ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ| ಅಲೆಗಳ ಉಬ್ಬರ ತಡೆದರೆ ಕಡಲ್ಕೊರೆತ ನಿವಾರಣೆ

Last Updated 4 ಜನವರಿ 2020, 20:27 IST
ಅಕ್ಷರ ಗಾತ್ರ
ADVERTISEMENT
""

ಉಡುಪಿ:ಗಾಳಿಯ ಒತ್ತಡದಿಂದ ಅಲೆಗಳ ಉಬ್ಬರ ಹೆಚ್ಚಾಗಿ ಕಡಲ್ಕೊರೆತ ಸಂಭವಿಸುತ್ತದೆ. ಅಲೆಗಳ ವೇಗ, ಎತ್ತರ, ಒತ್ತಡ ಹಾಗೂ ದಿಕ್ಕುಗಳ ನಿಖರ ಮಾಹಿತಿಯನ್ನು ಕಲೆಹಾಕಿ ಅಲೆಗಳು ತೀರಕ್ಕೆ ಬರುವ ಮುನ್ನವೇ ಅದರ ವೇಗವನ್ನು ನಿಯಂತ್ರಿಸಿದರೆ ಕಡಲ್ಕೊರೆತ ತಡೆಯಬಹುದು ಎನ್ನುತ್ತಾರೆ ಪರಿಸರ ವಿಜ್ಞಾನಿ ಡಾ.ಪ್ರಕಾಶ್ ಮೇಸ್ತ.

ಇನ್‌ಕಾಯಸ್‌ ಹಾಗೂ ಎನ್‌ಐಒ ಸಂಸ್ಥೆಗಳು 2 ದಿನ ಮುಂಚಿತವಾಗಿ ಅಲೆಗಳ ಒತ್ತಡ, ವೇಗ, ದಿಕ್ಕುಗಳ ಮಾಹಿತಿಯನ್ನು ನೀಡುತ್ತವೆ. ಮೂರು ಗಂಟೆಗೊಮ್ಮೆ ಮಾಹಿತಿ ರವಾನಿಸುತ್ತಲೇ ಇರುತ್ತವೆ. ಇದರ ಆಧಾರದ ಮೇಲೆ ಅಧ್ಯಯನ ನಡೆಸಿ, ಕಡಲ್ಕೊರೆತ ಸಂಭವಿಸುವ ಸ್ಥಳಗಳನ್ನು ಗುರುತಿಸಿ, ಪರಿಹಾರ ಕಂಡುಕೊಳ್ಳಬಹುದು ಎನ್ನುತ್ತಾರೆ ಅವರು.‌

ತೀರಕ್ಕೆ ಕಲ್ಲುಗಳನ್ನು ಸುರಿಯುವುದು, ಕಾಂಕ್ರೀಟ್‌ ತಡೆಗೋಡೆ ನಿರ್ಮಿಸುವುದರಿಂದ ದೀರ್ಘಕಾಲಿನ ಪ್ರಯೋಜನ ಇಲ್ಲ. ಕಡಲ್ಕೊರೆತ ಹೆಚ್ಚಾಗಿರುವ ಕಡೆಗಳಲ್ಲಿ ಬಳ್ಳಿ ಮಾದರಿಯ ಸಸ್ಯಗಳು, ಕಾಂಡ್ಲಾ, ಮ್ಯಾಂಗ್ರೋ ಗಿಡಗಳನ್ನು ಬೆಳೆಸಬೇಕು. ಇದರಿಂದ ಅಲೆಗಳ ಜತೆಗೆ ಬರುವ ಮರಳನ್ನು ಬಳ್ಳಿಗಳು ಹಿಡಿದಿಟ್ಟುಕೊಂಡು ಮರಳಿನ ದಿಬ್ಬಗಳನ್ನು ರಚಿಸುತ್ತಾ ಹೋಗುತ್ತವೆ. ಇದರಿಂದ ನೈಸರ್ಗಿಕವಾಗಿ ಕಡಲ್ಕೊರೆತ ಕಡಿಮೆಯಾಗುತ್ತದೆ ಎಂದು ಮಾಹಿತಿ ನೀಡಿದರು.

ಸಮುದ್ರದ ಸುತ್ತಲೂ ತಡೆಗೋಡೆ ಕಟ್ಟಿದರೆ ಸಮುದ್ರದ ಸೂಕ್ಷ್ಮಜೀವಿಗಳು ನಶಿಸಿಹೋಗುತ್ತವೆ. ಹಲವು ವರ್ಷಗಳ ಹಿಂದೆ ಅಮೆರಿಕದಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಿಸಲು ಸಮುದ್ರತೀರಕ್ಕೆ ದೊಡ್ಡ ಕಲ್ಲುಗಳನ್ನು ತಂದು ಸುರಿದಾಗ, ಅಲ್ಲಿನ ಒಂದು ಪ್ರಬೇಧದ ಮೀನು ನಶಿಸುವ ಹಂತ ತಲುಪಿತ್ತು. ಬಳಿಕ ಯೋಜನೆಯನ್ನು ಕೈಬಿಡಲಾಯಿತು ಎಂದು ಉದಾಹರಣೆ ನೀಡಿದರು ಪ್ರಕಾಶ್‌ ಮೇಸ್ತ.

ಸಮುದ್ರಕ್ಕೂ ನಿರ್ದಿಷ್ಟವಾದ ಭೂಪ್ರದೇಶವಿದೆ. ಪ್ರವಾಸೋದ್ಯಮ ಹಾಗೂ ಜನವಸತಿ ಉದ್ದೇಶಕ್ಕೆ ತೀರಗಳ ಅತಿಕ್ರಮಣ ಸಲ್ಲದು ಎಂದು ಸಲಹೆ ನೀಡಿದರು.

‘ಸಮುದ್ರ ತಡೆಗೋಡೆ’: ನೀರಿನ ಝೀರೊ ಲೆವೆಲ್‌ಗೆಜಿಯೋ ಫ್ಯಾಬ್ರಿಕ್ ಮ್ಯಾಟ್‌ಗಳನ್ನು ಹಾಸಿ ಮಣ್ಣಿನ ಸವಕಳಿ ತಪ್ಪಿಸಲಾಗುತ್ತದೆ. ನಂತರ ಮರಳು ತುಂಬಿರುವ ನೈಲಾನ್ ಬ್ಯಾಗ್‌ಗಳನ್ನು ಹಾಕಲಾಗುತ್ತದೆ. ಬಳಿಕ 75 ರಿಂದ 125 ಕೆ.ಜಿ ತೂಕ ಹಾಗೂ 1,250 ರಿಂದ 1,500 ಕೆಜಿ ತೂಕದ ಕಲ್ಲುಗಳನ್ನು ಕ್ರಮವಾಗಿ ಬಳಸಲಾಗುತ್ತದೆ. ಕಲ್ಲುಗಳು ಒಂದಕ್ಕೊಂದು ಬೆಸೆಯುವ ಮಾದರಿಯಲ್ಲಿ ಕಾಮಗಾರಿ ನಡೆಸುವುದರಿಂದ ಕಡಲ್ಕೊರೆತವನ್ನು ದೀರ್ಘಕಾಲೀನವಾಗಿ ತಡೆಯಬಹುದು. ಈ ಮಾದರಿ ಕಾಮಗಾರಿ ಉಡುಪಿಯ ಕಿದಿಯೂರು ಪಡುಕರೆ ಬಳಿ ನಡೆಯುತ್ತಿದೆ ಎಂದು ಬಂದರು ಮತ್ತು ಮೀನುಗಾರಿಕಾ ಇಲಾಖೆ ಅಧಿಕಾರಿಗಳು ತಿಳಿಸಿದರು.

‘ಟಿ’, ‘ಐ’ ಮಾದರಿ

ಬೈಂದೂರಿನ ಮರವಂತೆ-ತ್ರಾಸಿ ಬಳಿ ಸಮುದ್ರ ಹಾಗೂ ನದಿಯ ಮಧ್ಯೆ ರಾಷ್ಟ್ರೀಯ ಹೆದ್ದಾರಿ 66 ಹಾದುಹೋಗಿದ್ದು, ಇಲ್ಲಿನ 120 ಮೀಟರ್‌ ವ್ಯಾಪ್ತಿಯಲ್ಲಿ ಟಿ ಹಾಗೂ ಐ ಮಾದರಿಯಲ್ಲಿ 24 ಗ್ರಾಯಿನ್‌
ಗಳನ್ನು ನಿರ್ಮಿಸಲಾಗಿದೆ. ಇಲ್ಲಿ ದಂಡೆಯುದ್ದಕ್ಕೂ ಕಲ್ಲುಗಳನ್ನು ಜೋಡಿಸುವ ಬದಲು ಲಂಬವಾಗಿ ಹಾಕಲಾಗಿದೆ. ಇದರಿಂದ ಮಣ್ಣಿನ ಸವಕಳಿ ತಡೆಯಬಹುದು. ಜತೆಗೆ ಗ್ರಾಯಿನ್‌ಗಳ ನಡುವೆ ಅಲೆಗಳ ಸಹಜ ಪ್ರಕ್ರಿಯೆಯಲ್ಲಿ ಮರಳು ಶೇಖರಣೆಯಾಗಿ ಸಮುದ್ರದಂಡೆ ವಿಸ್ತರಣೆಯಾಗುತ್ತದೆ ಎನ್ನುತ್ತಾರೆ ಕೋಸ್ಟಲ್ ಮರೀನ್ ಕನ್‌ಸ್ಟ್ರ್ರಕ್ಷನ್ ಅಂಡ್ ಎಂಜಿನಿಯರಿಂಗ್ ಸಂಸ್ಥೆಯ ಅಧಿಕಾರಿಗಳು.

ಟ್ರಾಂಚ್‌–1

*ಟ್ರಾಂಚ್‌–1 ಯೋಜನೆಯಲ್ಲಿ ಮಾಡಿದ ವೆಚ್ಚ ₹ 620 ಕೋಟಿ

* ಟ್ರಾಂಚ್‌-2 ಯೋಜನೆಗೆ ನಿಗದಿಪಡಿಸಿದ ಮೊತ್ತ ₹ 640.75 ಕೋಟಿ

* ಟ್ರಾಂಚ್‌–1 ಯೋಜನೆಯಡಿ ಉಳ್ಳಾಲದಲ್ಲಿ ಕಡಲ್ಕೊರೆತ ತಡೆಗೆ 2012ರಿಂದ ₹246.11 ಕೋಟಿ ವೆಚ್ಚದಲ್ಲಿ 8 ಇನ್‌ಶೋರ್‌ ಬರ್ಮ್ ನಿರ್ಮಾಣ, ಬ್ರೇಕ್‌ ವಾಟರ್‌ ಪುನರ್‌ನಿರ್ಮಾಣ, ಉಳ್ಳಾಲದ ಕಡಲ ಮಧ್ಯದಲ್ಲಿ 2 ಆಫ್‌ಶೋರ್‌ ರೀಫ್‌ಗಳ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ.

ಟ್ರಾಂಚ್‌–2 ಯೋಜನೆ

* ಸೋಮೇಶ್ವರ– ₹ 26.33 ಕೋಟಿ 10 ಇನ್‌ಶೋರ್‌ ಬರ್ಮ್‌ಗಳ ನಿರ್ಮಾಣ, ₹104.82 ಕೋಟಿ ವೆಚ್ಚದಲ್ಲಿ ಎರಡು ರೀಫ್‌ಗಳ ನಿರ್ಮಾಣ, ಮುಕ್ಕಚ್ಚೇರಿಯಲ್ಲಿ ₹22.08 ಕೋಟಿ ವೆಚ್ಚದಲ್ಲಿ ತಡೆಗೋಡೆ ನಿರ್ಮಾಣ

* ಎರ್ಮಾಳು ತೆಂಕದಲ್ಲಿ ತಡೆಗೋಡೆ, ಉದ್ಯಾವರದಲ್ಲಿ 35 ಗ್ರಾಯನ್‌ ನಿರ್ಮಾಣ, ಕೋಡಿಬೆಂಗ್ರೆಯಲ್ಲಿ 4.1 ಕಿ.ಮೀ. ತಡೆಗೋಡೆ, ಕೋಡಿ ಕನ್ಯಾನದಲ್ಲಿ ಡ್ನೂನ್‌ ನಿರ್ಮಾಣ ಮತ್ತು ಸಸಿ ನೆಡುವುದು, ಮರವಂತೆಯಲ್ಲಿ 24 ಗ್ರಾಯನ್‌ಗಳ ನಿರ್ಮಾಣ

* ಸಮುದಾಯ ಉಪಯೋಜನೆಯಾಗಿ ಬೈಲೂರು ತಂಬೆಬೀಲ, ಮಂಕಿ, ಧಾರೇಶ್ವರ, ಕಡ್ಲೆ ಬಿರ್‌ ಕೋಡಿ ಮತ್ತು ಗಂಗೆ ಕೊಳ್ಳಿಯಲ್ಲಿ ಡ್ನೂನ್‌ ನಿರ್ಮಾಣ ಹಾಗೂ ಸಸಿ ನೆಡುವ ಯೋಜನೆ ಸೇರಿವೆ. ಇದಕ್ಕಾಗಿ ಈಗಾಗಲೇ ಒಟ್ಟು ₹231.52 ಕೋಟಿ ವೆಚ್ಚವಾಗಿದೆ.

***

ಪ್ರತಿ ವರ್ಷ ₹50ಕೋಟಿ ನಷ್ಟ

ಕಡಲ್ಕೊರೆತದಿಂದ ಪ್ರತಿವರ್ಷ ಜಿಲ್ಲೆಯಲ್ಲಿ ₹ 50 ಕೋಟಿಯಷ್ಟು ನಷ್ಟ ಸಂಭವಿಸುತ್ತದೆ. ಬಂದರು ಮತ್ತು ಮೀನುಗಾರಿಕಾ ಇಲಾಖೆಯಿಂದ ಪ್ರತಿ ವರ್ಷ ₹ 20 ಕೋಟಿ ವೆಚ್ಚದಲ್ಲಿ ತಾತ್ಕಾಲಿಕ ಹಾಗೂ ಕೆಲವು ದೀರ್ಘಕಾಲಿನ ಕಾಮಗಾರಿಗಳು ನಡೆಯುತ್ತವೆ. ದೊಡ್ಡ ಕಾಮಗಾರಿಗಳು ಹೆಚ್ಚಾಗಿ ಎಡಿಬಿ ನೆರವಿನೊಂದಿಗೆ ಸುಸ್ಥಿರ ಯೋಜನಾ ವಿಭಾಗದಿಂದ ನಡೆಯುತ್ತವೆ.

–ಉದಯ್‌ ಕುಮಾರ್,ಬಂದರು ಮತ್ತು ಮೀನುಗಾರಿಕಾ ಇಲಾಖೆಯ ಎಇಇ

‘ದಶಕಗಳ ಸಮಸ್ಯೆಗೆ ಮುಕ್ತಿ ಸಿಕ್ಕಿಲ್ಲ’

ಪ್ರತಿ ಮಳೆಗಾಲದಲ್ಲಿ ಸಂಭವಿಸುವ ಕಡಲ್ಕೊರೆತ ಮೀನುಗಾರರ ಬದುಕನ್ನು ಮೂರಾಬಟ್ಟೆ ಮಾಡುತ್ತದೆ. ಅಲೆಯ ಹೊಡೆತಕ್ಕೆ ಮನೆಗಳು ಸಮುದ್ರ ಪಾಲಾಗುತ್ತವೆ. ತೋಟಗಾರಿಕಾ ಬೆಳೆಗಳು ನಾಶವಾಗುತ್ತಿವೆ. ದಶಕಗಳಿಂದಲೂ ಶಾಶ್ವತ ಪರಿಹಾರಕ್ಕೆ ಒತ್ತಾಯಿಸುತ್ತಾ ಬಂದರೂ ಪ್ರಯೋಜನವಾಗಿಲ್ಲ.

–ಕೃಷ್ಣ ಸುವರ್ಣ,ಮೀನುಗಾರರ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT