ಗುರುವಾರ , ಜೂನ್ 24, 2021
21 °C
ಆ್ಯಪ್‌ ನಿರ್ವಹಣೆಗೆ ಸ್ಮಾರ್ಟ್‌ಫೋನ್‌ ಖರೀದಿ ಕಡ್ಡಾಯ

ನಿರ್ವಾಹಕರಿಗೆ ‘ಸ್ಮಾರ್ಟ್‌’ ಕಿರಿಕಿರಿ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ಬಿಎಂಟಿಸಿ ನಿರ್ವಾಹಕರನ್ನು ‘ಸ್ಮಾರ್ಟ್‌’ ಆಗಿಸುವ ಪ್ರಯತ್ನಕ್ಕೆ ಸ್ವತಃ ನಿರ್ವಾಹಕರಿಂದಲೇ ತಣ್ಣನೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬಸ್ಸುಗಳ ಸೇವೆಯ ಸುಗಮ ನಿರ್ವಹಣೆಗಾಗಿ ಬಿಎಂಟಿಸಿ ಆ್ಯಪ್‌ವೊಂದನ್ನು ಅಭಿವೃದ್ಧಿಪಡಿಸಿದೆ. ಅದನ್ನು ಪ್ರತಿಯೊಬ್ಬ ನಿರ್ವಾಹಕರೂ ಅಳವಡಿಸಿಕೊಳ್ಳಬೇಕು ಎಂದು ಸೂಚನೆ ನೀಡಿದ್ದು, ಇದಕ್ಕಾಗಿ ಸ್ಮಾರ್ಟ್‌ಫೋನ್‌ ಖರೀದಿಸುವುದನ್ನೂ ಕಡ್ಡಾಯಗೊಳಿಸಲಾಗಿದೆ.

ಬಿಎಂಟಿಸಿಯ ಈ ಕ್ರಮ ಬಹುತೇಕ ನಿರ್ವಾಹಕರಿಗೆ ಕಿರಿಕಿರಿ ಎನಿಸಿದೆ. ಹೊಸ ವ್ಯವಸ್ಥೆಯ ಬಗ್ಗೆ ಅಸಮಾಧಾನವನ್ನೂ ಅವರು ತೋಡಿಕೊಂಡಿದ್ದಾರೆ. ನಿವೃತ್ತಿ ಅಂಚಿನಲ್ಲಿರುವ ನಿರ್ವಾಹಕರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ನಿರ್ವಾಹಕರು ಬಯಸಿದರೆ ಸ್ಮಾರ್ಟ್‌ಫೋನ್‌ ಖರೀದಿಸಿ ಕೊಡಲು ಬಿಎಂಟಿಸಿ ಸಿದ್ಧವಿದ್ದು, ತಿಂಗಳ ಸಂಬಳದಲ್ಲಿ ಕಂತನ್ನು ಹಿಡಿಯುವ ಪ್ರಸ್ತಾವ ಮುಂದಿಟ್ಟಿದೆ. ಯಾವ ಮಾಡೆಲ್‌ ಮತ್ತು ಎಷ್ಟು ಬೆಲೆಯ ಸ್ಮಾರ್ಟ್‌ಫೋನ್‌ ಬೇಕು ಎಂಬುದನ್ನು ಸೂಚಿಸುತ್ತಾರೋ ಅಂತಹದ್ದು ಖರೀದಿಸಿ ಕೊಡುವ ಆಲೋಚನೆ ಹೊಂದಿದೆ. ಒಟ್ಟಿನಲ್ಲಿ ಪ್ರತಿ ನಿರ್ವಾಹಕ ಸ್ಮಾರ್ಟ್‌ಫೋನ್‌ ಹೊಂದುವುದು ಕಡ್ಡಾಯ.

ಆ್ಯಪ್‌ ಬಳಕೆ ಕಡ್ಡಾಯ: ಬಸ್ಸುಗಳಲ್ಲಿ ನಿರ್ವಾಹಕ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳಬೇಕು. ಇದರ ಮೂಲಕವೇ ಹಲವು ಕಾರ್ಯಗಳನ್ನು ನಿರ್ವಹಿಸಬೇಕು. ಮುಖ್ಯವಾಗಿ, ಅಪಘಾತವಾದರೆ, ಬಸ್ಸು ಕೆಟ್ಟು ನಿಂತರೆ ತಕ್ಷಣವೇ ಮಾಹಿತಿ ನೀಡಬೇಕು. ಪ್ರಯಾಣಿಕರಿಂದ ಬಂದ ಆದಾಯ ಎಷ್ಟು, ಅದರಲ್ಲಿ ಏರುಪೇರಾಗಿದೆಯೇ, ಬಸ್ಸಿನಲ್ಲಿ ಯಾವುದಾದರೂ ಸಮಸ್ಯೆ ಇದೆಯೇ, ಸೇವೆಯ ಬಗ್ಗೆ ಪ್ರಯಾಣಿಕರ ಅಭಿಪ್ರಾಯವೇನು ಇತ್ಯಾದಿ ಮಾಹಿತಿಗಳನ್ನು ಆ್ಯಪ್‌ ಮೂಲಕವೇ ನೀಡಬೇಕು.

ಈ ಕುರಿತು ಹೆಸರು ಹೇಳಲು ಇಚ್ಛಿಸದ ನಿರ್ವಾಹಕರೊಬ್ಬರು ‘ಪ್ರಜಾವಾಣಿ’ ಜತೆ ಮಾತನಾಡಿ, ‘ಇದರಿಂದ ಏನು ಪ್ರಯೋಜನ ಆಗುತ್ತದೋ ಗೊತ್ತಿಲ್ಲ. ನಮಗೆ ಸಾಮಾನ್ಯ ಫೋನಿನಲ್ಲಿ ಕರೆ ಮಾಡುವುದು ಮತ್ತು ಸ್ವೀಕರಿಸುವುದನ್ನು ಬಿಟ್ಟರೆ ಉಳಿದ ನಿರ್ವಹಣೆ ಗೊತ್ತಿಲ್ಲ. ಸ್ಮಾರ್ಟ್‌ಫೋನ್‌ ಕಡ್ಡಾಯ ಮಾಡಿದರೆ ಕಷ್ಟವಾಗುತ್ತದೆ’ ಎಂದರು.

‘ಒಂದು ಸ್ಟೇಜ್‌ನಿಂದ ಇನ್ನೊಂದು ಸ್ಟೇಜ್‌ಗೆ ಟಿಕೆಟ್‌ ಕೊಡುವುದಕ್ಕೇ ಸಮಯ ಸಾಲುತ್ತಿಲ್ಲ. ಬಸ್‌ ನಿಧಾನ ಗತಿಯಲ್ಲಿ ಚಲಿಸಿದರೆ ಪ್ರಯಾಣಿಕರು ಗಲಾಟೆ ಮಾಡುತ್ತಾರೆ. ಇದರ ಮಧ್ಯೆ ಪ್ರಯಾಣಿಕರ ಅಭಿಪ್ರಾಯ ಪಡೆದು ಆ್ಯಪ್‌ನಲ್ಲಿ ಮಾಹಿತಿ ಕಳಿಸಲು ಹೇಗೆ ಸಾಧ್ಯ’ ಎಂದು ಅವರು ಪ್ರಶ್ನಿಸಿದರು.

ಸ್ಮಾರ್ಟ್‌ಫೋನ್‌ಗೆ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡಿರುವ ಯುವ ನಿರ್ವಾಹಕರೊಬ್ಬರು ಮಾತನಾಡಿ, ‘ಟಿಕೆಟ್‌ ವಿತರಿಸುತ್ತಲೇ ಆ್ಯಪ್‌ ಮೂಲಕ ಮಾಹಿತಿ ಕಳಿಸುವುದು ಕಷ್ಟ. ಈ ಹಿಂದೆ ಫೋನ್‌ ನೋಡುತ್ತಾ ಕಾಲಹರಣ ಮಾಡುತ್ತಾರೆ ಎಂಬ ಕಾರಣಕ್ಕೆ ಚಾಲಕ– ನಿರ್ವಾಹಕರಿಗೆ ಶಿಕ್ಷೆ ವಿಧಿಸಿದ ಉದಾಹರಣೆಗಳೂ ಇವೆ’ ಎಂದು ತಿಳಿಸಿದರು.

ಸ್ಮಾರ್ಟ್‌ಫೋನ್ ಖರೀದಿಸಲೇಬೇಕು
‘ಸ್ಮಾರ್ಟ್‌ಫೋನ್‌ ಖರೀದಿಸಬೇಕು. ಆದರೆ, ಬಿಎಂಟಿಸಿಯಿಂದಲೇ ಖರೀದಿಸಬೇಕು ಎನ್ನುವುದು ಕಡ್ಡಾಯವಲ್ಲ. ಯಾರಾದರೂ ಬಯಸಿದರೆ ಮಾತ್ರ ಖರೀದಿಸಿ ಕೊಡಲು ಸಿದ್ಧ. ಇದಕ್ಕಾಗಿ ಯಾವುದೇ ಕಂಪನಿ ಜತೆ ಒಪ್ಪಂದ ಮಾಡಿಕೊಂಡಿಲ್ಲ. ಹಾಗೆ ಮಾಡಿದರೆ ವಿವಾದಕ್ಕೆ ಕಾರಣವಾಗುತ್ತದೆ. ಯಾವ ರೀತಿ ಸ್ಮಾರ್ಟ್‌ಫೋನ್‌ ಬೇಕು ಎಂಬುದನ್ನು ನಿರ್ಧಾರ ಮಾಡಿ ತಿಳಿಸಿರಿ ಎಂದು ಎರಡು– ಮೂರು ಡಿಪೋಗಳಿಗೆ ಮಾಹಿತಿ ನೀಡಿದ್ದೇವೆ’ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಪೊನ್ನುರಾಜ್‌ ತಿಳಿಸಿದರು.

ಆ್ಯಪ್‌ ಮೂಲಕ ಹಲವು ಕೆಲಸಗಳನ್ನು ಮಾಡಬಹುದಾಗಿದೆ. ನಿರ್ವಾಹಕರ  ಬಳಿ ಇಲ್ಲವಾದರೆ, ಚಾಲಕರಾದರೂ ಇಟ್ಟುಕೊಂಡಿರಬೇಕು. ಬಸ್ಸಿನ ತೊಂದರೆ ಮಾತ್ರವಲ್ಲದೆ, ರಜೆ ಹಾಕುವುದಕ್ಕೂ ಆ್ಯಪ್‌ ಬಳಸಬಹುದಾಗಿದೆ. ಆ್ಯಪ್‌ ಬಳಕೆ ಬಗ್ಗೆ ತರಬೇತಿ ನೀಡಲಾಗುವುದು ಎಂದರು.

ಪ್ರಕರಣ ಕೈಬಿಡಲು ತೀರ್ಮಾನ

ಬಿಎಂಟಿಸಿ ಬಸ್‌ ಚಾಲಕರು ಮತ್ತು ನಿರ್ವಾಹಕರ ಮೇಲಿದ್ದ ಇಲಾಖೆ ಮೊಕದ್ದಮೆಗಳನ್ನು ಕೈಬಿಡಲು ಬಿಎಂಟಿಸಿ ತೀರ್ಮಾನಿಸಿದೆ.

ಎಲ್ಲಾ ಮೊಕದ್ದಮೆಗಳನ್ನು ಒಂದೇ ವಿಚಾರಣೆಯಲ್ಲಿ ಮುಕ್ತಾಯಗೊಳಿಸಲಾಗುವುದು. ಸಣ್ಣಪುಟ್ಟ ಕೇಸ್‌ಗಳಿಂದ ಚಾಲಕರು ಮತ್ತು ನಿರ್ವಾಹಕರು ಪರದಾಡುತ್ತಿದ್ದಾರೆ. ಈ ಕ್ರಮದಿಂದ ಅವರಲ್ಲಿ ಆತ್ಮಸ್ಥೈರ್ಯ ತುಂಬಿದಂತಾಗುತ್ತದೆ ಎಂದು ಪೊನ್ನುರಾಜ್‌ ತಿಳಿಸಿದರು.

ವಿದ್ಯಾರ್ಥಿ ಪಾಸ್‌ಗಾಗಿ ಅವಧಿ ವಿಸ್ತರಣೆ

ನಗರದ ಶಾಲಾ– ಕಾಲೇಜು ವಿದ್ಯಾರ್ಥಿಗಳು ಬಿಎಂಟಿಸಿ ಪಾಸ್‌ಗಾಗಿ ಅರ್ಜಿ ಸಲ್ಲಿಸಲು ಆ. 15ರವರೆಗೆ ಅವಧಿ ವಿಸ್ತರಿಸಲಾಗಿದೆ.

ಈ ಹಿಂದೆ ಜುಲೈ 31ರವರೆಗೆ ಅವಕಾಶ ನೀಡಲಾಗಿತ್ತು. ಆದರೆ, ಸರ್ಕಾರ ಉಚಿತ ಬಸ್‌ ಪಾಸ್‌ ನೀಡುವ ನಿರೀಕ್ಷೆಯಲ್ಲಿದ್ದ ಕಾರಣ ಸಾಕಷ್ಟು ವಿದ್ಯಾರ್ಥಿಗಳು ಪಾಸ್‌ಗಳನ್ನು ಪಡೆದಿರಲಿಲ್ಲ. ಆದ್ದರಿಂದ, ಪಾಸ್‌ ಪಡೆಯಲು ಅವಧಿ ವಿಸ್ತರಿಸುವಂತೆ ಶಿಕ್ಷಣ ಸಂಸ್ಥೆಗಳೂ ಮನವಿ ಮಾಡಿದ್ದವು. ಆ. 15ರವರೆಗೆ ವಿದ್ಯಾರ್ಥಿಗಳು ಶಾಲಾ–ಕಾಲೇಜುಗಳ ಗುರುತಿನ ಚೀಟಿ ಮತ್ತು ಶುಲ್ಕ ಪಾವತಿಯ ರಸೀದಿ ತೋರಿಸಿ ಪ್ರಯಾಣ ಮಾಡಬಹುದು ಎಂದು ಪ್ರಕಟಣೆ ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು