ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಳ್ಳಿ ನಿಧನ ಕುರಿತ ಶ್ರೀರಾಮುಲು ಹೇಳಿಕೆ ವಿರುದ್ಧ ಕಾಂಗ್ರೆಸ್ ದೂರು

Last Updated 9 ಮೇ 2019, 13:12 IST
ಅಕ್ಷರ ಗಾತ್ರ

ಧಾರವಾಡ: ‘ಸಚಿವ ಸಿ.ಎಸ್.ಶಿವಳ್ಳಿ ನಿಧನಕ್ಕೆ ಕಾಂಗ್ರೆಸ್‌–ಜೆಡಿಎಸ್ ಮೈತ್ರಿ ಪಕ್ಷಗಳ ಕಿರುಕುಳವೇ ಕಾರಣ ಎಂಬ ಮೊಳಕಾಲ್ಮೂರು ಶಾಸಕ ಶ್ರೀರಾಮುಲು ಹೇಳಿಕೆ ವಿರುದ್ಧ ಕಾಂಗ್ರೆಸ್‌ ಮುಖಂಡರುಜಿಲ್ಲಾ ಚುನಾವಣಾಧಿಕಾರಿಗೆ ದೂರು ನೀಡಿದ್ದಾರೆ.

ಕಾಂಗ್ರೆಸ್‌ ಮುಖಂಡ ವಿ.ಎಸ್‌.ಉಗ್ರಪ್ಪ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಅವರನ್ನು ಗುರುವಾರ ಭೇಟಿ ಮಾಡಿದ ನಿಯೋಗ, ‘ಕುಂದಗೋಳ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಎಸ್‌.ಐ.ಚಿಕ್ಕನಗೌಡರ ಪರವಾಗಿ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡಿದ್ದ ಶ್ರೀರಾಮುಲು, ಸಿ.ಎಸ್‌.ಶಿವಳ್ಳಿ ಅವರ ಸಾವಿನ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ. ಅವರ ಸಾವಿಗೆ ಸಮ್ಮಿಶ್ರ ಸರ್ಕಾರವೇ ಕಾರಣ ಎಂದಿದ್ದಾರೆ. ಇವರ ಈ ಹೇಳಿಕೆ ಹಿಂದೆ ಕಾಂಗ್ರೆಸ್‌ ವಿರುದ್ಧ ಮತದಾರರ ಕೆರಳಿಸುವ ಹುನ್ನಾರ ಅಡಗಿದೆ. ಇದರಿಂದ ಮೈತ್ರಿ ಅಭ್ಯರ್ಥಿ ಗೆಲುವಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ’ ಎಂದು ಆರೋಪಿಸಿದ್ದಾರೆ.

‘ಒಂದೊಮ್ಮೆ ಈ ವಿಷಯ ನಿಜವೇ ಆಗಿದ್ದರೆ, ಶ್ರೀರಾಮುಲು, ಚಿಕ್ಕನಗೌಡರ ಅಥವಾ ಬಿಜೆಪಿಯು ಪೊಲೀಸರಿಗೆ ದೂರು ನೀಡದಿರುವ ಕುರಿತೂ ಸಂದೇಹ ಮೂಡುತ್ತದೆ. ಸಚಿವರೊಬ್ಬರ ಸಾವಿನ ಕುರಿತು ಮಾಹಿತಿ ಇದ್ದಲ್ಲಿ ಅದನ್ನು ಈವರೆಗೂ ಮುಚ್ಚಿಟ್ಟಿದ್ದೂ ಕಾನೂನಿ ರೀತಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ. ಹೀಗಾಗಿ ಇವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ದೂರಿನ ಪ್ರತಿಯೊಂದಿಗೆ ಶ್ರೀರಾಮುಲು ಅವರು ಮಾತನಾಡಿದ ದೃಶ್ಯಾವಳಿಯುಳ್ಳ ಪೆನ್‌ಡ್ರೈವ್‌ ಅನ್ನು ಜಿಲ್ಲಾ ಚುನಾವಣಾಧಿಕಾರಿಗೆ ನೀಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಉಗ್ರಪ್ಪ, ‘ಮಾಜಿ ಸಚಿವರಾಗಿ ಶ್ರೀರಾಮುಲು ಅವರು ಮತ್ತೊಬ್ಬರ ಸಾವನ್ನು ಮತ ಗಳಿಕೆಗೆ ಬಳಸಿಕೊಳ್ಳುತ್ತಿರುವುದು ನೋವಿನ ಸಂಗತಿ. ಅವರು ಈ ವಿಷಯದಲ್ಲಿ ಕ್ಷಮೆ ಕೇಳುತ್ತಾರೆ ಎಂದುಕೊಂಡಿದ್ದೆ. ಆದರೆ ತಮ್ಮ ಹೇಳಿಕೆ ತಿರುಚಲಾಗಿದೆ ಎಂದಿದ್ದಾರೆ. ಹೀಗಾಗಿ ಸಾಕ್ಷಿ ಸಹಿತ ದೂರು ನೀಡಲಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ತಮ್ಮ ನಾಯಕರಿಗೆ ಮಾತನಾಡುವ ರೀತಿಯನ್ನು ಕಲಿಸುವ ಅಗತ್ಯವಿದೆ’ ಎಂದರು.

ಕುಂದಗೋಳದಲ್ಲಿ ಡಿ.ಕೆ.ಶಿವಕುಮಾರ್ ಅವರು ಹಣ ಹಂಚುತ್ತಿದ್ದಾರೆ ಎಂಬ ಬಿಜೆಪಿ ಆರೋಪ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಅನುಮಾನ ಇದ್ದಲ್ಲಿ ದೂರು ನೀಡಲಿ’ ಎಂದರು.

ಅನಿಲ ಪಾಟೀಲ, ಜಬ್ಬರ್ ಖಾನ್ ಹೊನ್ನಳ್ಳಿ, ವೀರಣ್ಣ ಮತ್ತಿಟ್ಟಿ, ಸ್ವಾತಿ ಮಾಳಗಿ, ಬಸವರಾಜ ಮಲಕಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT