ಶುಕ್ರವಾರ, ಸೆಪ್ಟೆಂಬರ್ 18, 2020
24 °C

Live| ನಾಳೆ ಸಚಿವ ಸಂಪುಟ ಸಭೆ ಕರೆದ ಸಿಎಂ ಕುಮಾರಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅತೃಪ್ತ ಶಾಸಕರ ರಾಜೀನಾಮೆ ರಾಜ್ಯ ರಾಜಕಾರಣದಲ್ಲಿ ಸುನಾಮಿ ಎಬ್ಬಿಸಿದೆ. ಶಾಸಕರ ಮನವೊಲಿಕೆಗೆ ಮುಂಬೈಗೆ ತೆರಳಿರುವ ಸಚಿವ ಡಿ.ಕೆ.ಶಿವಕುಮಾರ್‌ಗೆ ಮಹಾರಾಷ್ಟ್ರ ಪೊಲೀಸರು ಹೋಟೆಲ್‌ ಒಳಗೆ ಹೋಗದಂತೆ ತಡೆ ನೀಡಿದ್ದಾರೆ. ಇತ್ತ ಬೆಂಗಳೂರಿನಲ್ಲಿ ಬಿಜೆಪಿ ಮತ್ತು ಮೈತ್ರಿ ಪಕ್ಷದ ಮುಖಂಡರು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಒಟ್ಟಿನಲ್ಲಿ ರಾಷ್ಟ್ರಮಟ್ಟದಲ್ಲಿ ರಾಜ್ಯ ರಾಜಕಾರಣದ ಹೈಡ್ರಾಮ ಸದ್ದು ಮಾಡುತ್ತಿದೆ.

9:15 – ನಾಳೆ (ಗುರುವಾರ) 11 ಗಂಟೆಗೆ ಮಹತ್ವದ ಸಚಿವ ಸಂಪುಟ ಸಭೆ ಕರೆದಿದ್ದಾರೆ ಮುಖ್ಯಮಂತ್ರಿ ಕುಮಾರಸ್ವಾಮಿ. ನಾಳಿನ ಸಂಪುಟ ಸಭೆಯ ತೀರ್ಮಾನದ ಮೇಲೆ ಎಲ್ಲರ ಗಮನ ನೆಟ್ಟಿದೆ. 

9:15 – ಸಚಿವ ಎಂಟಿಬಿ ನಾಗರಾಜ್‌ ಮತ್ತು ಶಾಸಕ ಸುಧಾಕರ್‌ ರಾಜೀನಾಮೆ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಬುಧವಾರ ರಾತ್ರಿ ನಡೆದ ಕಾಂಗ್ರೆಸ್‌ ನಾಯಕ ಸಭೆ ಮುಕ್ತಾಯ. ಈ ವೇಳೆ ಮಾತನಾಡಿದ ಕಾಂಗ್ರೆಸ್‌ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ‘ ಮುಂದಿನ ಕ್ರಮಗಳು... ದೊಡ್ಡ ದೊಡ್ಡ ಕ್ರಮಗಳು ಇನ್ನಷ್ಟೇ ಜರುಗಲಿವೆ,’ ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿದೆ. 

8:34 – ಸಚಿವ ಎಂಟಿಬಿ ನಾಗರಾಜ್‌ ಮತ್ತು ಶಾಸಕ ಸುಧಾಕರ್‌ ರಾಜೀನಾಮೆ ಹಿನ್ನೆಲೆಯಲ್ಲಿ ಬುಧವಾರ ಕಾಂಗ್ರೆಸ್‌ ಮತ್ತಷ್ಟು ತಲ್ಲಣಗೊಂಡಿದೆ. ಇದೇ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕ ಗುಲಾಮ್‌ ನಬಿ ಆಜಾದ್‌, ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ ವೇಣುಗೋಪಾಲ್‌, ಸಿದ್ದರಾಮಯ್ಯ, ಪರಮೇಶ್ವರ್‌, ದಿನೇಶ್‌ ಗುಂಡೂರಾವ್‌ ನೇತೃತ್ವದಲ್ಲಿ ಇಂದು ಬೆಂಗಳೂರಿನಲ್ಲಿ ಮಹತ್ವದ ಸಭೆ ನಡೆಯುತ್ತಿದೆ. 

7:54 – ಇಂದಿನ ಬೆಳವಣಿಗೆಗಳ ಕುರಿತು ಚರ್ಚೆ ನಡೆಸಲು ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಯಡಿಯೂರಪ್ಪ ಅವರು ತುರ್ತು ಸಭೆ ಕರೆದಿದ್ದಾರೆ. 

7:25 – ಇಂದು ಮುಂಬಯಿನಲ್ಲಿ ಹಾಗೂ ಬೆಂಗಳೂರಿನ ವಿಧಾನಸೌಧದಲ್ಲಿ ನಡೆದ ಘಟನೆಗಳು ಭಾರತೀಯ ಜನತಾ ಪಕ್ಷವು ಪ್ರಜಾಪ್ರಭುತ್ವದ ಎಲ್ಲ ಎಲ್ಲೆಗಳನ್ನೂ ಮೀರಿ ವರ್ತಿಸುತ್ತಿರುವುದು ಹಾಗೂ ನಾಗರಿಕ ಸಂಹಿತೆಯನ್ನೂ ಮೀರಿರುವುದು ಸ್ಪಷ್ಟ. 

ಇಂದು ಬೆಳಿಗ್ಗೆ ಮುಂಬಯಿನಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಶಾಸಕರನ್ನು ಭೇಟಿ ಮಾಡಲು ತೆರಳಿದ್ದ ನನ್ನ ಸಹೋದ್ಯೋಗಿಗಳಾದ ಡಿ.ಕೆ. ಶಿವಕುಮಾರ್ ಹಾಗೂ ಜಿ.ಟಿ. ದೇವೇಗೌಡ ಮತ್ತು ಶಾಸಕರಾದ ಶಿವಲಿಂಗೇಗೌಡ ಹಾಗೂ ಬಾಲಕೃಷ್ಣ ಅವರನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಂಡು ಮಹಾರಾಷ್ಟ್ರ ಸರ್ಕಾರ ವರ್ತಿಸಿರುವ ರೀತಿ ಖಂಡನೀಯ. 

ಜನಪ್ರತಿನಿಧಿಗಳು, ಅದರಲ್ಲೂ ಸಚಿವರು ಹಾಗೂ ಶಾಸಕರನ್ನು ಬೀದಿಯಲ್ಲಿ ನಿಲ್ಲಿಸಿ ಕಸ್ಟಡಿಗೆ ತೆಗೆದುಕೊಂಡಿರುವುದು ಮತ್ತು ಅಪರಾಧಿಗಳಂತೆ ಅವರನ್ನು ನಡೆಸಿಕೊಂಡಿರುವುದು ಶಿಷ್ಟಾಚಾರದ ಉಲ್ಲಂಘನೆ ಮಾತ್ರವಲ್ಲ, ಪಾಳೇಗಾರಿಕೆಯ ಮನೋಭಾವದ ಅನಾವರಣವಾಗಿದೆ.

ಮಹಾರಾಷ್ಟ್ರದಲ್ಲಿರುವ ಬಿಜೆಪಿ ಸರ್ಕಾರ ನೆರೆಯ ರಾಜ್ಯದ ಸಚಿವರಿಗೆ , ಶಾಸಕರಿಗೆ ರಕ್ಷಣೆ ನೀಡಬೇಕಿತ್ತು. ಆದರೆ ಅವರನ್ನು ಅಗೌರವದಿಂದ ಕಂಡಿರುವುದು ಸಮಂಜಸವಲ್ಲ. ಮಹಾರಾಷ್ಟ್ರ ಸರ್ಕಾರವು ನೆರೆಯ ರಾಜ್ಯದ ಸರ್ಕಾರವನ್ನು ಅಭದ್ರಗೊಳಿಸಲು ಸಹಕಾರ ನೀಡುತ್ತಿರುವುದು ಇದರಿಂದ ದೃಢಪಟ್ಟಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಶಾಸಕರನ್ನು ಹೋಟೆಲ್‍ನಲ್ಲಿ ಗೃಹಬಂಧನದಲ್ಲಿಡಲು ಮಹಾರಾಷ್ಟ್ರ ಸರ್ಕಾರ ಬಿಜೆಪಿಗೆ ಸಹಕಾರ ನೀಡಿರುವುದು ಇದರಿಂದ ಸಂಪೂರ್ಣ ಸ್ಪಷ್ಟ.

ಇಂದು ಮಧ್ಯಾಹ್ನ ವಿಧಾನಸೌಧದಲ್ಲಿ ಬಿಜೆಪಿ ಶಾಸಕರ ದುಂಡಾವರ್ತಿಯ ನಡವಳಿಕೆ ಜಿಗುಪ್ಸೆ ಹುಟ್ಟಿಸುವಂತದ್ದು. ಕಾಂಗ್ರೆಸ್ ಪಕ್ಷದ ಮುಖಂಡರು ಶಾಸಕರೊಂದಿಗೆ ಚರ್ಚೆ ನಡೆಸುತ್ತಿದ್ದ ಸಮಯದಲ್ಲಿ ಬಿಜೆಪಿ ಶಾಸಕರು ಹಾಗೂ ಕಾರ್ಯಕರ್ತರು ವರ್ತಿಸಿದ ರೀತಿ ವಿಧಾನಸೌಧಕ್ಕೆ ಅಷ್ಟೇ ಅಲ್ಲ, ಕರ್ನಾಟಕ ರಾಜಕಾರಣದ ಶ್ರೇಷ್ಠ ಪರಂಪರೆಗೂ ಮಸಿ ಬಳಿದಿದೆ.

ಇಡೀ ರಾಷ್ಟ್ರ ಗಮನಿಸುತ್ತಿದೆ ಎಂಬ ಪರಿವೆಯೂ ಇಲ್ಲದೆ ಲಜ್ಜಾಹೀನರಾಗಿ ವರ್ತಿಸಿರುವುದು ಬೇಸರ ಉಂಟು ಮಾಡಿದೆ. ಇವರ ಅಧಿಕಾರದ ಹಪಾಹಪಿಯಿಂದ ನಡೆದ ಘಟನಾವಳಿಗಳಿಂದ ರಾಷ್ಟ್ರಮಟ್ಟದಲ್ಲಿ ಕರ್ನಾಟಕ ನಗೆಪಾಟಲಿಗೀಡಾಗಿದೆ. ಬಿಜೆಪಿ ನಡೆಸುತ್ತಿರುವುದು ಪ್ರಜಾಪ್ರಭುತ್ವ ರಾಜಕಾರಣವೋ ಅಥವಾ ದಮನಕಾರಿ ಮನೋಭಾವದ ವಿಕೃತ ಪ್ರದರ್ಶನವೋ?

ಎಚ್‌.ಡಿ ಕುಮಾರಸ್ವಾಮಿ, ಮುಖ್ಯಮಂತ್ರಿ (ಪತ್ರಿಕಾ ಪ್ರಕಟಣೆ)

– – – – – – – – – – – – – – – – – – – – – – – – – – – – – – – – – – – – – – – – – – – – – – –

7:25 – ಸುಧಾಕರ್‌ ಕಾಂಗ್ರೆಸ್‌ ಶಾಸಕ. ಅವರು ರಾಜೀನಾಮೆ ನೀಡಿದ್ದರಿಂದ ಅವರೊಂದಿಗೆ ಮಾತನಾಡಲು ವಿಧಾನಸೌಧಕ್ಕೆ ಬಂದಿದ್ದೆ. ಆಗ ಬಿಜೆಪಿ ಗೂಂಡಾಗಿರಿ ನಡೆಸಿದೆ. ಸುಧಾಕರ್‌ಗೂ ಬಿಜೆಪಿಗೂ ಏನು ಸಂಬಂಧ? ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ. 

ಸುಧಾಕರ್ ಅವರೊಂದಿಗೆ ನಾನು ಚರ್ಚೆ ಮಾಡಿದ್ದೇನೆ. ಅವರು ಪಕ್ಷ ಬಿಡುವುದಿಲ್ಲ ಎಂದೂ ಸಿದ್ದರಾಮಯ್ಯ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

– – – – – – – – – – – – – – – – – – – – – – – – – – – – – – – – – – – – – – – – – – – – – – –

6:53 – ಶಾಸಕ ಸುಧಾಕರ್‌ ಮನವೊಲಿಸಲು ಸಿದ್ದರಾಮಯ್ಯ ಅವರು ನಡೆಸಿದ ಸಂಧಾನ ವಿಫಲವಾಗಿದ್ದು, ಅವರು ಪೊಲೀಸ್‌ ಭದ್ರತೆಯಲ್ಲಿ ರಾಜಭವನಕ್ಕೆ ತೆರಳಿದರು. 

6:21 – ನಾನು ಶಾಸಕರನ್ನು ನೋಡಲೇ ಬೇಕು ಮಾತನಾಡಲೇಬೇಕು. ಆದರೆ ನನ್ನನ್ನು ಮುಂಬೈನಿಂದ ಹೊರ ಹಾಕಲಾಗಿದೆ. ಏರ್‌ಪೋರ್ಟ್‌ಗೆ ಬಿಟ್ಟು ಬರಬೇಕು ಎಂದು ಪೊಲೀಸರಿಗೆ ಆದೇಶವಾಗಿದೆಯಂತೆ. ಮುಂಬೈ ಹಿಂದಿನಿಂದಲೂ ಒಂದೊಳ್ಳೆ ಸಂಸ್ಕೃತಿಯಲ್ಲಿ ನಡೆದುಕೊಂಡ ಬಂದ ನಗರ. ಆದರೆ, ಈಗ ನನ್ನನ್ನು ಹೊರ ಹಾಕಲಾಗುತ್ತಿದೆ. ಹೋಟೆಲ್‌ ಪ್ರವೇಶಿಸಲು, ನನ್ನ ಸ್ನೇಹಿತರೊಂದಿಗೆ ಮಾತನಾಡಲು ನನಗೆ ಅವಕಾಶ ನೀಡಲಿಲ್ಲ. ಇದು ಪ್ರಜಾಪ್ರಭುತ್ವ ವಿರೋಧಿ ನಡೆ. ಇಂದು ನಾನು ನಡೆಸಿದ ಹೋರಾಟದಲ್ಲಿ ಮುಂಬೈನ ಪಕ್ಷದ ನನ್ನ ಸ್ನೇಹಿತರು ನನ್ನ ಜತೆಗಿದ್ದರು. ಅವರಿಗೆ ಧನ್ಯವಾದಗಳು ಎಂದು ಮುಂಬೈನಲ್ಲಿ ಡಿ.ಕೆ ಶಿವಕುಮಾರ್‌ ಹೇಳಿದ್ದಾರೆ.  

– – – – – – – – – – – – – – – – – – – – – – – – – – – – – – – – – – – – – – – – – – – – – – –

5:59 – ಹೋಟೆಲ್‌ ಪ್ರವೇಶ ಮಾಡಲು ನನಗೆ ಅವಕಾಶ ನೀಡಲಿಲ್ಲ. ಪೊಲೀಸರು ನನ್ನನ್ನು ಬಲವಂತದಿಂದ ಕರೆದೊಯ್ದರು. ಈಗ ರಾಜೀನಾಮೆ ನೀಡಿರುವ ಎಲ್ಲ ಶಾಸಕರೂ ಮರಳಿ ಬರುತ್ತಾರೆ ಎಂಬ ವಿಶ್ವಾಸ ನನಗೆ ಈಗಲೂ ಇದೆ. ಯಾರೂ ಪಕ್ಷ ಬಿಡುವುದಿಲ್ಲ. ನಮ್ಮ ಸರ್ಕಾರ ಸುರಕ್ಷಿತವಾಗಿರಲಿದೆ ಎಂದು ಮುಂಬೈನಲ್ಲಿ ಡಿ.ಕೆ ಶಿವಕುಮಾರ್‌ ಹೇಳಿದ್ದಾರೆ. 

5:59 – ಸುಧಾಕರ್ ಅವರನ್ನು 10 ನಿಮಿಷದೊಳಗೆ ಕರೆತರಬೇಕು ಎಂದು ರಾಜ್ಯಪಾಲರಿಂದ ಪೊಲೀಸ್ ಕಮಿಷನರ್ ಅವರಿಗೆ ಸೂಚನೆ. ಹೀಗಾಗಿ ಹಲವು ಪೊಲೀಸ್ ವಾಹನಗಳೊಂದಿಗೆ ವಿಧಾನಸೌಧಕ್ಕೆ ಬಂದ ಕಮಿಷನರ್

– – – – – – – – – – – – – – – – – – – – – – – – – – – – – – – – – – – – – – – – – – – – – – –

5:41  ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬಂದ ಸುಧಾಕರ್‌ ಅವರನ್ನು ಕಾಂಗ್ರೆಸ್‌ ನಾಯಕರು ಮನವೊಲಿಕೆಗೆಂದು ವಿಧಾನಸೌಧದ ಮೂರನೇ ಮಹಡಿಯ ಜಾರ್ಜ್‌ ಅವರ ಕಚೇರಿಗೆ ಕರೆದೊಯ್ದರು. ಇದನ್ನು ತಿಳಿದು ವಿಧಾನಸೌಧದ ಬಳಿಗೆ ಬಂದ ಬಿಜೆಪಿ ನಾಯಕರು ಕಾಂಗ್ರೆಸ್‌ ನಾಯಕರ ಮೇಲೆ ಆಕ್ರೋಶ ವ್ಯಕ್ತಪಡಿಸಿದರು. ಶಾಸಕ ರೇಣುಕಾಚಾರ್ಯ ಅವರು ಕೂಗಾಡಿದರು. ವಿಧಾನಸಭೆ ಪ್ರವೇಶಿಸುತ್ತಿದ್ದ ಸಚಿವ ಯು.ಟಿ ಖಾದರ್‌ ಅವರು ರೇಣುಕಾಚಾರ್ಯ ಅವರ ಅ ನಡವಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆಯಿತು. ಇದರಿಂದಾಗಿ ವಿಧಾನಸೌಧದಲ್ಲಿ ಗೊಂದಲಮಯ ವಾತಾವರಣ ಸೃಷ್ಟಿಯಾಗಿದೆ. ಸದ್ಯ ಸುಧಾಕರ್‌ ಅವರ ಮನವೊಲಿಸಲು ಕಾಂಗ್ರೆಸ್‌ ನಾಯಕರು ಹರಸಾಹಸಪಡುಸುತ್ತಿದ್ದಾರೆ. ಆದರೆ ಬಿಜೆಪಿ ಇದನ್ನು ಆಕ್ಷೇಪಿಸುತ್ತಿದೆ. 

– – – – – – – – – – – – – – – – – – – – – – – – – – – – – – – – – – – – – – – – – – – – – – –

5:27 – ಸುಧಾಕರ್‌ ಮತ್ತು ಎಂಟಿಬಿ ನಾಗರಾಜ್‌ ಅವರ ರಾಜೀನಾಮೆ ನಂತರ ವಿಧಾನಸೌಧ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಮಾನ ಮರ್ಯಾದೆ ಎಂಬುದಿದ್ದಿದರೆ ರಾಜೀನಾಮೆ ನೀಡಬೇಕು. ಅವರಿಗೆ ಮಾನ ಮರ್ಯಾದೆ ಇದ್ದಿದ್ದರೆ ಇದನ್ನು ತಡೆಯಬಹುದಿತ್ತು ಎಂದು ಕಿಡಿಕಾರಿದ್ದಾರೆ. 

– – – – – – – – – – – – – – – – – – – – – – – – – – – – – – – – – – – – – – – – – – – – – – –

4:50 –  ಸುಧಾಕರ್‌ ರಾಜೀನಾಮೆಯಿಂದಾಗಿ ವಿಧಾನಸೌಧದಲ್ಲಿ ಗೊಂದಲಮಯ ವಾತಾವರಣ ನಿರ್ಮಾಣವಾಗಿದೆ. ಅವರ ಮನವೊಲಿಸಿ ರಾಜೀನಾಮೆ ಹಿಂಪಡೆಯುವಂತೆ ಮಾಡಲು ಪ್ರಿಯಾಂಕ್‌ ಖರ್ಗೆ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಶತಪ್ರಯತ್ನ ನಡೆಸುತ್ತಿದ್ದಾರೆ. 

– – – – – – – – – – – – – – – – – – – – – – – – – – – – – – – – – – – – – – – – – – – – – – –

4:17 – ಸರ್ಕಾರದ ಮೇಲೆ ಅಸಮಾಧಾನ ಹೊಂದಿದ್ದ ಎಂಟಿಬಿ ನಾಗರಾಜ್‌ ಮತ್ತು ಚಿಕ್ಕಬಳ್ಳಾಪುರ ಶಾಸಕ ಸುಧಾಕರ್‌ ಅವರು ಸ್ಪೀಕರ್‌ ಕಚೇರಿಗೆ ಆಗಮಿಸಿದ್ದಾರೆ. ಇಬ್ಬರೂ ತಮ್ಮ ಹಸ್ತಾಕ್ಷರದಲ್ಲೇ ಸ್ಪೀಕರ್‌ಗೆ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. 

– – – – – – – – – – – – – – – – – – – – – – – – – – – – – – – – – – – – – – – – – – – – – – – 

4:13 – ಅತೃಪ್ತ ಶಾಸಕರ ಭೇಟಿಗಾಗಿ ಮುಂಬೈ ಹೋಟೆಲ್‌ ಎದುರು ಪಟ್ಟು ಹಿಡಿದು ಕುಳಿತಿದ್ದ  ಡಿಕೆ ಶಿವಕುಮಾರ್‌ ಅವನ್ನು ಕಲಿನಾ ವಿಶ್ವವಿದ್ಯಾಲಯದ  ವಿಶ್ರಾಂತಿ ಗೃಹದಲ್ಲಿ ಇರಿಸಲಾಯಿತು. ಅವರ ಜತೆಗೇ ಮಹಾರಾಷ್ಟ್ರ ಕಾಂಗ್ರೆಸ್‌ ಮುಖಂಡ ಮಿಲಿಂದ್‌ ದಿಯೋರಾ ಅವರನ್ನೂ ವಶಕ್ಕೆ ಪಡೆದು ಕರೆತರಲಾಗಿದೆ. 

– – – – – – – – – – – – – – – – – – – – – – – – – – – – – – – – – – – – – – – – – – – – – – –

3:53 – ರಾಜ್ಯಪಾಲರನ್ನು ಭೇಟಿ ಮಾಡಿ ಬಂದ ಯಡಿಯೂರಪ್ಪ ನೇತೃತ್ವದ ಬಿಜೆಪಿ ನಿಯೋಗವು ಸ್ಪೀಕರ್‌ ಭೇಟಿಗಾಗಿ ವಿಧಾನಸೌಧಕ್ಕೆ ತೆರಳಿತು.  

– – – – – – – – – – – – – – – – – – – – – – – – – – – – – – – – – – – – – – – – – – – – – – –

3:30 – ಮುಂಬೈನಲ್ಲಿ ಡಿ.ಕೆ ಶಿವಕುಮಾರ್‌ ಹೋಟೆಲ್ ಪ್ರವೇಶಿಸಲು ಬಿಡುತ್ತಿಲ್ಲ. ಕರ್ನಾಟಕದಲ್ಲಿ ರಾಜ್ಯಪಾಲರನ್ನು ಭೇಟಿಯಾಗಲು ಕಾಂಗ್ರೆಸ್‌–ಜೆಡಿಎಸ್‌ ನಾಯಕರಿಗೆ ಅವಕಾಶ ನೀಡುತ್ತಿಲ್ಲ. ಇದರ ನಂತರವೂ ಈ ಪ್ರಹಸದಲ್ಲಿ ಬಿಜೆಪಿ ಇಲ್ಲ ಎಂದರೆ ನಂಬುವವರು ಯಾರು?– ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್‌.  

– – – – – – – – – – – – – – – – – – – – – – – – – – – – – – – – – – – – – – – – – – – – – – –

3:15 – ಮೈತ್ರಿ ಸರ್ಕಾರವನ್ನು ಉರುಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿ ಬಿಬಿಎಂಪಿ ಸಭಾಂಗಣದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಸದಸ್ಯರು ಬುಧವಾರ ಪ್ರತಿಭಟನೆ ನಡೆಸಿದರು.   

– – – – – – – – – – – – – – – – – – – – – – – – – – – – – – – – – – – – – – – – – – – – – – –

2:51 – ಪೊಲೀಸರ ವಶದಲ್ಲಿರುವ ಸಚಿವ ಡಿ.ಕೆ ಶಿವಕುಮಾರ್‌ ಅವರನ್ನು ಮುಂಬೈನ ಕಲಿನಾ ವಿಶ್ವವಿದ್ಯಾಲಯದ ವಿಶ್ರಾಂತಿ ಗೃಹಕ್ಕೆ ಕರೆದೊಯ್ಯಲಾಗುತ್ತದೆ ಎಂದು ರಾಷ್ಟ್ರೀಯ ಸುದ್ದಿ ಮಾಧ್ಯಮ ಎಎನ್‌ಐ ವರದಿ ಮಾಡಿದೆ. 

– – – – – – – – – – – – – – – – – – – – – – – – – – – – – – – – – – – – – – – – – – – – – – –  

2:55 – ರಾಜೀನಾಮೆ ವಿಚಾರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಕೆಯಾಗಿರುವ ಅರ್ಜಿ ಸಂಬಂಧ ವಾದ ಮಂಡಿಸಲು ಕಾಂಗ್ರೆಸ್‌ ಪರವಾಗಿ ಅಭಿಷೇಕ್‌ ಮನು ಸಿಂಗ್ವಿ ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ ಎಂದು ಕರ್ನಾಟಕ  ಉಸ್ತುವಾರಿ ಕೆ.ಸಿ ವೇಣುಗೋಪಾಲ್‌ ಅವರು ತಿಳಿಸಿದ್ದಾರೆ.

– – – – – – – – – – – – – – – – – – – – – – – – – – – – – – – – – – – – – – – – – – – – – – –  

2:50 – ರಾಜ್ಯಪಾಲರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್‌ ನಾಯಕ ಗುಲಾಬ್‌ ನಬಿ ಆಜಾದ್‌, ಕರ್ನಾಟಕ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ ವೇಣುಗೋಪಾಲ್‌ ಸೇರಿದಂತೆ ಹಲವರನ್ನು ವಶಕ್ಕೆ ಪಡೆದ ಪೊಲೀಸರು. 

– – – – – – – – – – – – – – – – – – – – – – – – – – – – – – – – – – – – – – – – – – – – – – –  

2:30 – ಶಾಸಕರ ಮನವೊಲಿಕೆಗಾಗಿ ಹೋಟೆಲ್‌ ಎದುರು ಕುಳಿತಿದ್ದ ಡಿ.ಕೆ ಶಿವಕುಮಾರ್‌ ಅವರನ್ನು ಮಹಾರಾಷ್ಟ್ರ ಪೊಲೀಸರು ವಶಕ್ಕೆ ಪಡೆದು, ಕರೆದೊಯ್ದಿದ್ದಾರೆ. ಅವರೊಂದಿಗೆ ತೆರಳಿದ್ದ ಜಿ.ಟಿ ದೇವೇಗೌಡ, ಶಿವಲಿಂಗೇಗೌಡ, ಬಾಲಕೃಷ್ಣ ಅವರನ್ನು ಮಾತ್ರ ಸ್ಥಳದಲ್ಲೇ ಬಿಟ್ಟು ಹೋದ ಪೊಲೀಸರು. 

– – – – – – – – – – – – – – – – – – – – – – – – – – – – – – – – – – – – – – – – – – – – – – –  

2:30 – ಮುಂಬೈನಲ್ಲಿ ಅತೃಪ್ತ ಶಾಸಕರ ಮನವೊಲಿಕೆಗೆ ಯತ್ನ, ರಾಜ್ಯದಲ್ಲಿ ಬಿಜೆಪಿ ವಿರುದ್ಧ ಪ್ರತಿಭಟನೆ... ಹೀಗೆ ಬಿರುಸಿನ ರಾಜಕೀಯ ಚಟುವಟಿಕೆ ನಡುವೆ ‘ಆಪರೇಷನ್‌ ಕಮಲ’ ಒಳಗಾದಂತೆ ರೆಸಾರ್ಟ್‌ನಲ್ಲಿರುವ ಕಾಂಗ್ರೆಸ್‌–ಜೆಡಿಎಸ್‌ ಶಾಸಕರು ಯೋಗ ಮಾಡಿ, ರೆಸಾರ್ಟ್‌ ಸಮೀಪದಲ್ಲಿನ ದೇವಸ್ಥಾನದಲ್ಲಿ ಭೋಜನ ಸವಿದರು. 

– – – – – – – – – – – – – – – – – – – – – – – – – – – – – – – – – – – – – – – – – – – – – – –

2:20 – ಪೊಲೀಸರಿಗೆ ಮಾಹಿತಿ ನೀಡದೆ ದಿಢೀರನೆ ಗೃಹಕಚೇರಿ ಕೃಷ್ಣಾಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಭೇಟಿ.

– – – – – – – – – – – – – – – – – – – – – – – – – – – – – – – – – – – – – – – – – – – – – – –  

2:00 – ‘ಸರ್ಕಾರ ಬಹುಮತ ಕಳೆದುಕೊಂಡಿದೆ.ಆದ್ದರಿಂದ ವಿಶ್ವಾಸ ಮತ ಯಾಚಿಸುವುದಿಲ್ಲ. ಅಧಿವೇಶನ ನಡೆಸಲು ಬರಲ್ಲ’ ಎಂದು ಯಡಿಯೂರಪ್ಪ ರಾಜ್ಯಪಾಲರಿಗೆ‌ ಮನವಿ ಮಾಡಿದರು.

– – – – – – – – – – – – – – – – – – – – – – – – – – – – – – – – – – – – – – – – – – – – – – –  

1:35 – ರಾಜಭವನ ಸಮೀಪ ಕಾಂಗ್ರೆಸ್‌– ಜೆಡಿಸ್ ಪ್ರತಿಭಟನೆ. ಮುಖಂಡರಾದ ಗುಲಾಂನಬಿ ಆಜಾದ್, ವೇಣುಗೋಪಾಲ್, ದೇವೇಗೌಡ, ಸಿದ್ದರಾಮಯ್ಯ ಭಾಗಿಯಾಗಿದ್ದಾರೆ.  ‘ಬಿಜೆಪಿ ಶಾಸಕರನ್ನು ಖರೀದಿಸುತ್ತಿದೆ’ ಎಂದು ಅವರು ಆರೋಪಿಸಿದರು.

ಕಾಂಗ್ರೆಸ್‌–ಜೆಡಿಎಸ್‌ ಕಾರ್ಯಕರ್ತರಿಂದ ರಾಜಭವನ ಮುತ್ತಿಗೆ ಯತ್ನ. ರಾಜಭವನಕ್ಕೆ ತೆರಳುವ ದಾರಿಯಲ್ಲಿಯೇ ಕಾರ್ಯಕರ್ತರನ್ನು ಬಂಧಿಸಿದ ಪೊಲೀಸರು

– – – – – – – – – – – – – – – – – – – – – – – – – – – – – – – – – – – – – – – – – – – – – – –  

1:05 – ಮುಂಬೈನಲ್ಲಿ ಡಿ.ಕೆ.ಶಿವಕುಮಾರ್ ಅವರನ್ನು ತಡೆದಿರುವ ಮಹಾರಾಷ್ಟ್ರ ಪೊಲೀಸರ ನಡೆಯನ್ನು ಕಾಂಗ್ರೆಸ್‌ ಮುಖಂಡರು ರಾಜ್ಯಸಭೆಯಲ್ಲಿ ಪ್ರಶ್ನಿಸಿದರು.

– – – – – – – – – – – – – – – – – – – – – – – – – – – – – – – – – – – – – – – – – – – – – – –  

1:03 – ರಾಜ್ಯಪಾಲರಿಗೆ 4 ಪುಟಗಳ ಮನವಿ ಪತ್ರ ಸಲ್ಲಿಸಲು ಬಿ.ಎಸ್‌.ಯಡಿಯೂರಪ್ಪ ಮತ್ತು ತಂಡದವರು ಹೊರಟಿದ್ದಾರೆ.

– – – – – – – – – – – – – – – – – – – – – – – – – – – – – – – – – – – – – – – – – – – – – – –  

01:00 –  ಬಿಜೆಪಿ ಪ್ರತಿಭಟನೆಗೆ ವ್ಯಂಗ್ಯವಾಗಿ ಸಿದ್ದರಾಮಯ್ಯ ಟ್ವೀಟ್‌ ಮಾಡಿದ್ದಾರೆ

– – – – – – – – – – – – – – – – – – – – – – – – – – – – – – – – – – – – – – – – – – – – – – – –

12:55 – ರಾಜಭವನಕ್ಕೆ ನಡೆದು ಹೋಗಲು ಬಿಜೆಪಿ ನಾಯಕರು ತೀರ್ಮಾನ

– – – – – – – – – – – – – – – – – – – – – – – – – – – – – – – – – – – – – – – – – – – – – – – –

12:30 – ರಾಜಭವನದ ಬಳಿ ದೋಸ್ತಿ ನಾಯಕರ ಪ್ರತಿಭಟನೆ

– – – – – – – – – – – – – – – – – – – – – – – – – – – – – – – – – – – – – – – – – – – – – – – –

12:00 – ವಿಧಾನಸೌಧ ಗಾಂಧಿ ಪ್ರತಿಮೆ ಎದುರು ಬಿಜೆಪಿ ಶಾಸಕರು ಪ್ರತಿಭಟನೆ ನಡೆಸಿ. ಮುಖ್ಯಮಂತ್ರಿ ಕುಮಾರಸ್ವಾಮಿ ರಾಜೀನಾಮೆಗೆ ಒತ್ತಾಯಿಸಿದರು.

‘14 ಶಾಸಕರು ರಾಜೀನಾಮೆ ನೀಡಿದ್ದು, ರಾಜ್ಯ ಸರ್ಕಾರ ಬಹುಮತ ಕಳೆದುಕೊಂಡಿದು ತೊಘಲಕ್ ದರ್ಬಾರ್ ಮಾಡುತ್ತಿದೆ. ಸರ್ಕಾರ ಜನರ ಪಾಲಿಗೆ ಸತ್ತಿದೆ’ ಎಂದು  ಬಿ.ಎಸ್.ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಅಧಿವೇಶನ ನಡೆಸುವ ನೈತಿಕತೆ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಇಲ್ಲ. ಕೂಡಲೇ ಅವರು ರಾಜೀನಾಮೆ ನೀಡುವಂತೆ ರಾಜ್ಯಪಾಲರು ಸೂಚಿಸಬೇಕು ಎಂದು ಒತ್ತಾಯಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು