ಶನಿವಾರ, ಜೂನ್ 25, 2022
21 °C

ವಿಶ್ವಾಸಮತ | ಸಿಎಂ ಕುಮಾರಸ್ವಾಮಿ ರಾಜೀನಾಮೆ ಪತ್ರ ನಕಲಿ? ಚರ್ಚೆಗೆ ಗ್ರಾಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಮುಖ್ಯಮಂತ್ರಿ ಸ್ಥಾನಕ್ಕೆ ಕುಮಾರಸ್ವಾಮಿ ರಾಜೀನಾಮೆ ಸಲ್ಲಿಸಿದ್ದಾರೆ’ ಎಂಬ ಪತ್ರ ವ್ಯಾಪಕವಾಗಿ ಹರಿದಾಡಿದ್ದು, ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಯನ್ನು ಹುಟ್ಟುಹಾಕಿದೆ.

ಪತ್ರ ಹರಿದಾಡಿದ ಬಗ್ಗೆ ಸೋಮವಾರ ವಿಶ್ವಾಸಮತದ ಮೇಲಿನ ಚರ್ಚೆ ವೇಳೆ ಸದನದಲ್ಲಿ ಪ್ರಸ್ತಾಪಿಸಿದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ‘ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಿದ್ದೇನೆ ಎಂಬ ನಕಲಿ ಪತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವಿಚಾರ ನನ್ನ ಗಮನಕ್ಕೆ ಬಂದಿದೆ. ಇಂತಹ ಸುಳ್ಳು ಸುದ್ದಿಗಳನ್ನು ಯಾರು ಸೃಷ್ಟಿ ಮಾಡುತ್ತಿದ್ದಾರೆ’ ಎಂದು ಹೇಳಿದರು.


ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ರಾಜಿನಾಮೆ ಪತ್ರ

‘ಚರ್ಚೆ ಮಾಡಲು ನಾನು ಸಿದ್ಧನಿದ್ದೇನೆ. ರಾಜ್ಯದಲ್ಲಿ ಯಾವಮಟ್ಟದ ರಾಜಕಾರಣ ನಡೆಯುತ್ತಿದೆ? ನಾನು ಈಗಾಗಲೇ ರಾಜ್ಯಪಾಲರನ್ನು ಭೇಟಿ ಮಾಡಿ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದೇನೆ ಎಂದು ಸಂಜೆ 5ರಿಂದ ಮಾಧ್ಯಮದಲ್ಲಿ ಪ್ರಕಟವಾಗುತ್ತಿದೆ. ಈ ರೀತಿ ಸುದ್ದಿ ಮಾಡಿದ್ದಾರೆ ಎಂಬ ಮಾಹಿತಿ 5.30ಕ್ಕೆ ಬಂತು. ಮುಖ್ಯಮಂತ್ರಿಗಳಾಗಬೇಕು ಎಂದು ಯಾರ‍್ಯಾರು ಎಷ್ಟು ಆತುರದಲ್ಲಿದ್ದಾರೆ ಗೊತ್ತಿಲ್ಲ. ಇಲ್ಲಿ ನೋಡಿ ಅಧ್ಯಕ್ಷರೆ ಯಾವ ರೀತಿ ಇದೆ. ಯಾವಮಟ್ಟಕ್ಕೆ ಮಾಧ್ಯಮ ಇದ್ದಾವೆ.... ನಾನು ರಾಜಿನಾಮೆಯನ್ನು ರಾಜ್ಯಪಾಲರಿಗೆ ಸಲ್ಲಿಸಿದ್ದೇನೆ ಎಂದು ನನ್ನ ಸುಳ್ಳು ಸಹಿ ಮಾಡಿದ ಪತ್ರವನ್ನು ಸೋಷಿಯಲ್‌ ಮೀಡಿಯಾಗಳಲ್ಲಿ ಅಪ ಪ್ರಚಾರ ನಡೆಯುತ್ತಿದೆ ಎಂದು ಯಾರೋ ಕಳಿಸಿಕೊಟ್ಟರು. ರಾಜ್ಯದಲ್ಲಿ ಯಾವಮಟ್ಟದ ಕೀಳು ರಾಜಕಾರಣ ನಡೆಯುತ್ತಿದೆ. ಒಬ್ಬ ಮುಖ್ಯಮಂತ್ರಿಯ ಸುಳ್ಳು ಸಹಿ ಮಾಡಿ ಅಪಪ್ರಚಾರ ಮಾಡುತ್ತಾರೆ ಎಂದರೆ ಹೇಗೆ? ಅದಕ್ಕೆ ಕಡಿವಾಣ ಹಾಕದಿದ್ದರೆ ಎಲ್ಲಿಗೆ ಹೋಗುತ್ತದೆ? ಈ ರೀತಿ ವಾತಾವರಣ ರಾಜ್ಯದಲ್ಲಿ ನಡೆಯುತ್ತಿದೆ’ ಎಂದು ಹೇಳಿದ ಸಿಎಂ ಕುಮಾರಸ್ವಾಮಿ ನಕಲಿ ರಾಜೀನಾಮೆ ಪತ್ರದ ಪ್ರತಿಯನ್ನು ಸಭಾಧ್ಯಕ್ಷರಿಗೆ ನೀಡಿದರು.

* ಇದನ್ನೂ ಓದಿ: ರಾಜೀನಾಮೆ ಕೊಡಲು ಹೋಗಲು ಹೇಳ್ರಿ: ಸಿಎಂ ವಿರುದ್ಧ ಸಿದ್ದರಾಮಯ್ಯ ಪರೋಕ್ಷ ಸಿಡಿ ಮಿಡಿ


ಸ್ಪೀಕರ್‌ ಕೆ.ಆರ್‌.ರಮೇಶ್‌ಕುಮಾರ್

ರಾಜೀನಾಮೆ ನೀಡಿದ್ದೇನೆ ಅಂತೇಳಿ ನಂದೂ ಹಾಕಿದ್ದಾರೆ: ಸ್ಪೀಕರ್

ಸಿಎಂ ಮಾತಿನ ಮಧ್ಯೆ ಮಾತನಾಡಿದ ಸ್ಪೀಕರ್ ಕೆ.ಆರ್‌.ರಮೇಶ್‌ಕುಮಾರ್‌, ‘ನಂದೂ ಹಾಕಿದ್ದಾರಂತೆ. ನಾನು ರಾಜೀನಾಮೆ ಕೊಟ್ಟಿದ್ದೇನೆ ಅಂತ. ಮನೆಯಿಂದ ಮಗ ಪೋನ್‌ ಮಾಡಿದ್ದ, ರಾಜೀನಾಮೆ ಕೊಟ್ಟುಬಿಟ್ಟಿದ್ದೀಯಂತಲ್ಲಪ್ಪಾ. ಮನೆಗೆ ಹೇಗೆ ಬರ್ತೀಯಾ. ಕಾರು ತೆಗೆದುಕೊಂಡು ಬರ್ಲಾ ಅಂತ ಕೇಳಿದ. ಏನು ಮಾಡಬೇಕು’ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

* ಇದನ್ನೂ ಓದಿ: ದೋಸ್ತಿಗೆ ಇನ್ನೂ ಸಿಗದ ‘ವಿಶ್ವಾಸ’; ಮತಕ್ಕೆ ಹಾಕಲು ಇಂದು ಸಂಜೆ 6ರ ಗಡುವು

‘ನಮ್ಮ ಮಟ್ಟ ನೋಡಿ ಮಾಧ್ಯಮ ಕೆಲಸ ಮಾಡುತ್ತಿವೆ’–ಸ್ಪೀಕರ್

ಮಾಧ್ಯಮದಲ್ಲಿ ರಾಜೀನಾಮೆ ವಿಷಯ ಪ್ರಸಾರ ಮಾಡಿದ್ದಾರೆ ಯಾವಮಟ್ಟಕ್ಕಿದೆ ನೋಡಿ ಎಂದು ಸಿಎಂ ಹೇಳಿದ ಮಾತಿಗೆ ಪ್ರತಿಕ್ರಿಯಿಸಿದ ಸ್ಪೀಕರ್‌, ‘ಅವರ ಕೆಲಸ ಅವರು ಮಾಡುತ್ತಿದ್ದಾರೆ. ಸಭಾ ನಾಯಕರೆ ನಮ್ಮ ಮಟ್ಟನೋಡಿ ಅವರು ಕೆಲಸ ಮಾಡುತ್ತಾರೆ. ಅವರನ್ನು ಅನ್ನಬಾರದು. ನಮ್ಮ ಮಟ್ಟ ಅನುಸರಿಸಿ ಅವರು ಕೆಲಸ ಮಾಡುತ್ತಾರೆ. ನಮ್ಮ ಕ್ವಾಲಿಟಿ ಚನ್ನಾಗಿದ್ದರೆ ಅವರ‍್ಯಾಕೆ ಮಾತನಾಡುತ್ತಾರೆ’ ಎಂದು ಪ್ರಶ್ನಿಸಿದರು.

‘ಈ ವಿಷಯ ಎಲೆಕ್ಟ್ರಾನಿಕ್‌ ಮಿಡಿಯಾದಲ್ಲಿ ಬಂತಾ?’ ಎಂದು ಸ್ಪೀಕರ್‌ ಕೇಳಿದರು. ಅದಕ್ಕೆ ಸಿಎಂ, ಹೌದು ಎಂದರು.

ಸಂಗತಿ ತಿರುಚಲಾಗಿದೆ, ಪೂರ್ವ ನಿಯೋಜಿತ: ರಾಜಕೀಯ ವಲಯದ ಚರ್ಚೆ

ರಾಜೀನಾಮೆ ಪತ್ರ ಹರಿದಾಡಿದ್ದಕ್ಕೂ, ಕಲಾಪ ನಡೆಯುತ್ತಿದ್ದಾಗ ಅಲ್ಲಿಂದ ತೆರಳಿದ್ದ ಸಿಂಎಂ ಬಹಳ ಸಮಯದ ವರೆಗೆ ಕಲಾಪಕ್ಕೆ ಬಂದು ಕೂತಿರಲಿಲ್ಲ. ಎರಡಕ್ಕೂ ಸಾಮ್ಯತೆ ಇದೆ ಎನ್ನಲಾಗುತ್ತಿದೆ. ಈ ವೇಳೆ ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಲು ಪತ್ರವನ್ನು ಕಚೇರಿಯಲ್ಲಿ ಕುಳಿತು ಸಿದ್ಧಮಾಡಿಸಿದ್ದಾರೆ ಎಂದೂ ಹಾಗೂ ಅದರ ಪ್ರತಿ ಮಾಧ್ಯಮಗಳಿಗೆ ಯಾರದ್ದೋ ಮೂಲಕ ಲಭ್ಯವಾಗಿದೆ ಎಂದೂ, ರಾಜೀನಾಮೆ ಸಲ್ಲಿಸಲು ಮುಂದಾಗಿದ್ದ ಮುಖ್ಯಮಂತ್ರಿ ಅವರನ್ನು ಕೆಲ ಸಚಿವರ ತಡೆದಿದ್ದಾರೆ ಎಂದೂ; ಬಳಿಕ, ಅದೇ ವಿಷಯವನ್ನು ಸದನಲ್ಲಿ ಬೇರೆ ರೀತಿಯಲ್ಲಿ ತಿರುಚಿ ನಕಲಿ ಪತ್ರ ಎಂದು ಸಿಎಂ ಬಿಂಬಿಸಿದ್ದಾರೆ, ಇದೆಲ್ಲಾ ಪುರ್ವ ನಿಯೋಜಿತ ಎಂದೂ ರಾಜಕೀಯ ವಲಯದಲ್ಲಿ ಚರ್ಚೆಗಳು ನಡೆಯುತ್ತಿದ್ದು, ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು