ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ಶೈಕ್ಷಣಿಕ ಸುಧಾರಣೆಗೆ ಇನ್ಫೊಸಿಸ್ ಪ್ರತಿಷ್ಠಾನ ನೆರವು

1 ಸಾವಿರ ಶಾಲೆಗಳಿಗೆ ಕಂಪ್ಯೂಟರ್: ವಿಜ್ಞಾನ ತರಬೇತಿಗೆ ₹1 ಕೋಟಿ
Last Updated 27 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಕಂಪ್ಯೂಟರ್‌ ಪೂರೈಕೆ, ಶಿಕ್ಷಕರಿಗೆ ತರಬೇತಿ, ಅತ್ಯುತ್ತಮವಾಗಿ ಇಂಗ್ಲಿಷ್ ಭಾಷೆ ಬೋಧಿಸುವ ಶಿಕ್ಷಕರಿಗೆ ಪುರಸ್ಕಾರ ಹಾಗೂ ಗ್ರಂಥಾಲಯ ಸ್ಥಾಪನೆಗಳಿಗೆ ಉದಾರ ನೆರವು ನೀಡಲು ಇನ್ಫೊಸಿಸ್‌ ಪ್ರತಿಷ್ಠಾನ ಮುಂದೆ ಬಂದಿದೆ.

ಪ್ರತಿಷ್ಠಾನದ ಮುಖ್ಯಸ್ಥರಾದ ಸುಧಾ ಮೂರ್ತಿ ಅವರ ಜತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್‌ ಕುಮಾರ್ ನಡೆಸಿದ ಸಭೆಯಲ್ಲಿ ಶೈಕ್ಷಣಿಕ ಸುಧಾರಣೆಗೆ ಇನ್ಫೊಸಿಸ್‌ ಸಹಾಯ ಹಸ್ತ ಚಾಚುವ ವಿಷಯ ಪ್ರಸ್ತಾಪವಾಗಿದೆ.

‘ಮೊದಲ ಹಂತದಲ್ಲಿ ಒಂದು ಸಾವಿರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಕಂಪ್ಯೂಟರ್ ಪೂರೈಸುವ ಭರವಸೆಯನ್ನು ಸುಧಾಮೂರ್ತಿ ನೀಡಿದ್ದಾರೆ. ಪ್ರತಿಷ್ಠಾನದೊಂದಿಗೆ ವಾರದೊಳಗೆ ಈ ಕುರಿತು ಒಪ್ಪಂದ ಮಾಡಿಕೊಳ್ಳಲಾಗುವುದು’ ಎಂದು ಸುರೇಶ್‌ಕುಮಾರ್ ತಿಳಿಸಿದ್ದಾರೆ.

ಮಕ್ಕಳ ದಾಖಲಾತಿ ಹೆಚ್ಚಾಗಿರುವ ಶಾಲೆಗಳಿಗೆ ಮೊದಲ ಹಂತದಲ್ಲಿ ಆದ್ಯತೆ ನೀಡಲಾಗುವುದು. ಕಂಪ್ಯೂಟರ್ ಪೂರೈಸಿದ ನಂತರದ ಮೂರು ತಿಂಗಳ ಅವಧಿಯ ಶೈಕ್ಷಣಿಕ ಸ್ಥಿತಿಗತಿಯ ಗುಣಮಟ್ಟ ಅಳೆಯುವ ವ್ಯವಸ್ಥೆಯೊಂದನ್ನು ಅನುಷ್ಠಾನಕ್ಕೆ ಮೊದಲೇ ರೂಪಿಸಲಾಗುವುದು ಎಂದು ಅವರು ವಿವರಿಸಿದ್ದಾರೆ.

ಸರ್ಕಾರಿ ಪ್ರೌಢಶಾಲೆಗಳ ವಿಜ್ಞಾನ ಶಿಕ್ಷಕರಿಗೆ ವಿಶೇಷ ತರಬೇತಿ ನೀಡಲು ₹1 ಕೋಟಿ ನೀಡುವುದಾಗಿ ಸುಧಾ ಮೂರ್ತಿ ಪ್ರಕಟಿಸಿದ್ದಾರೆ. ಶಾಲೆಗಳಲ್ಲಿ ಇಂಗ್ಲಿಷ್ ಭಾಷಾ ಬೋಧನೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಉತ್ತಮ ಶಿಕ್ಷಕರನ್ನು ಗುರುತಿಸಿ ಗೌರವಿಸಲು ಇನ್ಫೊಸಿಸ್‌ ನೆರವು ನೀಡಿದೆ. ಅಂತಹ ಶಿಕ್ಷಕರನ್ನು ಗುರುತಿಸಿ ಪಟ್ಟಿ ಸಿದ್ಧಪಡಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದವರು ಹೇಳಿದ್ದಾರೆ.

ಪ್ರತಿಷ್ಠಾನವು ಶಾಲಾ ಗ್ರಂಥಾಲಯಗಳನ್ನು ಸ್ಥಾಪಿಸಲು ಮುಂದೆ ಬಂದಿದೆ. ಗ್ರಂಥಾಲಯ ಸೌಲಭ್ಯ ಹೊಂದಿರದ 10 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಗುರುತಿಸಿ ಪಟ್ಟಿ ತಯಾರಿಸಿ, ಗ್ರಂಥಾಲಯ ಸ್ಥಾಪಿಸಲು ಅನುವು ಮಾಡಿಕೊಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT