇವೆ. ಕುವೆಂಪು ಹೇಳಿರುವಂತೆ, ಸರ್ವಜನಾಂಗದ ಶಾಂತಿಯ ತೋಟ ನಮ್ಮ ರಾಜ್ಯವಾಗಬೇಕು. ಆ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡಲಿದೆ’ ಎಂದು ಮುಖ್ಯಮಂತ್ರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT